
ಮಾನವಹಸ್ತಕ್ಷೇಪವೇ ಇಲ್ಲದಂತೆ ಹಾಗೂ ಅತ್ಯಂತ ಕಡಿಮೆ ಅಪಾಯ ಸಾಧ್ಯತೆಗಳುಳ್ಳ ಅತ್ಯಾಧುನಿಕ ಕೃತಕ ಬುದ್ಧಿಮತ್ತೆಯ ಸ್ವಯಂಚಾಲಿತ ಪ್ರಯೋಗಾಲಯವೊಂದು ಸಿದ್ಧವಾಗಿದೆ. ಈ ಪ್ರಯೋಗಾಲಯದಲ್ಲಿ ಅಪಾಯಕಾರಿ ರಾಸಾಯನಿಕಗಳ ಭಯ ಇರುವುದಿಲ್ಲ, ಪ್ರಾಣಿಗಳ ಮೇಲೆ ಪ್ರಯೋಗ ಮಾಡಬೇಕಿಲ್ಲ. ಮಾತ್ರವಲ್ಲ, ಯುದ್ಧೋಪಕರಣಗಳ ಪ್ರಯೋಗವನ್ನೂ ಪರಿಸರ ಮಾಲಿನ್ಯ ಆಗದಂತೆ ನಡೆಸಬಲ್ಲ ಜಾಣತನವೂ ಈ ಪ್ರಯೋಗಾಲಯಕ್ಕಿದೆ.
ನಾರ್ತ್ ಕ್ಯಾರೊಲಿನಾ ಸ್ಟೇಟ್ ವಿಶ್ವವಿದ್ಯಾನಿಲಯದ ರಾಸಾಯನಿಕ ಎಂಜಿನಿಯರ್‌ಗಳು ಈ ಸಂಶೋಧನೆ ನಡೆಸಿದ್ದಾರೆ. ಪ್ರಸಿದ್ಧ ನೇಚರ್ ಕೆಮಿಕಲ್ ಎಂಜಿನಿಯರಿಂಗ್ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಇವರ ಸಂಶೋಧನೆ ಪ್ರಕಟವಾಗಿದ್ದು, ಜಾಗತಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಮಿಲಾದ್ ಅಬೋಲ್‌ಹಾಸನಿ ಅವರ ತಂಡವು ಈ ಪ್ರಯೋಗವನ್ನು ಮಾಡಿದ್ದು, ಸಾವು, ನೋವು, ಅಡ್ಡಪರಿಣಾಮಗಳಿಲ್ಲದೇ ವೈಜ್ಞಾನಿಕ ಪ್ರಯೋಗ ಮಾಡಬಲ್ಲ ಸಾಧ್ಯತೆಗಳು ಈ ಸಂಶೋಧನೆಯಿಂದ ತೆರೆದುಕೊಳ್ಳುವ ನಿರೀಕ್ಷೆಗಳಿವೆ.
ಸಾಮಾನ್ಯವಾಗಿ ಪ್ರಯೋಗಾಲಗಳೆಂದರೆ ಅಪಾಯದ ಕೂಪ ಎಂದೇ ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ರಾಸಾಯನಿಕ ಪ್ರಯೋಗಗಳು, ವೈದ್ಯಕೀಯ ಪ್ರಯೋಗಗಳು ನಡೆಯುತ್ತವೆ. ರಾಸಾಯನಿಕ ಪ್ರಯೋಗಗಳ ಅಡಿಯಲ್ಲಿ ಔಷಧ ತಯಾರಿಯ ಸಂಶೋಧನ ಜೊತೆಗೆ ಬಾಂಬ್ ಇತ್ಯಾದಿ ಸಂಶೋಧನೆಗಳೂ ನಡೆಯುತ್ತವೆ. ಇನ್ನು ವೈದ್ಯಕೀಯವಾಗಿ ಕಾಯಿಲೆಗಳ ಅಧ್ಯಯನ ನಡೆಯುತ್ತದೆ. ಇವೆಲ್ಲವೂ ವಿಜ್ಞಾನಿಗಳಿಗೆ, ಪ್ರಯೋಗ ಬಲಿಪಶುಗಳಿಗೆ ಹಾಗೂ ಪರಿಸರಕ್ಕೆ ಅಪಾಯ ತಂದೊಡ್ಡಬಲ್ಲ ಸಾಧ್ಯತೆ ಇರುತ್ತದೆ. ಸಾಧ್ಯವಾದಷ್ಟೂ ಕಡಿಮೆ ಪ್ರಮಾಣದಲ್ಲಿ ಮಾನವ ಸಂಪನ್ಮೂಲವನ್ನು ಬಳಸಿಕೊಂಡು, ಸುರಕ್ಷಿತವಾಗಿ ಕಾರ್ಯನಿರ್ವಹಿಸಬಲ್ಲ ಪ್ರಯೋಗಾಲಯದ ಅವಶ್ಯಕತೆ ಇತ್ತು. ಅದಕ್ಕೆ ಇದೀಗ ಪರಿಹಾರ ಸಿಕ್ಕಂತಿದೆ.
ಮೇಲೆ ಉದಾಹರಿಸಿದ ವಿಷಯಗಳಿಗೆ ನಡೆಯುವ ಪ್ರಯೋಗಗಳಲ್ಲಿ ಅಪಾಯ ಹೆಚ್ಚಿರುವ ಕಾರಣ, ಸ್ವಯಂ ಚಾಲಿತವಾಗಿ ಯಂತ್ರಗಳ ಸಹಾಯದಿಂದ ಇಲ್ಲಿ ಪ್ರಯೋಗ ನಡೆಯಲಿದೆ. ರೋಬಾಟ್‌ಗಳು ಅಪಾಯಕಾರಿ ರಾಸಾಯನಿಕಗಳು ಅಥವಾ ಜೈವಿಕ ವಸ್ತುಗಳನ್ನು ಸಂಪರ್ಕಿಸಿ ಕೆಲಸ ಮಾಡುತ್ತವೆ; ಮಾನವನ ಅಗತ್ಯವೇ ಇರುವುದಿಲ್ಲ. ಅತ್ಯಾಧುನಿಕ ರಿಮೋಟ್ ನಿಯಂತ್ರಣ ವ್ಯವಸ್ಥೆಯ ಸಹಾಯದಿಂದ ದೂರದಿಂದಲೇ ಈ ರೋಬಾಟ್‌ಗಳನ್ನು ನಿಯಂತ್ರಿಸಬಹುದು. ‘ನಮ್ಮ ವಿಜ್ಞಾನಿಗಳಿಗೆ ತಾವು ದೂರದಿಂದ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಯದಷ್ಟು ಈ ಪ್ರಯೋಗಾಲಯ ಸುಧಾರಿಸಿರುತ್ತದೆ. ಅಂದರೆ, ಆಗ್ಮೆಂಟೆಡ್ ರಿಯಾಲಿಟಿ ಹಾಗೂ ವರ್ಚುಯಲ್ ರಿಯಾಲಿಟಿ ಸಹಾಯದಿಂದ ವಿಜ್ಞಾನಿಗಳು ತಾವೇ ಖುದ್ದು ಕೆಲಸ ಮಾಡುತ್ತಿರುವಂತೆ ಭಾಸವಾಗುತ್ತಿರುತ್ತದೆ. ಆದರೆ, ವಾಸ್ತವದಲ್ಲಿ ಅತಿ ದೂರದಿಂದ ಕಾರ್ಯನಿರ್ವಹಿಸುತ್ತಿರುತ್ತಾರೆ. ರೋಬಾಟ್‌ಗಳು ಅಪಾಯಕ್ಕೆ ತೆರೆದುಕೊಂಡಿರುತ್ತವೆ’ ಎಂದು ಮಿಲಾದ್ ವಿವರಿಸಿದ್ದಾರೆ.
ಸದ್ಯದ ಪ್ರಯೋಗಾಲಯಗಳಲ್ಲಿ ಈ ಎಲ್ಲ ಬಗೆಯ ಪ್ರಯೋಗಗಳನ್ನು ಖುದ್ದು ಮಾನವರೇ ಮಾಡುತ್ತಿದ್ದಾರೆ. ಸಾಕಷ್ಟು ಸುರಕ್ಷಾ ವಿಧಾನಗಳು ಇವೆಯಾದರೂ ಅಪಾಯದ ಸಾಧ್ಯತೆಗಳನ್ನು ತಳ್ಳಿಹಾಕುವಂತೆ ಇಲ್ಲ. ಆದರೆ ಈ ಹೊಸ ಪ್ರಯೋಗಾಲಯದಲ್ಲಿ ಅಪಾಯ ಸಾಧ್ಯತೆಗಳೇ ಇರುವುದಿಲ್ಲ. ಅಪಾಯ ಉಂಟಾದಲ್ಲಿ ಅದು ಕೇವಲ ರೋಬಾಟ್‌ಗಳಿಗೆ ಆಗಬೇಕಷ್ಟೇ!
ಜತೆಗೆ, ಸುಮಾರು 10 ಪಟ್ಟು ವೇಗದಲ್ಲಿ ಈ ಪ್ರಯೋಗಾಲಯ ಕಾರ್ಯನಿರ್ವಹಿಸುತ್ತದೆ. ಸಾಮಾನ್ಯವಾಗಿ ರೋಬಾಟ್‌ಗಳು ಅತಿ ವೇಗದಲ್ಲಿ ಕಾರ್ಯನಿರ್ವಹಿಸುವುದು ಸಾಮಾನ್ಯದ ವಿಷಯ. ಇದು ಇಲ್ಲೂ ಅನ್ವಯವಾಗಿದೆ. ರೋಬಾಟ್‌ಗಳು ನಿಖರವಾಗಿ ಕಾರ್ಯನಿರ್ವಹಿಸುವ ಕಾರಣ ಸಮಯ ವ್ಯರ್ಥವಾಗುವುದಿಲ್ಲ. ಜೊತೆಗೆ, ಈ ರೋಬಾಟ್‌ಗಳು ಹಿಂದಿನಂತೆ ಹೆಚ್ಚು ವಿದ್ಯುತ್ ಬಳಸುವುದೂ ಇಲ್ಲ. ಆದ್ದರಿಂದ ಇವು ಮಿತವ್ಯಯಿಗಳೂ ಆಗಿರುವುದು ವಿಶೇಷವಾಗಿದೆ.
ಇದಲ್ಲದೇ ಪರಿಸರಕ್ಕೆ ಹಾನಿಯಾಗುವ ಅಥವಾ ಮಾಲಿನ್ಯವನ್ನು ಉಂಟುಮಾಡುವ ಸಾಧ್ಯತೆಗಳೂ ಅತಿ ಕಡಿಮೆ. ರಾಸಾಯನಿಕ ಪರೀಕ್ಷೆಗಳನ್ನು ಅತ್ಯಂತ ನಿಯಂತ್ರಿತ ಪರಿಸರದಲ್ಲಿ ನಡೆಸಲಾಗುತ್ತದೆ. ಮುಂಚೆ ಬಾಂಬ್‌ಗಳ ಪ್ರಯೋಗವನ್ನು ಬಾಂಬ್‌ಗಳ ನಿಜ ಗಾತ್ರದ ಆಧಾರದ ಮೇಲೆಯೇ ನಡೆಸಲಾಗುತ್ತಿತ್ತು. ಇಲ್ಲಿ ಆ ಸಮಸ್ಯೆ ಇಲ್ಲ. ಬದಲಿಗೆ ಸಾಮರ್ಥ್ಯ ಪರೀಕ್ಷೆಗಳು ಗಣಿತ ಸಂಖ್ಯೆಗಳ ಆಧಾರದ ಮೇಲೆ, ಅನುಪಾತಗಳ ಆಧಾರದ ಮೇಲೆ ನಡೆಯುತ್ತದೆ. ಹಾಗಾಗಿ, ಅತಿ ನಗಣ್ಯ ಪ್ರಮಾಣದಲ್ಲಿ ಪರಿಸರ ಮಾಲಿನ್ಯ ಆಗುವ ಸಾಧ್ಯತೆಗಳಿವೆ.
ಇವೆಲ್ಲದರ ಜೊತೆಗೆ, ಈ ಪ್ರಯೋಗಾಲಯಕ್ಕೆ ಕೃತಕ ಬುದ್ಧಿಮತ್ತೆಯ ಸಹಾಯವೂ ಇರುವುದರಿಂದ ಪ್ರಯೋಗಗಳ ಲೆಕ್ಕಾಚಾರ ಹಾಗೂ ದತ್ತಾಂಶಗಳನ್ನು ಅತಿ ಸಮರ್ಥವಾಗಿ, ವೇಗವಾಗಿ ನಡೆಸುವ ಸಾಮರ್ಥ್ಯವೂ ಇದೆ. ಹಾಗಾಗಿ, ಈ ಇದನ್ನು ‘ಬುದ್ಧಿವಂತ ಪ್ರಯೋಗಾಲಯ’ ಎಂದು ಕರೆಯಲಾಗಿದೆ ಎಂದು ವಿಜ್ಞಾನಿಗಳು ವ್ಯಾಖ್ಯಾನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.