ADVERTISEMENT

ಏಕದಿನದ ಸಾರ್ವಕಾಲಿಕ ಶ್ರೇಷ್ಠ ಇನಿಂಗ್ಸ್ - ಮ್ಯಾಕ್ಸ್‌ವೆಲ್‌ಗೆ ದಿಗ್ಗಜರ ಗುಣಗಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ನವೆಂಬರ್ 2023, 5:07 IST
Last Updated 8 ನವೆಂಬರ್ 2023, 5:07 IST
<div class="paragraphs"><p>ಸ್ನಾಯು ಸೆಳೆತಕ್ಕೊಳಗಾದ ಮ್ಯಾಕ್ಸ್‌ವೆಲ್‌ಗೆ ನಾಯಕ ಪ್ಯಾಟ್ ಕಮಿನ್ಸ್ ನೆರವು</p></div>

ಸ್ನಾಯು ಸೆಳೆತಕ್ಕೊಳಗಾದ ಮ್ಯಾಕ್ಸ್‌ವೆಲ್‌ಗೆ ನಾಯಕ ಪ್ಯಾಟ್ ಕಮಿನ್ಸ್ ನೆರವು

   

(ಪಿಟಿಐ ಚಿತ್ರ)

ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಫ್ಗಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ ದ್ವಿಶತಕ ಗಳಿಸಿರುವ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಹೊಗಳಿಕೆಯ ಮಹಾಪೂರವೇ ಹರಿದು ಬರುತ್ತಿದೆ. ಇದು 'ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಇನಿಂಗ್ಸ್' ಎಂದು ಕ್ರಿಕೆಟ್ ದಿಗ್ಗಜರು ಗುಣಗಾನ ಮಾಡಿದ್ದಾರೆ.

ADVERTISEMENT

ಬೆನ್ನು ನೋವು, ಸ್ನಾಯು ಸೆಳೆತವನ್ನು ಲೆಕ್ಕಿಸದೇ ದಿಟ್ಟ ಹೋರಾಟ ತೋರಿದ ಮ್ಯಾಕ್ಸ್‌ವೆಲ್ ದ್ವಿಶತಕ ಸಾಧನೆ ಮಾಡಿದರು. ಅಲ್ಲದೆ ನಾಯಕ ಪ್ಯಾಟ್ ಕಮಿನ್ಸ್‌ ಜತೆ ಮುರಿಯದ ಎಂಟನೇ ವಿಕೆಟ್‌ಗೆ 170 ಎಸೆತಗಳಲ್ಲಿ 202 ರನ್‌ ಜೊತೆಯಾಟದಲ್ಲಿ ಭಾಗಿಯಾದರು. ಈ ಪೈಕಿ ಕಮಿನ್ಸ್ 12 ರನ್‌ ಮಾತ್ರ ಗಳಿಸಿದರು.

ಒಂದು ಹಂತದಲ್ಲಿ 18.3 ಓವರ್‌ಗಳಲ್ಲಿ 91 ರನ್ನಿಗೆ ಏಳು ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ಸೋಲಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ ಅತಿ ಒತ್ತಡ ಪರಿಸ್ಥಿತಿಯಲ್ಲೂ ಛಲ ಬಿಡದ ಮ್ಯಾಕ್ಸೆವೆಲ್ ಹೋರಾಟದಿಂದಾಗಿ ಏಳು ವಿಕೆಟ್ ನಷ್ಟಕ್ಕೆ 292 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಸೆಮಿಫೈನಲ್‌ಗೆ ಪ್ರವೇಶಿಸಿತು.

128 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ 21 ಬೌಂಡರಿ ಹಾಗೂ 10 ಸಿಕ್ಸರ್ ನೆರವಿನಿಂದ 201 ರನ್ ಗಳಿಸಿ ಅಜೇಯರಾಗುಳಿದರು.

ನನ್ನ ಜೀವನದಲ್ಲಿ ಕಂಡ ಶ್ರೇಷ್ಠ ಏಕದಿನ ಇನಿಂಗ್ಸ್...

ಮ್ಯಾಕ್ಸ್‌ವೆಲ್‌ ಬ್ಯಾಟಿಂಗ್ ಅನ್ನು ಹೊಗಳಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, 'ನನ್ನ ಜೀವನದಲ್ಲಿ ನೋಡಿದ ಅತ್ಯಂತ ಶ್ರೇಷ್ಠ ಏಕದಿನ ಇನಿಂಗ್ಸ್' ಎಂದು ಹೇಳಿದ್ದಾರೆ.

ಇದೇ ಪಂದ್ಯದಲ್ಲಿ ಅಫ್ಗಾನಿಸ್ತಾನದ ಆರಂಭಿಕ ಬ್ಯಾಟರ್ ಇಬ್ರಾಹೀಂ ಜದ್ರಾನ್ ಶತಕ (129*) ಸಾಧನೆ ಮಾಡಿದರು. ಆ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಅಫ್ಗನ್‌ ಪರ ಶತಕ ಗಳಿಸಿದ ಮೊದಲ ಬ್ಯಾಟರ್ ಎನಿಸಿದರು. ಜದ್ರಾನ್ ಆಟಕ್ಕೂ ಸಚಿನ್ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಸಹ 'ಏಕದಿನದಲ್ಲಿ ಕಂಡ ಅತ್ಯಂತ ಶ್ರೇಷ್ಠ ಇನಿಂಗ್ಸ್‌ಗಳಲ್ಲಿ ಒಂದಾಗಿದೆ' ಎಂದು ಮ್ಯಾಕ್ಸ್‌ವೆಲ್ ಆಟವನ್ನು ಶ್ಲಾಘಿಸಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್ ಸಂಭ್ರಮ

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಸಹ ಇದನ್ನೇ ಉಲ್ಲೇಖ ಮಾಡಿದ್ದು, 'ಇದು ಮಾನಸಿಕ ಹಾಗೂ ದೈಹಿಕ ಅಸಾಧಾರಣ ಪ್ರತಿಭೆಗೆ ಸಾಕ್ಷಿ' ಎಂದು ಹೇಳಿದ್ದಾರೆ.

ಮ್ಯಾಕ್ಸ್‌ವೆಲ್ ಇನಿಂಗ್ಸ್ ಕಪಿಲ್‌ಗೆ ಹೋಲಿಸಿದ ತರೂರ್...

'ನನ್ನ ಜೀವನದಲ್ಲಿ ಕಪಿಲ್ ದೇವ್‌ಗೆ ಸರಿಸಮಾನವಾಗಿ ಮತ್ತೊಂದು ಇನಿಂಗ್ಸ್ ಎಂದಾದರೂ ನೋಡುತ್ತೇನೆ ಎಂದು ಯೋಚಿಸಿರಲಿಲ್ಲ. ಆದರೆ ಪವಾಡಗಳು ತನ್ನಿಂದ ತಾನೇ ಸೃಷ್ಟಿಯಾಗುತ್ತದೆ ಎಂದು ಮ್ಯಾಕ್ಸ್‌ವೆಲ್ ನಮಗೆ ತೋರಿಸಿಕೊಟ್ಟಿದ್ದಾರೆ. ಅಧ್ಬುತ' ಎಂದು ಕ್ರಿಕೆಟ್ ಪ್ರೇಮಿಯೂ ಆಗಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

1983ರ ಏಕದಿನ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ಭಾರತದ ಮಾಜಿ ನಾಯಕ ಕಪಿಲ್ ದೇವ್ ಅಜೇಯ 175 ರನ್ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.