ADVERTISEMENT

Wimbledon 2025: ಅರಿನಾ ಸಬಲೆಂಕಾಗೆ ಆಘಾತ ನೀಡಿದ ಅಮಂಡಾ ಅನಿಸಿಮೋವಾ

ಏಜೆನ್ಸೀಸ್
Published 10 ಜುಲೈ 2025, 18:55 IST
Last Updated 10 ಜುಲೈ 2025, 18:55 IST
<div class="paragraphs"><p>ಅಮಂಡಾ ಅನಿಸಿಮೋವಾ</p><p></p></div>

ಅಮಂಡಾ ಅನಿಸಿಮೋವಾ

   

 ಪಿಟಿಐ ಚಿತ್ರ

ADVERTISEMENT

ಲಂಡನ್‌: ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅರಿನಾ ಸಬಲೆಂಕಾ ಅವರಿಗೆ ಮೂರು ಸೆಟ್‌ಗಳ ಪಂದ್ಯದಲ್ಲಿ ಆಘಾತ ನೀಡಿದ ಅಮಂಡಾ ಅನಿಸಿಮೋವಾ ವಿಂಬಲ್ಡನ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು. 

ಗುರುವಾರ ನಡೆದ ‘ಪವರ್‌ ಹಿಟ್ಟರ್‌’ಗಳ ಮೊದಲ ಸೆಮಿಫೈನಲ್‌ನಲ್ಲಿ ಅಮೆರಿಕದ ಆಟಗಾರ್ತಿ  6–4, 4–6, 6–4 ರಿಂದ ಜಯಗಳಿಸಿದರು. ಆ ಮೂಲಕ ಮೊದಲ ಬಾರಿ ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ ಕಿರೀಟ ಧರಿಸುವ ಸಬಲೆಂಕಾ ಕನಸನ್ನು ಭಗ್ನಗೊಳಿಸಿದರು. 13ನೇ ಶ್ರೇಯಾಂಕದ ಅಮಂಡಾ, ಪ್ರಶಸ್ತಿ ಸುತ್ತಿನಲ್ಲಿ ಎಂಟನೇ ಶ್ರೇಯಾಂಕದ ಇಗಾ ಶ್ವಾಂಟೆಕ್‌ ಅವರನ್ನು ಎದುರಿಸಲಿದ್ದಾರೆ.

‘ಇದನ್ನು ವಾಸ್ತವವೆಂದು ನಂಬಲಾಗುತ್ತಿಲ್ಲ. ಅರಿನಾ ಪ್ರಬಲ ಹೋರಾಟ ಗಾರ್ತಿ. ನಾನು ದಣಿದೇ ಹೋಗಿದ್ದೆ. ಹೇಗೆ ಚೇತರಿಸಿಕೊಂಡೆ ಎಂದೇ ತಿಳಿಯಲಿಲ್ಲ’ ಎಂದು 23 ವರ್ಷ ವಯಸ್ಸಿನ ಅನಿಸಿಮೋವಾ 2 ಗಂಟೆ 36 ನಿಮಿಷಗಳ ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ಮೂರನೇ ಬಾರಿ ಇಲ್ಲಿ ಫೈನಲ್ ತಲುಪಿದ್ದ ಬೆಲರೂಸ್‌ನ ಸಬಲೆಂಕಾ ಮತ್ತೊಮ್ಮೆ ನಿರಾಶೆ ಅನುಭವಿಸಿದರು. ಈ ವರ್ಷ ಅವರು ಒಂದೂ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲ್ಲಲಾಗಿಲ್ಲ. ಕಳೆದ ತಿಂಗಳು ಫ್ರೆಂಚ್‌ ಓಪನ್ ಫೈನಲ್‌ನಲ್ಲಿ ಅಮೆರಿಕದ ಕೊಕೊ ಗಾಫ್‌ಗೆ ಮಣಿದಿದ್ದರು.

ಮೊದಲ ಸೆಟ್‌ನ ಏಳನೇ ಗೇಮ್‌ ಬ್ರೇಕ್ ಮಾಡುವ ಮೂಲಕ ಅನಿಸಿಮೋವಾ ನಿರ್ಣಾಯಕ ಮುನ್ನಡೆ ಪಡೆದರು. ಆ ಗೇಮ್‌ ನಲ್ಲಿ ಸಬಲೆಂಕಾ ಡಬಲ್‌ಫಾಲ್ಟ್‌ ಮಾಡಿದ್ದು ದುಬಾರಿ ಆಯಿತು. ಎರಡನೇ ಸೆಟ್‌ನ ಏಳನೇ ಗೇಮ್‌ನಲ್ಲಿ ಅನಿಸಿಮೋವಾ ಕೂಡ ಇಂಥದ್ದೇ ತಪ್ಪು ಮಾಡಿದ್ದರಿಂದ ಸಬಲೆಂಕಾ 4–3 ಮುನ್ನಡೆ ಪಡೆದರಲ್ಲದೇ ಸೆಟ್‌ ಗೆದ್ದು 1–1 ಸಮ ಮಾಡಿಕೊಂಡರು.

ಮೂರನೇ ಸೆಟ್‌ನ ಮೊದಲ ಗೇಮ್‌ನಲ್ಲೇ ಎದುರಾಳಿ ಸರ್ವ್‌ ಬ್ರೇಕ್ ಮಾಡಿದ ಸಬಲೆಂಕಾ ಗೆಲುವಿನ ಹಾದಿಯಲ್ಲಿ ನಡೆಯುವಂತೆ ಕಂಡಿತ್ತು. ಆದರೆ ಮರು ಗೇಮ್‌ನಲ್ಲಿ ಬ್ರೇಕ್ ಮಾಡಿದ ಅನಿಸಿನೋವಾ ಸ್ಕೋರ್ ಸಮಾಡಿಕೊಂಡರು. ನಾಲ್ಕನೇ ಗೇಮ್‌ನಲ್ಲಿ ಮತ್ತೆ ಎದುರಾಳಿಯ ಸರ್ವ್‌ ಬ್ರೇಕ್ ಮಾಡಿ ಮೇಲುಗೈ ಸಾಧಿಸಿದರು.

ಶ್ವಾಂಟೆಕ್‌ಗೆ ಗೆಲುವು: ಮತ್ತೊಂದು ಸೆಮಿಫೈನಲ್‌ ಹಣಾಹಣಿಯಲ್ಲಿ ಪೋಲೆಂಡ್‌ನ ಶ್ವಾಂಟೆಕ್‌ 6-2, 6-0ರ ನೇರ ಸೆಟ್‌ಗಳಿಂದ ಒಲಿಂಪಿಕ್‌ ಮಾಜಿ ಚಾಂಪಿಯನ್ ಬೆಲಿಂಡಾ ಬೆನ್ಸಿಕ್ ಅವರನ್ನು ಸುಲಭವಾಗಿ ಸೋಲಿಸಿದರು. 

ಐದು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಒಡತಿಯಾಗಿರುವ 24 ವರ್ಷ ವಯಸ್ಸಿನ ಶ್ವಾಂಟೆಕ್‌ ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ ಇದೇ  ಮೊದಲ ಬಾರಿ ಫೈನಲ್‌ ತಲುಪಿದರು.

ಫ್ರೆಂಚ್‌ ಓಪನ್‌ನಲ್ಲಿ ನಾಲ್ಕು ಬಾರಿ ಮತ್ತು 2022ರಲ್ಲಿ ಅಮೆರಿಕ ಓಪನ್‌ನಲ್ಲಿ ಶ್ವಾಂಟೆಕ್‌ ಪ್ರಶಸ್ತಿ ಗೆದ್ದಿದ್ದರು. 2023ರಲ್ಲಿ ಇಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದು ಈ ಹಿಂದಿನ ಉತ್ತಮ ಸಾಧನೆಯಾಗಿತ್ತು.

ವಿಂಬಲ್ಡನ್‌ನಲ್ಲಿ ಚೊಚ್ಚಲ ಬಾರಿ ನಾಲ್ಕರ ಘಟ್ಟ ತಲುಪಿದ್ದ  ಸ್ವಿಜರ್ಲೆಂಡ್‌ನ 28 ವರ್ಷದ ಬೆನ್ಸಿಕ್ ಕೇವಲ ಒಂದು ಗಂಟೆಯಲ್ಲಿ ಸೋಲೊಪ್ಪಿಕೊಂಡರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.