ಇಲಾನ್ ಮಸ್ಕ್, ನರೇಂದ್ರ ಮೋದಿ
(ರಾಯಿಟರ್ಸ್ ಸಂಗ್ರಹ ಚಿತ್ರ)
ವಾಷಿಂಗ್ಟನ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದ ವೇಳೆ ಉದ್ಯಮ ದಿಗ್ಗಜ ಇಲಾನ್ ಮಸ್ಕ್ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಉಪಗ್ರಹ ಆಧಾರಿತ ಅಂತರ್ಜಾಲ ಸೇವೆ ಒದಗಿಸುತ್ತಿರುವ ಇಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಸೇವೆಯನ್ನು ಭಾರತದಲ್ಲೂ ಆರಂಭಿಸುವ ಕುರಿತು ಪ್ರಧಾನಿ ಮೋದಿ ಮಾತುಕತೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.
ದಕ್ಷಿಣ ಏಷ್ಯಾ ಮಾರುಕಟ್ಟೆಗೆ ಸ್ಟಾರ್‌ಲಿಂಕ್‌ನ ಪ್ರವೇಶದ ಕುರಿತು ಸಾಧಕ-ಬಾಧಕ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಬಹಳ ಹಿಂದಿನಿಂದಲೇ ಸ್ಟಾರ್‌ಲಿಂಕ್ ಸೇವೆಯನ್ನು ಭಾರತದಲ್ಲೂ ಆರಂಭಿಸಲು ಇಲಾನ್ ಮಸ್ಕ್ ಉತ್ಸುಕತೆ ತೋರಿದ್ದರು. ಭಾರತದ ಭದ್ರತಾ ಕಳವಳವನ್ನು ದೂರ ಮಾಡುವುದಾಗಿಯೂ ಹೇಳಿದ್ದರು.
ಕೆಲವು ತಿಂಗಳುಗಳ ಹಿಂದೆ ಸಂಘರ್ಷ ಪೀಡಿತ ಮಣಿಪುರದಲ್ಲಿ ಸ್ಟಾರ್‌ಲಿಂಕ್ ಡಿವೈಸ್ ಪತ್ತೆಯಾಗಿದೆ ಎಂಬ ಆರೋಪಗಳು ಕೇಳಿ ಬಂದಿತ್ತು. ಇದಕ್ಕೆ ಸ್ಪಷ್ಟೀಕರಣ ನೀಡಿದ್ದ ಮಸ್ಕ್, ಭಾರತದಲ್ಲಿ ಸ್ಟಾರ್‌ಲಿಂಕ್ ಇಂಟರ್‌ನೆಟ್ ಸೇವೆ ಸಕ್ರಿಯವಾಗಿಲ್ಲ ಎಂದು ಹೇಳಿದ್ದರು.
ಈ ಹಿಂದೆ ಭಾರತಕ್ಕೆ ಆಮದು ಮಾಡುವ ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ ಎಂದೂ ಟೆಸ್ಲಾ ಮಾಲೀಕರಾಗಿರುವ ಮಸ್ಕ್ ಟೀಕೆ ಮಾಡಿದ್ದರು. ಭಾರತದಲ್ಲಿ ಉತ್ಪಾದನಾ ನೆಲೆ ಸ್ಥಾಪಿಸುವ ಕುರಿತು ಚರ್ಚೆಗಳು ಪ್ರಗತಿಯಲ್ಲಿವೆ ಎಂದು ಹೇಳಲಾಗಿದೆ.
ಎರಡು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿರುವ ಮೋದಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಮಾಕುತೆ ನಡೆಸಲಿದ್ದಾರೆ. ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಬಾಂಧವ್ಯ ಬಲಪಡಿಸುವುದರ ಜೊತೆಗೆ ವಾಣಿಜ್ಯ ವೃದ್ಧಿ ಹಾಗೂ ಸುಂಕ ರಿಯಾಯಿತಿ ಕುರಿತು ಮಾತುಕತೆ ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.