ನೋಟ್ಸ್‌ಗೂ ಬಂದಿದೆ ಎಐ!
ಜಗತ್ತಿನಲ್ಲಿ ಎಂಥದ್ದೇ ಸುಧಾರಿತ ತಂತ್ರಜ್ಞಾನ ಬರಲಿ, ನಾವು ಕೆಲವು ಕೆಲಸಗಳನ್ನು ಕೈಯಿಂದಲೇ ಮಾಡುವುದಕ್ಕೆ ಇಷ್ಟಪಡುತ್ತೇವೆ. ಕಂಪ್ಯೂಟರ್‌ನಲ್ಲಿ ಟೈಪ್ ಮಾಡುವ ಅನುಕೂಲ ಈಗ ಇದ್ದಾಗಲೂ ಅಲ್ಲಲ್ಲಿ ಕೆಲವರು ಕೈಯಿಂದಲೇ ಬರೆದು, ಆಮೇಲೆ ಅದನ್ನು ಟೈಪ್ ಮಾಡಿಸುವವರೂ ಇದ್ದಾರೆ. ಮಾರ್ಕೆಟ್‌ಗೆ ಹೋದಾಗ ತರಬೇಕಾದ ಸಾಮಗ್ರಿಗಳನ್ನು ಬರೆದಿಟ್ಟುಕೊಳ್ಳಲು ಈಗ ನಮ್ಮ ಬಳಿ ನೂರಾರು ಆ್ಯಪ್‌ಗಳು ಹಾಗೂ ಆನ್‌ಲೈನ್ ಸೌಕರ್ಯಗಳು ಇದ್ದರೂ, ನಾವು ಇನ್ನೂ ಚೀಟಿಯಲ್ಲಿ ಬರೆದು ಫ್ರಿಜ್‌ನ ಡೋರ್‌ಗೆ ಅಂಟಿಸಿಡುತ್ತೇವೆ ಅಥವಾ ಒಂದು ನೋಟ್‌ಬುಕ್ ಇಟ್ಟುಕೊಂಡು ಅದರಲ್ಲಿ ಬರೆದು ಫ್ರಿಜ್‌ನ ಮೇಲೆ ಇಟ್ಟುಕೊಳ್ಳುತ್ತೇವೆ.
ಬಹಳ ಜನರಿಗೆ ಗೊತ್ತಿಲ್ಲದ ಸಂಗತಿಯೇನೆಂದರೆ, ಗೂಗಲ್ ಹಲವು ವರ್ಷಗಳ ಹಿಂದೆಯೇ ಕೀಪ್ (Keep) ಎಂಬ ಒಂದು ಆ್ಯಪ್ ಅನ್ನು ಸಿದ್ಧಪಡಿಸಿದೆ. ಅದು ಆಂಡ್ರಾಯ್ಡ್‌ನಲ್ಲೂ ಐಒಎಸ್‌ನಲ್ಲೂ ಕೆಲಸ ಮಾಡುತ್ತದೆ. ಅದೊಂದು ಸರಳ ಸುಂದರವಾದ ನೋಟ್ ಬರೆದಿಟ್ಟುಕೊಳ್ಳುವ ಆ್ಯಪ್. ಅದರಲ್ಲಿ ಹೆಚ್ಚೇನೂ ಫೀಚರ್ ಇಲ್ಲ. ಅದೆಲ್ಲ ಸರಿ, ಈಗ ‘ಎಐ’ ಬಂದ ಕಾಲದಲ್ಲೂ ನಾವು ಪುಸ್ತಕ–ಪೆನ್ನು ಹಿಡಿದುಕೊಂಡೋ, ತುಂಬಾ ಸರಳವಾದ ಕೀಪ್‌ನಂತಹ ಆ್ಯಪನ್ನು ಇಟ್ಟುಕೊಂಡು ನೋಟ್ಸ್ ಬರೆದುಕೊಳ್ಳುತ್ತಿರಬೇಕೆ? ಹೀಗೆಂದು ನೀವು ಕೇಳಬಹುದು.
ನಿಜ, ಇಂಥದ್ದೊಂದು ಪ್ರಶ್ನೆಗೆ ಉತ್ತರವಾಗಿ ‘ಕೀಪ್’ ಅನುಭವವನ್ನು ಮತ್ತು ‘ಜೆಮಿನೈ’ ಬುದ್ಧಿಯನ್ನೆರಡನ್ನೂ ಬಳಸಿಕೊಂಡು ಗೂಗಲ್ ಈಗ ‘ನೋಟ್‌ಬುಕ್‌ಎಲ್‌ಎಂ’ (NotebookLM) ಎಂಬ ನೋಟ್ ಬರೆದಿಡುವ ಆ್ಯಪ್ ಅನ್ನು ಸಿದ್ಧಪಡಿಸಿದೆ. ಬಹುಶಃ ಸರಳ ಜನರೇಟಿವ್ ಎಐಗಿಂತ ಹೆಚ್ಚು ಉಪಯುಕ್ತ ಸೌಕರ್ಯ ಇದಾಗಿದ್ದರೂ, ಇದಕ್ಕೆ ಪ್ರಚಾರ ಸಿಕ್ಕಿದ್ದು ಕಡಿಮೆ. ಇದು ಜೆಮಿನೈಯಲ್ಲಿರುವ ‘ಜೆನರೇಟಿವ್ ಎಐ’ ಅನ್ನೇ ಬಳಸಿಕೊಳ್ಳುತ್ತದೆ. ಅಷ್ಟಕ್ಕೂ ಈಗ ಗೂಗಲ್ ಆಗಲೀ, ಮೈಕ್ರೋಸಾಫ್ಟ್ ಆಗಲೀ ಅಥವಾ ಇತರ ಯಾವುದೇ ದೈತ್ಯ ಕಂಪನಿಗಳು ಜನರೇಟಿವ್ ಎಐ ಬಳಸಿಕೊಳ್ಳದೇ ಯಾವ ಹೊಸ ಅಪ್ಲಿಕೇಶನ್‌ಗಳನ್ನು ಹೊರತಂದಿವೆ ಹೇಳಿ?!
ಈ ನೋಟ್‌ಬುಕ್‌ಎಲ್‌ಎಮ್‌ನ ವಿಶೇಷತೆಯೇನೆಂದರೆ, ನೀವು ಇದಕ್ಕೆ ಪುಟಗಟ್ಟಲೆ ಸಂಶೋಧನೆ ಪೇಪರುಗಳನ್ನು ಕೊಟ್ಟರೂ ಕೆಲವೇ ಕ್ಷಣದಲ್ಲಿ ನಿಮಗೆ ಅದರ ಸಾರಾಂಶವನ್ನು ತಂದುಕೊಡುತ್ತದೆ. ಒಂದೆರಡು ಗಂಟೆಗಳವರೆಗೆ ಕಥೆ ಹೇಳಿ ಕಾಲಕ್ಷೇಪ ಮಾಡಿದ್ದ ಒಂದು ಯೂಟ್ಯೂಬ್ ವಿಡಿಯೊವನ್ನು ನೋಡುತ್ತಾ ಕುಳಿತುಕೊಳ್ಳುವುದು ಬೇಸರ ಎಂದು ಅನಿಸಿದರೆ, ಅದರ ಲಿಂಕ್ ಅನ್ನು ನೋಟ್‌ಬುಕ್‌ಎಲ್‌ಎಮ್‌ಗೆ ಕೊಟ್ಟು, ಇದರ ಸಾರಾಂಶ ಹೇಳು ಎಂದರೆ ಕೆಲವು ಕ್ಷಣಗಳಲ್ಲಿ ಅದರ ಸಾರಾಂಶವನ್ನು ತಂದಿಡುತ್ತದೆ. ಬರಿ ಅಷ್ಟೇ ಅಲ್ಲ, ಹಾಗೆ ಸಾರಾಂಶವನ್ನು ತಂದು ಕೊಡುವಾಗ ಒಂದೊಂದು ವಾಕ್ಯವನ್ನೂ ತಾನು ಎಲ್ಲಿಂದ ಎರವಲು ಪಡೆದುಕೊಂಡಿದ್ದೇನೆ ಎಂಬುದರ ಉಲ್ಲೇಖವನ್ನೂ ಅದು ಮಾಡುತ್ತದೆ. ಹೀಗಾಗಿ, ನಮಗೆ ಬೇಕಾದರೆ ಆ ಸೈಟೇಶನ್‌ನ ಜಾಡು ಹಿಡಿದು ಹೋಗಿ ಇನ್ನಷ್ಟನ್ನು ಓದಿಕೊಳ್ಳಬಹುದು ಅಥವಾ ನೋಡಿಕೊಳ್ಳಬಹುದು.
ಗೂಗಲ್ ಬಳಕೆದಾರರು ಈಗಾಗಲೇ ಕೀಪ್ ಅನ್ನು ಬಳಕೆ ಮಾಡುತ್ತಿದ್ದರೆ, ಅದರ ಸುಧಾರಿತ, ಅತ್ಯಾಧುನಿಕ ಆವೃತ್ತಿ ಎಂದು ಈ ನೋಟ್‌ಬುಕ್‌ಎಲ್‌ಎಮ್ ಅನ್ನು ಬಳಸಲು ಪ್ರಯತ್ನಿಸಬಹುದು. ಅದೆಲ್ಲಕ್ಕಿಂತ ಹೆಚ್ಚಾಗಿ, ದೈನಂದಿನ ಬಳಕೆಗಿಂತ ಈ ನೋಟ್‌ಬುಕ್‌ಎಲ್‌ಎಮ್ ಹೆಚ್ಚು ಆಳವಾದ ಅಧ್ಯಯನಕ್ಕೆ ಹೇಳಿ ಮಾಡಿಸಿದಂತಿದೆ. ಅದರಲ್ಲೂ ಕಾಲೇಜುವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಸಂಶೋಧಕರಿಗಂತೂ ಇದು ಮುಂದಿನ ದಿನಗಳಲ್ಲಿ ಅತ್ಯಮೂಲ್ಯ ಆ್ಯಪ್ ಆಗುವುದರಲ್ಲಿ ಸಂದೇಹವೇ ಇಲ್ಲ. ಒಬ್ಬ ವಿದ್ಯಾರ್ಥಿ ತಾನು ತರಗತಿಯಲ್ಲಿ ಕೇಳಿಸಿಕೊಂಡಿದ್ದನ್ನು ರೆಕಾರ್ಡ್ ಮಾಡಿಕೊಂಡು, ಅದನ್ನು ನೋಟ್‌ಬುಕ್‌ಎಲ್‌ಎಂಗೆ ಅಪ್‌ಲೋಡ್ ಮಾಡಿ, ಅದರ ಸಾರಾಂಶವನ್ನು ಕೊಡು ಎಂದು ಕೇಳಿದರೆ ಇಡೀ ಉಪನ್ಯಾಸದ ಸಾರಾಂಶವನ್ನು ಅದು ತೆಗೆದುಕೊಡುತ್ತದೆ. ಅದೇ ರೀತಿ, ವಿದ್ಯಾರ್ಥಿಗಳಿಗೆ ನೋಟ್ಸ್ ಕೊಡಬೇಕಾದರೆ ಉಪನ್ಯಾಸಕರು ತಮ್ಮದೇ ಉಪನ್ಯಾಸವನ್ನು ರೆಕಾರ್ಡ್ ಮಾಡಿಟ್ಟುಕೊಂಡು, ಅದನ್ನೇ ನೋಟ್ಸ್ ಆಗಿ ಪರಿವರ್ತಿಸಿಕೊಡುವಂತೆ ನೋಟ್‌ಬುಕ್‌ಎಲ್‌ಎಮ್‌ಗೆ ಹೇಳಿದರೆ, ಕ್ಷಣಮಾತ್ರದಲ್ಲಿ ನೋಟ್ಸ್ ಸಿದ್ಧವಾಗಿರುತ್ತದೆ. ಒಬ್ಬ ಸಂಶೋಧನಾ ವಿದ್ಯಾರ್ಥಿ ಒಂದು ವಿಷಯದ ಮೇಲೆ ಅಧ್ಯಯನ ನಡೆಸುತ್ತಿದ್ದರೆ, ತುರ್ತಾಗಿ ಯಾವುದೋ ವಿಷಯವನ್ನು ಆಕರಗ್ರಂಥಗಳ ಸಮೂಹದಿಂದ ಹುಡುಕಬೇಕಿದೆ ಎಂದಾದರೆ, ಆಕರವನ್ನು ನೋಟ್‌ಬುಕ್‌ಎಲ್‌ಎಂಗೆ ಕೊಟ್ಟು, ಇಂಥ ವಿಷಯದ ಬಗ್ಗೆ ರೆಫರೆನ್ಸ್ ಹುಡುಕಿಕೊಡು ಎಂದರೆ ಕ್ಷಣ ಮಾತ್ರದಲ್ಲಿ ಅದು ಹುಡುಕಿಕೊಡುತ್ತದೆ.ಇತ್ತೀಚೆಗೆ ಇದಕ್ಕೆ ಇನ್ನೂ ಒಂದು ಫೀಚರ್ ಸೇರಿಸಲಾಗಿದ್ದು, ಸಿದ್ಧಪಡಿಸಿದ ಸಾರಾಂಶವನ್ನು ಅದು ಧ್ವನಿರೂಪದಲ್ಲೂ ಸಿದ್ಧಪಡಿಸಿಕೊಡುತ್ತದೆ. ಅದಷ್ಟೇ ಆಗಿದ್ದರೆ, ಈಗಾಗಲೇ ಇರುವ ‘ಟೆಕ್ಸ್ ಟು ಸ್ಪೀಚ್’ಗೂ ಇದಕ್ಕೂ ಏನೂ ವ್ಯತ್ಯಾಸವಿಲ್ಲವಲ್ಲ ಎಂದು ನಾವು ಹೇಳಬಹುದಾಗಿತ್ತು. ಟೆಕ್ಸ್‌ಟ್ ಟು ಸ್ಪೀಚ್ ಸಾಫ್ಟ್‌ವೇರ್‌ಗಳು ಒಂದು ಲಘು ಪ್ರಬಂಧವನ್ನೂ ಅದೆಷ್ಟು ನೀರಸವಾಗಿ ಹೇಳಿ ಮುಗಿಸುತ್ತವೆ ಎಂದರೆ, ಕೇಳುತ್ತಾ ನಿದ್ದೆಯೇ ಬಂದುಬಿಡಬಹುದು. ಆದರೆ, ನೋಟ್‌ಬುಕ್‌ಎಲ್‌ಎಮ್ ಹಾಗಲ್ಲ. ಅದಕ್ಕೆ ಅದನ್ನು ಆಸಕ್ತಿಕರವಾಗಿ ಹೇಳುವುದೂ ಗೊತ್ತಿದೆ. ಒಂದು ತುಂಬಾ ಸಹಜವಾದ ಪಾಡ್‌ಕಾಸ್ಟ್ ಹೇಗೆ ನಡೆಯುತ್ತದೆಯೋ ಅದೇ ರೀತಿ ಈ ಮಾಹಿತಿ ಯನ್ನು ಇಬ್ಬರು ಅಥವಾ ಮೂವರು ಪಾತ್ರಗಳು ಇರುವ ಒಂದು ಸಂವಾದವನ್ನಾಗಿ ಇದು ಸಿದ್ಧಪಡಿಸಿಕೊಡುತ್ತದೆ. ನಾವು ಮಾತನಾಡುವಾಗ ಸಹಜವಾಗಿ ಹೊರಡಿಸುವ ‘ಊಂ...’, ‘ಆಂ...’ ಎಂಬ ಧ್ವನಿಯನ್ನೂ ಇದು ಸೇರಿಸಿಕೊಳ್ಳುತ್ತದೆ. ಮಧ್ಯೆ ಮಧ್ಯೆ ನಗು ಇರುತ್ತದೆ. ಕಾಲೆಳೆಯುವಿಕೆ ಕೂಡ ಇರುತ್ತದೆ. ನಿರೂಪಕ ಹೇಳಿದ್ದಕ್ಕೆ ಕೆಲವು ಬಾರಿ ಇನ್ನೊಂದು ಪಾತ್ರ ಒಪ್ಪದೇ ವಿರುದ್ಧ ಅಭಿಪ್ರಾಯವನ್ನು ಮಂಡಿಸುತ್ತದೆ. ಇದೆಲ್ಲವೂ ಎಷ್ಟು ಸಹಜವಾಗಿ ನಡೆಯುತ್ತದೆ ಎಂದರೆ ನಿಜವಾಗಿಯೂ ಇದನ್ನು ಯಾರೋ ಮನುಷ್ಯರೇ ಮಾತನಾಡಿ ಸಿದ್ಧಪಡಿಸಿರಬಹುದು ಎಂಬ ಭಾವವನ್ನು ನಮಗೆ ಮೂಡಿಸುತ್ತದೆ. ಹೀಗಾಗಿ, ಈಗ ವಿವಿಧ ವಿಷಯಗಳ ಬಗ್ಗೆ ಪಾಡ್‌ಕಾಸ್ಟ್ ಸಿದ್ಧಪಡಿಸುವವರು ನೋಟ್‌ಬುಕ್‌ಎಲ್‌ಎಮ್ ಮೊರೆ ಹೋಗುತ್ತಿದ್ದಾರೆ. ಈ ನೋಟ್‌ಬುಕ್‌ಎಲ್‌ಎಮ್‌ನ ವಿಶೇಷತೆಯೆಂದರೆ, ಇತರ ಜನರೇಟಿವ್ ಎಐ ರೀತಿಯಲ್ಲಿ ಮಾನವನಿಗೆ ಪರ್ಯಾಯ ಅಸ್ತಿತ್ವವನ್ನು ರೂಪಿಸಿಕೊಳ್ಳಲು ಹೊರಟಂತಿರುವುದಿಲ್ಲ. ಬದಲಿಗೆ, ಇದು ನಮ್ಮ ಕೆಲಸಗಳನ್ನು ಸರಾಗವಾಗಿ ಮಾಡಿಕೊಡುವ ಸಹಾಯಕನಂತೆ ವರ್ತಿಸುತ್ತದೆ. ಇದು ಯಾವುದೇ ಹೊಸ ಸಂಶೋಧನೆಯನ್ನು ಮಾಡುವುದಿಲ್ಲ. ಈಗಾಗಲೇ ಮನುಷ್ಯ ಮಾಡಿದ ಸಂಶೋಧನೆಯನ್ನು ಅರ್ಥ ಮಾಡಿಕೊಂಡು ಅದರಲ್ಲೇನಿದೆ ಎಂಬುದರ ಮಾಹಿತಿಯನ್ನು ಮಾತ್ರ ಸಾರದ ರೂಪದಲ್ಲಿ ನಮಗೆ ಸಾದರಪಡಿಸುತ್ತದೆ. ಸದ್ಯಕ್ಕೆ ನೋಟ್‌ಬುಕ್‌ಎಲ್‌ಎಂ ಅನ್ನು ತುಂಬಾ ಕೆಲವೇ ಪರಿಣಿತರನ್ನು ಇಟ್ಟುಕೊಂಡು ಗೂಗಲ್ ಸಿದ್ಧಪಡಿಸಿದೆ. ಇದಕ್ಕೆ ಪ್ರತ್ಯೇಕ ಆ್ಯಂಡ್ರಾಯ್ಡ್ ಆ್ಯಪ್ ಕೂಡ ಇಲ್ಲ, ಬರಿ ವೆಬ್ ಆ್ಯಪ್ ಇದೆ. ಅಷ್ಟೇ ಅಲ್ಲ, ಇದನ್ನು ಜನರಿಗೆ ತಲುಪಿಸುವಲ್ಲಿ ಗೂಗಲ್ ವಿಶೇಷ ಆಸ್ಥೆಯನ್ನೂ ವಹಿಸಿದಂತಿಲ್ಲ. ಆದರೆ, ಇಷ್ಟು ನಗಣ್ಯವಾಗಿದ್ದೂ ಇದು ಮಾಡುತ್ತಿರುವ ಕೆಲಸವನ್ನು ಗಮನಿಸಿದರೆ, ಗೂಗಲ್ ಇದನ್ನು ಒಂದು ಮುಖ್ಯ ಆ್ಯಪ್ ಆಗಿಯೋ ಅಥವಾ ತನ್ನ ಪ್ರಮುಖ ಪ್ರಾಡಕ್ಟ್‌ಗಳಲ್ಲಿ ಒಂದು ಎಂಬಂತೆ ಇದನ್ನು ಮುಂದಿನ ದಿನಗಳಲ್ಲಿ ಪ್ರಚಾರ ಮಾಡಬಹುದೇನೋ? ಸದ್ಯಕ್ಕಂತೂ ಇದು ಸಾಮಾನ್ಯ ಜನರೇಟಿವ್ ಎಐ ಅಪ್ಲಿಕೇಶನ್‌ಗಳಿಗಿಂತಲೂ ಜನರ ಬಳಕೆಗೆ ಹೆಚ್ಚು ಅನುಕೂಲಕರವಾಗಿರುವುದಂತೂ ನಿಜ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.