ADVERTISEMENT

Davis Cup: ಡಚ್‌ ವಿರುದ್ಧ ಜಯ; ಎರಡನೇ ಸುತ್ತಿನ ಕ್ವಾಲಿಫೈಯರ್ಸ್‌ಗೆ ಟಿಕೆಟ್‌

ಡೇವಿಸ್‌ ಕಪ್‌ ಕ್ವಾಲಿಫೈಯರ್ಸ್: 2–3ರಿಂದ ಸೋತ ನೆದರ್ಲೆಂಡ್ಸ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 19:46 IST
Last Updated 8 ಫೆಬ್ರುವರಿ 2026, 19:46 IST
<div class="paragraphs"><p>ದಕ್ಷಿಣೇಶ್ವರ ಸುರೇಶ್‌ ಅವರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ ಭಾರತ ತಂಡದ ಆಟಗಾರರು</p></div>

ದಕ್ಷಿಣೇಶ್ವರ ಸುರೇಶ್‌ ಅವರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ ಭಾರತ ತಂಡದ ಆಟಗಾರರು

   

ಚಿತ್ರ: ಕೃಷ್ಣಕುಮಾರ್ ಪಿ.ಎಸ್‌.

ಬೆಂಗಳೂರು: ಎರಡು ರಿವರ್ಸ್‌ ಸಿಂಗಲ್ಸ್‌ವರೆಗೆ ಸಾಗಿದ ಭಾರತ ಮತ್ತು ನೆದರ್ಲೆಂಡ್ಸ್ ನಡುವಣ ಡೇವಿಸ್ ಕಪ್ ಕ್ವಾಲಿಫೈಯರ್ಸ್  ಮುಖಾಮುಖಿಯಲ್ಲಿ ಆತಿಥೇಯ ತಂಡ 3–2ರಿಂದ ಅಮೋಘ ಗೆಲುವು ಸಾಧಿಸಿತು. ಅದರೊಂದಿಗೆ, ಎರಡನೇ ಸುತ್ತಿನ ಕ್ವಾಲಿಫೈಯರ್ಸ್‌ಗೆ ಟಿಕೆಟ್‌ ಗಿಟ್ಟಿಸಿಕೊಂಡಿತು.

ADVERTISEMENT

ಶನಿವಾರ ನಡೆದ ಸಿಂಗಲ್ಸ್‌ ಪಂದ್ಯದಲ್ಲಿ ಎದುರಾಳಿ ತಂಡದ ಅಗ್ರ ಆಟಗಾರ ಜೆಸ್ಪರ್ ಡಿ ಜಾಂಗ್ ಅವರನ್ನು ಮಣಿಸಿದ್ದ ದಕ್ಷಿಣೇಶ್ವರ್‌ ಸುರೇಶ್‌ ಅವರು ಡಬಲ್ಸ್‌ನಲ್ಲಿ ಯುಕಿ ಭಾಂಬ್ರಿ ಜೊತೆಗೂಡಿ 7–6 (7–0), 3–6, 7–6 (7–1)ರಿಂದ ಡೇವಿಡ್‌ ಪೆಲ್‌– ಸ್ಯಾಂಡರ್ ಅರೆಂಡ್ಸ್ ಜೋಡಿಯನ್ನು ಸೋಲಿಸಿದರು. ನಿರ್ಣಾಯಕವಾಗಿದ್ದ ರಿವರ್ಸ್‌ ಸಿಂಗಲ್ಸ್‌ನ ಎರಡನೇ ಪಂದ್ಯದಲ್ಲಿ 6–4, 7–6 (7–4)ರಿಂದ ಗಯ್‌ ಡೆನ್‌ ಆಡೆನ್‌ ವಿರುದ್ಧ ಗೆದ್ದು, ಛಾಪು ಮೂಡಿಸಿದರು.

ಶನಿವಾರ ತಲಾ ಒಂದು ಪಂದ್ಯ ಗೆದ್ದಿದ್ದ ಉಭಯ ತಂಡಗಳು, ಭಾನುವಾರವೂ ತುರುಸಿನ ಪೈಪೋಟಿವೊಡ್ಡಿದವು. ಭಾನುವಾರ ಮಧ್ಯಾಹ್ನ ಭಾಂಬ್ರಿ– ದಕ್ಷಿಣ್‌ ಜೋಡಿ ಡಬಲ್ಸ್‌ ಗೆದ್ದು ಭಾರತಕ್ಕೆ 2–1 ಮುನ್ನಡೆ ಒದಗಿಸಿತು. ಶ್ರೀರಾಮ್ ಬಾಲಾಜಿ ಅವರ ಬದಲು ಒಳ್ಳೆಯ ಲಯದಲ್ಲಿರುವ ದಕ್ಷಿಣೇಶ್ವರ್ ಅವರನ್ನು ಯುಕಿ ಜೊತೆ ಆಡಲು ಇಳಿಸುವ ನಾಯಕ ರೋಹಿತ್ ರಾಜಪಾಲ್ ಅವರ ಲೆಕ್ಕಾಚಾರ ಫಲ ನೀಡಿತು.

ಆದರೆ, ರಿವರ್ಸ್ ಸಿಂಗಲ್ಸ್‌ನಲ್ಲಿ ಸುಮಿತ್‌ ನಾಗಲ್ ಸೋಲನು ಭವಿಸಿದರು. ವಿಶ್ವ ಕ್ರಮಾಂಕದಲ್ಲಿ 88ನೇ ಸ್ಥಾನದಲ್ಲಿರುವ ಜೆಸ್ಪರ್ ಡಿ ಜಾಂಗ್ ಮೊದಲ ಸೆಟ್ ಹಿನ್ನಡೆಯಿಂದ ಚೇತರಿಸಿಕೊಂಡು 5–7, 6–1, 6–4ರಿಂದ ನಾಗಲ್ ಅವರನ್ನು ಹಿಮ್ಮೆಟ್ಟಿಸಿದರು.

ಕಬ್ಬನ್‌ ಪಾರ್ಕ್‌ನ ಎಸ್‌.ಎಂ.ಕೃಷ್ಣ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ ನಡೆದ ಎರಡನೇ ರಿವರ್ಸ್‌ ಸಿಂಗಲ್ಸ್‌ ಪಂದ್ಯದಲ್ಲಿ ಆಡೆನ್‌ ಅವರನ್ನು ಮಣಿಸಿದ ದಕ್ಷಿಣ್‌, ಭಾರತದ ಗೆಲುವಿನ ರೂವಾರಿಯಾದರು. 1 ಗಂಟೆ 39 ನಿಮಿಷ ನಡೆದ ಈ ಪಂದ್ಯವು ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿತು. ಉದ್ಯಾನ ನಗರವು ‘ಟೆನಿಸ್‌ ಮಳೆ’ಯಲ್ಲಿ ಮಿಂದೆದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.