ಅಮೆರಿಕದ ಕೊಕೊ ಗಾಫ್ (ಬಲ) ಅವರನ್ನು ಅಭಿನಂದಿಸಿದ ಫ್ರಾನ್ಸ್‌ನ ಲೋಯಿಸ್ ವಸ್ಸೂನ್
ಪಿಟಿಐ ಚಿತ್ರ
ಪ್ಯಾರಿಸ್: ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಅವರು ಸತತ ಎರಡನೇ ಬಾರಿ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ತಲುಪಿದರು. ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದ ವೇಳೆ ಅವರ ಎದುರಾಳಿ ಎಂಟನೇ ಶ್ರೇಯಾಂಕದ ಲೊರೆಂಜೊ ಮುಸೆಟ್ಟಿ ಗಾಯಾಳಾಗಿ ಅರ್ಧದಲ್ಲೇ ಹಿಂದೆಸರಿದರು.
ಎಡಗಾಲಿನ ನೋವಿನಿಂದ ಇಟಲಿಯ ಆಟಗಾರ ಪಂದ್ಯದಿಂದ ನಿವೃತ್ತರಾದಾಗ, ಸ್ಪೇನ್‌ನ ಆಟಗಾರ 4–6, 7–6 (3), 6–0, 2–0 ಯಿಂದ ಮುನ್ನಡೆ ಸಾಧಿಸಿದ್ದರು.
ಈ ಶತಮಾನದಲ್ಲಿ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ರಫಾ ನಡಾಲ್ ಮತ್ತು ಗುಸ್ಟಾವೊ ಕುಯೆರ್ಟನ್ ಮಾತ್ರ ಪ್ರಶಸ್ತಿ ಉಳಿಸಿಕೊಂಡಿದ್ದಾರೆ. ಅಲ್ಕರಾಜ್ ಈ ಬಾರಿ ಗೆದ್ದಲ್ಲಿ ಆ ಸಾಧನೆ ಮಾಡಿದ ಮೂರನೇ ಆಟಗಾರ ಎನಿಸಲಿದ್ದಾರೆ.
ಅವರು ಭಾನುವಾರ ನಡೆಯುವ ಫೈನಲ್‌ನಲ್ಲಿ– ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಮತ್ತು 24 ಬಾರಿಯ ಗ್ರ್ಯಾನ್‌ಸ್ಲಾಮ್ ವಿಜೇತ ನೊವಾಕ್ ಜೊಕೊವಿಚ್ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.
ಮುಸೆಟ್ಟಿ ಮೊದಲ ಸೆಟ್‌ನ ಆರಂಭದ 9 ಗೇಮ್‌ಗಳಲ್ಲಿ ಎರಡು ಬಾರಿ ಬ್ರೇಕ್ ಮಾಡುವ ಅವಕಾಶಗಳನ್ನು ತಡೆದರು. ಸ್ಪೇನ್‌ನ ಆಟಗಾರ ಸರ್ವ್ ವೇಳೆ ತಪ್ಪುಗಳನ್ನು ಎಸಗಿದ್ದರಿಂದ 23 ವರ್ಷ ವಯಸ್ಸಿನ ಮುಸೆಟ್ಟಿ ಮೊದಲ ಸೆಟ್ ಗೆದ್ದರು.
ಹತಾಶರಾದ ಅಲ್ಕರಾಝ್ ಎರಡನೇ ಸೆಟ್‌ನ ಆರಂಭದಲ್ಲಿ ಬೆಂಚ್ ಒದ್ದು ಹತಾಶೆ ವ್ಯಕ್ತಪಡಿಸಿದರು. ಆದರೆ ಕೊನೆಗೂ ಮುಸೆಟ್ಟಿ ಅವರ ರಕ್ಷಣಾ ಆಟ ಭೇದಿಸಿ ಸ್ಕೋರ್ ಸಮಮಾಡಿಕೊಂಡ ಅಲ್ಕರಾಜ್ ಟೈಬ್ರೇಕರ್‌ನಲ್ಲಿ ಪಂದ್ಯ ಗೆದ್ದುಕೊಂಡರು. ಮೂರನೇ ಸೆಟ್‌ನಲ್ಲಂತೂ ಅವರು ಕರಾರುವಾಕ್ ಹೊಡೆತಗಳನ್ನು ಆಡಿ ಎದುರಾಳಿಯ ಲಯ ತಪ್ಪಿಸಿದರು.
ಮೂರನೇ ಸೆಟ್‌ನ ಮಧ್ಯಭಾಗದ ವೇಳೆ ಎಡತೊಡೆಯ ನೋವು ಕಾಣಿಸಿಕೊಂಡ ಪರಿಣಾಮ ಮುಸೆಟ್ಟಿ, ನಾಲ್ಕನೇ ಸೆಟ್‌ನ ಎರಡು ಗೇಮ್ ನಂತರ ಪಂದ್ಯ ತ್ಯಜಿಸಿದರು.
ಗೆಲುವಿನ ಸಂಭ್ರಮದಲ್ಲಿ ಅಮೆರಿಕದ ಕೊಕೊ ಗಾಫ್ ಪಿಟಿಐ ಚಿತ್ರ
ಸೆಮಿಫೈನಲ್ ಪಂದ್ಯದ ವೇಳೆ ಪಾಯಿಂಟ್ ಒಂದನ್ನು ಪಡೆದ ವೇಳೆ ಅಲ್ಕರಾಜ್ ಖುಷಿಪಟ್ಟಿದ್ದು ಹೀಗೆ... ಪಿಟಿಐ ಚಿತ್ರ
ಪ್ರಶಸ್ತಿಗೆ ಇಂದು ಕೊಕೊ– ಸಬಲೆಂಕಾ ಸೆಣಸಾಟ
ಅಮೆರಿಕದ ಕೊಕೊ ಗಾಫ್ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಬಾರಿ ಫೈನಲ್ ತಲುಪಿದ್ದಾರೆ. ಎರಡನೇ ಶ್ರೇಯಾಂಕದ ಗಾಫ್ ಶನಿವಾರ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಅರಿನಾ ಸಬಲೆಂಕಾ ಅವರನ್ನು ಎದುರಿಸಲಿದ್ದಾರೆ.
ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಗುರುವಾರ ರಾತ್ರಿ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ 21 ವರ್ಷ ವಯಸ್ಸಿನ ಗಾಫ್ 6-1 6-2ರಿಂದ ಆತಿಥೇಯ ಫ್ರಾನ್ಸ್‌ನ ಲೋಯಿಸ್ ವಸ್ಸೂನ್ ಅವರನ್ನು ಸೋಲಿಸಿದರು. ಇದಕ್ಕೂ ಮುನ್ನ ಮತ್ತೊಂದು ಸೆಮಿಫೈನಲ್‌ನಲ್ಲಿ ಬೆಲರೂಸ್‌ನ ಸಬಲೆಂಕಾ ನಾಲ್ಕು ಬಾರಿಯ ಚಾಂಪಿಯನ್ ಇಗಾ ಶ್ವಾಂಟೆಕ್ (ಪೋಲೆಂಡ್) ಅವರನ್ನು ಮಣಿಸಿದ್ದರು.
ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿದ್ದ 361ನೇ ಶ್ರೇಯಾಂಕದ ವಸ್ಸೂನ್ ಟೂರ್ನಿಯಲ್ಲಿ ಮೂರನೇ ಶ್ರೇಯಾಂಕದ ಜೆಸಿಕಾ ಪೆಗುಲಾ ಮತ್ತು ಆರನೇ ಶ್ರೇಯಾಂಕದ ಮಿರಾ ಆ್ಯಂಡ್ರೀವಾ ಅವರಿಗೆ ಆಘಾತ ನೀಡಿ ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದರು. ಏಕೈಕ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ (2023ರ ಅಮೆರಿಕ ಓಪನ್) ಪ್ರಶಸ್ತಿ ಗೆದ್ದಿರುವ ಗಾಫ್ 2022ರಲ್ಲಿ ಇಲ್ಲಿ ಫೈನಲ್‌ನಲ್ಲಿ 6–1 6–3ರಿಂದ ಶ್ವಾಂಟೆಕ್ ಎದುರು ಮುಗ್ಗರಿಸಿದ್ದರು. ಗಾಫ್ ಮತ್ತು ಸಬಲೆಂಕಾ ಈತನಕ ಒಟ್ಟು 10 ಬಾರಿ ಮುಖಾಮುಖಿಯಾಗಿದ್ದು ಸಮಬಲ (ತಲಾ ಐದು ಗೆಲುವು) ಸಾಧಿಸಿದ್ದಾರೆ. ಕೊನೆಯ ಬಾರಿ ಮೇ ತಿಂಗಳಲ್ಲಿ ಮ್ಯಾಡ್ರಿಡ್ ಓಪನ್ ಫೈನಲ್‌ನಲ್ಲಿ ಎದುರಾಗಿದ್ದರು. ಅಲ್ಲಿ 27 ವರ್ಷ ವಯಸ್ಸಿನ ಸಬಲೆಂಕಾ ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದ್ದರು.
2013ರ ಬಳಿಕ ಮೊದಲ ಬಾರಿ ಫ್ರೆಂಚ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನ ಫೈನಲ್‌ನಲ್ಲಿ ಮೊದಲೆರಡು ಶ್ರೇಯಾಂಕದ ಆಟಗಾರ್ತಿಯರು ಮುಖಾಮುಖಿಯಾಗುತ್ತಿದ್ದಾರೆ. 12 ವರ್ಷಗಳ ಹಿಂದೆ ಅಗ್ರ ಶ್ರೇಯಾಂಕ ಹೊಂದಿದ್ದ ಸೆರೆನಾ ವಿಲಿಯಮ್ಸ್ (ಅಮೆರಿಕ) ಅವರು ಎರಡನೇ ಶ್ರೇಯಾಂಕ ಪಡೆದಿದ್ದ ಮರಿಯಾ ಶರಪೋವಾ (ರಷ್ಯಾ) ಅವರನ್ನು ಮಣಿಸಿ ಪ್ರಶಸ್ತಿ ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.