ADVERTISEMENT

ನಡಾಲ್‌ಗೆ ಜೊಕೊವಿಚ್, ಫೆಡರರ್ ಸವಾಲು

ಫ್ರೆಂಚ್ ಓಪನ್‌ ಟೆನಿಸ್ ಟೂರ್ನಿ: ಮಹಿಳಾ ವಿಭಾಗದಲ್ಲಿ ಬಾರ್ಟಿ, ಸ್ವಾಟೆಕ್‌, ಒಸಾಕ ಮೇಲೆ ಕಣ್ಣು

ರಾಯಿಟರ್ಸ್
Published 29 ಮೇ 2021, 17:29 IST
Last Updated 29 ಮೇ 2021, 17:29 IST
ರಫೆಲ್ ನಡಾಲ್ –ರಾಯಿಟರ್ಸ್ ಚಿತ್ರ
ರಫೆಲ್ ನಡಾಲ್ –ರಾಯಿಟರ್ಸ್ ಚಿತ್ರ   

ಪ್ಯಾರಿಸ್‌: ಹಿಂದಿನ ನಾಲ್ಕು ಆವೃತ್ತಿ ಸೇರಿದಂತೆ ಒಟ್ಟು 13 ಬಾರಿ ಚಾಂಪಿಯನ್ ಆಗಿರುವ ಸ್ಪೇನ್‌ನ ರಫೆಲ್ ನಡಾಲ್ ಮತ್ತೊಂದು ಪ್ರಶಸ್ತಿ ಮೇಲೆ ಕಣ್ಣಿಟ್ಟು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಈ ಬಾರಿ ಕಣಕ್ಕೆ ಇಳಿಯಲಿದ್ದಾರೆ.

ಭಾನುವಾರ ಆರಂಭವಾಗಲಿರುವ ಟೂರ್ನಿಯಲ್ಲಿ ವಿಶ್ವ ಕ್ರಮಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ ಮತ್ತು ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಕೂಡ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.

ದಾಖಲೆಗಳ ಒಡೆಯ ನಡಾಲ್ ಈ ಬಾರಿ ಆರಂಭದ ಟೂರ್ನಿಗಳಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿದ್ದರೂ ರೋಮ್ ಓಪನ್‌ನಲ್ಲಿ ಅಮೋಘ ಸಾಮರ್ಥ್ಯ ಮೆರೆದು ಫ್ರೆಂಚ್ ಓಪನ್‌ ಟೂರ್ನಿಗೆ ಅತ್ಯುತ್ತಮ ಸಿದ್ಧತೆ ಮಾಡಿಕೊಂಡಿದ್ದರು. ಮಾಂಟೆ ಕಾರ್ಲೊ ಮತ್ತು ಮ್ಯಾಡ್ರಿಡ್ ಓಪನ್‌ ಟೂರ್ನಿಗಳಲ್ಲಿ ಅವರು ಕ್ರಮವಾಗಿ ರುಬ್ಲೆವ್‌ ಮತ್ತು ಅಲೆಕ್ಸಾಂಡರ್ ಜ್ವೆರೆವ್‌ಗೆ ಮಣಿದಿದ್ದರು. ಆದರೆ ರೋಮ್ ಓಪನ್ ಫೈನಲ್‌ನಲ್ಲಿ ಜೊಕೊವಿಚ್‌ ಅವರನ್ನು ಮಣಿಸಿದ್ದರು.

ADVERTISEMENT

ಕಳೆದ ಭಾರಿ ಎರಡನೇ ಪ್ರಶಸ್ತಿಯ ಕನಸಿನೊಂದಿಗೆ ಫ್ರೆಂಚ್ ಓಪನ್ ಕಣಕ್ಕೆ ಇಳಿದಿದ್ದ ಜೊಕೊವಿಚ್ ಅವರನ್ನು ಫೈನಲ್‌ನಲ್ಲಿ ನಡಾಲ್‌ ಸೋಲಿಸಿದ್ದರು. ಈ ಬಾರಿ ಇವರಿಬ್ಬರು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಅದಕ್ಕೂ ಮೊದಲು ಜೊಕೊವಿಚ್‌ಗೆ ಮತ್ತೊಂದು ಸವಾಲು ಇದೆ. ಕ್ವಾರ್ಟರ್ ಫೈನಲ್‌ನಲ್ಲಿ ಅವರಿಗೆ ರೋಜರ್ ಫೆಡರರ್ ಎದುರಾಳಿಯಾಗುವ ಸಾಧ್ಯತೆ ಇದೆ.

ಆಸ್ಟ್ರಿಯಾದ ಡೊಮಿಮಿಕ್ ಥೀಮ್, ರಷ್ಯಾದ ಡ್ಯಾನಿಯಲ್ ಮೆಡ್ವೆಡೆವ್, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಮತ್ತು ಗ್ರೀಸ್‌ನ ಸ್ಟೆಫನೋಸ್ ಸಿಸಿಪಸ್ ಕೂಡ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

ಬಾರ್ಟಿ, ಸ್ವಾಟೆಕ್‌ಗೆ ಸವಾಲಿನ ಟೂರ್ನಿ
ಮಹಿಳಾ ವಿಭಾಗದಲ್ಲಿ ಕಳೆದ ಬಾರಿಯ ಚಾಂಪಿಯನ್ ಪೋಲೆಂಡ್‌ನ ಇಗಾ ಸ್ವಾಟೆಕ್, 2019ರ ಪ್ರಶಸ್ತಿ ವಿಜೇತೆ ಆಸ್ಟ್ರೇಲಿಯಾದ ಆ್ಯಶ್ಲಿ ಬಾರ್ಟಿ, ಕಳೆದ ಬಾರಿಯ ರನ್ನರ್ ಅಪ್ ಅಮೆರಿಕದ ಸೋಫಿಯಾ ಕೆನಿನ್, ಮೂರು ಬಾರಿಯ ಚಾಂಪಿಯನ್ ಅಮೆರಿಕದ ಸೆರೆನಾ ವಿಲಿಯಮ್ಸ್ ಮತ್ತು ಜಪಾನ್‌ನ ನವೊಮಿ ಒಸಾಕ ನಡುವೆ ಪೈಪೋಟಿ ತೀವ್ರ ಪೈಪೋಟಿ ಇದೆ.

ಬಿಲ್‌ಗ್ರೇಡ್ ಓಪನ್: ಜೊಕೊವಿಚ್‌ಗೆ ಪ್ರಶಸ್ತಿ
ತವರಿನ ಪ್ರೇಕ್ಷಕರನ್ನು ರಂಜಿಸಿದ ನೊವಾಕ್ ಜೊಕೊವಿಚ್ ಶನಿವಾರ ಕೊನೆಗೊಂಡ ಬಿಲ್‌ಗ್ರೇಡ್ ಓಪನ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು. ಫೈನಲ್‌ನಲ್ಲಿ ಅವರು ಸ್ಲೊವಾಕಿಯಾದ ಅಲೆಕ್ಸ್‌ ಮೊಲ್ಕನ್ ಎದುರು6-4, 6-3ರಲ್ಲಿ ಜಯ ಗಳಿಸಿದರು.

ಸರ್ಬಿಯಾ ರಾಜಧಾನಿಯಲ್ಲಿರುವ ದನುಬೆ ನದಿ ಸಮೀಪದಲ್ಲಿರುವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಶ್ವ ಕ್ರಮಾಂಕದಲ್ಲಿ 255ನೇ ಸ್ಥಾನದಲ್ಲಿರುವ ಆಟಗಾರನಿಂದ ಜೊಕೊವಿಚ್‌ ಕೆಲವೊಮ್ಮೆ ಸವಾಲು ಎದುರಿಸಿದರು.ಅಲೆಕ್ಸ್‌ ಮೊಲ್ಕನ್ ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದಿದ್ದರು.

ಫೆಬ್ರುವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಪ್ರಶಸ್ತಿ ಗೆದ್ದ ನಂತರ ಜೊಕೊವಿಚ್ ಗೆದ್ದ ಮೊದಲ ಪ್ರಮುಖ ಪ್ರಶಸ್ತಿಯಾಗಿದೆ ಇದು.

ಆರಂಭ: ಮಧ್ಯಾಹ್ನ 2.30 (ಭಾರತೀಯ ಕಾಲಮಾನ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್‌ 1,2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.