ADVERTISEMENT

AI Summit: ಭಾರತ ನಿರ್ಮಿತ ರೋಬೊಶ್ವಾನ ಪ್ರದರ್ಶನ: ಇದು ಬೆಂಗಳೂರಿನ ಶುದ್ಧ ದೇಸಿ

ಏಜೆನ್ಸೀಸ್
Published 19 ಫೆಬ್ರುವರಿ 2026, 7:02 IST
Last Updated 19 ಫೆಬ್ರುವರಿ 2026, 7:02 IST
<div class="paragraphs"><p>ಪರಮ್‌&nbsp;ರೋಬೊಶ್ವಾನ</p></div>

ಪರಮ್‌ ರೋಬೊಶ್ವಾನ

   

ಚಿತ್ರ:  GeneralAutonomy

ದೆಹಲಿಯಲ್ಲಿ ನಡೆಯುತ್ತಿರುವ ಎ.ಐ ಶೃಂಗದಲ್ಲಿ ನೊಯಿಡಾದ ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ಪ್ರತಿನಿಧಿಗಳು ಚೀನಾ ನಿರ್ಮಿತ ‘ರೋಬೊಶ್ವಾನ’ ಪ್ರದರ್ಶಿಸಿ ವಿವಾದ ಸೃಷ್ಟಿಯಾದ ಬೆನ್ನಲ್ಲೇ ಭಾರತದ ಸ್ಟಾರ್ಟ್‌ಅಪ್‌ ‘ಜನರಲ್‌ ಅಟಾನಮಿ’ ಸ್ವದೇಶಿ ನಿರ್ಮಿತ ರೋಬೊಟ್‌ ಪ್ರದರ್ಶಿಸಿದೆ. 

ADVERTISEMENT

ರೋಬೊಟ್‌ಗೆ ‘ಪರಮ್‌’ ಎಂದು ಹೆಸರಿಡಲಾಗಿದೆ. 

ಈ ಕುರಿತು ‘ಜನರಲ್‌ ಅಟಾನಮಿ’ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದು,  ‘ಅಸಂಬದ್ಧ ಸಾಕು. ಈಗ ಪರಮ್‌ ಅನ್ನು ಪ್ರಸ್ತುತಪಡಿಸಲಾಗುತ್ತಿದೆ. ಭಾರತದ ಅತ್ಯಂತ ಶಕ್ತಿಶಾಲಿ ಸ್ಥಳೀಯ ರೋಬೊ ನಾಯಿ. ಯಾವುದೇ ಭಾಗಗಳನ್ನು ಹೊರಗಿನಿಂದ ಖರೀದಿಸಿ ಜೋಡಿಸಲಾಗಿಲ್ಲ. ಎಲ್ಲವೂ ಭಾರತದಲ್ಲಿಯೇ, ಭಾರತೀಯರಿಂದಲೇ ನಿರ್ಮಿತವಾಗಿದೆ. ನಮ್ಮ ರಾಷ್ಟ್ರಕ್ಕಾಗಿ, ನಮ್ಮ ಪ್ರಪಂಚಕ್ಕಾಗಿ’ ಎಂದು ಬರೆದುಕೊಂಡಿದೆ. 

ಈ ಮೂಲಕ ಚೀನಾ ನಿರ್ಮಿತ ‘ಯುನಿಟ್ರೀ ಜಿಒ2’ ಹೆಸರಿನ ರೋಬೊವನ್ನು ತಾವೇ ಅಭಿವೃದ್ಧಿಪಡಿಸಿದ್ದು ಎಂದು ‘ಒರಾಯನ್’ ಹೆಸರಿನ ‘ರೋಬೊಶ್ವಾನ’ ಪ್ರದರ್ಶಿಸಿದ  ಗಲ್ಗೋಟಿಯಾಸ್ ವಿಶ್ವವಿದ್ಯಾಲಯಕ್ಕೆ ಟಾಂಗ್‌ ನೀಡಿದೆ.  

ಬೆಂಗಳೂರು ಮೂಲದ ಸ್ಟಾರ್ಟ್‌ಅಪ್

‘ಪರಮ್’ ರೋಬೊಶ್ವಾನ ನಿರ್ಮಿಸಿದ ಜನರಲ್‌ ಅಟಾನಮಿ ಕಂಪನಿ ಬೆಂಗಳೂರಿನ ಸ್ಟಾರ್ಟ್‌ಅಪ್‌ ಆಗಿದೆ.

ವರದಿಗಳ ಪ್ರಕಾರ, ಈ ರೋಬೊಶ್ವಾನ 35 ಕೆ.ಜಿ ತೂಕವಿದ್ದು, ಸುಮಾರು 20 ಕೆ.ಜಿಯಷ್ಟು ಭಾರವನ್ನು ಹೊರುವ ಸಾಮರ್ಥ್ಯ ಹೊಂದಿದೆ. ಇದರ ಚಲನೆಯ ವೇಗ ಸೆಕೆಂಡ್‌ಗೆ 3 ಮೀಟರ್‌ ಆಗಿದ್ದು, ಒಂದು ಮೀಟರ್‌ ಎತ್ತರಕ್ಕೆ ಹಾರಬಲ್ಲದು. ಇದು ಹಾಟ್-ಸ್ವಾಪಿಂಗ್ ಸಾಮರ್ಥ್ಯದೊಂದಿಗೆ ಎಂಟು ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ. 2026ರ ಎರಡನೇ ತ್ರೈಮಾಸಿಕದ ವೇಳೆಗೆ ವಾಣಿಜ್ಯ ಬಳಕೆ ಲಭ್ಯವಾಗುವ ನಿರೀಕ್ಷೆಯಿದೆ. ಕಂಪನಿಯು ಭಾರತದ ಮೊದಲ ವಾಕಿಂಗ್ ಹುಮನಾಯ್ಡ್ ರೋಬೊಟ್ ‘ಆಟಮ್-1’ ಸಹ ಅಭಿವೃದ್ಧಿಪಡಿಸಿದೆ.

ರೋಬೊಶ್ವಾನ ಎಂದರೆ

ನಾಲ್ಕು ಕಾಲುಗಳಿರುವ ರೋಬೊಗಳನ್ನು ‘ರೋಬೊಡಾಗ್’ ಅಥವಾ ‘ರೋಬೊಶ್ವಾನ’ ಎನ್ನಲಾಗುತ್ತದೆ. ಕಠಿಣ ರಸ್ತೆಗಳಲ್ಲಿ, ಅಡೆತಡೆಗಳಿದ್ದರೆ ಅವುಗಳ ಮೇಲೆ ಏರಲು ಮತ್ತು ವಸ್ತುಗಳನ್ನು ಸಾಗಿಸಲು ಇವುಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಈ ರೀತಿಯ ರೋಬೊಶ್ವಾನಗಳು ಪ್ರಪಂಚದಾದ್ಯಂತ ಕೈಗಾರಿಕೆಗಳ ಮೇಲ್ವಿಚಾರಣೆ, ವಿಕೋಪಗಳ ಸಂದರ್ಭದಲ್ಲಿ, ರಕ್ಷಣಾ ಕಾರ್ಯಾಚರಣೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿದೆ. 

ಭಾರತದ  xTerra ರೋಬೊಟಿಕ್ಸ್‌ನ ರೋಬೊಡಾಗ್‌ಗಳು ಪ್ರಾಯೋಗಿಕವಾಗಿ ಕೆಲಸದಲ್ಲಿ ತೊಡಗಿಕೊಂಡಿವೆ. ಈ ಕಂಪನಿ ಎಐ ಶೃಂಗದಲ್ಲಿ ಹೊಸದಾಗಿ Svan-2 ಎನ್ನುವ ರೋಬೊಡಾಗ್‌ ಪರಿಚಯಿಸಿದೆ. ಇದು ಭಾರತದ ಮೊದಲ ವಾಣಿಜ್ಯ ರೋಬೊ ಆಗಿದೆ.

ಆಮದು ಮಾಡಿಕೊಂಡ ಹಾರ್ಡ್‌ವೇರ್ ಅನ್ನು ಹೆಚ್ಚು ಅವಲಂಬಿಸಿರುವ ರೋಬೊಟ್‌ಗಳಿಗಿಂತ ಭಿನ್ನವಾಗಿ ರೋಬೊಟ್‌ಗಳ ವಿನ್ಯಾಸ, ಕಂಟ್ರೋಲ್‌ ಸಿಸ್ಟಮ್‌ಗಳನ್ನು ಅಭಿವೃದ್ಧಿಪಡಿಸಿ, ವಿದೇಶಿ ತಂತ್ರಜ್ಞಾನಗಳ ಅವಲಂಬನೆಯನ್ನು ಕಡಿಮೆ ಮಾಡುವತ್ತ ಭಾರತ ಗಮನಹರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.