ADVERTISEMENT

ಆಸ್ಟ್ರೇಲಿಯನ್ ಓಪನ್ ಟೆನಿಸ್: ಕಿರ್ಗಿಯೋಸ್‌ ಸವಾಲು ಮೀರಿದ ಮೆಡ್ವೆಡೆವ್‌

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ: ರಡುಕಾನು, ಆ್ಯಂಡಿ ಮರ್ರೆ, ಗಾರ್ಬೈನ್ ಮುಗುರುಜಾಗೆ ಆಘಾತ

ಏಜೆನ್ಸೀಸ್
Published 20 ಜನವರಿ 2022, 15:19 IST
Last Updated 20 ಜನವರಿ 2022, 15:19 IST
ರಷ್ಯಾದ ಡ್ಯಾನಿಯಲ್ ಮೆಡ್ವೆಡೆವ್ ಚೆಂಡನ್ನು ರಿಟರ್ನ್ ಮಾಡಿದ ಬಗೆ –ಎಎಫ್‌ಪಿ ಚಿತ್ರ
ರಷ್ಯಾದ ಡ್ಯಾನಿಯಲ್ ಮೆಡ್ವೆಡೆವ್ ಚೆಂಡನ್ನು ರಿಟರ್ನ್ ಮಾಡಿದ ಬಗೆ –ಎಎಫ್‌ಪಿ ಚಿತ್ರ   

ಮೆಲ್ಬರ್ನ್‌: ಸ್ಥಳೀಯ ಆಟಗಾರ ನಿಕ್ ಕಿರ್ಗಿಯೋಸ್ ಅವರ ಸವಾಲನ್ನು ಸಮರ್ಥವಾಗಿ ಮೀರಿದ ರಷ್ಯಾದ ಡ್ಯಾನಿಯಲ್ ಮೆಡ್ವೆಡೆವ್, ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತು ಪ್ರವೇಶಿಸಿದರು. ಎರಡು ತಾಸು 58 ನಿಮಿಷಗಳ ಹಣಾಹಣಿಯಲ್ಲಿ ಮೆಡ್ವೆಡೆವ್ 7-6 (7/1), 6-4, 4-6, 6-2ರಲ್ಲಿ ಜಯ ಗಳಿಸಿದರು.

ರೋಡ್ ಲಾವೆರ್ ಅರೆನಾದಲ್ಲಿ ಸ್ಥಳೀಯ ಪ್ರೇಕ್ಷಕರನ್ನು ರೋಮಾಂಚನದ ತುತ್ತತುದಿಗೆ ಕೊಂಡೊಯ್ದ ಕಿರ್ಗಿಯೋಸ್ ಎದುರಾಳಿಗೆ ಪ್ರಬಲ ಪೈಪೋಟಿ ನೀಡಿದರು. ಆದರೆ ‍ಪಟ್ಟು ಬಿಡದ ಮೆಡ್ವೆಡೆವ್ ಮುಂದಿನ ಹಂತಕ್ಕೆ ಲಗ್ಗೆ ಇರಿಸಿದರು. ಮೂರನೇ ಸುತ್ತಿನಲ್ಲಿ ಅವರಿಗೆ ನೆದರ್ಲೆಂಡ್ಸ್‌ನ ಬಾಟಿಕ್ ವ್ಯಾನ್ ಡಿ ಜಂಡ್‌ಶುಲ್ಫ್‌ ಎದುರಾಳಿ.

ಮಹಿಳೆಯರ ವಿಭಾಗದಲ್ಲಿ ಬ್ರಿಟನ್‌ನ ಎಮಾ ರಡುಕಾನು ಮತ್ತು ಸ್ಪೇನ್‌ನ ಗಾರ್ಬೈನ್ ಮುಗುರುಜಾ ಸೋತು ಹೊರಬಿದ್ದರು. ಪುರುಷರ ವಿಭಾಗದಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ ಕೂಡ ಆಘಾತ ಅನುಭವಿಸಿದರು.

ADVERTISEMENT

ಕಳೆದ ಬಾರಿ ಅಮೆರಿಕ ಓಪನ್ ಟೂರ್ನಿಯ ಪ್ರಶಸ್ತಿ ಗೆದ್ದು ಗಮನ ಸೆಳೆದಿದ್ದ ಎಮಾ ರಡುಕಾನು ಇಲ್ಲಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದರು. ಆದರೆ ಅವರ ಕನಸನ್ನು ಮಾಂಟೆನಿಗ್ರಿನ್‌ನ ಡಂಕಾ ಕೊವಿನಿಚ್ ಭಗ್ನಗೊಳಿಸಿದರು. 17ನೇ ಶ್ರೇಯಾಂಕಿತ ಆಟಗಾರ್ತಿಯನ್ನು ಡಂಕಾ 4–6, 6–4, 6–3ರಲ್ಲಿ ಮಣಿಸಿದರು. ಅಮೆರಿಕ ಓಪನ್‌ನ ಮಾಜಿ ಚಾಂಪಿಯನ್‌ ಸ್ಲಾನೆ ಸ್ಟೀಫನ್ಸ್ ಅವರನ್ನು ಮೊದಲ ಸುತ್ತಿನಲ್ಲಿ ಸೋಲಿಸಿ 19 ವರ್ಷದ ರಡುಕಾನು ಭರವಸೆ ಮೂಡಿಸಿದ್ದರು.

ಮೂರನೇ ಶ್ರೇಯಾಂಕಿತೆ ಗಾರ್ಬೈನ್ ಮುಗುರುಜಾ ‍ಫ್ರಾನ್ಸನ್‌ ಅಲಿಜ್ ಕಾರ್ನೆಟ್‌ಗೆ 6–3, 6–3ರಲ್ಲಿ ಮಣಿದರು. ಅವರು ಟೂರ್ನಿಯಿಂದ ಹೊರಬಿದ್ದ ಗರಿಷ್ಠ ಶ್ರೇಯಾಂಕದ ಆಟಗಾರ್ತಿಯಾಗಿದ್ದಾರೆ. ಆರನೇ ಶ್ರೇಯಾಂಕದ ಅನೆಟ್‌ ಕೊಂಟೇವೇಟ್ ಡೆನ್ಮಾರ್ಕ್‌ನ ಕ್ಲಾರಾ ಟೌಜನ್ ಎದುರು ಸೋತು ಸ್ವಲ್ಪ ಹೊತ್ತಿನಲ್ಲೇ ಈ ಮುಗುರುಜಾ ಕೂಡ ವಾಪಸ್ ಆಗಿದ್ದಾರೆ. ಅನೆಟ್‌ ಕೊಂಟೇವೇಟ್ 2–6, 4–6ರಲ್ಲಿ ಸೋತಿದ್ದರು.

ಎರಡನೇ ಶ್ರೇಯಾಂಕಿತೆ ಬೆಲಾರಸನ್‌ನ ಅರಿನಾ ಸಬಲೆಂಕಾ ವಿಶ್ವ ರ‍್ಯಾಂಕಿಂಗ್‌ನಲ್ಲಿ 100ನೇ ಸ್ಥಾನದಲ್ಲಿರುವ ವಾಂಗ್ ಕ್ಸಿನ್ಯು ಎದುರು 1-6, 6-4, 6-2ರಲ್ಲಿ ಜಯ ಗಳಿಸಿದರು. ಅನಸ್ತೇಸಿಯಾ ಪೌಲಿಚೆಂಕೋವ 6-2, 6-2ರಲ್ಲಿ ಸ್ಯಾಮ್ ಸ್ವೌಜರ್‌ ಅವರನ್ನು ಮಣಿಸಿದರು. ‌

ಆ್ಯಂಡಿ ಮರ್ರೆಗೆ ನಿರಾಶೆ
ವಿಶ್ವ ಕ್ರಮಾಂಕದಲ್ಲಿ ಹಿಂದೊಮ್ಮೆ ಒಂದನೇ ಸ್ಥಾನ ಅಲಂಕರಿಸಿದ್ದ ಆ್ಯಂಡಿ ಮರ್ರೆ ಗುರುವಾರದ ‍ಪಂದ್ಯದಲ್ಲಿ 120ನೇ ರ‍್ಯಾಂಕ್‌ನ ಜಪಾನ್ ಆಟಗಾರ ತರೊ ಡ್ಯಾನಿಯಲ್‌ಗೆ 4–6, 4–6, 4–6ರಲ್ಲಿ ಮಣಿದರು.

ಈ ಹಿಂದೆ ಇವರಿಬ್ಬರು ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದರು. ಡೇವಿಡ್ ಕಪ್‌ನ ಆ ಪಂದ್ಯದಲ್ಲಿ ಮರ್ರೆ ಕೇವಲ ಐದು ಗೇಮ್‌ಗಳನ್ನು ಮಾತ್ರ ಸೋತಿದ್ದರು. ಆದರೆ ಅರ್ಹತಾ ಸುತ್ತಿನ ಮೂಲಕ ಬಂದ 28 ವರ್ಷದ ಡ್ಯಾನಿಯಲ್ ಈ ಬಾರಿ ಅಮೋಘ ಆಟವಾಡಿದರು. ಮೂರನೇ ಸೆಟ್‌ನ ಒಂಬತ್ತನೇ ಗೇಮ್‌ನಲ್ಲಿ ಸರ್ವ್ ಮುರಿದು 5–4ರ ಮುನ್ನಡೆ ಸಾಧಿಸಿದ ಅವರು ನಂತರ ಮೋಹಕ್ ಸರ್ವ್ ಮೂಲಕ ಸೆಟ್ ಪಂದ್ಯ ಗೆದ್ದು ಮುಂದಿನ ಹಂತಕ್ಕೆ ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.