
ಚಾಟ್‌ಜಿಪಿಟಿ
ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬಾಟ್ ಚಾಟ್‌ಜಿಪಿಟಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆಗೆ ಸಂಬಂಧಿಸಿದ ಪ್ರಶ್ನೆಗಳ ಬಗ್ಗೆ ಸಂಭಾಷಣೆ ನಡೆಸಿದ್ದಾರೆ ಎಂದು ಓಪನ್‌ಎಐ ಬಹಿರಂಗಪಡಿಸಿದೆ.
ಸೋಮವಾರ ಬ್ಲಾಗ್‌ನಲ್ಲಿ ಈ ಮಾಹಿತಿ ಹಂಚಿಕೊಳ್ಳುವ ಮೂಲಕ ಶೇ 0.15ರಷ್ಟು ಬಳಕೆದಾರು ಆತ್ಮಹತ್ಯೆಯ ಬಗೆಗಿನ ಮಾಹಿತಿಯ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಕಂಪನಿ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಪ್ರತಿ ವಾರ 80 ಕೋಟಿ ಜನರು ಚಾಟ್‌ಜಿಪಿಟಿಯನ್ನು ಬಳಸುತ್ತಾರೆ. ಸುಮಾರು 12 ಲಕ್ಷ ಜನ ಆತ್ಮಹತ್ಯೆಯ ಬಗ್ಗೆ ಸಂಭಾಷಣೆ ನಡೆಸುತ್ತಾರೆ. ಸರಿಸುಮಾರು 0.07 ಪ್ರತಿಶತದಷ್ಟು ಸಕ್ರಿಯ ಬಳಕೆದಾರರು ಸಂಭಾವ್ಯ ಮಾನಸಿಕ ಆರೋಗ್ಯದ ತುರ್ತು ಸ್ಥಿತಿ ಬಗ್ಗೆ, ಹುಚ್ಚುತನದ ಬಗ್ಗೆ ವಿವರಣೆ ಕೇಳುತ್ತಾರೆ ಎಂದು ಕಂಪನಿ ಹೇಳಿದೆ.
ಕ್ಯಾಲಿಫೋರ್ನಿಯಾದ ಹದಿಹರೆಯದ ಬಾಲಕ ಆಡಮ್ ರಾನೆ ಆತ್ಮಹತ್ಯೆ ಮಾಡಿಕೊಂಡ ಬಳಿಕ, ಆತನ ಪೋಷಕರು ಚಾಟ್‌ಜಿಪಿಟಿ ನೀಡಿದ ಸಲಹೆಯಿಂದಲೇ ಆತ ಆತ್ಮಹತ್ಯೆ ಮಾಡಿಕೊಂಡ ಎಂದು ದೂರು ದಾಖಲಿಸಿದ್ದರು. ಆ ಬಳಿಕ ಕಂಪನಿ ಬಳಕೆದಾರರ ಹುಡುಕಾಟದ ಬಗ್ಗೆ ಕಣ್ಣಿಟ್ಟಿದ್ದು, ಮಾನಸಿಕ ಸಮಸ್ಯೆ, ಆತ್ಮಹತ್ಯೆ ಬಗೆಗೆ ಹುಡುಕಾಟ ನಡೆಸುವವರ ಅಂಕಿ ಅಂಶಗಳನ್ನು ಕಲೆ ಹಾಕಿದೆ.