ADVERTISEMENT

ನಡಾಲ್‌ಗೆ ಮೆಡ್ವೆಡೆವ್‌ ಸವಾಲು

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ: 19ನೇ ಗ್ರ್ಯಾನ್‌ಸ್ಲಾಮ್‌ ಮೇಲೆ ರಫಾ ಚಿತ್ತ

ಪಿಟಿಐ
Published 7 ಸೆಪ್ಟೆಂಬರ್ 2019, 20:35 IST
Last Updated 7 ಸೆಪ್ಟೆಂಬರ್ 2019, 20:35 IST
ಗೆಲುವಿನ ಸಂಭ್ರಮದಲ್ಲಿ ರಫೆಲ್‌ ನಡಾಲ್‌–ಎಪಿ/ಪಿಟಿಐ ಚಿತ್ರ
ಗೆಲುವಿನ ಸಂಭ್ರಮದಲ್ಲಿ ರಫೆಲ್‌ ನಡಾಲ್‌–ಎಪಿ/ಪಿಟಿಐ ಚಿತ್ರ   

ನ್ಯೂಯಾರ್ಕ್‌: ಅಮೆರಿಕ ಓಪನ್ ಟೆನಿಸ್‌ ಟೂರ್ನಿಯ ಸಿಂಗಲ್ಸ್ ಪ್ರಶಸ್ತಿ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. 19ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಎದುರು ನೋಡುತ್ತಿರುವ ಸ್ಪೇನ್‌ನ ರಫೆಲ್‌ ನಡಾಲ್‌ ಅವರಿಗೆ ಫೈನಲ್‌ ಪಂದ್ಯದಲ್ಲಿ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಸವಾಲು ಎದುರಾಗಿದೆ. ಭಾನುವಾರ ಫೈನಲ್‌ ಪಂದ್ಯ ನಡೆಯಲಿದೆ.

33 ವರ್ಷದ ನಡಾಲ್‌, ಶುಕ್ರವಾರ ರಾತ್ರಿ ಅರ್ಥರ್‌ ಆ್ಯಷ್‌ ಅಂಗಣದಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಇಟಲಿಯ ಮ್ಯಾಟ್ಟೆಯೊ ಬೆರೆಟ್ಟಿನಿ ಅವರನ್ನು ಮಣಿಸಿದರು. 7–6 (8/6), 6–4, 6–1ರಿಂದ ನಡಾಲ್‌ಗೆ ಗೆಲುವು ಒಲಿಯಿತು. ಮತ್ತೊಂದು ಪಂದ್ಯದಲ್ಲಿ ಐದನೇ ಶ್ರೇಯಾಂಕದ ಆಟಗಾರ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಅವರು ಬಲ್ಗೇರಿಯಾದ ಗ್ರಿಗೊರ್‌ ಡಿಮಿಟ್ರೊವ್‌ ಅವರ ಸವಾಲು ಮೀರಿದರು. 7–6, 6–4, 6–3ರಿಂದ ಅವರು ಗೆದ್ದರು.

‘ಅಮೆರಿಕ ಓಪನ್‌ನಲ್ಲಿ ಫೈನಲ್‌ಗೆ ಮರಳಿದ್ದು ಖುಷಿಯಾಗಿದೆ’ ಎಂದು ನಡಾಲ್‌ ಪ್ರತಿಕ್ರಿಯಿಸಿದ್ದಾರೆ. ಇಲ್ಲಿ ಪ್ರಶಸ್ತಿ ಗೆದ್ದರೆ ಅಮೆರಿಕ ಓಪನ್‌ನಲ್ಲಿ ಅವರು ಗೆದ್ದ ನಾಲ್ಕನೇ ಪ್ರಶಸ್ತಿಯಾಗಲಿದೆ. 20 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದಿರುವ ಫೆಡರರ್‌ ಅವರ ದಾಖಲೆಗೂ ನಡಾಲ್‌ ಸಮೀಪಿಸಲಿದ್ದಾರೆ.

ADVERTISEMENT

27ನೇ ಗ್ರ್ಯಾನ್‌ಸ್ಲಾಮ್‌ ಫೈನಲ್‌ ತಲುಪಿರುವ ಸ್ಪೇನ್‌ ಆಟಗಾರ, ಹೋದ ತಿಂಗಳು ನಡೆದ ಮಾಂಟ್ರಿಯಲ್‌ ಓಪನ್‌ ಟೂರ್ನಿಯಲ್ಲಿ ಮೆಡ್ವೆಡೆವ್‌ಗೆ ಸೋಲುಣಿಸಿದ್ದರು.

23 ವರ್ಷದ ಮೆಡ್ವೆಡೆವ್‌ಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಪ್ರವೇಶ. ವಾಷಿಂಗ್ಟನ್‌ ಹಾಗೂ ಕೆನಡಾ ಓಪನ್‌ ಟೂರ್ನಿಗಳಲ್ಲಿ ರನ್ನರ್‌ಅಪ್‌ ಆಗಿದ್ದ ಅವರು ಸಿನ್ಸಿನಾಟಿಯಲ್ಲಿ ಟ್ರೋಫಿಗೆ ಮುತ್ತಿಕ್ಕಿದ್ದರು. ಅವರು 14 ವರ್ಷಗಳ ಬಳಿಕ ಪುರುಷರ ಸಿಂಗಲ್ಸ್ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಪ್ರವೇಶಿಸಿದ ಮೊದಲ ರಷ್ಯಾ ಆಟಗಾರ. 2005ರಲ್ಲಿ ಮರಾತ್‌ ಸಫಿನ್‌ ಆಸ್ಟ್ರೇಲಿಯ ಓಪನ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.ಮಡ್ವೆಡೆವ್‌ 19 ವರ್ಷಗಳ ಬಳಿಕ ಅಮೆರಿಕ ಓಪನ್‌ ಫೈನಲ್‌ ತಲುಪಿದ ರಷ್ಯಾ ಆಟಗಾರ ಕೂಡ ಆಗಿದ್ದಾರೆ. 2000ರಲ್ಲಿ ಸಫಿನ್‌ ಇಲ್ಲಿ ಚಾಂಪಿಯನ್‌ ಆಗಿದ್ದರು.

ಮಹಿಳಾ ಸಿಂಗಲ್ಸ್‌ ಪ್ರಶಸ್ತಿಗಾಗಿ ಸೆರೆನಾ ವಿಲಿಯಮ್ಸ್ ಹಾಗೂ ಆ್ಯಂಡ್ರಿಸ್ಕೂ ಬಿಯಾಂಕಾ ಪೈಪೋಟಿ ನಡೆಸಲಿದ್ದಾರೆ. ಮಹಿಳಾ ಡಬಲ್ಸ್ ಫೈನಲ್‌ನಲ್ಲಿ ಅರಿನಾ ಸಬಲೆಂಕಾ–ಎಲಿಸ್‌ ಮೆರ್ಟೆನ್ಸ್ ಹಾಗೂ ವಿಕ್ಟೋರಿಯಾ ಅಜರೆಂಕಾ–ಆ್ಯಷ್ಲೆ ಬಾರ್ಟಿ ಜೋಡಿಗಳ ಮಧ್ಯೆ ಹಣಾಹಣಿ ನಡೆಯಲಿದೆ.

ಕ್ಯಾಬಲ್‌–ಫರಾಹ್‌ಗೆ ಡಬಲ್ಸ್ ಕಿರೀಟ

ಜುವಾನ್‌ ಸೆಬಾಸ್ಟಿಯನ್‌ ಕ್ಯಾಬಲ್‌ ಹಾಗೂ ರಾಬರ್ಟ್‌ ಫರಾಹ್‌ ಅವರು ಶುಕ್ರವಾರ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಇದರೊಂದಿಗೆ ಅಮೆರಿಕ ಓಪನ್‌ ಪ್ರಶಸ್ತಿ ಜಯಿಸಿದ ಕೊಲಂಬಿಯಾದ ಮೊದಲ ಆಟಗಾರರು ಎನಿಸಿಕೊಂಡರು. ಅಂತಿಮ ಪಂದ್ಯದಲ್ಲಿ ಅವರು ಸ್ಪೇನ್‌ನ ಮಾರ್ಸೆಲ್‌ ಗ್ರ್ಯಾನೊಲರ್ಸ್ ಹಾಗೂ ಅರ್ಜೆಂಟೀನಾದ ಹೊರೆಸಿಯೊ ಜೆಬಾಲ್ಲೊಸ್‌ ಅವರನ್ನು 6–4, 7–5ರಿಂದ ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.