ADVERTISEMENT

ಟೆನಿಸ್ ಟೂರ್ನಿ: ಅಕ್ಕ ವೀನಸ್‌ ಸವಾಲು ಮೀರಿ ನಿಂತ ತಂಗಿ ಸೆರೆನಾ

ಏಜೆನ್ಸೀಸ್
Published 14 ಆಗಸ್ಟ್ 2020, 20:28 IST
Last Updated 14 ಆಗಸ್ಟ್ 2020, 20:28 IST
ಸಹೋದರಿ ವೀನಸ್ ವಿಲಿಯಮ್ಸ್ ಎದುರಿನ ಪಂದ್ಯದಲ್ಲಿ ಚೆಂಡನ್ನು ಫೋರ್‌ಹ್ಯಾಂಡ್‌ ಮೂಲಕ ಹಿಂದಿರುಗಿಸಿದ ಸೆರೆನಾ ವಿಲಿಯಮ್ಸ್ –ಎಎಫ್‌ಪಿ ಚಿತ್ರ
ಸಹೋದರಿ ವೀನಸ್ ವಿಲಿಯಮ್ಸ್ ಎದುರಿನ ಪಂದ್ಯದಲ್ಲಿ ಚೆಂಡನ್ನು ಫೋರ್‌ಹ್ಯಾಂಡ್‌ ಮೂಲಕ ಹಿಂದಿರುಗಿಸಿದ ಸೆರೆನಾ ವಿಲಿಯಮ್ಸ್ –ಎಎಫ್‌ಪಿ ಚಿತ್ರ   

ಲೆಕ್ಸಿಂಗ್ಟನ್: ಅಂಗಣದಲ್ಲಿ ಬರೀ ಮೌನ. ಪ್ರೇಕ್ಷಕರಿರಲಿಲ್ಲ. ಆದ್ದರಿಂದ ಸಂಭ್ರಮವಾಗಲಿ, ಹುರಿದುಂಬಿಸುವ ಸದ್ದಾಗಲಿ ಇರಲಿಲ್ಲ. ಅಕ್ಕ–ತಂಗಿಯರ ಹಣಾಹಣಿಗೆ ಸಾಕ್ಷಿಯಾಗಿದ್ದದ್ದು ಚೆಂಡಿನ ಸದ್ದು ಮತ್ತು ಅವರ ಉದ್ಗಾರಗಳು ಮಾತ್ರ. ಕೊರೊನಾ ಹಾವಳಿ ಆರಂಭವಾದ ನಂತರ ಇದೇ ಮೊದಲ ಬಾರಿ ಅಮೆರಿಕದಲ್ಲಿ ನಡೆದ ಟೆನಿಸ್ ಟೂರ್ನಿಯ ಪಂದ್ಯದಲ್ಲಿ ಅಕ್ಕ ವೀನಸ್ ಅವರನ್ನು ಸೆರೆನಾ ವಿಲಿಯಮ್ಸ್ ಮಣಿಸಿದರು.

ಇಲ್ಲಿ ಶುಕ್ರವಾರ ನಡೆದ ‘ಟಾಪ್‌ ಸೀಡ್ ಮಹಿಳಾ ಓಪನ್‌’ ಟೂರ್ನಿಯ ಎರಡನೇ ಸುತ್ತಿನಲ್ಲಿ 3–6, 6–3, 6–4ರಲ್ಲಿ ಸೆರೆನಾ ಗೆಲುವು ಸಾಧಿಸಿದರು. ಮೊದಲ ಸೆಟ್‌ ಸೋತರೂ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದ್ದ ಸೆರೆನಾ ನಿರ್ಣಾಯಕ ಸೆಟ್‌ನಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿದ್ದರು. ಆದರೆ ಕೊನೆಯ ನಾಲ್ಕು ಗೇಮ್‌ಗಳನ್ನು ಗೆದ್ದುಕೊಂಡು ಸಹೋದರಿಗೆ ನಿರಾಸೆ ಮೂಡಿಸಿದರು. ಇವರಿಬ್ಬರು ಮೊದಲ ಬಾರಿ ಪಂದ್ಯವೊಂದರಲ್ಲಿ ಎದುರು ಬದುರಾಗಿ 22 ವರ್ಷಗಳು ಕಳೆದಿವೆ. ಈ ನಡುವೆ ಒಟ್ಟು 30 ಬಾರಿ ಪರಸ್ಪರ ಸೆಣಸಿದ್ದು ಶುಕ್ರವಾರದ ಪಂದ್ಯ 31ನೇಯದ್ದಾಗಿತ್ತು.

ಮುಖಗವಸು ತೊಟ್ಟುಕೊಂಡು ಪಂದ್ಯಕ್ಕಾಗಿ ಅಂಗಣಕ್ಕೆ ಬಂದ ಇಬ್ಬರೂ ಪ್ರೇಕ್ಷಕರ ಅನುಪಸ್ಥಿತಿಯಲ್ಲೂ ರೋಚಕ ಪಂದ್ಯ ಆಡಿದರು. ಭರ್ಜರಿ ಸರ್ವ್ ಮತ್ತು ಭಾರಿ ಹೊಡೆತಗಳ ಮೂಲಕ ಪಂದ್ಯಕ್ಕೆ ರೋಚಕತೆ ತುಂಬಿದರು.

ADVERTISEMENT

ಅಕ್ಕನ ವಿರುದ್ಧ 19ನೇ ಗೆಲುವು ಸಾಧಿಸಿದ ಸೆರೆನಾ ‘ವಿಂಬಲ್ಡನ್ ಟೂರ್ನಿಯಲ್ಲಿ ಅಥವಾ ಅಮೆರಿಕ ಓಪನ್‌ನಲ್ಲಿ ಪ್ರೇಕ್ಷಕರ ನಡುವೆ ಆಡುವಾಗ ಒತ್ತಡ ಇರುತ್ತದೆ. ಇಲ್ಲಿ ನಿರಾಳವಾಗಿದ್ದೆ. ಹಾಗೆಂದು ಇದನ್ನು ಅಭ್ಯಾಸ ಪಂದ್ಯದಂತೆ ಪರಿಗಣಿಸಲಿಲ್ಲ. ನೈಜ ಸಾಮರ್ಥ್ಯ ಹೊರಗೆಡವಿ ಆಡಿದ್ದೆ. ಇದು ಹೊಸ ಅನುಭವ’ ಎಂದರು.

ಕೊರೊನಾ ಆತಂಕದಿಂದಾಗಿ ಹಸ್ತಲಾಘವ ಅಥವಾ ಅಪ್ಪಿಕೊಳ್ಳುವುದನ್ನು ನಿಷೇಧಿಸಿರುವ ಕಾರಣ ಪಂದ್ಯದ ನಂತರ ಸಹೋದರಿಯರು ಪರಸ್ಪರ ರ‍್ಯಾಕೆಟ್ ತಾಗಿಸಿ ಅಭಿನಂದನೆ ಸಲ್ಲಿಸಿದರು. ಅಂಗಣದಲ್ಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಬರಹ ಎದ್ದು ಕಾಣುತ್ತಿತ್ತು.

ಆರಂಭದಲ್ಲಿ ಸೆರೆನಾ 2–0 ಮುನ್ನಡೆ ಗಳಿಸಿದ್ದರು. ಆದರೆ ಸತತ ಐದು ಗೇಮ್‌ಗಳನ್ನು ಗೆದ್ದು ವೀನಸ್ ತಿರುಗೇಟು ನೀಡಿದರು. ನಂತರ ಸೆಟ್ ಗೆದ್ದುಕೊಂಡರು. ಉಷ್ಣಾಂಶ ಹೆಚ್ಚು ಇದ್ದುದರಿಂದ ಮೊದಲ ಸೆಟ್‌ನ ನಂತರ 10 ನಿಮಿಷಗಳ ವಿರಾಮ ನೀಡಲಾಯಿತು. ಸೆರೆನಾ ಅಂಗಣದಲ್ಲೇ ಉಳಿದರೆ ವೀನಸ್ ಹೊರಗೆ ಹೋಗಿ ದಣಿವಾರಿಸಿಕೊಂಡರು. ಮೂರನೇ ಸೆಟ್‌ನ ಆರಂಭದಲ್ಲಿ ವೀನಸ್ 4–2ರ ಮೇಲುಗೈ ಸಾಧಿಸಿದರು. ಆದರೆ ಸಹೋದರಿಯ ಸತತ ಡಬಲ್ ಫಾಲ್ಟ್‌ಗಳ ಲಾಭ ಪಡೆದ ಸೆರೆನಾ ತಿರುಗೇಟು ನೀಡಿ 5–4ರಲ್ಲಿ ಮುನ್ನಡೆದು ನಂತರ ಸೆಟ್ ಮತ್ತು ಪಂದ್ಯ ಗೆದ್ದು ಸಂಭ್ರಮಿಸಿದರು.

ಮುಂದಿನ ಪಂದ್ಯದಲ್ಲಿ ಸೆರನಾ ತಮ್ಮದೇ ದೇಶದ ಶೆಲ್ಬಿ ರೋಜರ್ಸ್ ಸವಾಲನ್ನು ಎದುರಿಸುವರು. ಅವರು ಕೆನಡಾದ ಲೇಯ್ಲಾ ಫರ್ನಾಂಡಿಸ್ ಎದುರು 6–2, 7–5ರ ಗೆಲುವು ಸಾಧಿಸಿದ್ದರು. ಶೆಲ್ಬಿ ಅವರು ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದು ಲೇಯ್ಲಾ ಅರ್ಹತಾ ಸುತ್ತಿನಲ್ಲಿ ಆಡಿ ಬಂದಿದ್ದರು. ಐದನೇ ಶ್ರೇಯಾಂಕದ ಯೂಲಿಯಾ ಪುಟಿನ್‌ಸೇವಾ ಅವರನ್ನು 6–2, 6–2ರಲ್ಲಿ ಮಣಿಸಿದ ಜಿಲ್ ಟೇಕ್‌ಮ್ಯಾನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಜೆಸಿಕಾ ಪೆಗುಲಾ ವಿರುದ್ಧ 6–3, 6–2ರಲ್ಲಿ ಜಯ ಗಳಿಸಿದ ಸಿಸಿ ಬೆಲಿಸ್ ಅವರನ್ನು ಎಂಟರ ಘಟ್ಟದಲ್ಲಿ ಟೇಕ್‌ಮ್ಯಾನ್ ಎದುರಿಸುವರು.

ವೀನಸ್‌ಗೆ ಈಗ 40 ವರ್ಷ. ಸೆರೆನಾಗೆ ಮುಂದಿನ ತಿಂಗಳು 39 ತುಂಬಲಿದೆ. ಡಬ್ಲ್ಯುಟಿಎ ಟೂರ್ನಿಯೊಂದರ ಪಂದ್ಯದ ಇಬ್ಬರು ಆಟಗಾರ್ತಿಯರ ವಯಸ್ಸನ್ನು ಒಟ್ಟು ಸೇರಿಸಿದರೆ ಇದು ಅತಿ ಹೆಚ್ಚು. 2004ರಲ್ಲಿ ಮಾರ್ಟಿನಾ ನವ್ರಟಿಲೋವ ಮತ್ತು ಆ್ಯಮಿ ಫ್ರೇಜರ್ ಅವರ ಜಂಟಿ ವಯಸ್ಸು ಈ ವರೆಗಿನ ದಾಖಲೆಯಾಗಿತ್ತು. ಆ ಪಂದ್ಯ ಆಡುವಾಗ ಮಾರ್ಟಿನಾ ವಯಸ್ಸು 47 ಮತ್ತು ಆ್ಯಮಿ ಅವರದು 31 ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.