ADVERTISEMENT

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ: ಒಸಾಕ, ನಡಾಲ್‌ ಶುಭಾರಂಭ

ಅಮೆರಿಕದ ಕೊಕೊ ಗಾಫ್‌ಗೆ ಆಘಾತ

ರಾಯಿಟರ್ಸ್
Published 17 ಜನವರಿ 2022, 11:44 IST
Last Updated 17 ಜನವರಿ 2022, 11:44 IST
ರಫೆಲ್ ನಡಾಲ್ ಅವರು ಚೆಂಡನ್ನು ರಿಟರ್ನ್ ಮಾಡಿದ ವಿಧಾನ –ರಾಯಿಟರ್ಸ್ ಚಿತ್ರ
ರಫೆಲ್ ನಡಾಲ್ ಅವರು ಚೆಂಡನ್ನು ರಿಟರ್ನ್ ಮಾಡಿದ ವಿಧಾನ –ರಾಯಿಟರ್ಸ್ ಚಿತ್ರ   

ಮೆಲ್ಬರ್ನ್‌: ಸ್ಪೇನ್‌ನ ರಫೆಲ್ ನಡಾಲ್ ಮತ್ತು ಜಪಾನ್‌ನ ನವೊಮಿ ಒಸಾಕ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮೊದಲ ಸವಾಲನ್ನು ಸುಲಭವಾಗಿ ಮೀರಿದ್ದಾರೆ. ಸೋಮವಾರ ಆರಂಭಗೊಂಡ ಟೂರ್ನಿಯ ಆರಂಭಿಕ ಸುತ್ತಿನ ಪಂದ್ಯಗಳಲ್ಲಿ ಇವರಿಬ್ಬರು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಗೆಲುವು ಸಾಧಿಸಿದ್ದಾರೆ.

ಮಹಿಳಾ ವಿಭಾಗದ ಹಾಲಿ ಚಾಂಪಿಯನ್ ಒಸಾಕ 6-3, 6-3ರಲ್ಲಿ ಕೊಲಂಬಿಯಾದ ಕಮಿಲಾ ಒಸೋರಿಯೊ ವಿರುದ್ಧ ಜಯ ಗಳಿಸಿದರು. ರಫೆಲ್ ನಡಾಲ್ 6-1, 6-4, 6-2ರಲ್ಲಿ ಅಮೆರಿಕದ ಮಾರ್ಕೋಸ್ ಗಿರಾನ್ ಅವರನ್ನು ಮಣಿಸಿದರು.

ಮೆಲ್ಬರ್ನ್‌ ಪಾರ್ಕ್‌ನಲ್ಲಿ 2019ರಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದ ಒಸಾಕ ಇತ್ತೀಚೆಗೆ ವಿವಾದ ಮತ್ತು ಗಾಯದ ಸಮಸ್ಯೆಯಿಂದಾಗಿ ಪ್ರಮುಖ ಟೂರ್ನಿಗಳಿಂದ ಹೊರಗುಳಿದಿದ್ದರು. ಸೋಮವಾರ ರಾಡ್‌ ಲೇವರ್‌ನಲ್ಲಿ ನಡೆದ ಪಂದ್ಯದಲ್ಲಿ 24 ವರ್ಷದ ಆಟಗಾರ್ತಿ ಆರಂಭದಲ್ಲೇ ಸತತ ಐದು ಗೇಮ್‌ಗಳನ್ನು ಗೆದ್ದುಕೊಂಡು ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು. ಮೊದಲ ಸೆಟ್‌ನಲ್ಲಿ ಸುಲಭ ಜಯ ಸಾಧಿಸಿದ ಅವರು ಮುಂದಿನ ಸೆಟ್‌ನಲ್ಲೂ ಅದೇ ಲಯವನ್ನು ಮುಂದುವರಿಸಿದರು.

ADVERTISEMENT

ದಾಖಲೆಯ 21ನೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ನಡಾಲ್ ಸುಲಭವಾಗಿ ಎದುರಾಳಿಯನ್ನು ಮಣಿಸಿದರು. ಲಸಿಕೆ ಮತ್ತು ವೀಸಾ ಪ್ರಕರಣದಿಂದಾಗಿ ನೊವಾಕ್ ಜೊಕೊವಿಚ್‌ ತವರಿಗೆ ವಾಪಸಾಗಿದ್ದು ರೋಜರ್ ಫೆಡರರ್‌ ಈ ಟೂರ್ನಿಯಲ್ಲಿ ಆಡದೇ ಇರಲು ನಿರ್ಧರಿಸಿದ್ದಾರೆ. ಹೀಗಾಗಿ ನಡಾಲ್ ಹಾದಿ ಸುಗಮವಾಗಿದೆ. ಆರನೇ ಶ್ರೇಯಾಂಕಿತ ನಡಾಲ್ 34 ‘ವಿನ್ನರ್‌’ಗಳ ಮೂಲಕ ಎದುರಾಳಿಯನ್ನು ನಿರುತ್ತರರಾಗಿಸಿದರು.

ಮಹಿಳೆಯರ ವಿಭಾಗದ ವಿಶ್ವದ ಒಂದನೇ ಕ್ರಮಾಂಕದ ಆಟಗಾರ್ತಿ ಆಸ್ಟ್ರೇಲಿಯಾದ ಆ್ಯಶ್ಲಿ ಬಾರ್ಟಿ ಉಕ್ರೇನ್‌ನ ಲೇಸಿಯಾ ಸುರೆಂಕೊ ವಿರುದ್ಧ 6-0, 6-1ರಲ್ಲಿ ಜಯ ಸಾಧಿಸುವ ಮೂಲಕ ಪ್ರಶಸ್ತಿ ಕನಸಿಗೆ ಜೀವ ತುಂಬಿದ್ದಾರೆ. ಮುಂದಿನ ಸುತ್ತಿನಲ್ಲಿ ಅವರಿಗೆ ಇಟಲಿಯ ಲೂಸಿಯಾ ಬ್ರಾನ್ಜೆಟಿ ಎದುರಾಳಿ.

ಕೊಕೊ ಗಾಫ್‌ಗೆ ನಿರಾಶೆ

ಅಮೆರಿಕದ ಯುವ ಆಟಗಾರ್ತಿ ಕೊಕೊ ಗಾಫ್‌ ಮೊದಲ ಸುತ್ತಿನಲ್ಲೇ ಆಘಾತಕ್ಕೆ ಒಳಗಾದರು. ಮಹಿಳೆಯರ ವಿಭಾಗದಲ್ಲಿ ಅವರು ಚೀನಾದ ವಾಂಗ್ ಕಿಯಾಂಗ್‌ ವಿರುದ್ಧ ಸೋಲನುಭವಿಸಿದರು. ಎರಡು ವರ್ಷಗಳ ಹಿಂದೆ ಅಮೆರಿಕದ ಸೆರೆನಾ ವಿಲಿಯಮ್ಸ್ ವಿರುದ್ಧ ಗೆದ್ದು ಗಮನ ಸೆಳೆದಿದ್ದ ವಾಂಗ್‌ ಕಿಯಾಂಗ್‌ 6-4, 6-2ರಲ್ಲಿ 18ನೇ ಶ್ರೇಯಾಂಕಿತ ಕೊಕೊ ಎದುರು ಜಯ ಸಾಧಿಸಿದರು.

0–5ರ ಹಿನ್ನಡೆಯಲ್ಲಿದ್ದ ಸಂದರ್ಭದಲ್ಲಿ ಕೊಕೊ ನಾಲ್ಕು ಮ್ಯಾಚ್‌ ಪಾಯಿಂಟ್‌ಗಳನ್ನು ಉಳಿಸಿ ನಿರೀಕ್ಷೆ ಮೂಡಿಸಿದ್ದರು. ಆದರೆ ವಾಂಗ್‌ ಕಿಯಾಂಗ್ ಪಟ್ಟು ಬಿಡಲಿಲ್ಲ. ಅವರ ಅಮೋಘ ಆಟದ ಮುಂದೆ ಅಮೆರಿಕ ಆಟಗಾರ್ತಿ 38 ಬಾರಿ ಸ್ವಯಂ ತಪ್ಪುಗಳನ್ನು ಎಸಗಿ ಸುಲಭವಾಗಿ ಸೋಲೊಪ್ಪಿಕೊಂಡರು.

ಫ್ರೆಂಚ್ ಓಪನ್ ಚಾಂಪಿಯನ್‌ ಹಾಗೂ ನಾಲ್ಕನೇ ಶ್ರೇಯಾಂಕದ ಜೆಕ್ ಗಣರಾಜ್ಯದ ಆಟಗಾರ್ತಿ ಬಾರ್ಬೊರಾ ಕ್ರೆಜಿಕೋವಾ 6-2, 6-0ರಲ್ಲಿ ಜರ್ಮನಿಯ ಆ್ಯಂಡ್ರೆ ಪೆಟ್ಕೊವಿಚ್‌ ವಿರುದ್ಧ ಜಯ ಗಳಿಸಿದರು. ಭರ್ಜರಿ ಸರ್ವ್‌ಗಳ ಮೂಲಕ ಮಿನುಗಿದ ಅಮೆರಿಕದ ಮ್ಯಾಡಿಸನ್ ಕೀಸ್‌7-6(2), 7-5ರಲ್ಲಿ ಅಮೆರಿಕದ ಸೋಫಿಯಾ ಕೆನಿನ್ ವಿರುದ್ಧ ಜಯ ಸಾಧಿಸಿದರು.

ಲಸಿಕೆ: ಜೊಕೊವಿಚ್‌ಗೆಫ್ರಾನ್ಸ್‌ ಎಚ್ಚರಿಕೆ

ಲಸಿಕೆ ಹಾಕಿಸಿಕೊಳ್ಳಲು ಮುಂದಾಗದೇ ಇದ್ದರೆ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಆಡಲು ಅವಕಾಶ ನೀಡುವುದಿಲ್ಲ ಎಂದು ಫ್ರಾನ್ಸ್‌ನ ಕ್ರೀಡಾ ಸಚಿವರು ಸೋಮವಾರ ನೊವಾಕ್ ಜೊಕೊವಿಚ್‌ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡಲು ಬಂದಿದ್ದ ಜೊಕೊವಿಚ್ ಅವರನ್ನು ವಶಕ್ಕೆ ಪಡೆದುಕೊಂಡು ಎರಡು ಬಾರಿ ವೀಸಾ ರದ್ದು ಮಾಡಿ ವಾಪಸ್ ಕಳುಹಿಸಲಾಗಿತ್ತು.

ಫ್ರಾನ್ಸ್‌ನಲ್ಲಿ ಲಸಿಕೆ ನಿಯಮಕ್ಕೆ ಸಂಸತ್ತು ಭಾನುವಾರ ಒಪ್ಪಿಗೆ ನೀಡಿದೆ. ಹೊಸ ನಿಯಮದ ಪ್ರಕಾರ ಸಾರ್ವಜನಿಕ ಪ್ರದೇಶಗಳ ಪ್ರವೇಶಕ್ಕೆ ಲಸಿಕೆ ಕಡ್ಡಾಯ. ಈ ಹಿನ್ನೆಲೆಯಲ್ಲಿ ಸಚಿವಾಲಯದ ಪ್ರಕಟಣೆ ಹೊರಬಿದ್ದಿದೆ.

ಮುಂದಿನ ವರ್ಷ ಅವಕಾಶ

ಮುಂದಿನ ವರ್ಷದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡಲು ನೊವಾಕ್ ಜೊಕೊವಿಚ್‌ಗೆ ಅವಕಾಶ ಸಿಗಲಿದೆ ಎಂದು ಆಸ್ಟ್ರೇಲಿಯಾ ಪ್ರಧಾಣಿ ಸ್ಕಾಟ್ ಮಾರಿಸನ್ ತಿಳಿಸಿದ್ದಾರೆ. ಸಮರ್ಪಕ ರೀತಿಯಲ್ಲಿ, ಸರಿಯಾದ ಸಮಯದಲ್ಲಿ ವ್ಯಕ್ತಿಗಳು ದೇಶ ಪ್ರವೇಶಿಸಲು ಯಾವ ಅಭ್ಯಂತರವೂ ಇಲ್ಲ. ಆದರೆ ಅದನ್ನು ಕಾಲ ನಿರ್ಣಯಿಸುತ್ತದೆ ಎಂದು ಮಾರಿಸನ್ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾದಿಂದ ಭಾನುವಾರ ವಾಪಸಾದ ಜೊಕೊವಿಚ್‌ ಸೋಮವಾರ ಮುಂಜಾನೆ ದುಬೈಗೆ ತಲುಪಿದ್ದರು. ಅಲ್ಲಿಂದ ತವರಿಗೆ ಪ್ರಯಾಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.