
ಜಿಎಸ್ ದೆಹಲಿ ಏಸಸ್ ತಂಡದ ಆಟಗಾರರು ಮತ್ತು ಸಿಬ್ಬಂದಿ ಟ್ರೋಫಿಯೊಂದಿಗೆ ಸಂಭ್ರಮಿಸಿದರು
ಅಹಮದಾಬಾದ್: ಜಿಎಸ್ ದೆಹಲಿ ಏಸಸ್ ತಂಡವು 7ನೇ ಆವೃತ್ತಿಯ ಟೆನಿಸ್ ಪ್ರೀಮಿಯರ್ ಲೀಗ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಇಲ್ಲಿನ ಗುಜರಾತ್ ವಿ.ವಿ. ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ 51–36ರಿಂದ ಯಶ್ ಮುಂಬೈ ಈಗಲ್ಸ್ ತಂಡವನ್ನು ಮಣಿಸಿದ ದೆಹಲಿ ತಂಡವು ಪದಾರ್ಪಣೆ ಮಾಡಿದ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದು ಗಮನ ಸೆಳೆಯಿತು.
ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿದ ಬೆಲ್ಜಿಯಂನ ತಾರಾ ಆಟಗಾರ್ತಿ ಸೋಫಿಯಾ ಕಾಸ್ಟೂಲಸ್ ಅವರು ಮಹಿಳೆಯರ ಸಿಂಗಲ್ಸ್‌ನಲ್ಲಿ 18–7ರಿಂದ ರಿಯಾ ಭಾಟಿಯಾ ಅವರನ್ನು ಸೋಲಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಕಾಸ್ಟೂಲಸ್–ಜೀವನ್ ನೆಡುಂಜೆಳಿಯನ್ ಜೋಡಿಯು 16–9ರಿಂದ ರಿಯಾ ಹಾಗೂ ನಿಕಿ ಪೂಣಚ್ಚ ಅವರನ್ನು ಮಣಿಸಿದರು.
ಪುರುಷರ ಸಿಂಗಲ್ಸ್‌ನಲ್ಲಿ ಮುಂಬೈ ತಂಡದ ಡಮಿರ್ ಜೂಮೂರ್ ಅವರು 16–9ರಿಂದ ಬಿಲ್ಲಿ ಹ್ಯಾರಿಸ್ ವಿರುದ್ಧ ಗೆದ್ದರು. ಆದರೆ, ನಿರ್ಣಾಯಕವಾಗಿದ್ದ ಪುರುಷರ ಡಬಲ್ಸ್‌ನಲ್ಲಿ ದೆಹಲಿಯ ಹ್ಯಾರಿಸ್–ಜೀವನ್ ಜೋಡಿಯು 8–4ರಿಂದ ನಿಕಿ ಹಾಗೂ ಜೂಮೂರ್ ಜೋಡಿಯನ್ನು ಮಣಿಸಿ ತಮ್ಮ ತಂಡ ಚಾಂಪಿಯನ್ ಆಗಲು ನೆರವಾದರು.
ಮುಂಬೈ ಈಗಲ್ಸ್ ತಂಡವು ಸೆಮಿಫೈನಲ್‌ನಲ್ಲಿ
51–49ರಿಂದ ಎಸ್‌ಜಿ ಪೈಪರ್ಸ್ ಬೆಂಗಳೂರು ತಂಡದ ವಿರುದ್ಧ ಗೆಲುವು ಸಾಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.