ADVERTISEMENT

ಅಮೆರಿಕ ಓಪನ್‌ ಟೆನಿಸ್‌: ಒಸಾಕಾಗೆ ಸಾಟಿಯಾಗದ ಗಾಫ್‌

ಕ್ವಾರ್ಟರ್‌ ಫೈನಲ್‌ಗೆ ಸಿನ್ನರ್, ಶ್ವಾಂಟೆಕ್ ಮುನ್ನಡೆ

ಏಜೆನ್ಸೀಸ್
Published 2 ಸೆಪ್ಟೆಂಬರ್ 2025, 23:30 IST
Last Updated 2 ಸೆಪ್ಟೆಂಬರ್ 2025, 23:30 IST
<div class="paragraphs"><p>ಗೆಲುವಿನ ಸಂಭ್ರಮ.... ಅಮೆರಿಕ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ ನವೊಮಿ ಒಸಾಕಾ </p></div>

ಗೆಲುವಿನ ಸಂಭ್ರಮ.... ಅಮೆರಿಕ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ ನವೊಮಿ ಒಸಾಕಾ

   

ಎಎಫ್‌ಪಿ ಚಿತ್ರ

ನ್ಯೂಯಾರ್ಕ್‌: ಬಹು ನಿರೀಕ್ಷಿತ ಸೆಣಸಾಟದಲ್ಲಿ ನವೋಮಿ ಒಸಾಕಾ ಅವರು ತವರಿನ ಫೇವರಿಟ್‌ ಕೊಕೊ ಗಾಫ್‌ ಅವರನ್ನು ನಿರೀಕ್ಷೆಗಿಂತ ಸುಲಭವಾಗಿ ಸೋಲಿಸಿ ಅಮೆರಿಕ ಓಪನ್ ಟೆನಿಸ್‌ ಟೂರ್ನಿಯ ಎಂಟರ ಸುತ್ತಿಗೆ ದಾಪುಗಾಲಿಟ್ಟರು. ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಮತ್ತು ಎರಡನೇ ಶ್ರೇಯಾಂಕದ ಆಟಗಾರ್ತಿ ಇಗಾ ಶ್ವಾಂಟೆಕ್ ಅವರೂ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.

ADVERTISEMENT

ಅಮೆರಿಕ ಓಪನ್ ಮಾಜಿ ಚಾಂಪಿ ಯನ್ನರ ಪಂದ್ಯ ಸಮಬಲದ ಹೋರಾಟ ಕಾಣಲಿಲ್ಲ. ಆರ್ಥರ್‌ ಆ್ಯಷ್‌ ಕ್ರೀಡಾಂಗಣದಲ್ಲಿ ಜಪಾನಿನ ತಾರೆ ಆರಂಭದಿಂದಲೇ ಮೇಲುಗೈ ಸಾಧಿಸಿ 6–3, 6–2 ರಿಂದ ಮೂರನೇ ಶ್ರೇಯಾಂಕದ ಗಾಫ್ ಅವರನ್ನು ಸದೆಬಡಿದರು. 

27 ವರ್ಷ ವಯಸ್ಸಿನ ಒಸಾಕಾ ಮೊದಲ ಗೇಮ್‌ನಲ್ಲೇ ಗಾಫ್‌ ಅವರ ಸರ್ವಿಸ್‌ ಬ್ರೇಕ್‌ ಮಾಡಿದರು. ಒಸಾಕಾ ಅವರ ಬಿರುಸಿನ ಸರ್ವ್‌ಗಳನ್ನು ನಿಭಾಯಿಸಲು ಅಮೆರಿಕದ ಆಟಗಾರ್ತಿಗೆ ಸಾಧ್ಯವಾಗಲಿಲ್ಲ. ತಾಯಿಯಾದ ಬಳಿಕ ಪುನರಾಗಮನದಲ್ಲಿರುವ ಜಪಾನಿನ ತಾರೆ ಅಧಿಕಾರಯುತ ಆಟವಾಡಿದರೆ, 21 ವರ್ಷ ವಯಸ್ಸಿನ ಗಾಫ್‌ 33 ತಪ್ಪುಗಳನ್ನು ಎಸಗಿ ಪೇಲವವಾಗಿ ಕಂಡರು.

‘ವಿಶ್ವದಲ್ಲೇ ಇದು ನನ್ನ ನೆಚ್ಚಿನ ಅಂಕಣ. ಇಲ್ಲಿ ಮತ್ತೆ ಆಡಿದ್ದು ಮುದ ನೀಡಿತು’ ಎಂದು ಎರಡು ಬಾರಿಯ (2018, 2020) ಚಾಂಪಿಯನ್ ಒಸಾಕಾ ಹೇಳಿದರು. ಐದನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲ್ಲಲು ಯತ್ನಿಸುತ್ತಿರುವ ಒಸಾಕಾ ವೈಭವದ ದಿನಗಳಿಗೆ ಮರಳಿದಂತೆ ಕಂಡರು.

23ನೇ ಶ್ರೇಯಾಂಕದ ಒಸಾಕಾ ಕ್ವಾರ್ಟರ್‌ಫೈನಲ್‌ನಲ್ಲಿ 11ನೇ ಶ್ರೇಯಾಂಕದ ಕರೋಲಿನಾ ಮುಚೋವಾ ಅವರನ್ನು ಎದುರಿಸಲಿದ್ದಾರೆ. ಝೆಕ್‌ ರಿಪಬ್ಲಿಕ್‌ನ ಕರೋಲಿನಾ ಇನ್ನೊಂದು ಪಂದ್ಯದಲ್ಲಿ 27ನೇ ಶ್ರೇಯಾಂಕದ ಮಾರ್ತಾ ಕೊಸ್ಟಿಯುಕ್ (ಉಕ್ರೇನ್‌) ಅವರನ್ನು 6–3, 6–7 (0/7), 6–3 ರಿಂದ ಹಿಮ್ಮೆಟ್ಟಿಸಿದರು.

ಸಿನ್ನರ್ ವಿನ್ನರ್‌: ಹಾಲಿ ಚಾಂಪಿಯನ್ ಸಿನ್ನರ್ ನಿರಾಯಾಸವಾಗಿ ಕಜಾಕಸ್ತಾನದ ಅಲೆಕ್ಸಾಂಡರ್‌ ಬುಬ್ಲಿಕ್ ಅವರನ್ನು 6–1, 6–1, 6–1 ರಿಂದ ಸೋಲಿಸಿದರು.

ಬುಬ್ಲಿಕ್ ಟೂರ್ನಿಯಲ್ಲಿ ಇದುವರೆಗೆ ಒಂದೂ ಸೆಟ್‌ ಬಿಟ್ಟುಕೊಟ್ಟಿರಲಿಲ್ಲ. ಆದರೆ ವಿಶ್ವದ ಅಗ್ರ ಆಟಗಾರ ಸಿನ್ನರ್ ಈ ಪಂದ್ಯದಲ್ಲಿ ಎಂಟು ಬಾರಿ ಅವರ ಸರ್ವ್ ಮುರಿದರು.

81 ನಿಮಿಷಗಳಲ್ಲಿ ಗೆದ್ದ ಇಟಲಿಯ ಆಟಗಾರ ಮುಂದಿನ ಸುತ್ತಿನಲ್ಲಿ ಸ್ವದೇಶದ ಲೊರೆಂಜೊ ಮುಸೆಟ್ಟಿ ಅವರನ್ನು ಎದುರಿಸಲಿದ್ದಾರೆ. ಹತ್ತನೇ ಶ್ರೇಯಾಂಕದ ಮುಸೆಟ್ಟಿ 6–3, 6–0, 6–1 ರಿಂದ ಸ್ಪೇನ್‌ನ ಜೇಮ್ ಮುನರ್ ಅವರನ್ನು ಸೋಲಿಸಿ ಮೊದಲ ಬಾರಿ ಇಲ್ಲಿ ಎಂಟರ ಘಟ್ಟ ತಲುಪಿದರು.

ಪುರುಷರ ವಿಭಾಗದಲ್ಲಿ ಎಂಟನೇ ಶ್ರೇಯಾಂಕದ ಅಲೆಕ್ಸ್ ಡಿ ಮಿನೋರ್ 6–3, 6–2, 6–1 ರಿಂದ ಸ್ವಿಸ್‌ ಕ್ವಾಲಿಫೈಯರ್ ಲಿಯಾಂಡ್ರೊ ರೀಡಿ ಅವರನ್ನು ಮಣಿಸಿ ಎಂಟರ ಘಟ್ಟ ತಲುಪಿದರು. ಆಸ್ಟ್ರೇಲಿಯಾದ ಮಿನೋರ್ ಎಂಟರ ಘಟ್ಟದಲ್ಲಿ ಕೆನಡಾದ ಫೆಲಿಕ್ಸ್ ಆಗರ್ ಅಲಿಯಾಸಿಮ್ ಅವರನ್ನು ಎದುರಿಸಲಿದ್ದಾರೆ. 25 ವರ್ಷ ವಯಸ್ಸಿನ ಫೆಲಿಕ್ಸ್‌ ಇನ್ನೊಂದು ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಆಂಡ್ರಿ ರುಬ್ಲೆವ್ ಅವರನ್ನು 7–5, 6–3, 6–4 ರಿಂದ ಸೋಲಿಸಿದರು. ಪ್ರಮುಖ ಟೂರ್ನಿಯಲ್ಲಿ ಫೆಲಿಕ್ಸ್‌ ಅವರ ಶ್ರೇಷ್ಠ ಸಾಧನೆಯೆಂದರೆ 2021ರ ಅಮೆರಿಕ ಓಪನ್ ಸೆಮಿಫೈನಲ್ ತಲುಪಿದ್ದು.

ಶ್ವಾಂಟೆಕ್‌ಗೆ ಜಯ

ಪೋಲೆಂಡ್‌ನ ಇಗಾ ಶ್ವಾಂಟೆಕ್, ಮಹಿಳೆಯರ ಸಿಂಗಲ್ಸ್ ನಾಲ್ಕನೇ ಸುತ್ತಿನಲ್ಲಿ 6–3, 6–1 ರಿಂದ 13ನೇ ಶ್ರೇಯಾಂಕದ ಎಕಟೆರಿನಾ ಅಲೆಕ್ಸಾಂಡ್ರೊವಾ (ರಷ್ಯಾ) ಅವರನ್ನು ಸೋಲಿಸಿ ಎಂಟರ ಘಟ್ಟ ತಲುಪಿದರು. ಗ್ರ್ಯಾನ್‌ಸ್ಲಾಮ್‌ನಲ್ಲಿ ಅವರ ಗೆಲುವಿನ ಸರಪಣಿ 11ಕ್ಕೆ ಏರಿತು.

ಶ್ವಾಂಟೆಕ್‌ ಮುಂದಿನ ಪಂದ್ಯದಲ್ಲಿ ಅಮೆರಿಕದ ಅಮಂಡಾ ಅನಿಸಿನೋವಾ ಅವರನ್ನು ಎದುರಿಸ ಲಿದ್ದಾರೆ. ಕಳೆದ ತಿಂಗಳು ವಿಂಬಲ್ಡನ್ ಫೈನಲ್‌ನಲ್ಲಿ ಇವರಿಬ್ಬರು ಎದುರಾಳಿ ಗಳಾಗಿದ್ದರು. ಆಗ ಶ್ವಾಂಟೆಕ್ 6–0, 6–0ಯಿಂದ ಜಯಗಳಿಸಿದ್ದರು.

ಎಂಟನೇ ಶ್ರೇಯಾಂಕದ ಅನಿಸಿಮೋವಾ 6–0, 6–3 ರಿಂದ 18ನೇ ಶ್ರೇಯಾಂಕದ ಬೀಟ್ರಿಝ್ ಹದಾದ್ (ಬ್ರೆಜಿಲ್) ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.