ರಣವೀರ್ ಸಚ್‌ದೇವ್
ನವದೆಹಲಿ: ‘ಇಡೀ ಜಗತ್ತಿಗೇ ಮಾದರಿಯಾಗಿರುವ ಭಾರತೀಯ ತತ್ವವನ್ನು ತಂತ್ರಜ್ಞಾನದೊಂದಿಗೆ ಬೆಸೆಯುವುದೇ ನನ್ನ ಗುರಿ’ ಎಂದು ಆತ್ಮವಿಶ್ವಾಸದಿಂದ ಹೇಳುವ 8ರ ಪೋರನ ಮಾತು ಸದ್ಯ ಸುದ್ದಿಯಲ್ಲಿದೆ.
ದೆಹಲಿಯ ಭಾರತ ಮಂಟಪದಲ್ಲಿ ಆಯೋಜನೆಗೊಂಡಿರುವ ಜಾಗತಿಕ ಎಐ ಇಂಪ್ಯಾಕ್ಟ್ ಶೃಂಗದಲ್ಲಿ ಭಾಷಣಕಾರನಾಗಿ ಪಾಲ್ಗೊಂಡಿರುವ ರಣವೀರ್ ಸಚ್‌ದೇವ್, ಇಡೀ ಜಗತ್ತಿನ ಗಮನ ಸೆಳೆದಿದ್ದಾನೆ. ಪ್ರಖರ ಮಾತು, ತುಂಬು ಆತ್ಮವಿಶ್ವಾಸ, ಭಾಷೆ ಮೇಲಿನ ಹಿಡಿತ, ತಂತ್ರಜ್ಞಾನದ ಆಳವಾದ ಮಾಹಿತಿಗೆ ನೆಟ್ಟಿಗರು ಮೆಚ್ಚುಗೆಯ ಮಳೆ ಸುರಿಸುತ್ತಿದ್ದಾರೆ.
‘ಈ ಸಮ್ಮೇಳನದಲ್ಲಿ ನಾನು ಅತಿ ಕಿರಿಯ ಮುಖ್ಯ ಭಾಷಣಕಾರ. ತಂತ್ರಜ್ಞ ಮತ್ತು ಜಾಗತಿಕ ಮಟ್ಟದ ಲೇಖಕ’ ಎಂದು ತನ್ನನ್ನು ಪರಿಚಯಿಸಿದ ರೀತಿಗೆ ನೆಟ್ಟಿಗರು ಹುಬ್ಬೇರಿಸಿದ್ದಾರೆ.
‘ಪ್ರಾಚೀನ ಭಾರತದ ತತ್ವಗಳು ಆಧುನಿಕ ಯುಗದ ತಂತ್ರಜ್ಞಾನದೊಂದಿಗೆ ಹೇಗೆ ಬೆಸೆಯುವುದು ಎಂಬುದರ ಕುರಿತು ನಾನು ಮಾತನಾಡುತ್ತಿದ್ದೇನೆ. ಜಗತ್ತಿನ ಇತರ ರಾಷ್ಟ್ರಗಳು ಕೃತಕ ಬುದ್ಧಿಮತ್ತೆಯ ಸಾಧನಗಳನ್ನು ಹೇಗೆ ಅಭಿವೃದ್ಧಿಪಡಿಸುತ್ತಿವೆ ಮತ್ತು ಭಾರತವು ತನ್ನದೇ ಹಾದಿಯಲ್ಲಿ ಸಾಧಿಸುತ್ತಿರುವ ಪರಿಯನ್ನು ವಿವರಿಸಲಿದ್ದೇನೆ’ ಎಂದು ರಣವೀರ್ ಹೇಳಿದ್ದಾನೆ.
‘ಇತ್ತೀಚೆಗೆ ಭಾರತದ ಕಂಪನಿಯೊಂದು ಬಿಡುಗಡೆ ಮಾಡಿದ ಎಐ ಸಾಧನ ಕುರಿತ ನನ್ನ ಅಧ್ಯಯನವನ್ನು ಮಂಡಿಸಲಿದ್ದೇನೆ. ಇದರ ಜತೆಯಲ್ಲಿ ಭಾರತದ ಬೆಳವಣಿಗೆಗೆ (ಜಿಡಿಪಿ) ನನ್ನ ಕೊಡುಗೆ ಏನು ಮತ್ತು ಎಐ ಸಾಕ್ಷರತೆ ಸಾಧಿಸುವುದು ಹೇಗೆ’ ಎಂಬುದರ ಕುರಿತೂ ಮಾತನಾಡಲಿದ್ದೇನೆ’ ಎಂದಾಗ ರಣವೀರ್ ಆತ್ಮವಿಶ್ವಾಸಕ್ಕೆ ಹಲವರು ಮಾರು ಹೋಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.