ಐಸಿಸಿ ಕ್ರಿಕೆಟ್ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟಿರುವ ಮಿಚೆಲ್ ಮಾರ್ಷ್
–ಎಕ್ಸ್ ಚಿತ್ರ
ಮೆಲ್ಬರ್ನ್: ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟ ನಡೆಯನ್ನು ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಸಮರ್ಥಿಸಿಕೊಂಡಿದ್ದಾರೆ. ಜತೆಗೆ ಇದನ್ನು ಪುನರಾವರ್ತಿಸಲು ಹಿಂಜರಿಯುವುದಿಲ್ಲ ಎಂದೂ ಹೇಳಿದ್ದಾರೆ.
ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಟ್ರೋಫಿಯನ್ನು ಆರನೇ ಬಾರಿ ಗೆದ್ದು ಬೀಗಿದೆ. ಕಾರ್ಯಕ್ರಮದ ನಂತರ ಆಸ್ಟ್ರೇಲಿಯಾದ ಆಟಗಾರರು ಹೋಟೆಲ್‌ನಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಮಾರ್ಷ್ ಅವರು ಕೈಯಲ್ಲಿ ಬಿಯರ್ ಬಾಟಲ್ ಹಿಡಿದು, ಕಾಲುಗಳನ್ನು ಟ್ರೋಫಿ ಮೇಲಿಟ್ಟಿದ್ದರು. ಟ್ರೋಫಿಯೊಂದಿಗೆ ಮಾರ್ಷ್ ನಡೆದುಕೊಂಡ ರೀತಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿತ್ತು.
ಈ ಕುರಿತು ಆಸ್ಟ್ರೇಲಿಯಾದ ‘ಸೆನ್ ರೇಡಿಯೊ’ಯೊಂದಿಗೆ ಮಾತನಾಡಿರುವ ಮಾರ್ಷ್, ‘ಆ ಫೋಟೊ ವಿಶ್ವಕಪ್‌ಗೆ ಅಗೌರವ ತೋರಿಸುವ ರೀತಿಯಲ್ಲೇನೂ ಇಲ್ಲ’ ಎಂದಿದ್ದಾರೆ.
‘ಅದರ ಬಗ್ಗೆ ತುಂಬಾ ಯೋಚಿಸಿಲ್ಲ. ಹಲವರು ನನಗೆ ಅದರ ವಿಷಯ ಹೇಳಿದ್ದರೂ, ನಾನು ಸಾಮಾಜಿಕ ಮಾಧ್ಯಮದಲ್ಲಿ ನೋಡಿಲ್ಲ. ಅಂಥದ್ದೇನೂ ಆ ಚಿತ್ರದಲ್ಲಿಲ್ಲ’ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮತ್ತೆ ಹಾಗೇ ಮಾಡುತ್ತೀರಾ ಎಂದು ಕೇಳಿದಾಗ, ‘ಪ್ರಾಮಾಣಿಕವಾಗಿ ಹೇಳುವುದಾದರೆ ಹೌದು’ ಎಂದು ಉತ್ತರಿಸಿದ್ದಾರೆ.
ಮಾರ್ಷ್ ನಡೆ ಖಂಡಿಸಿದ್ದ ಶಮಿ: ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರೂ ಮಾರ್ಷ್ ಅವರ ನಡೆಯನ್ನು ಖಂಡಿಸಿದ್ದರು. ‘ಟ್ರೋಫಿಗಾಗಿ ವಿಶ್ವದ ಎಲ್ಲ ತಂಡಗಳು ಹೋರಾಟ ನಡೆಸುತ್ತವೆ. ಟ್ರೋಫಿಯನ್ನು ಕೈಯಿಂದ ಶಿರದ ಮೇಲೆತ್ತಿ ಹಿಡಿಯಲು ಬಯಸುತ್ತಾರೆ. ಅದರ ಮೇಲೆ ಕಾಲುಚಾಚಿ ಕುಳಿತಿದ್ದು ನನಗೆ ಹಿತಕರವೆನಿಸಲಿಲ್ಲ’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.