ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಭಾರತೀಯ ಮೊಬೈಲ್ ಕಾಂಗ್ರೆಸ್–2024ರಲ್ಲಿ ರಿಲಯನ್ಸ್ ಜಿಯೊದಿಂದ ಎರಡು ಹೊಸ 4ಜಿ ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಜಿಯೊ ಭಾರತ್ V3 ಮತ್ತು V4 ಸರಣಿ ಅಡಿಯಲ್ಲಿ ಹೊಸ 4ಜಿ ಫೋನ್‌ಗಳನ್ನು ಪರಿಚಯಿಸಲಾಗಿದೆ.
ಹೊಸ ಫೋನ್‌ಗಳ ಬೆಲೆ ₹1,099ರಷ್ಟಿದೆ. ಜಿಯೊ ಭಾರತ್ V2 ಮಾದರಿಯನ್ನು ಕಳೆದ ವರ್ಷ ಬಿಡುಗಡೆ ಮಾಡಲಾಗಿತ್ತು. ಇದು ಭಾರತೀಯ ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದು, ಲಕ್ಷಾಂತರ 2ಜಿ ಗ್ರಾಹಕರು ಜಿಯೊ ಭಾರತ್ ಫೀಚರ್ ಫೋನ್‌ಗಳ ಮೂಲಕ 4ಜಿಗೆ ಬದಲಾಗಿದ್ದಾರೆ ಎಂದು ಕಂಪನಿ ಹೇಳಿಕೊಂಡಿದೆ.
ಇದೀಗ ಬಿಡುಗಡೆ ಮಾಡಿರುವ ಹೊಸ 4ಜಿ ಫೀಚರ್ ಫೋನ್‌ಗಳು ಆಧುನಿಕ ವಿನ್ಯಾಸ, 1000 mAh ಬ್ಯಾಟರಿ, 128 GB ಸ್ಟೋರೇಜ್ ಸಾಮರ್ಥ್ಯ ಹಾಗೂ 23 ಭಾರತೀಯ ಭಾಷೆಗಳ ಬೆಂಬಲದೊಂದಿಗೆ ಬರುತ್ತವೆ. ಈ ಫೋನ್‌ಗಳನ್ನು ಕೇವಲ ₹123ರಂತೆ ಮಾಸಿಕ ರೀಚಾರ್ಜ್ ಮಾಡಬಹುದಾಗಿದೆ. ಇದರಲ್ಲಿ ಅನಿಯಮಿತ ಧ್ವನಿ ಕರೆಗಳು ಮತ್ತು 14 GB ಡೇಟಾ ಸಹ ಲಭ್ಯವಿರುತ್ತದೆ.
ಜಿಯೊ ಭಾರತ್ V3 ಮತ್ತು V4 ಎರಡೂ ಮಾದರಿಗಳು ಜಿಯೊ-ಟಿವಿ, ಜಿಯೊ- ಸಿನಿಮಾ, ಜಿಯೊ- ಪೇ ಮತ್ತು ಜಿಯೊ-ಚಾಟ್ ನಂತಹ ಕೆಲವು ಉತ್ತಮವಾದ ಪ್ರೀ- ಲೋಡ್ ಮಾಡಿದ ಅಪ್ಲಿಕೇಷನ್‌ಗಳೊಂದಿಗೆ ಬರುತ್ತವೆ. 455 ಲೈವ್ ಟಿವಿ ಚಾನೆಲ್‌ಗಳ ಜೊತೆಗೆ ಚಲನಚಿತ್ರಗಳು, ವಿಡಿಯೊಗಳು ಮತ್ತು ಕ್ರೀಡಾ ಕಂಟೆಂಟ್‌ಗಳು ಸಹ ಗ್ರಾಹಕರಿಗೆ ಒಂದು ಕ್ಲಿಕ್‌ನಲ್ಲಿ ಲಭ್ಯವಿರುತ್ತವೆ. ಮತ್ತೊಂದೆಡೆ, ಜಿಯೊ- ಪೇ ತಡೆರಹಿತ ಪಾವತಿಗಳನ್ನು ನೀಡುತ್ತದೆ. ಜಿಯೊ-ಚಾಟ್ ಅನಿಯಮಿತ ಧ್ವನಿ ಸಂದೇಶ, ಫೋಟೊ ಹಂಚಿಕೆ ಮತ್ತು ಗ್ರೂಪ್ ಚಾಟ್ ಆಯ್ಕೆಗಳನ್ನು ನೀಡುತ್ತದೆ ಎಂದು ಕಂಪನಿ ಮಾಹಿತಿ ನೀಡಿದೆ.
ಜಿಯೊ ಭಾರತ್ V3 ಮತ್ತು V4 ಎರಡೂ ಮಾದರಿಗಳು ಶೀಘ್ರದಲ್ಲೇ ಎಲ್ಲ ಮೊಬೈಲ್ ಸ್ಟೋರ್‌ಗಳಲ್ಲಿ ಹಾಗೂ ಜಿಯೊ ಮಾರ್ಟ್ ಮತ್ತು ಅಮೆಜಾನ್‌ನಲ್ಲಿ ಲಭ್ಯವಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.