ಡೊನಾಲ್ಡ್ ಟ್ರಂಪ್, ಟಿಮ್ ಕುಕ್
(ರಾಯಿಟರ್ಸ್ ಚಿತ್ರ)
ವಾಷಿಂಗ್ಟನ್: 'ಅಮೆರಿಕದಲ್ಲಿ ತಂತ್ರಜ್ಞಾನ ದೈತ್ಯ ಆ್ಯಪಲ್ ಕಂಪನಿಯು ಹೆಚ್ಚುವರಿಯಾಗಿ 100 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ಒಟ್ಟು ಹೂಡಿಕೆ 600 ಬಿಲಿಯನ್ ಡಾಲರ್‌ಗೆ ತಲುಪಲಿದೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
'ಅಮೆರಿಕದಲ್ಲಿ ಮಾಡಿರುವ ಅತಿದೊಡ್ಡ ಹೂಡಿಕೆ ಇದಾಗಿದೆ' ಎಂದು ಆ್ಯಪಲ್ ಸಂಸ್ಥೆಯ ಸಿಇಒ ಟಿಮ್ ಕುಕ್ ಬಣ್ಣಿಸಿದ್ದಾರೆ.
'ಆ್ಯಪಲ್ ತನ್ನ ದೇಶೀಯ ಪೂರೈಕೆ ಸರಪಳಿಯ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಿದೆ' ಎಂದು ಕೆಂಟುಕಿಯಲ್ಲಿ ಐಫೋನ್ ಸ್ಕ್ರೀನ್ ಗ್ಲಾಸ್ ಘಟಕವನ್ನು ಪ್ರದರ್ಶಿಸುತ್ತಾ ಟ್ರಂಪ್ ಹೇಳಿದ್ದಾರೆ.
'ಅಮೆರಿಕದಲ್ಲಿ ಮಾರಾಟವಾಗುವ ಐಫೋನ್‌ಗಳು ಅಮೆರಿಕದಲ್ಲಿ ತಯಾರಿಯಾಗಬೇಕು ಎಂಬುದನ್ನು ಖಚಿತಪಡಿಸುವುದರತ್ತ ಇದು ಮಹತ್ವದ ಹೆಜ್ಜೆಯಾಗಿದೆ' ಎಂದೂ ಅವರು ತಿಳಿಸಿದ್ದಾರೆ.
ಫೆಬ್ರುವರಿಯಲ್ಲಿ ಅಮೆರಿಕದಲ್ಲಿ 500 ಬಿಲಿಯನ್ ಡಾಲರ್ ಹೂಡಿಕೆ ಹಾಗೂ 20 ಸಾವಿರ ಉದ್ಯೋಗದ ಭರವಸೆಯನ್ನು ಆ್ಯಪಲ್ ನೀಡಿತ್ತು.
ಆ್ಯಪಲ್‌ಗಾಗಿ ಪ್ರಸಕ್ತ ಸಾಲಿನಿಂದಲೇ ಅಮೆರಿಕದ 12 ಸ್ಟೇಟ್‌ಗಳಲ್ಲಿ ಇರುವ 24 ಘಟಕಗಳಲ್ಲಿ 19 ಬಿಲಿಯನ್ ಚಿಪ್‌ಗಳನ್ನು ತಯಾರಿಸುವ ಹಾದಿಯಲ್ಲಿದ್ದೇವೆ ಎಂದು ಕುಕ್ ಮಾಹಿತಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಅಮೆರಿಕದ ಕೆಂಟುಕಿಯಲ್ಲಿ ನಿರ್ಮಿಸಿದ 24 ಕ್ಯಾರೆಟ್ ಚಿನ್ನದ ಸ್ಟ್ಯಾಂಡ್ ಹೊಂದಿರುವ ಆ್ಯಪಲ್ ಗ್ಲಾಸ್ ಅನ್ನು ಡೊನಾಲ್ಡ್ ಟ್ರಂಪ್ ಅವರಿಗೆ ಟಿಮ್ ಕುಕ್ ಉಡುಗೊರೆಯಾಗಿ ನೀಡಿದ್ದಾರೆ.
ವಿದೇಶಗಳಿಂದ ಆಮದು ಮಾಡಿಕೊಳ್ಳುವ ಸೆಮಿಕಂಡಕ್ಟರ್‌ಗಳ ಮೇಲೆ ಶೇ 100ರಷ್ಟು ತೆರಿಗೆ ವಿಧಿಸುವುದಾಗಿ ಟ್ರಂಪ್ ಪದೇ ಪದೇ ಎಚ್ಚರಿಕೆ ನೀಡಿದ್ದರು.
ಡೊನಾಲ್ಡ್ ಟ್ರಂಪ್‌ಗೆ 24 ಕ್ಯಾರೆಟ್ ಚಿನ್ನದ ಸ್ಟ್ಯಾಂಡ್ ಹೊಂದಿರುವ ಆ್ಯಪಲ್ ಗ್ಲಾಸ್ ಉಡುಗೊರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.