ಆ್ಯಪಲ್ ವಾಚ್‌ಗಳು
(Photo: Youtube/@Apple)
ಕ್ಯಾಲಿಫೋರ್ನಿಯಾ: ಆ್ಯಪಲ್ ಕಂಪನಿಯು ಪ್ರತಿ ವರ್ಷದಂತೆ ಈ ವರ್ಷವು ಬಹುನಿರೀಕ್ಷಿತ ಹೊಸ ಪೀಳಿಗೆಯ ಆ್ಯಪಲ್ ವಾಚ್ ಸೀರಿಸ್ 11, ಆ್ಯಪಲ್ ವಾಚ್ ಅಲ್ಟ್ರಾ 3, ಆ್ಯಪಲ್ ವಾಚ್ ಎಸ್ಇ 3 ಅನ್ನು ಪರಿಚಯಿಸಿದೆ.
ಮಂಗಳವಾರ ರಾತ್ರಿ ನಡೆದ ‘ಅವೇ ಡ್ರಾಪಿಂಗ್’ ವಾರ್ಷಿಕ ಕಾರ್ಯಕ್ರಮದಲ್ಲಿ ಐಫೋನ್ 17, ಐಫೋನ್ 17 ಏರ್, 17 ಪ್ರೊ, 17 ಪ್ರೊ ಮ್ಯಾಕ್ಸ್ ಮತ್ತು ಆ್ಯಪಲ್ ವಾಚ್ ಸೀರಿಸ್ 11 ಸೇರಿದಂತೆ ಇತರೆ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ.
ಆ್ಯಪಲ್ ವಾಚ್ ಸೀರಿಸ್ 11, 5ಜಿ ಸೆಲ್ಯುಲಾರ್ ಸಂಪರ್ಕದಂತಹ ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಮೊದಲ ವಾಚ್ ಆಗಿದೆ ಎಂದು ಕಂಪನಿ ತಿಳಿಸಿದೆ.
‘ಕಳೆದ 30 ದಿನಗಳಲ್ಲಿ ಸಂಗ್ರಹಿಸಿದ ಡೇಟಾವನ್ನು ಪರಿಶೀಲಿಸುವ ಮೂಲಕ ಅಧಿಕ ರಕ್ತದೊತ್ತಡ ಮತ್ತು ರಕ್ತದೊತ್ತಡ ಸೇರಿದಂತೆ ಗಂಭೀರ ಆರೋಗ್ಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಮೊದಲ ಆ್ಯಪಲ್ ವಾಚ್ ಇದಾಗಿದೆ’ ಎಂದು ಅಮೆರಿಕದ ನ್ಯೂಸ್ ಪೋರ್ಟಲ್ ‘ದಿ ವರ್ಜ್’ ವರದಿ ಮಾಡಿದೆ.
ಹೊಸ ಆ್ಯಪಲ್ ವಾಚ್ ಸೀರಿಸ್ 11ರ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ ಹೊಸ ಸ್ಲೀಪ್ ಸ್ಕೋರ್. ಈ ಹೊಸ ವೈಶಿಷ್ಟ್ಯಯು ನೀವು ಎಷ್ಟು ಸಮಯ ನಿದ್ರಿಸುತ್ತಿದ್ದೀರಿ ಮತ್ತು ನಿಮ್ಮ ನಿದ್ರೆಯ ಹಂತಗಳಂತಹ ಮೆಟ್ರಿಕ್‌ಗಳನ್ನು ಬಳಸಿಕೊಂಡು ರಾತ್ರಿಯಿಡೀ ನಿಮ್ಮ ವಿಶ್ರಾಂತಿಯ ಗುಣಮಟ್ಟವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಆ್ಯಪಲ್ ವಾಚ್ ಸೀರಿಸ್ 11ರಲ್ಲಿ 24 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಸಾಮರ್ಥ್ಯ ಇದೆ. ಜತೆಗೆ, ಐಯಾನ್-ಎಕ್ಸ್ ಗ್ಲಾಸ್ ಅನ್ನು ಹೊಂದಿದ್ದು, ಹಿಂದಿನ ಆ್ಯಪಲ್ ವಾಚ್‌ಗಳಿಗಿಂತ ಎರಡು ಪಟ್ಟು ಸ್ಕ್ರಾಚ್-ನಿರೋಧಕವಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.
ಆ್ಯಪಲ್ ವಾಚ್ ಅಲ್ಟ್ರಾ 3 ಸಾಮಾನ್ಯವಾಗಿ ಕ್ರೀಡಾಪಟುಗಳು ಮತ್ತು ಕ್ರೀಡಾ ಪ್ರಕಾರಗಳನ್ನು ಗುರಿಯಾಗಿರಿಸಿಕೊಳ್ಳುತ್ತವೆ. ಉತ್ತಮ ಬ್ಯಾಟರಿ ಬಾಳಿಕೆ, ಪ್ರಕಾಶಮಾನವಾದ ಡಿಸ್‌ಪ್ಲೇಗಳು ಮತ್ತು ವರ್ಕೌಟ್‌ಗಳನ್ನು ಟ್ರ್ಯಾಕ್ ಮಾಡಲು ಸುಧಾರಿತ ಜಿಪಿಎಸ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿವೆ. ಇದರ ಬೆಲೆ ₹69,513ರಷ್ಟಿದ್ದು, ಸೆಪ್ಟೆಂಬರ್ 19ರಿಂದ ಮಾರುಕಟ್ಟೆಯಲ್ಲಿ ದೊರೆಯಲಿವೆ.
ಈ ಮಾದರಿಯು ವೇಗವಾದ S10 ಪ್ರೊಸೆಸರ್, ದೀರ್ಘ ಬ್ಯಾಟರಿ ಬಾಳಿಕೆ, ಬಲವಾದ ಮುಂಭಾಗದ ಗಾಜು ಮತ್ತು ಯಾವಾಗಲೂ ಆನ್ ಆಗಿರುವ ಡಿಸ್‌ಪ್ಲೇಯನ್ನು ಹೊಂದಿದೆ.
ಡಬಲ್-ಟ್ಯಾಪ್ ಮತ್ತು ಮಣಿಕಟ್ಟಿನ-ಫ್ಲಿಕ್ ಗೆಸ್ಚರ್‌ಗಳು, ಸ್ಲೀಪ್ ಅಪ್ನಿಯಾ ಪತ್ತೆ, ಸ್ಲೀಪ್ ಸ್ಕೋರ್‌ಗಳು, ಸ್ಪೀಕರ್ ಮೂಲಕ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳನ್ನು ಪ್ಲೇ ಮಾಡುವ ಸಾಮರ್ಥ್ಯ, 2x ವೇಗದ ಚಾರ್ಜಿಂಗ್, 5G ಸೆಲ್ಯುಲಾರ್ ಮತ್ತು 18 ಗಂಟೆಗಳ ಬ್ಯಾಟರಿ ಬಾಳಿಕೆ ಬರುತ್ತದೆ ಎಂದು ‘ದಿ ವರ್ಜ್’ ವರದಿ ಮಾಡಿದೆ. ಇದರ ಬೆಲೆ ₹21,663ರಷ್ಟಿದ್ದು, ಸೆಪ್ಟೆಂಬರ್ 19ರಿಂದ ಮಾರುಕಟ್ಟೆಯಲ್ಲಿ ದೊರೆಯಲಿವೆ.
ಬೆಲೆ: ಆ್ಯಪಲ್ ವಾಚ್ ಸೀರೀಸ್ 11 ಬೆಲೆ ₹34,713ರಷ್ಟಿದ್ದರೆ, ದೊಡ್ಡದಾದ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳುಳ್ಳ ಆ್ಯಪಲ್ ವಾಚ್ ಅಲ್ಟ್ರಾ (ಬೆಲೆ ₹89,900ರಿಂದ ಆರಂಭ) ಹಾಗೂ ಕಡಿಮೆ ಬಜೆಟ್‌ನಲ್ಲಿ ಒಂದಿಷ್ಟು ವೈಶಿಷ್ಟ್ಯಗಳಿಲ್ಲದೆ ಲಭ್ಯವಾಗುವ ಆ್ಯಪಲ್ ವಾಚ್ ಎಸ್ಇ 3 (ಬೆಲೆ ₹25,900ರಿಂದ ಆರಂಭ) ಲಭ್ಯವಿದೆ. ಸೆಪ್ಟೆಂಬರ್ 19ರಿಂದ ಮಾರಾಟ ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.