ADVERTISEMENT

ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ಫೈನಲ್‌ಗೆ ಸಬಲೆಂಕಾ ಲಗ್ಗೆ; ಶಾಂಟೆಕ್‌ ಕನಸು ಭಗ್ನ

ಏಜೆನ್ಸೀಸ್
Published 5 ಜೂನ್ 2025, 23:30 IST
Last Updated 5 ಜೂನ್ 2025, 23:30 IST
<div class="paragraphs"><p>ಅರಿನಾ ಸಬಲೆಂಕಾ</p></div>

ಅರಿನಾ ಸಬಲೆಂಕಾ

   

ಅರಿನಾ ಸಬಲೆಂಕಾ

ಪ್ಯಾರಿಸ್‌: ಸತತ ನಾಲ್ಕನೇ ಬಾರಿ ಫ್ರೆಂಚ್‌ ಓಪನ್ ಕಿರೀಟ ಧರಿಸುವ ಇಗಾ ಶ್ವಾಂಟೆಕ್‌ ಪ್ರಯತ್ನಕ್ಕೆ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅರಿನಾ ಸಬಲೆಂಕಾ ಅಡ್ಡಗಾಲು ಹಾಕಿದರು. ಗುರುವಾರ ನಡೆದ ಈ ಟೂರ್ನಿಯ ಸೆಮಿ ಫೈನಲ್‌ ಪಂದ್ಯವನ್ನು ಮೂರು ಸೆಟ್‌ಗಳಲ್ಲಿ ಗೆದ್ದ ಬೆಲರೂಸ್‌ನ ಆಟಗಾರ್ತಿ ಮೊದಲ ಬಾರಿ ರೋಲೆಂಡ್‌ ಗ್ಯಾರೋಸ್‌ನಲ್ಲಿ ಪ್ರಶಸ್ತಿ ಸುತ್ತಿಗೆ ಕಾಲಿಟ್ಟರು.

ADVERTISEMENT

ಸಬಲೆಂಕಾ 7–6 (7–1), 4–6, 6–0 ಯಿಂದ ಜಯಗಳಿಸಿದರು. ಇದರೊಂದಿಗೆ ಪೋಲೆಂಡ್‌ ಆಟಗಾರ್ತಿಯ ಸತತ 26 ಗೆಲುವುಗಳ ಸರಪಣಿ ಮುರಿಯಿತು. ಸಬಲೆಂಕಾ ಶನಿವಾರ ನಡೆಯುವ ಫೈನಲ್‌ನಲ್ಲಿ, ಎರಡನೇ ಶ್ರೇಯಾಂಕದ ಕೊಕೊ ಗಾಫ್‌ ಮತ್ತು ಅನಿರೀಕ್ಷಿತ ಯಶಸ್ಸು ಕಾಣುತ್ತಿರುವ ಆತಿಥೇಯ ತಾರೆ ಲೋಯಿಸ್ ವಸ್ಸೂನ್ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

‘ಇದು ಅಪೂರ್ವ ಅನುಭವ. ಆದರೆ ನನ್ನ ಕೆಲಸ ಇನ್ನೂ ಮುಗಿದಿಲ್ಲ. ಇಂದಿನ ಆಟದ ಪ್ರದರ್ಶನದಿಂದ ರೋಮಾಂಚನಗೊಂಡಿದ್ದೇನೆ’ ಎಂದು 27 ವರ್ಷದ ಸಬಲೆಂಕಾ ಸಂಭ್ರಮದಿಂದ ಪ್ರತಿಕ್ರಿಯಿಸಿದರು.
‘ನಾನೇನು ಹೇಳಲಿ, 6–0 ಇದಕ್ಕಿಂತ ಪರಿಪೂರ್ಣವಾದುದು ಇಲ್ಲ’ ಎಂದರು.

ಸಬಲೆಂಕಾ ನಾಲ್ಕನೇ ಗ್ರ್ಯಾನ್‌ ಸ್ಲಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. 2024ರಲ್ಲಿ ಅಮೆರಿಕ ಓಪನ್ ಗೆದ್ದುಕೊಂಡ ಅವರು, 2023 ಮತ್ತು 2024ರಲ್ಲಿ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲೂ ಚಾಂಪಿಯನ್ ಆಗಿದ್ದರು. ಶ್ವಾಂಟೆಕ್‌, ವರ್ಷದ ಹಿಂದೆ ಇಲ್ಲಿ ಪ್ರಶಸ್ತಿ ಗೆದ್ದ ನಂತರ ಯಾವುದೇ ಡಬ್ಲ್ಯುಟಿಎ ಟೂರ್ನಿಯ ಫೈನಲ್ ತಲುಪಿರಲಿಲ್ಲ.

ಜೊಕೊವಿಚ್‌ಗೆ ಮಣಿದ ಜ್ವರೇವ್

ಸರ್ಬಿಯಾದ ಹಳೆಹುಲಿ ನೊವಾಕ್ ಜೊಕೊವಿಚ್‌ ಬುಧವಾರ ರಾತ್ರಿ ಫಿಲಿಪ್‌ ಶಾಟ್ರಿಯೆ ಅಂಕಣದಲ್ಲಿ 4–6, 6–3, 6–2, 6–4 ರಿಂದ ಮೂರನೇ ಶ್ರೇಯಾಂಕದ ಜರ್ಮನಿಯ ಆಟಗಾರ ಅಲೆಕ್ಸಾಂಡರ್ ಜ್ವರೇವ್ ಅವರನ್ನು ಸೋಲಿಸಿ ರೋಲೆಂಡ್‌ ಗ್ಯಾರೋಸ್‌ನಲ್ಲಿ ಪುರುಷರ ಸಿಂಗಲ್ಸ್‌ ಸೆಮಿಫೈನಲ್ ತಲುಪಿದರು.

ಮೂರೂಕಾಲು ಗಂಟೆಗಳ ದೀರ್ಘ ಸೆಣಸಾಟದಲ್ಲಿ ಗೆದ್ದು, 38 ವರ್ಷ ವಯಸ್ಸಿನ ಜೊಕೊವಿಚ್‌ ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗೆ ಇನ್ನಷ್ಟು ಸನಿಹವಾದರು. ಜೊಕೊವಿಚ್‌ ಅವರಿಗೆ ಫ್ರೆಂಚ್‌ ಓಪನ್‌ನಲ್ಲಿ 101ನೇ ಪಂದ್ಯದ ಗೆಲುವು ಇದಾಗಿದೆ.

ಮೂರು ಬಾರಿಯ ಚಾಂಪಿಯನ್‌ ಜೊಕೊವಿಚ್‌ ಶುಕ್ರವಾರ ನಡೆಯ ಲಿರುವ ಸೆಮಿಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಇಟಲಿಯ ಯಾನಿಕ್ ಸಿನ್ನರ್ ಅವರನ್ನು ಎದುರಿಸಲಿದ್ದಾರೆ. ಹಾಲಿ ಚಾಂಪಿಯನ್‌, ಎರಡನೇ ಶ್ರೇಯಾಂಕದ ಕಾರ್ಲೋಸ್‌ ಅಲ್ಕರಾಜ್ ಇನ್ನೊಂದು ಸೆಮಿಫೈನಲ್‌
ನಲ್ಲಿ ಲೊರೆಂಜೊ ಮುಸೆಟ್ಟಿ (ಇಟಲಿ) ಅವರನ್ನು ಎದುರಿಸಲಿದ್ದಾರೆ.

ರನ್ನರ್ ಅಪ್ ಆದ ಟೇಲರ್‌ ಟೌನ್ಸೆಂಡ್‌ ಮತ್ತು ಇವಾನ್ ಕಿಂಗ್‌

ಎಪಿ/ ಪಿಟಿಐ ಚಿತ್ರ

ಇರಾನಿ–ವಾವಸೋರಿ ಜೋಡಿಗೆ ಪ್ರಶಸ್ತಿ

ಪ್ಯಾರಿಸ್‌: ಇಟಲಿಯ ಸಾರಾ ಇರ್ರಾನಿ– ಆಂಡ್ರೆ ವಾವಸೋರಿ ಜೋಡಿ ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿಯ ಮಿಶ್ರ ಡಬಲ್ಸ್‌ ಪ್ರಶಸ್ತಿ ಗೆದ್ದುಕೊಂಡಿತು. ಇದು ಈ ಜೋಡಿಗೆ ಎರಡನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯಾಗಿದೆ.

ಗುರುವಾರ ನಡೆದ ಫೈನಲ್‌ನಲ್ಲಿ ಇಟಲಿಯ ಜೋಡಿ 6–4, 6–2 ರಿಂದ ಅಮೆರಿಕದ ಟೇಲರ್‌ ಟೌನ್ಸೆಂಡ್‌– ಇವಾನ್‌ ಕಿಂಗ್ ಜೋಡಿಯನ್ನು ಸೋಲಿಸಿತು. 2024ರಲ್ಲಿ ಸಾರಾ– ವಾವಸೋರಿ ಜೋಡಿ ಅಮೆರಿಕ ಓಪನ್‌ ಟೂರ್ನಿಯಲ್ಲೂ ಮಿಶ್ರ ಡಬಲ್ಸ್‌ ಪ್ರಶಸ್ತಿ ಜಯಿಸಿತ್ತು. ಆಗಲೂ ಟೌನ್ಸೆಂಡ್‌ ಫೈನಲ್‌ನಲ್ಲಿ ಸೋತ ಜೋಡಿಯಲ್ಲಿ ಒಬ್ಬರಾಗಿದ್ದರು.

38 ವರ್ಷ ವಯಸ್ಸಿನ ಸಾರಾ 2012ರಲ್ಲಿ ರೋಲಂಡ್‌ ಗ್ಯಾರೋಸ್‌ನಲ್ಲಿ ಮಹಿಳಾ ಸಿಂಗಲ್ಸ್ ಫೈನಲ್ ತಲುಪಿದ್ದರು. ಸ್ವದೇಶದ ಜಾಸ್ಮಿನ್‌ ಪಾವೊಲಿನಿ ಅವರ ಜೊತೆಗೂಡಿ ಕಳೆದ ವರ್ಷ ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳಾ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಈ ಟೂರ್ನಿಯಲ್ಲೂ ಅವರು ಪಾವೊಲಿನಿ ಜೊತೆ ಡಬಲ್ಸ್ ಫೈನಲ್ ತಲುಪಿದ್ದಾರೆ.

ಐದು ಪ್ರಮುಖ ಟೂರ್ನಿಗಳಲ್ಲಿ ಡಬಲ್ಸ್ ಪ್ರಶಸ್ತಿ ಜಯಿಸುವ ಮೂಲಕ ‘ವೃತ್ತಿ ಬದುಕಿನ ಗ್ರ್ಯಾನ್‌ಸ್ಲಾಮ್‌’ ಪೂರೈಸಿದ ಸಾಧನೆ ಸಾರಾ ಅವರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.