
ಬೆಂಗಳೂರು: ಅಮೆರಿಕ ಓಪನ್ ಮಾಜಿ ಚಾಂಪಿಯನ್ ಡೇನಿಯಲ್ ಮೆಡ್ವೆಡೇವ್, ವಿಂಬಲ್ಡನ್ ಮಾಜಿ ಚಾಂಪಿಯನ್ ಎಲೆನಾ ರಿಬಾಕಿನಾ ಸೇರಿದಂತೆ ಅಂತರರಾಷ್ಟ್ರೀಯ ಟೆನಿಸ್ ತಾರೆಯರು ಬೆಂಗಳೂರಿನಲ್ಲಿ ಡಿಸೆಂಬರ್ 17 ರಿಂದ ನಡೆಯಲಿರುವ ವಿಶ್ವ ಟೆನಿಸ್ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಮೂರು ವರ್ಷ ಯುಎಇಯಲ್ಲಿ ನಡೆದ ಈ ಲೀಗ್ ಇದೇ ಮೊದಲ ಬಾರಿ ದೇಶದಲ್ಲಿ ನಡೆಯುತ್ತಿದೆ.
2022ರಲ್ಲಿ ಈ ಲೀಗ್ ಆರಂಭವಾಗಿತ್ತು. ಐಕಾನಿಕ್ ಸ್ಪೋರ್ಟ್ಸ್ ಅಂಡ್ ಇವೆಂಟ್ಸ್ ನಿರ್ವಹಿಸುವ ಈ ಲೀಗ್ ನಾಲ್ಕು ದಿನಗಳ ಅವಧಿಯದ್ದಾಗಿದ್ದು, ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಎಸ್.ಎಂ. ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮೆಡ್ವೆಡೇವ್, ರಿಬಾಕಿನಾ ಜೊತೆಗೆ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೊಸ್, ಫ್ರಾನ್ಸ್‌ನ ತಾರೆ ಗೇಲ್ ಮಾನ್ಫಿಲ್ಸ್, ವಿಶ್ವದ ಮಾಜಿ ಎರಡನೇ ಕ್ರಮಾಂಕದ ಆಟಗಾರ್ತಿ ಪೌಲಾ ಬಡೋಸಾ ಅಲ್ಲದೇ, ಇತ್ತೀಚೆಗೆ ಅಂತರರಾಷ್ಟ್ರೀಯ ಟೆನಿಸ್‌ಗೆ ವಿದಾಯ ಹೇಳಿದ ಭಾರತದ ರೋಹನ್ ಬೋಪಣ್ಣ, ಅಂಕಿತಾ ರೈನಾ, ಸುಮಿತ್ ನಗಾಲ್, ಯುಕಿ ಭಾಂಬ್ರಿ, ಶ್ರೀವಲ್ಲಿ ರಶ್ಮಿಕಾ ಭಮಿಡಿಪಾಟಿ ಅವರೂ ಭಾಗವಹಿಸಲಿದ್ದಾರೆ.
‘ಭಾರತದ ಟೆನಿಸ್ ಸಂಸ್ಕೃತಿಯ ಬಗ್ಗೆ ಸಾಕಷ್ಟು ಕೇಳಿದ್ದೆ. ಡಬ್ಲ್ಯುಟಿಎಲ್ ಮೂಲಕ ಇಲ್ಲಿಗೆ ಆಡಲು ಬರುತ್ತಿರುವುದು ರೋಮಾಂಚನ ಮೂಡಿಸುತ್ತಿದೆ’ ಎಂದು ವಿಶ್ವದ ಐದನೇ ಕ್ರಮಾಂಕದ ಆಟಗಾರ್ತಿ ರಿಬಾಕಿನಾ ಪ್ರತಿಕ್ರಿಯಿಸಿದ್ದಾರೆ. ಅವರು ಭಾರತದಲ್ಲಿ ಇದೇ ಮೊದಲ ಬಾರಿ ಆಡುತ್ತಿದ್ದಾರೆ.
ಡಬ್ಲ್ಯುಟಿಎಲ್‌ನಲ್ಲಿ ನಾಲ್ಕು ತಂಡಗಳು ಭಾಗವಹಿಸಲಿದ್ದು, ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುತ್ತದೆ. ಪ್ರತಿ ಪಂದ್ಯವು ಪುರುಷರ ಸಿಂಗಲ್ಸ್, ಮಹಿಳಾ ಸಿಂಗಲ್ಸ್ ಮತ್ತು ಎರಡು ಡಬಲ್ಸ್ ಪಂದ್ಯಗಳನ್ನು ಒಳಗೊಳ್ಳಲಿದೆ.
ರೌಂಡ್‌ರಾಬಿನ್ ಪಂದ್ಯಗಳ ನಂತರ ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಆಡಲಿವೆ.
ಡಬ್ಲ್ಯುಟಿಎಲ್‌ನ ಸಹ ಸ್ಥಾಪಕರಾದ ಮಹೇಶ್ ಭೂಪತಿ ಮಾತನಾಡಿ, ‘ಭಾರತವು ಟೆನಿಸ್‌ನೊಂದಿಗೆ ಗಾಢ ಮತ್ತು ದೀರ್ಘ ಸಬಂಧ ಹೊಂದಿದೆ. ಡಬ್ಲ್ಯುಟಿಎಲ್‌ನ ಆತಿಥ್ಯದಿಂದ ಈ ನಂಟು ಇನ್ನಷ್ಟು ಗಟ್ಟಿಯಾಗಲಿದೆ’ ಎಂದು ಹೇಳಿದರು.
‘ಅಂತರರಾಷ್ಟ್ರೀಯ ಚಾಂಪಿಯನ್‌ಗಳು ಮತ್ತು ಭಾರತದ ಅಗ್ರ ಪ್ರತಿಭೆಗಳು ಒಂದೇ ಕೋರ್ಟ್‌ನಲ್ಲಿ ಕಾಣಿಸಿಕೊಳ್ಳುವುದರಿಂದ ಮುಂದಿನ ತಲೆಮಾರಿನ ಆಟಗಾರರಲ್ಲಿ ಸ್ಫೂರ್ತಿ ಮೂಡಿಸಲಿದೆ ಎಂಬ ವಿಶ್ವಾಸ ಹೊಂದಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.