ADVERTISEMENT

Wimbledon 2023: ಆಂಡ್ರೆ ರುಬ್ಲೇವ್‌ಗೆ ಪ್ರಯಾಸದ ಜಯ

ರಾಯಿಟರ್ಸ್‌
Published 6 ಜುಲೈ 2023, 23:30 IST
Last Updated 6 ಜುಲೈ 2023, 23:30 IST
ಆಂಡ್ರೆ ರುಬ್ಲೇವ್‌ ಗೆಲುವಿನ ಸಂಭ್ರಮ
ಆಂಡ್ರೆ ರುಬ್ಲೇವ್‌ ಗೆಲುವಿನ ಸಂಭ್ರಮ    –ಎಎಫ್‌ಪಿ ಚಿತ್ರ

ಲಂಡನ್‌: ರಷ್ಯಾದ ಆಂಡ್ರೆ ರುಬ್ಲೇವ್‌ ಆರಂಭದ ಸೆಟ್‌ ಹಿನ್ನಡೆಯಿಂದ ಚೇತರಿಸಿಕೊಂಡು ಸ್ವದೇಶದ ಅಸ್ಲಾನ್‌ ಕರಾಟ್ಸೇವ್‌ ಅವರನ್ನು ಮಣಿಸಿ ವಿಂಬಲ್ಡನ್‌ ಚಾಂಪಿಯನ್‌ಷಿಪ್ಸ್‌ನ ಮೂರನೇ ಸುತ್ತನ್ನು ತಲುಪಿದರು. ಹಳೆಯ ಹುಲಿ ಸ್ಟಾನಿಸ್ಲಾವ್‌ ವಾವ್ರಿಂಕಾ ಅವರೂ ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿ ಮೂರನೇ ಸುತ್ತನ್ನು ತಲುಪಿದ್ದು, ಎರಡನೇ ಶ್ರೇಯಾಂಕದ ನೊವಾಕ್‌ ಜೊಕೊವಿಚ್‌ ಅವರನ್ನು ಎದುರಿಸಲಿದ್ದಾರೆ.

ಏಳನೇ ಶ್ರೇಯಾಂಕದ ರುಬ್ಲೇವ್‌, ಗುರುವಾರ ನಡೆದ ಪಂದ್ಯದಲ್ಲಿ 6–7 (4), 6–3, 6–4, 7–5 ರಲ್ಲಿ ಅಸ್ಲಾನ್‌ ಮೇಲೆ ಜಯಗಳಿಸಿದರು. ಇವರಿಬ್ಬರ ನಡುವೆ ಈ ಹಿಂದಿನ ಏಕೈಕ ಮುಖಾಮುಖಿ ದುಬೈನಲ್ಲಿ 2021ರಲ್ಲಿ ನಡೆದಿದ್ದಾಗ ಕರಾಟ್ಸೇವ್ ಜಯಶಾಲಿಯಾಗಿದ್ದರು. ಪರಿಣಾಮಕಾರಿ ಸರ್ವ್‌ ಮತ್ತು ನೆಟ್‌ ಬಳಿಯ ಆಟದಲ್ಲಿ ರುಬ್ಲೇವ್ ಮಿಂಚಿದರು.

ರಷ್ಯ ಮತ್ತು ಬೆಲಾರಸ್‌ ಆಟಗಾರರಿಗೆ ನಿಷೇಧವಿದ್ದ ಕಾರಣ ರುಬ್ಲೇವ್ ಕಳೆದ ವರ್ಷ ಇಲ್ಲಿಗೆ ಬಂದಿರಲಿಲ್ಲ. ಈಗ ಅವರು ಮೂರನೇ ಸುತ್ತಿನಲ್ಲಿ ವೈಲ್ಡ್‌ ಕಾರ್ಡ್‌ ಪ್ರವೇಶ ಪೆದಿರುವ ಡೇವಿಡ್‌ ಗೋಫಿನ್‌ ಅಥವಾ ಕ್ವಾಲಿಫೈಯರ್‌ ಥಾಮಸ್‌ ನಾರಿಯೋಸ್‌ ವೆರಾ ಅವರನ್ನು ಎದುರಿಸಲಿದ್ದಾರೆ.

ADVERTISEMENT

ಮೂರು ದಿನಗಳಿಂದ ಬಿಟ್ಟು ಬಿಟ್ಟು ಬರುತ್ತಿದ್ದ ಮಳೆ ಗುರುವಾರ ವಿರಾಮ ಪಡೆಯಿತು.

ವಾವ್ರಿಂಕಾ ಮುನ್ನಡೆ

ಸ್ವಿಜರ್ಲೆಂಡ್‌ನ 38 ವರ್ಷದ ಆಟಗಾರ ಸ್ಟಾನ್‌ ವಾವ್ರಿಂಕಾ ಯುವ ಆಟಗಾರರನ್ನು ಮೀರಿಸುವಂತೆ ಆಡಿ 6–3, 4–6, 6–4, 6–2 ರಿಂದ ಆರ್ಜೇಂಟಿನಾದ ಥಾಮಸ್‌ ಇಚ್‌ವೆರಿ ಅವರನ್ನು ಸೋಲಿಸಿ ಮೂರನೇ ಸುತ್ತನ್ನು ತಲುಪಿದರು. ಥಾಮಸ್‌ 29ನೇ ಶ್ರೇಯಾಂಕದ ಪಡೆದಿದ್ದಾರೆ.

ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಯೊಂದರಲ್ಲಿ ವಾವ್ರಿಂಕಾ ಮೂರನೇ ಸುತ್ತನ್ನು ತಲುಪುತ್ತಿರುವುದು ಮೂರು ವರ್ಷಗಳಲ್ಲಿ ಇದೇ ಮೊದಲು. ಈ ಗೆಲುವಿಗೆ ಅವರಿಗೆ ಸಿಗುವ ‘ಉಡುಗೋರೆ’ ನೊವಾಕ್‌ ಜೊಕೊವಿಚ್‌ ಎದುರಿನ ಮೂರನೇ ಸುತ್ತಿನ ಸೆಣಸಾಟ. ‘ನೊವಾಕ್ ಅವರನ್ನು ಎದುರಿಸುವುದು ನನಗೊಂದು ಗೌರವ’ ಎಂದಿದ್ದಾರೆ ಸ್ವಿಸ್‌ ಆಟಗಾರ.

ಪ್ರಸ್ತುತ 88ನೇ ಕ್ರಮಾಂಕದಲ್ಲಿರುವ ವಾವ್ರಿಂಕಾ ಎಂಟು ವರ್ಷಗಳ ಹಿಂದೆ ಜೊಕೊವಿಚ್‌ ಅವರಿಗೆ ಬೆವರಿಳಿಸಿದ್ದರು. 2015ರ ಆ ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ಅವರು ಸರ್ಬಿಯಾ ಎದುರಾಳಿಯನ್ನು ಸೋಲಿಸಿದ್ದರು. ಇದರ ಜೊತೆಗೆ ಅವರು ತಲಾ ಒಂದು ಬಾರಿ ಆಸ್ಟ್ರೇಲಿಯಾ ಓಪನ್‌ (2014) ಮತ್ತು ಅಮೆರಿಕ ಓಪನ್‌ (2016) ನಲ್ಲಿ ಗೆದ್ದಿದ್ದಾರೆ. ಇವರಿಬ್ಬರ ನಡುವೆ ನಡೆದಿರುವ 26 ಮುಖಾಮುಖಿಗಳಲ್ಲಿ ಜೊಕೊವಿಚ್‌ 20 ಸಲ ವಿಜಯಿಯಾಗಿದ್ದಾರೆ.

ಎರಡನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ, 21 ವರ್ಷದ ಯಾನಿಕ್‌ ಸಿನ್ನರ್‌ 7–5, 6–1, 6–2 ರಿಂದ ಡೀಗೊ ಷ್ವಾಟ್ಸ್‌ಮನ್‌ ವಿರುದ್ಧ ಜಯಗಳಿಸಿದರು.

ಜ್ವೆರೇವ್‌ ಮುನ್ನಡೆ: ಭರ್ಜರಿ ಸರ್ವ್‌ಗಳಿಗೆ ಹೆಸರಾಗಿರುವ ಜರ್ಮನಿಯ ಅಲೆಕ್ಸಾಂಡರ್‌ ಜ್ವರೇವ್‌ ‌6–4, 7–6 (7–4), 7–5 (5) ರಿಂದ ಅರ್ಹತಾ ಸುತ್ತಿನಿಂದ ಬಂದ ನೆದರ್ಲೆಂಡ್ಸ್‌ನ ಗಿಯ್ಸ್ ಬ್ರೂವರ್‌ ಅವರನ್ನು ಸೋಲಿಸಿ ಎರಡನೇ ಸುತ್ತನ್ನು ತಲುಪಿದರು. ಈ ಪಂದ್ಯದಲ್ಲಿ 20 ಏಸ್‌ಗಳನ್ನೂ ಸಿಡಿಸಿದರು.

19ನೇ ಶ್ರೇಯಾಂಕದ ರುಬ್ಲೇವ್‌, ಗುರುವಾರ ತಡರಾತ್ರಿ ಮಡೆಯುವ ಪಂದ್ಯದಲ್ಲಿ ವಿಶ್ವ ಕ್ರಮಾಂಕದಲ್ಲಿ 116ನೇ ಸ್ಥಾನದಲ್ಲಿರುವ ಯುಸುಕೆ ವತಾನುಕಿ (ಜಪಾನ್‌) ಎದುರು ಆಡಲಿದ್ದಾರೆ. ಮೊದಲ ಮೂರು ದಿನ ಮಳೆಯಾದ ಕಾರಣ ಪಂದ್ಯಗಳ ನಡುವೆ ವಿಶ್ರಾಂತಿ ಅವಧಿ ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.