ವಿಂಬಲ್ಡನ್
ಲಂಡನ್: ಅಮೆರಿಕ ಓಪನ್ ರನ್ನರ್ ಅಪ್ ಟೇಲರ್ ಫ್ರಿಟ್ಜ್ ಅವರು ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಮೊದಲ ಬಾರಿ ಸೆಮಿಫೈನಲ್ ಪ್ರವೇಶಿಸಿದರು. ವಿಶ್ವದ ಅಗ್ರ ಆಟಗಾರ್ತಿ ಅರಿನಾ ಸಬಲೆಂಕಾ ಅವರು ಆರಂಭಿಕ ಸೆಟ್‌ನ ಹಿನ್ನಡೆಯಿಂದ ಚೇತರಿಸಿಕೊಂಡು ಐದು ವರ್ಷಗಳಲ್ಲಿ ಮೂರನೇ ಸಲ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು.
ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ 27 ವರ್ಷ ವಯಸ್ಸಿನ ಫ್ರಿಟ್ಜ್ 6-3, 6-4, 1-6, 7-6 (4)ರಿಂದ 17ನೇ ಶ್ರೇಯಾಂಕದ ಕರೆನ್ ಕಚನೋವ್ (ರಷ್ಯಾ) ಅವರನ್ನು ಸೋಲಿಸಿ ಎರಡನೇ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಸೆಮಿಫೈನಲ್ ತಲುಪಿದರು. ಅವರಿಗೆ ಮುಂದಿನ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ (ಸ್ಪೇನ್) ಎದುರಾಳಿಯಾಗಿದ್ದಾರೆ.
ಮೊದಲೆರಡು ಸುತ್ತಿನ ಪಂದ್ಯದಲ್ಲಿ ಐದು ಸೆಟ್‌ಗಳ ಹೋರಾಟ ನಡೆಸಿ ಸೋಲಿನ ದವಡೆಯಿಂದ ಪಾರಾಗಿದ್ದ ಫ್ರಿಟ್ಜ್ ಈ ಪಂದ್ಯದಲ್ಲೂ ಪೈಪೋಟಿ ಎದುರಿಸಿದರು. ಎರಡು ಸೆಟ್ ಗೆದ್ದ ಬಳಿಕ ಪಾದದ ನೋವಿಗೆ ತುತ್ತಾದ ಅವರು ಪಂದ್ಯದ ಮಧ್ಯದಲ್ಲಿ ವೈದ್ಯಕೀಯ ನೆರವು ಪಡೆದು, ಆಟ ಮುಂದುವರಿಸಿದರು. ಮೂರನೇ ಸೆಟ್‌ನಲ್ಲಿ ಹಿನ್ನಡೆ ಕಂಡ ಅವರು ನಾಲ್ಕನೇ ಸೆಟ್ ಅನ್ನು ಟೈಬ್ರೇಕರ್‌ನಲ್ಲಿ ಪಡೆದರು.
ಹ್ಯಾಟ್ರಿಕ್ ಪ್ರಶಸ್ತಿ ಗೆಲುವಿನ ಛಲದಲ್ಲಿರುವ ಅಲ್ಕರಾಜ್, ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 6–2, 6–3, 6–3ರಿಂದ ಬ್ರಿಟನ್‌ನ ಶ್ರೇಯಾಂಕರಹಿತ ಕ್ಯಾಮರೂನ್ ನೋರಿ ಅವರನ್ನು ಮಣಿಸಿದರು.
ಸಬಲೆಂಕಾ ಮುನ್ನಡೆ: ಬೆಲರೂಸ್‌ನ ಆಟಗಾರ್ತಿ ಸಬಲೆಂಕಾ 4-6, 6-2, 6-4 ರಿಂದ ಜರ್ಮನಿಯ ಲಾರಾ ಸೀಗ್ಮಂಡ್ ಅವರನ್ನು ಸೋಲಿಸಲು 2 ಗಂಟೆ 54 ನಿಮಿಷ ಹೋರಾಟ ನಡೆಸಬೇಕಾಯಿತು. 27 ವರ್ಷ ವಯಸ್ಸಿನ ಸಬಲೆಂಕಾ 2021 ಮತ್ತು 2023ರ ಬಳಿಕ ಮತ್ತೆ ನಾಲ್ಕರ ಘಟ್ಟ ಪ್ರವೇಶಿಸಿದರು.
ಮೂರು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಒಡತಿ, ವಿಂಬಲ್ಡನ್‌ನಲ್ಲಿ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಸಬಲೆಂಕಾ ಮುಂದಿನ ಸುತ್ತಿನಲ್ಲಿ 13ನೇ ಶ್ರೇಯಾಂಕದ ಅಮಂಡಾ ಅನಿಸಿಮೊವಾ (ಅಮೆರಿಕ) ಅವರನ್ನು ಎದುರಿಸಲಿದ್ದಾರೆ. ಅನಿಸಿಮೊವಾ 6-1, 7-6(9)ರಿಂದ ರಷ್ಯಾದ ಅನಸ್ತೇಸಿಯಾ ಪಾವ್ಲ್ಯುಚೆಂಕೋವಾ ಅವರನ್ನು ಮಣಿಸಿ ದರು. 23 ವರ್ಷ ವಯಸ್ಸಿನ ಅನಿಸಿ ಮೊವಾ 2019ರ ಫ್ರೆಂಚ್ ಓಪನ್ ಬಳಿಕ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಎರಡನೇ ಬಾರಿ ನಾಲ್ಕರ ಘಟ್ಟ ಪ್ರವೇಶಿಸಿದರು.
ಸಿನ್ನರ್‌ಗೆ ಅದೃಷ್ಟ: ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್, ಪ್ರಿ ಕ್ವಾರ್ಟರ್ ಫೈನಲ್‌ನಲ್ಲೇ ಹೊರಬೀಳುವ ಆತಂಕದಲ್ಲಿದ್ದರು. ಇಟಲಿಯ ಆಟಗಾರ 3-6, 5-7, 2-2ರಿಂದ ಹಿನ್ನಡೆಯಲ್ಲಿ ದ್ದಾಗ ಎದುರಾಳಿ ಗ್ರಿಗರ್ ಡಿಮಿಟ್ರೋವ್ ಅಸ್ವಸ್ಥಗೊಂಡು ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದ ಬಚಾವಾದರು.
ಮೊದಲೆರಡು ಸೆಟ್‌ಗಳಲ್ಲಿ ಮೇಲುಗೈ ಸಾಧಿಸಿ ಗೆಲುವಿನ ಹೊಸ್ತಿಲಲ್ಲಿದ್ದ ಬಲ್ಗೇರಿಯಾದ 19ನೇ ಶ್ರೇಯಾಂಕದ ಡಿಮಿಟ್ರೋವ್ ಮೂರನೇ ಸೆಟ್‌ನ ಆಟದ ವೇಳೆ ಎದೆಯ ಸ್ನಾಯು ನೋವಿನಿಂದ ಅಂಕಣದಲ್ಲೇ ಕುಸಿದರು. ತಕ್ಷಣ ಸಿನ್ನರ್ ಅವರ ಸಹಾಯಕ್ಕೆ ಧಾವಿಸಿದರು. ವೈದ್ಯಕೀಯ ನೆರವು ಪಡೆದರೂ 34 ವರ್ಷ ಡಿಮಿಟ್ರೋವ್‌ಗೆ ಪಂದ್ಯವನ್ನು ಮುಂದುವರಿಸಲಾಗಲಿಲ್ಲ.
ಮಿರಾ, ಶ್ವಾಂಟೆಕ್ ಮುನ್ನಡೆ: ಏಳನೇ ಶ್ರೇಯಾಂಕದ ಮಿರಾ ಆ್ಯಂಡ್ರೀವಾ 6-2, 6-3ರಿಂದ 10ನೇ ಶ್ರೇಯಾಂಕದ ಎಮ್ಮಾ ನವರೊ (ಅಮೆರಿಕ) ಅವರನ್ನು ಮಣಿಸಿದರು. ರಷ್ಯಾದ 18 ವರ್ಷ ವಯಸ್ಸಿನ ಮಿರಾ, ವಿಂಬಲ್ಡನ್‌ನಲ್ಲಿ 2005ರ ಬಳಿಕ ಮಹಿಳಾ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಎಂಟನೇ ಶ್ರೇಯಾಂಕದ ಇಗಾ ಶ್ವಾಂಟೆಕ್ 6-4, 6-1ರ ನೇರ ಸೆಟ್‌ಗಳಿಂದ 23ನೇ ಶ್ರೇಯಾಂಕದ ಕ್ಲಾರಾ ಟೌಸನ್ (ಡೆನ್ಮಾರ್ಕ್) ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದರು.
ಕೈಕೊಟ್ಟ ಎಲೆಕ್ಟ್ರಾನಿಕ್ ಲೈನ್ ಕಾಲಿಂಗ್
ಫ್ರಿಟ್ಜ್ ಮತ್ತು ಕಚನೋವ್ ನಡುವಿನ ಪಂದ್ಯದ ವೇಳೆ ವಿಂಬಲ್ಡನ್‌ನಲ್ಲಿ ಹೊಸದಾಗಿ ಅಳವಡಿಸಲಾದ ಎಲೆಕ್ಟ್ರಾನಿಕ್ ಲೈನ್ ಕಾಲಿಂಗ್ ವ್ಯವಸ್ಥೆಯಲ್ಲಿ ದೋಷ ಕಾಣಿಸಿತು. ಹೀಗಾಗಿ ಒಂದು ಪಾಯಿಂಟ್ ಮರು ಆಡಿಸಲಾಯಿತು.
ನಾಲ್ಕನೇ ಸೆಟ್‌ನ ಮೊದಲ ಗೇಮ್‌ನಲ್ಲಿ ಆಟಗಾರರು ಹೊಡೆತಗಳನ್ನು ವಿನಿಮಯ ಮಾಡಿಕೊಂಡ ನಂತರ ಈ ದೋಷ ಕಾಣಿಸಿತು. ‘ಔಟ್’ ಬದಲು ‘ಫಾಲ್ಟ್’ ಎಂದು ಶಬ್ದ ಮೊಳಗಿತು. ಚೇರ್ ಅಂಪೈರ್ ಲೂಯಿಸ್ ಅಜೆಮರ್ ಎಂಗ್ಜೆಲ್ ಆಟವನ್ನು ಸ್ಥಗಿತಗೊಳಿಸಿದರು. ಕೆಲ ಕ್ಷಣದ ಬಳಿಕ ಕೊನೆಯ ಪಾಯಿಂಟ್ ಅನ್ನು ಮರು ಆಡಲು ಆಟಗಾರರಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.