ADVERTISEMENT

US Open Tennis 2025: ಬ್ಲಾಕ್‌ಬಸ್ಟರ್‌ ಸೆಣಸಿಗೆ ಅಲ್ಕರಾಜ್‌–ಸಿನ್ನರ್ ಸಜ್ಜು

ನೇರ ಸೆಟ್‌ಗಳಲ್ಲಿ ಮಣಿದ ಜೊಕೊವಿಚ್‌

ಏಜೆನ್ಸೀಸ್
Published 6 ಸೆಪ್ಟೆಂಬರ್ 2025, 23:30 IST
Last Updated 6 ಸೆಪ್ಟೆಂಬರ್ 2025, 23:30 IST
<div class="paragraphs"><p>ಕಾರ್ಲೋಸ್‌ ಅಲ್ಕರಾಜ್‌  ಮತ್ತು ಯಾನಿಕ್‌ ಸಿನ್ನರ್‌ ಸಂಭ್ರಮ  </p></div>

ಕಾರ್ಲೋಸ್‌ ಅಲ್ಕರಾಜ್‌ ಮತ್ತು ಯಾನಿಕ್‌ ಸಿನ್ನರ್‌ ಸಂಭ್ರಮ

   

-ಎಎಫ್‌ಪಿ ಚಿತ್ರಗಳು

ನ್ಯೂಯಾರ್ಕ್: ಅನುಭವಿ ನೊವಾಕ್ ಜೊಕೊವಿಚ್‌ ಅವರನ್ನು ಶುಕ್ರವಾರ ನೇರ ಸೆಟ್‌ಗಳಲ್ಲಿ ಮಣಿಸಿದ ಕಾರ್ಲೋಸ್‌ ಅಲ್ಕರಾಜ್ ಅವರು ಅಮೆರಿಕ ಓಪನ್‌ ಫೈನಲ್‌ ತಲುಪಿದರು. ಫೈನಲ್‌ನಲ್ಲಿ ಅವರು ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಅವರನ್ನು ಎದುರಿಸಲಿದ್ದು, ಮತ್ತೊಂದು ‘ಬ್ಲಾಕ್‌ಬಸ್ಟರ್‌’ ಸೆಣಸಾಟಕ್ಕೆ ವೇದಿಕೆ ರೂಪಿಸಿಕೊಂಡರು.

ADVERTISEMENT

ಎರಡನೇ ಶ್ರೇಯಾಂಕದ ಅಲ್ಕರಾಜ್ ಶುಕ್ರವಾರ 2 ಗಂಟೆ 23 ನಿಮಿಷಗಳವರೆಗೆ ನಡೆದ  ಸೆಮಿಫೈನಲ್ ಪಂದ್ಯದಲ್ಲಿ ಬಿರುಸಿನ ಆಟವಾಡಿ 6–4, 7–6 (7–4), 6–2 ರಿಂದ ಜೊಕೊವಿಚ್‌ ಅವರನ್ನು ಸೋಲಿಸಿದರು. ಇಲ್ಲಿ ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಜೊಕೊವಿಚ್‌ ಕನಸು ಕಮರಿಹೋಯಿತು.

ಅಲ್ಕರಾಜ್ ಇದೀಗ ತಮ್ಮ ಬದ್ಧ ಎದುರಾಳಿ, ಇಟಲಿಯ ಯಾನಿಕ್ ಸಿನ್ನರ್ ಅವರನ್ನು ಎದುರಿಸಬೇಕಾಗಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಸಿನ್ನರ್, 25ನೇ ಶ್ರೇಯಾಂಕದ ಕೆನಡಾದ ಆಟಗಾರ ಫೆಲಿಕ್ಸ್‌ ಓಜೆ ಆಲಿಯಾಸೀಮ್ ಅವರನ್ನು ಸೋಲಿಸಲು ಶ್ರಮ ಹಾಕಬೇಕಾಯಿತು. ಹಾಲಿ ಚಾಂಪಿಯನ್ ಈ ಪಂದ್ಯವನ್ನು 6–1, 3–6, 6–3, 6–4 ರಿಂದ ಗೆದ್ದರು.

ಈ ವರ್ಷ ಸತತ ಮೂರನೇ ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಫೈನಲ್‌ನಲ್ಲಿ ಅಲ್ಕರಾಜ್ ಮತ್ತು ಸಿನ್ನರ್ ಮುಖಾಮುಖಿಯಾಗುತ್ತಿದ್ದಾರೆ. ಈ ಪೈಪೋಟಿಗೆ ಸಾಕ್ಷಿ ಆಗಲಿರುವ 23000 ಪ್ರೇಕ್ಷಕರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೂ ಒಬ್ಬರಾಗಿರಲಿದ್ದಾರೆ.

ಜೂನ್‌ನಲ್ಲಿ ಸುಮಾರು ಐದೂವರೆ ಗಂಟೆಗಳ ಅವಿಸ್ಮರಣೀಯ ಫ್ರೆಂಚ್‌ ಓಪನ್ ಫೈನಲ್‌ನಲ್ಲಿ ಅಲ್ಕರಾಜ್ ಜಯಗಳಿಸಿದ್ದರು. ಆದರೆ ತಿಂಗಳ ನಂತರ ವಿಂಬಲ್ಡನ್‌ ಫೈನಲ್‌ನಲ್ಲಿ ಗೆದ್ದ ಸಿನ್ನರ್ ಅವರು ಅಲ್ಕರಾಜ್‌ ಅವರನ್ನು ಚಾಂಪಿಯನ್ ಪಟ್ಟದಿಂದ ಕೆಳಗಿಳಿಸಿದ್ದರು.

ಜೊಕೊವಿಚ್‌ ವಿರುದ್ಧ ಆಡಿದ ರೀತಿ ನೋಡಿದರೆ, ಅಲ್ಕರಾಜ್ ಅವರು ಸಿನ್ನರ್ ಅವರನ್ನು ಸೋಲಿಸಲು ಸಮರ್ಥರಾಗಿರು ವಂತೆ ಕಾಣುತ್ತಿದೆ. ಏನಿದ್ದರೂ ಫೈನಲ್ ಪಂದ್ಯ ಗೆಲ್ಲುವ ಆಟಗಾರ ಸೋಮವಾರ ಪ್ರಕಟವಾಗುವ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.

ಅಲ್ಕರಾಜ್ ಸಾಧನೆ: ಫೈನಲ್ ತಲುಪುವ ಹಾದಿಯಲ್ಲಿ 22 ವರ್ಷದ ಅಲ್ಕರಾಜ್ ಒಂದೂ ಸೆಟ್‌ ಕಳೆದುಕೊಂಡಿಲ್ಲ. ಆದರೆ ತಮ್ಮ ಆಟ ಸುಧಾರಣೆಗೆ ಇನ್ನೂ ಅವಕಾಶ ಇದೆ ಎನ್ನುವುದು ಐದು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಒಡೆಯನ ಅನಿಸಿಕೆ.

‘ಮುಂದಿನ ವರ್ಷವೂ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗೆ ಯತ್ನಿಸುವ ಉದ್ದೇಶವಿದೆ. ಆದರೆ ಅಲ್ಕರಾಜ್ ಮತ್ತು ಸಿನ್ನರ್ ಅವರನ್ನು ದೈಹಿಕ ಸಾಮರ್ಥ್ಯದಲ್ಲಿ ಸರಿಗಟ್ಟಲು ಇನ್ನು ತಮ್ಮಿಂದಾಗದು’ ಎಂದು ನಿರಾಶರಾದ 38 ವರ್ಷ ವಯಸ್ಸಿನ ಸರ್ಬಿಯಾದ ಆಟಗಾರ ಒಪ್ಪಿಕೊಂಡರು.

ಸಿನ್ನರ್ ಸಾಹಸ: ಆಸ್ಟ್ರೇಲಿಯಾ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದ ಸಿನ್ನರ್, ಟೆನಿಸ್‌ ಇತಿಹಾಸದಲ್ಲಿ ಒಂದೇ ವರ್ಷ ನಾಲ್ಕೂ ಗ್ರ್ಯಾನ್‌ಸ್ಲಾಮ್‌ ಫೈನಲ್ ತಲುಪಿದ ಕೇವಲ ನಾಲ್ಕನೇ ಆಟಗಾರ ಎನಿಸಿದರು. ಈ ಹಿಂದೆ ಆಸ್ಟ್ರೇಲಿಯಾದ ರಾಡ್‌ ಲೇವರ್‌, ರೋಜರ್ ಫೆಡರರ್‌ ಮತ್ತು ಜೊಕೊವಿಚ್‌ ಇತರ ಮೂವರು.

2022ರಲ್ಲಿ ಇದೇ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಸಿನ್ನರ್–ಅಲ್ಕರಾಜ್ ನಡುವಣ ‘ಕ್ಲಾಸಿಕ್‌’ ಸಮರ ಐದು ಸೆಟ್‌ಗಳಿಗೆ ಬೆಳೆದು ಬೆಳಗಿನ ಜಾವ 2.50 ನಿಮಿಷಕ್ಕೆ ಮುಗಿದಿತ್ತು. ಇದು ಟೂರ್ನಿಯ ಇತಿಹಾಸದಲ್ಲೇ ಅತಿ ತಡವಾಗಿ ಮುಗಿದ ಪಂದ್ಯವಾಗಿದ್ದು ಅಲ್ಕರಾಜ್‌ ಜಯಗಳಿಸಿದ್ದರು.

ಗೇಬ್ರಿಯೆಲಾ– ಎರಿನ್ ಜೋಡಿಗೆ ಪ್ರಶಸ್ತಿ

ಶುಕ್ರವಾರ ನಡೆದ ಮಹಿಳೆಯರ ಡಬಲ್ಸ್‌ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಗೇಬ್ರಿಯೆಲಾ ದಬ್ರೋವ್‌ಸ್ಕಿ– ಎರಿನ್‌ ರೂಟ್ಲಿಫ್‌ ಜೋಡಿ 6–4, 6–4 ರಿಂದ ಅಗ್ರ ಶ್ರೇಯಾಂಕದ ಟೇಲರ್‌ ಟೌನ್ಸೆಂಡ್‌ (ಅಮೆರಿಕಾ)– ಕ್ಯಾಥೆರಿನಾ ಸಿನಿಕೋವಾ (ಝೆಕ್‌ ರಿಪಬ್ಲಿಕ್‌) ಅವರನ್ನು ಸೋಲಿಸಿತು. ಮೂರು ವರ್ಷಗಳಲ್ಲಿ ಎರಡನೇ ಬಾರಿ ಕೆನಡಾದ ಗೇಬ್ರಿಯೆಲಾ– ನ್ಯೂಜಿಲೆಂಡ್‌ನ ರೂಟ್ಲಿಫ್‌ ಜೋಡಿ ಚಾಂಪಿಯನ್  ಕಿರೀಟ ಧರಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.