ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 30ರಂದು ನಿಸಾರ್ ಉಪಗ್ರಹ ಹೊತ್ತು ನಭಗಕ್ಕೆ ಚಿಮ್ಮಿದ ಜಿಎಸ್‌ಎಲ್‌ವಿ–ಎಫ್16 ರಾಕೆಟ್
ಪಿಟಿಐ ಚಿತ್ರ
ಚೆನ್ನೈ: ಇಸ್ರೊ ಮತ್ತು ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಭೂಮಿ ಸಮೀಕ್ಷೆಯ ಸಿಂಥೆಟಿಕ್ ಅಪರ್ಚರ್ ರೇಡಾರ್ (ನಿಸಾರ್) ಉಪಗ್ರಹ ಕಕ್ಷೆಗೆ ಯಶಸ್ವಿಯಾಗಿ ಸೇರಿದ್ದು, ಇದೀಗ ತನ್ನ ಕಾರ್ಯಾರಂಭಕ್ಕೂ ಮೊದಲು 90 ದಿನಗಳ ನಿರ್ಣಾಯಕ ಹಂತವನ್ನು ತಲುಪಿದೆ.
ಪರಿಪೂರ್ಣವಾಗಿ ಭೂ ವೀಕ್ಷಣೆಗೆ ಅನುಕೂಲವಾಗುವಂತೆ ಉಪಗ್ರಹದ ಸಂಪೂರ್ಣ ಪರೀಕ್ಷೆ, ಕ್ಯಾಲಿಬ್ರೇಷನ್ ಹಾಗೂ ಕಕ್ಷೆಯ ಹೊಂದಾಣಿಕೆಯಲ್ಲಿ ತಂತ್ರಜ್ಞರು ನಿರತರಾಗಿದ್ದಾರೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಇಸ್ರೊ ಉಡ್ಡಯನ ಕೇಂದ್ರದಿಂದ ಜುಲೈ 30ರಂದು ಸಂಜೆ 5.40ಕ್ಕೆ ನಿಸಾರ್ ಉಪಗ್ರಹ ಹೊತ್ತ ಜಿಎಸ್‌ಎಲ್‌ವಿ–ಎಫ್16 ರಾಕೆಟ್ ನಭಕ್ಕೆ ಚಿಮ್ಮಿತು. ನೌಕೆಯು ಈ ಉಪಗ್ರಹವನ್ನು 737 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಸ್ಥಾಪಿಸಿದೆ.
‘ಈಗಿರುವ ಕಕ್ಷೆಯಿಂದ ಉಪಗ್ರಹವನ್ನು 747 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಸ್ಥಾಪಿಸಬೇಕಿದೆ. ಇದಕ್ಕೆ 45ರಿಂದ 50 ದಿನಗಳಾಗುತ್ತವೆ. ಒಮ್ಮೆ ಇದನ್ನು ಸ್ಥಾಪಿಸಿದ ನಂತರ ಭೂಮಿ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಲು ಇದು ಆರಂಭಿಸುತ್ತದೆ. ಭೂಮಿ ಮೇಲ್ಮೈನ ಎಲ್ಲಾ ದಾಖಲೆಗಳನ್ನು ಎಲ್ಲಾ ಸಂದರ್ಭಗಳಲ್ಲೂ ಇದು ದಾಖಲಿಸಲಿದೆ’ ಎಂದು ನಾಸಾದ ನೈಸರ್ಗಿಕ ವಿಕೋಪ ಸಂಶೋಧನಾ ವಿಭಾಗದ ಕಾರ್ಯಕ್ರಮ ವ್ಯವಸ್ಥಾಪಕ ಗೆರಾಲ್ಡ್ ಡಬ್ಲ್ಯೂ ಬಾವ್ಡೆನ್ ತಿಳಿಸಿದ್ದಾರೆ.
‘ಪ್ರತಿ 5X5 ಮೀಟರ್ ಅಳತೆಯ ಮಾಹಿತಿಯನ್ನು ಪ್ರತಿ 12 ದಿನಗಳ ಅವಧಿಯಲ್ಲಿ ಸಂಗ್ರಹಿಸಿ ಕಳುಹಿಸುತ್ತದೆ. ಇದು ಬಹಳಾ ದೊಡ್ಡ ಪ್ರಮಾಣದ ಮಾಹಿತಿಯಾಗಿರಲಿದೆ. ಇದರ ಮಾಹಿತಿಯನ್ನು ಇಸ್ರೊದೊಂದಿಗೆ ನಾಸಾ ವಿಶ್ಲೇಷಿಸಲಿದೆ. ಈ ಯೋಜನೆ ಮೂಲಕ ಭೂಮಿಯ ವಿರುದ್ಧ ದಿಕ್ಕಿನಲ್ಲಿರುವ ಎರಡು ರಾಷ್ಟ್ರಗಳು ಒಂದುಗೂಡಿ ಅಧ್ಯಯನ ನಡೆಸುತ್ತಿವೆ. ಎರಡೂ ದೇಶಗಳ ನಡುವೆ 12.5 ಗಂಟೆಗಳ ವ್ಯತ್ಯಾಸವಿದೆ. ಸಾಂಸ್ಕೃತಿಕವಾಗಿಯೂ ಎರಡೂ ದೇಶಗಳ ನಡುವೆ ಸಾಕಷ್ಟು ವಿಭಿನ್ನತೆ ಇದೆ. ಆದರೆ ತಂತ್ರಜ್ಞಾನದಲ್ಲಿ ಇಬ್ಬರಿಗೂ ಸಮಾನ ಆಸಕ್ತಿ ಇದೆ’ ಎಂದು ಬಾವ್ಡೆನ್ ಹೇಳಿದರು.
ನಾಸಾದ ಭೂವಿಜ್ಞಾನ ವಿಭಾಗದ ಸಂಗಮಿತ್ರ ಬಿ. ದತ್ತಾ ಪ್ರತಿಕ್ರಿಯಿಸಿ, ‘ಎರಡು ರಾಷ್ಟ್ರಗಳು ಜಂಟಿಯಾಗಿ ನಡೆಸುತ್ತಿರುವ ಭೂಮಿ ಸಮೀಕ್ಷೆಯ ಅತಿ ದೊಡ್ಡ ಯೋಜನೆ ಇದಾಗಿದೆ. ಇದರೊಂದಿಗೆ ಇತ್ತೀಚೆಗೆ ಯಶಸ್ವಿಯಾಗಿ ಪೂರ್ಣಗೊಂಡ ಮಾನವ ಸಹಿತ ಬಾಹ್ಯಾಕಾಶ ಯಾನ ಸೇರಿದಂತೆ ಕಳೆದ ಐದು ವರ್ಷಗಳಲ್ಲಿ ಎರಡೂ ರಾಷ್ಟ್ರಗಳು ಜಂಟಿಯಾಗಿ ಹಲವು ಯೋಜನೆಗಳನ್ನು ಕೈಗೊಂಡಿವೆ’ ಎಂದಿದ್ದಾರೆ.
‘ಅವಳಿ ತರಂಗಾಂತರಗಳನ್ನು ಹೊಂದಿರುವ ರಾಡಾರ್ ಯೋಜನೆಗಳು ಈ ಹಿಂದೆ ಆಗಿವೆ. ಆದರೆ ಏಕಕಾಲಕ್ಕೆ ಎರಡು ವಿಭಿನ್ನ ತರಂಗಾಂತರಗಳ ರಾಡಾರ್‌ಗಳು ಹಾರಾಡುತ್ತಾ ಮಾಹಿತಿ ಸಂಗ್ರಹಿಸುತ್ತಿರುವುದು ಇದೇ ಮೊದಲು. ಇದರಲ್ಲಿ ಎಲ್–ಬ್ಯಾಂಡ್ ಅನ್ನು ನಾಸಾ ಒದಗಿಸಿದ್ದರೆ, ಎಸ್–ಬ್ಯಾಂಡ್ ಅನ್ನು ಇಸ್ರೊ ಒದಗಿಸಿದೆ. ಎಸ್–ಬ್ಯಾಂಡ್ ಅನ್ನು ಸಿಂಥೆಟಿಕ್ ಅಪರ್ಚರ್ ರೇಡಾರ್‌ನಲ್ಲಿ ಅಳವಡಿಸಲಾಗುತ್ತದೆ. ಇದರಿಂದ ಭೂಮಿಗೆ ಸಂಬಂಧಿಸಿದಂತೆ ವ್ಯಾಪಕ ದತ್ತಾಂಶ ಸಂಗ್ರಹ ಸಾಧ್ಯವಾಗಲಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.