
ಚೆಂಡನ್ನು ಹಿಂತಿರುಗಿಸುವ ಯತ್ನದಲ್ಲಿ ಕಾರ್ಲೋಸ್ ಅಲ್ಕರಾಜ್
–ಎಎಫ್‌ಪಿ ಚಿತ್ರ
ಮೆಲ್ಬರ್ನ್: ಜರ್ಮನಿಯ ಯಾನಿಕ್ ಹಾಂಫ್‌ಮನ್ ಅವರು ಒಂದೇ ಸಮನೇ ಅಟ್ಟುತ್ತಿದ್ದ ಸಿಡಿಗುಂಡುಗಳಂಥ ಹೊಡೆತಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾದ ಕಾರ್ಲೋಸ್ ಅಲ್ಕರಾಜ್ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತನ್ನು ತಲುಪಿದರು. ಬುಧವಾರ ಉರಿಬಿಸಿಲಿನ ವಾತಾವರಣದಲ್ಲಿ ಇತರ ಪ್ರಮುಖ ತಾರೆಯರೂ ಮುನ್ನಡೆ ಸಾಧಿಸಿದರು.
ಮಹಿಳಾ ಸಿಂಗಲ್ಸ್‌ನಲ್ಲಿ ಅಗ್ರ ಕ್ರಮಾಂಕದ ಅರಿನಾ ಸಬಲೆಂಕಾ, ಅಮೆರಿಕದ ಕೊಕೊ ಗಾಫ್ ಕೂಡ ಎರಡನೇ ಸುತ್ತಿನ ಪಂದ್ಯಗಳನ್ನು ಸಲೀಸಾಗಿ ಗೆದ್ದುಕೊಂಡರು. ಮೂರು ಬಾರಿ ಫೈನಲ್ ತಲುಪಿರುವ ಡೇನಿಲ್ ಮೆಡ್ವೆಡೆವ್ ಗೆಲುವಿಗೆ ನಾಲ್ಕು ಸೆಟ್‌ಗಳನ್ನು ಆಡಿ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಕನಸಿನ ಹಾದಿಯಲ್ಲಿ ಇನ್ನೊಂದು ಹೆಜ್ಜೆಯಿಟ್ಟರು. ಹೋದ ವರ್ಷ ಫೈನಲ್‌ನಲ್ಲಿ ಯಾನಿಕ್ ಸಿನ್ನರ್ ಕೈಲಿ ಸೋಲನುಭವಿಸಿದ್ದ ಮೂರನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವರೇವ್ ಸಹ ಜಯಗಳಿಸಿದವರಲ್ಲಿ ಒಳಗೊಂಡಿದ್ದಾರೆ.
ರಾಡ್ ಲೇವರ್ ಅರೇನಾದಲ್ಲಿ ಆಡಿದ ಸ್ಪೇನ್‌ನ ಸೂಪರ್‌ಸ್ಟಾರ್ ಅಲ್ಕರಾಜ್ 7–6 (7–4), 6–3, 6–2 ರಿಂದ ಪ್ರಬಲ ಹೊಡೆತಗಳ ಆಟಗಾರ ಹಾಂಫ್‌ಮನ್ ಅವರನ್ನು ಸೋಲಿಸಿದರು. ಆ ಮೂಲಕ ಅಗ್ರ ಕ್ರಮಾಂಕದ ಅಲ್ಕರಾಜ್ ‘ಕ್ಯಾರೀರ್ ಗ್ರ್ಯಾನ್‌ಸ್ಲಾಮ್’ ಸಾಧಿಸುವತ್ತ ಇನ್ನೊಂದು ಹೆಜ್ಜೆಯಿಟ್ಟರು.
ಆದರೆ 22 ವರ್ಷ ವಯಸ್ಸಿನ ಅಲ್ಕರಾಜ್‌ಗೆ ಅವರಿಗಿಂತ 12 ವರ್ಷ ಹಿರಿಯ ಎದುರಾಳಿಯಾದ ಹಾಂಫ್‌ಮನ್ ಸಾಕಷ್ಟು ಕಾಡಿದರು. ಆರು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿರುವ ಅಲ್ಕರಾಜ್, ಆಸ್ಟ್ರೇಲಿಯಾ ಓಪನ್‌ನಲ್ಲಿ ಒಮ್ಮೆಯೂ ಎಂಟರ ಘಟ್ಟ ದಾಟಿಲ್ಲ.
ಆಸ್ಟ್ರೇಲಿಯಾ ಓಪನ್ ಗೆದ್ದುಕೊಂಡಲ್ಲಿ ಅಲ್ಕರಾಜ್, ಅವರು ಎಲ್ಲ ನಾಲ್ಕೂ ಪ್ರಮುಖ ಗ್ರ್ಯಾನ್‌ಸ್ಲಾಮ್ ಟೂರ್ನಿಗಳನ್ನು ಗೆದ್ದಂತೆ ಆಗಲಿದೆ. ಮಾತ್ರವಲ್ಲ, ಈ ಸಾಧನೆಗೆ ಪಾತ್ರರಾದ ಅತಿ ಕಿರಿಯ ಆಟಗಾರ ಎನಿಸಿದ್ದಾರೆ. ಸ್ಪೇನ್‌ನವರೇ ಆದ ರಫೆಲ್ ನಡಾಲ್ 24ನೇ ವಯಸ್ಸಿನಲ್ಲಿ ಈ ಸಾಧನೆ ದಾಖಲಿಸಿದ್ದರು.
ಊಹಿಸಲಾಗದ ಆಟವಾಡುವ ಮೆಡ್ವೆಡೇವ್ ಒತ್ತಡದಲ್ಲೂ ಶಾಂತಚಿತ್ತ ದಿಂದ ಆಡಿ 6–7 (9–11), 6–3, 6–4, 6–2 ರಿಂದ ಫ್ರಾನ್ಸ್‌ನ ಕ್ವೆಂಟಿನ್ ಹಾಲಿಸ್ ಅವರನ್ನು ಮಣಿಸಿದರು. ಹೋರಾಟದ ಮೊದಲ ಸೆಟ್ ಕಳೆದುಕೊಂಡ ನಂತರ ರಷ್ಯದ ಆಟಗಾರ ಪರದಾಡಲಿಲ್ಲ. ಅವರ ಮುಂದಿನ ಎದುರಾಳಿ ಹಂಗೆರಿಯ ಫ್ಯಾಬಿಯನ್ ಮೊರೊಝಾನ್.
ಸಂಜೆಯ ವೇಳೆ ಭಾರಿ ಮಳೆ ಯಾಯಿತು. ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್– ಫ್ರಾನ್ಸ್‌ನ ಅಲೆಕ್ಸಾಂಡ್ರ ಮುಲ್ಲರ್ ನಡುವಣ ಪಂದ್ಯ ಅರ್ಧ ಗಂಟೆ ವಿಳಂಬವಾಯಿತು. ಆದರೆ ಇದೇನೂ ಜ್ವರೇವ್ ಆಟದ ಮೇಲೆ ಪರಿಣಾಮ ಬೀರಲಿಲ್ಲ. ಅವರು 6–3, 4–6, 6–3, 6–4 ರಿಂದ ಜಯಗಳಿಸಿದರು.
ಸಬಲೆಂಕಾ ಮುನ್ನಡೆ: ಬೆಲರೂಸ್‌ನ ಸಬಲೆಂಕಾ 6–3, 6–1 ರಿಂದ ಚೀನಾದ ಬಾಯಿ ಝುಷುವಾನ್ ಅವರನ್ನು ಹಿಮ್ಮೆಟ್ಟಿಸಿದರು. ಅವರ ಮುಂದಿನ ಎದುರಾಳಿ ರಷ್ಯಾ ಸಂಜಾತೆ ಅನಸ್ತೇಸಿಯಾ ಪೊಟಪೋವಾ.
ಮಾರ್ಗರೇಟ್ ಕೋರ್ಟ್ ಅರೇನಾದಲ್ಲಿ ಮೂರನೇ ಶ್ರೇಯಾಂಕದ ಗಾಫ್ 6–2, 6–2 ರಿಂದ ಸರ್ಬಿಯಾದ ಓಲ್ಗಾ ಡಾನಿಲೊವಿಕ್ ಅವರನ್ನು ಸೋಲಿಸಿದರು.
12ನೇ ಶ್ರೇಯಾಂಕದ ಎಲಿನಾ ಸ್ವಿಟೊಲಿನಾ (ಉಕ್ರೇನ್), ಟರ್ಕಿಯ ಪ್ರತಿಭೆ ಝಿನೆಪ್ ಸೊನ್ಮೆಝ್, ಕೆನಡಾದ ವಿಕ್ಟೊರಿಯಾ ಎಂಬೊಕೊ ಕೂಡ ಮುನ್ನಡೆದರು. ರಷ್ಯಾದ 18 ವರ್ಷ ವಯಸ್ಸಿನ ಮಿಯೆರಾ ಆಂಡ್ರೀವಾ 6–0, 6–4 ರಿಂದ ಗ್ರೀಸ್‌ನ ಮರಿಯಾ ಸಕ್ಕರಿ ವಿರುದ್ಧ ಜಯಗಳಿಸಿದರು.
ಎರಡನೇ ಸುತ್ತಿಗೆ ಭಾಂಬ್ರಿ– ಗೊರಾನ್ಸನ್
ಮೆಲ್ಬರ್ನ್: ಭಾರತದ ಅಗ್ರ ಡಬಲ್ಸ್ ಆಟಗಾರ ಯುಕಿ ಭಾಂಬ್ರಿ ಅವರು ಸ್ವೀಡನ್‌ನ ಜೊತೆಗಾರ ಆಂಡ್ರೆ ಗೊನಾನ್ಸನ್ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ಮೊದಲ ಸುತ್ತಿನಲ್ಲಿ ಬುಧವಾರ ನೇರ ಸೆಟ್‌ಗಳ ಗೆಲುವು ದಾಖಲಿಸಿದರು.
ಹತ್ತನೇ ಶ್ರೇಯಾಂಕದ ಇಂಡೊ–ಸ್ವೀಡಿಶ್ ಜೋಡಿ ಕೋರ್ಟ್ ನಂಬರ್ 13ರಲ್ಲಿ ನಡೆದ ಪಂದ್ಯದಲ್ಲಿ 6–3, 6–3 ರಿಂದ ಜೇಮ್ಸ್ ಡಕ್ವರ್ಥ್– ಕ್ರುಝ್ ಹೆವಿಡ್ ಜೋಡಿಯನ್ನು ಸೋಲಿಸಿ ಎರಡನೇ ಸುತ್ತಿಗೆ ಮುನ್ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.