
ನೊವಾಕ್ ಜೊಕೊವಿಚ್ ಬ್ಯಾಕ್‌ಹ್ಯಾಂಡ್ ಹೊಡೆತದ ಪರಿ ಎಎಫ್‌ಪಿ ಚಿತ್ರ
ಮೆಲ್ಬರ್ನ್: ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ತಾರೆ ನೊವಾಕ್ ಜೊಕೊವಿಚ್ ಅವರು ಸೋಮವಾರ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಗೆಲುವಿನೊಡನೆ ಅಭಿಯಾನ ಆರಂಭಿಸಿದರು. ಮಹಿಳೆ ಯರ ಸಿಂಗಲ್ಸ್‌ನಲ್ಲಿ ಪೋಲೆಂಡ್‌ನ
ಇಗಾ ಶ್ವಾಂಟೆಕ್ ಮತ್ತು ಅಮೆರಿಕದ ಕೊಕೊ ಗಾಫ್ ಅವರು ಶುಭಾರಂಭ ಮಾಡಿದರು.
ಮೆಲ್ಬರ್ನ್ ಪಾರ್ಕ್‌ನಲ್ಲಿ 11ನೇ ಕಿರೀಟ ಜಯಿಸುವ ಛಲದಲ್ಲಿರುವ ನಾಲ್ಕನೇ ಶ್ರೇಯಾಂಕದ ಜೊಕೊವಿಚ್ 6-3, 6-2, 6-2ರ ನೇರ ಸೆಟ್‌ಗಳಿಂದ ಸ್ಪೇನ್‌ನ ಪೆಡ್ರೊ ಮಾರ್ಟಿನೆಜ್ ಅವರನ್ನು ಸುಲಭವಾಗಿ ಮಣಿಸಿದರು. ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನಲ್ಲಿ ಅವರು ಇಟಲಿಯ ಕ್ವಾಲಿಫೈಯರ್ ಆಟಗಾರ ಫ್ರಾನ್ಸೆಸ್ಕೊ ಮಾಸ್ಟ್ರೆಲ್ಲಿ ಅವರನ್ನು
ಎದುರಿಸಲಿದ್ದಾರೆ.
100ನೇ ಗೆಲುವು: 38 ವರ್ಷದ ಜೊಕೊವಿಚ್ ಅವರಿಗೆ ಆಸ್ಟ್ರೇಲಿಯಾ ಓಪನ್‌ನಲ್ಲಿ 100ನೇ ಗೆಲುವು ಇದಾಗಿತ್ತು. ಒಟ್ಟಾರೆ 81ನೇ ಗ್ರ್ಯಾನ್‌ಸ್ಲಾಮ್ ಟೂರ್ನಿ ಆಡುತ್ತಿರುವ ಅವರು, ದಿಗ್ಗಜರಾದ ರೋಜರ್ ಫೆಡರರ್, ಫೆಲಿಸಿಯಾನೊ ಲೊಪೆಜ್ ಅವರೊಂದಿಗೆ ಈ ದಾಖಲೆಯನ್ನು ಹಂಚಿಕೊಂಡರು.
ಕಳೆದ ಆವೃತ್ತಿಯಲ್ಲಿ ಸೆಮಿಫೈನಲ್ ತಲುಪಿದ್ದ ಜೊಕೊವಿಚ್ ಗಾಯದ ಕಾರಣದಿಂದ ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್ ವಿರುದ್ಧದ ಪಂದ್ಯದಿಂದ ಹಿಂದೆ ಸರಿದಿದ್ದರು. 2023ರಲ್ಲಿ ಅಮೆರಿಕನ್ ಓಪನ್ ಗೆದ್ದ ನಂತರ ಜೊಕೊವಿಕ್ ಅವರು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಬರ ಎದುರಿಸು ತ್ತಿದ್ದಾರೆ. ಅವರಿಗೆ ಮಾರ್ಗರೇಟ್ ಕೋರ್ಟ್ (24 ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ) ದಾಖಲೆ ಮುರಿಯಲು ಒಂದು ಕಿರೀಟದ ಅಗತ್ಯವಿದೆ. ಕಳೆದ ಎರಡು ವರ್ಷಗಳಿಂದ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಮತ್ತು ಇಟಲಿಯ ಯಾನಿಕ್ ಸಿನ್ನರ್ ಅವರು ಗ್ರ್ಯಾನ್‌ಸ್ಲಾಮ್ ಟೂರ್ನಿ ಗಳಲ್ಲಿ ಪಾರಮ್ಯ ಮೆರೆಯುತ್ತಿದ್ದಾರೆ.
ಮೆಡ್ವೆಡೇವ್ ಮುನ್ನಡೆ: ಮೂರು ಬಾರಿಯ ರನ್ನರ್ ಅಪ್, 11ನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೇವ್ ಅವರು 7-5, 6-2, 7-6 (7/2)ರಿಂದ ನೆದರ್ಲೆಂಡ್ಸ್‌ನ ಜೆಸ್ಪರ್ ಡಿ ಜೊಂಗ್ ಅವರನ್ನು ಮಣಿಸಿದರು. ರಷ್ಯಾದ 29 ವರ್ಷದ ಮೆಡ್ವೆಡೇವ್ 2021, 2022 ಮತ್ತು 2024ರ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದರು.
ಆದರೆ, ಏಳನೇ ಶ್ರೇಯಾಂಕದ ಫೆಲಿಕ್ಸ್ ಆಗರ್ ಆಘಾತ ಅನುಭವಿಸಿದರು. ಪೋರ್ಚುಗಲ್‌ನ ನುನೊ ಬೋರ್ಗೆಸ್ 3-6, 6-4, 6-4 ಮುನ್ನಡೆಯಲ್ಲಿದ್ದಾಗ ಪೋರ್ಚುಗಲ್‌ನ ಫೆಲಿಕ್ಸ್ ಸ್ಪರ್ಧೆಯಿಂದ ಹಿಂದೆ ಸರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.