ADVERTISEMENT

ಮಹಿಳಾ ಅಥ್ಲೀಟ್‌ಗಳಿಗೆ ಕಡ್ಡಾಯ ಅನುವಂಶಿಕ ಪರೀಕ್ಷೆ: ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ

ರಾಯಿಟರ್ಸ್
Published 25 ಮಾರ್ಚ್ 2025, 14:48 IST
Last Updated 25 ಮಾರ್ಚ್ 2025, 14:48 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ರಾಯಿಟರ್ಸ್ ಚಿತ್ರ

ಬೆಂಗಳೂರು: ‘ಅಥ್ಲೆಟಿಕ್ಸ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳಲು ನಿಯಮಗಳನ್ನು ಕಠಿಣಗೊಳಿಸುವ ಉದ್ದೇಶದಿಂದ ಮಹಿಳಾ ಅಥ್ಲೀಟ್‌ಗಳು ಒಂದು ಬಾರಿ ಅನುವಂಶಿಕ ಪರೀಕ್ಷೆಗೆ ಒಳಪಡಬೇಕು’ ಎಂದು ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ ಸಬಾಸ್ಟಿಯನ್ ಕೋ ಹೇಳಿದ್ದಾರೆ.

ADVERTISEMENT

'ಇದಕ್ಕೆ ಅಗತ್ಯವಿರುವ ಮಾರ್ಗಸೂಚಿಗಳ ಕರಡನ್ನು ಜಾಗತಿಕ ಸಮಿತಿಯು ಶೀಘ್ರದಲ್ಲಿ ಪ್ರಕಟಿಸಲಿದೆ. ಈ ನಿಯಮವು ಟ್ರ್ಯಾಕ್‌, ಕ್ರೀಡಾಂಗಣ ಮತ್ತು ರಸ್ತೆ ಓಟ ಸ್ಪರ್ಧೆಗಳಿಗೆ ಅನ್ವಯಿಸಲಿದೆ. ಕೆನ್ನೆಯ ಒಳಭಾಗದ ಜೊಲ್ಲು ಅಥವಾ ಗಾಯವಾದ ಸ್ಥಳದಲ್ಲಿನ ಒಣ ರಕ್ತದ ಮಾದರಿಯನ್ನು ಪರೀಕ್ಷೆಗೆ ನೀಡಬೇಕು. ತಮ್ಮ ವೃತ್ತಿ ಬದುಕಿನಲ್ಲಿ ಒಂದು ಬಾರಿಯಷ್ಟೇ ಈ ಪರೀಕ್ಷೆಗೆ ಒಳಗಾಗಬೇಕು. ಇದರಿಂದ ಅವರಲ್ಲಿ ಪುರುಷರ ದೇಹದಲ್ಲಿರುವ ಎಸ್ಆರ್‌ವೈ ವಂಶವಾಹಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುವುದು’ ಎಂದಿದ್ದಾರೆ.

ಮಹಿಳೆಯರ ಕ್ರೀಡೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಪಡೆದುಕೊಳ್ಳುತ್ತಿರುವ ಅವಕಾಶ ಕುರಿತು ಕಳೆದ ಹಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಲೇ ಇವೆ. ಮಹಿಳೆಯರಿಗೆ ಅರ್ಹತಾ ನಿಯಮಗಳನ್ನು ವಿಧಿಸುವ ಕುರಿತು ಬೇಡಿಕೆಗಳು ಕೇಳಿಬರುತ್ತಿದ್ದವು. ಇದರಿಂದಾಗಿ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಭಾಗವಹಿಸುವಿಕೆಯನ್ನು ನಿಷೇಧಿಸಲಾಗಿದೆ. ಜತೆಗೆ ಪುರುಷರಂತೆ ಅಧಿಕ ಟೆಸ್ಟೊಸ್ಟೆರಾನ್‌ ಹಾರ್ಮೋನ್‌ಗಳನ್ನು ಹೊಂದಿರುವ ಮಹಿಳೆಯರು, ಅರ್ಹತೆ ಗಿಟ್ಟಿಸಿಕೊಳ್ಳಲು ಅದನ್ನು ತಗ್ಗಿಸುವುದು ಅಗತ್ಯ ಎಂದು ಅವರು ಹೇಳಿದ್ದಾರೆ.

‘ಸದ್ಯ ಇರುವ ನಿಯಮಗಳು ಅಷ್ಟಾಗಿ ಕಠಿಣವಾಗಿಲ್ಲ ಎಂದು ಕಳೆದ ತಿಂಗಳು ನಡೆದ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು. ಪುರುಷರಾಗಿ ಹುಟ್ಟಿದವರು ನಂತರ ಮಹಿಳೆಯರಾದಲ್ಲಿ ಅದರ ಲಾಭವನ್ನು ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದವು. ಹೀಗಾಗಿ ಈ ಪರೀಕ್ಷೆ ಪರಿಚಯಿಸಲಾಗುತ್ತಿದೆ. ಇದೊಂದು ನೇರವಾದ ಪರೀಕ್ಷೆಯಾಗಿದೆ. ಪರೀಕ್ಷೆ ನಡೆಸುವ ಸಂಸ್ಥೆಯ ಹುಡುಕಾಟ ನಡೆದಿದೆ. ಈ ಪ್ರಯತ್ನವು ಎಲ್ಲಾ ರೀತಿಯ ಕಾನೂನು ಸವಾಲುಗಳನ್ನು ಎದುರಿಸಲು ಸಮರ್ಥವಾಗಿದೆ’ ಎಂದು ಕೋ ಹೇಳಿದ್ದಾರೆ.

‘ಒಲಿಂಪಿಕ್ಸ್‌ನ ಪದಕ ವಿಜೇತರಿಗೆ ನೀಡುವ ಬಹುಮಾನ ಮೊತ್ತವನ್ನು ಹೆಚ್ಚಿಸುವ ಬೇಡಿಕೆಯನ್ನು ಪುರಸ್ಕರಿಸಲು ವಿಶ್ವ ಅಥ್ಲೆಟಿಕ್ಸ್‌ ಸಿದ್ಧವಿದೆ. ಚಿನ್ನದ ಪದಕ ವಿಜೇತರಿಗೆ 50 ಸಾವಿರ ಅಮೆರಿಕನ್ ಡಾಲರ್‌ (₹42 ಲಕ್ಷ) ನೀಡಲಾಗುವುದು. 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನ ಬೆಳ್ಳಿ ಹಾಗೂ ಕಂಚು ಪದಕ ವಿಜೇತರಿಗೂ ಬಹುಮಾನ ನೀಡಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.