ADVERTISEMENT

ಐಟಿಎಫ್‌ ಮಹಿಳಾ ಓಪನ್‌ ಮುಖ್ಯಸುತ್ತು ಇಂದಿನಿಂದ: ಸಹಜಾ,ಶ್ರೀವಲ್ಲಿ ಮೇಲೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 22:30 IST
Last Updated 16 ಫೆಬ್ರುವರಿ 2026, 22:30 IST
   

ಬೆಂಗಳೂರು: ಭಾರತದ ಸಿಂಗಲ್ಸ್‌ ತಾರೆಯರಾದ ಸಹಜಾ ಯಮಲಪಲ್ಲಿ ಮತ್ತು ಶ್ರೀವಲ್ಲಿ ಭಮಿಡಿಪಾಟಿ ಅವರು ಇಲ್ಲಿ ಮಂಗಳ ವಾರ ಆರಂಭವಾಗಲಿರುವ ಕೆಪಿಇ ಟ್ರಸ್ಟ್‌ ಐಟಿಎಫ್‌ ಮಹಿಳಾ ಓಪನ್‌ ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

ಮುಖ್ಯಸುತ್ತಿನ ಹಣಾಹಣಿಗೆ ಕಬ್ಬನ್‌ ಪಾರ್ಕ್‌ನ ಎಸ್‌.ಎಂ.ಕೃಷ್ಣ ಟೆನಿಸ್‌ ಕ್ರೀಡಾಂಗಣ ಸಜ್ಜಾಗಿದೆ. ಈ ಟೂರ್ನಿಯನ್ನು ಕಳೆದ ವರ್ಷ ಐಟಿಎಫ್‌ ಡಬ್ಲ್ಯು50ಯಿಂದ ಡಬ್ಲ್ಯು100ಕ್ಕೆ ಮೇಲ್ದರ್ಜೆಗೆ ಏರಿಸಲಾಗಿದ್ದು, ತುರುಸಿನ ಪೈಪೋಟಿಯನ್ನು
ನಿರೀಕ್ಷಿಸಲಾಗಿದೆ. ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಭಾರತದ ಆರು ಆಟಗಾರ್ತಿಯರು ಸ್ಪರ್ಧಿಸಲಿದ್ದಾರೆ. 

ಹೈದರಾಬಾದ್‌ನ ಸಹಜಾ ಅವರು ದಕ್ಷಿಣ ಕೊರಿಯಾದ ದಯೋನ್ ಬ್ಯಾಕ್ ವಿರುದ್ಧ; ತೆಲಂಗಾಣದ ಶ್ರೀವಲ್ಲಿ ಅವರು ಮಾಲ್ಟಾದ ಫ್ರಾನ್ಸೆಸ್ಕಾ ಕುರ್ಮಿ ವಿರುದ್ಧ ಅಭಿಯಾನ ಆರಂಭಿಸ ಲಿದ್ದಾರೆ. ವೈಲ್ಡ್ ಕಾರ್ಡ್ ಪ್ರವೇಶ ಪಡೆದಿರುವ ತಮಿಳುನಾಡಿನ 16 ವರ್ಷದ ಮಾಯಾ ರಾಜೇಶ್ವರನ್ ರೇವತಿ ಅವರು ಐದನೇ ಶ್ರೇಯಾಂಕದ ಪೋಲಿನಾ ಇಟ್ಸೆಂಕೊ (ರಷ್ಯಾ) ವಿರುದ್ಧ ಕಠಿಣ ಸವಾಲಿಗೆ ಸಜ್ಜಾಗಿದ್ದಾರೆ. ಶ್ರುತಿ ಅಹ್ಲಾವತ್ ಮತ್ತು ವೈಷ್ಣವಿ ಅಡ್ಕರ್ ಅವರೂ ವೈಲ್ಡ್ ಕಾರ್ಡ್ ಪಡೆದಿದ್ದಾರೆ.

ADVERTISEMENT

ಗಿಬ್ಸನ್‌ಗೆ ಅಗ್ರಸ್ಥಾನ: ಆಸ್ಟ್ರೇಲಿಯಾದ ತಾಲಿಯಾ ಗಿಬ್ಸನ್ ಮತ್ತು ಥಾಯ್ಲೆಂಡ್‌ನ ಲನ್ಲಾನಾ ತಾರಾರುಡಿ ಅವರು ಕ್ರಮವಾಗಿ ಮೊದಲೆರಡು ಶ್ರೇಯಾಂಕ ಪಡೆದಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅವರು ಕ್ರಮವಾಗಿ 112ನೇ ಮತ್ತು 126ನೇ ಸ್ಥಾನದಲ್ಲಿದ್ದಾರೆ. 

ಗಿಬ್ಸನ್‌ ಅವರು ಮೊದಲ ಸುತ್ತಿನಲ್ಲಿ ಕ್ವಾಲಿಫೈಯರ್‌ ಆಟಗಾರ್ತಿ ವೈದೇಹಿ ಚೌಧರಿ ಅವರನ್ನು ಎದುರಿಸುವರು. ಗುಜರಾತ್‌ನ 26 ವರ್ಷದ ವೈದೇಹಿ ಸೋಮವಾರ ನಡೆದ ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ 6–2, 7–5ರಿಂದ ರಷ್ಯಾದ ಎವ್ಗೆನಿಯಾ ಬುರ್ಡಿನಾ ಅವರನ್ನು ಹಿಮ್ಮೆಟ್ಟಿಸಿದರು.‌ 

ಅರ್ಹತಾ ಸುತ್ತಿನ ಮೊದಲ ಪಂದ್ಯ ಗೆದ್ದಿದ್ದ ಭಾರತದ ಅಂಕಿತಾ ರೈನಾ ಎರಡನೇ ಪಂದ್ಯದಲ್ಲಿ ನಿರಾಸೆ ಮೂಡಿಸಿದರು. ಅವರು 6–2, 2–6, 1–6ರಿಂದ ಕ್ರಿಸ್ಟಿಯಾನಾ ಸಿಡೋರೊವಾ (ರಷ್ಯಾ) ಅವರಿಗೆ ಸೋತರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.