ADVERTISEMENT

ಭಾರತದಲ್ಲಿ ಆ್ಯಪಲ್‌ ಮೊದಲ ರಿಟೇಲ್‌ ಮಳಿಗೆ ತೆರೆಯಲು ಟ್ರಂಪ್‌ ಸಹಕಾರ: ಟಿಮ್‌ ಕುಕ್

ಏಜೆನ್ಸೀಸ್
Published 3 ಮಾರ್ಚ್ 2020, 7:28 IST
Last Updated 3 ಮಾರ್ಚ್ 2020, 7:28 IST
ಆ್ಯಪಲ್‌ ಸಿಇಒ ಟಿಮ್‌ ಕುಕ್‌
ಆ್ಯಪಲ್‌ ಸಿಇಒ ಟಿಮ್‌ ಕುಕ್‌    
""

ನವದೆಹಲಿ:ಜಗತ್ತಿನ ಎರಡನೇ ಅತಿ ದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆ ಹೊಂದಿರುವ ಭಾರತದಲ್ಲಿ ಆ್ಯಪಲ್‌ ರಿಟೇಲ್‌ ಮಳಿಗೆ ಆರಂಭಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಮುಖ ಪಾತ್ರ ವಹಿಸಿದ್ದಾರೆ. ಅಮೆರಿಕ ಆಡಳಿತ ಆ್ಯಪಲ್‌ ಕಂಪನಿಯ ಪರವಾಗಿ ಸ್ಪಂದಿಸಿರುವುದನ್ನು ಸಿಇಒ ಟಿಮ್‌ ಕುಕ್‌ ಬಹಿರಂಗ ಪಡಿಸಿದ್ದಾರೆ.

ಭಾರತದಲ್ಲಿ ಆ್ಯಪಲ್‌, 2021ರಲ್ಲಿ ಅಧಿಕೃತ ರಿಟೇಲ್‌ ಮಳಿಗೆ ಆರಂಭಿಸಲಿದೆ ಹಾಗೂ ಇದೇ ವರ್ಷ ಆನ್‌ಲೈನ್‌ ಸ್ಟೋರ್‌ ಶುರು ಮಾಡಲಿದೆ ಎಂದು ಟಿಮ್‌ ಕುಕ್‌ ಕಳೆದ ವಾರ ಪ್ರಕಟಿಸಿದ್ದರು. ಡೊನಾಲ್ಡ್‌ ಟ್ರಂಪ್‌ ಫೆಬ್ರುವರಿ 24–25ರ ಭಾರತ ಭೇಟಿ ಸಂದರ್ಭದಲ್ಲಿ 'ಭಾರತ ಭೇಟಿಯ ಬಳಿಕ ಬಹುಶಃ ಅವರು ಜನಸ್ತೋಮದ ಬಗ್ಗೆ ಮತ್ತೆಂದೂ ಚಕಿತಗೊಳ್ಳಲಾರರು' ಎಂದಿದ್ದರು.

'ಭಾರತ ನಮಗೆ ದೊಡ್ಡದೊಂದು ಅವಕಾಶವಾಗಿ ಕಾಣುತ್ತಿದೆ. ಈವರೆಗೂ ನಾವು ಅಲ್ಲಿಗೆ ನೇರವಾಗಿ ಪ್ರವೇಶಿಸಲು ಸಾಧ್ಯವಾಗಿಲ್ಲ. ಸಹಯೋಗದಿಂದ ರಿಟೇಲ್‌ ಮಾರುಕಟ್ಟೆ ಹೊಂದಿದ್ದೇವೆ. ನಮ್ಮ ಬ್ರ್ಯಾಂಡ್‌ ಮೇಲೆ ನಾವು ನಿಯಂತ್ರಣ ಹೊಂದಲು ಬಯಸುತ್ತೇವೆ. ಟ್ರಂಪ್‌ ಸರ್ಕಾರ ಈ ಬಗ್ಗೆ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, ಬದಲಾವಣೆ ಸಾಧ್ಯವಾಗಲಿದೆ. ಹಾಗಾಗಿಯೇ ಆನ್‌ಲೈನ್‌ ಮತ್ತು ರಿಟೇಲ್‌ ಸ್ಟೋರ್‌ ಪ್ರಾರಂಭಿಸುವ ಪೂರ್ಣ ಭರವಸೆ ಹೊಂದಿದ್ದೇವೆ' ಎಂದು ಫಾಕ್ಸ್‌ ಬಿಸಿನೆಸ್‌ಗೆ ನೀಡಿದ ಸಂದರ್ಶನದಲ್ಲಿ ಟಿಮ್‌ ಕುಕ್‌ ಹೇಳಿದ್ದಾರೆ.

ADVERTISEMENT

ಆ್ಯಪಲ್‌ ಪಾರ್ಕ್‌ನಲ್ಲಿ ಕಳೆದ ವಾರ ನಡೆದ ಷೇರುದಾರರ ಸಭೆಯಲ್ಲಿ ಕುಕ್‌, ಮುಂದಿನ ವರ್ಷ ಭಾರತದಲ್ಲಿ ಕಂಪನಿ ರಿಟೇಲ್‌ ಮಳಿಗೆ ಪ್ರಾರಂಭಿಸಲಿದೆ ಎಂದು ಖಚಿತ ಪಡಿಸಿದ್ದಾರೆ.

ಭಾರತದಲ್ಲಿ ಇತರೆ ರಿಟೇಲರ್‌ಗಳ ಮೂಲಕ ಹಾಗೂ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ಇ–ಕಾಮರ್ಸ್‌ ವೇದಿಕೆಗಳಿಂದ ಆ್ಯಪಲ್‌ ತನ್ನ ಉಪಕರಣಗಳ ಮಾರಾಟ ನಡೆಸುತ್ತಿದೆ. ಈಗಾಗಲೇ ಕಂಪನಿ ರಿಟೇಲ್‌ ಮಳಿಗೆಗಾಗಿ ಮುಂಬೈನಲ್ಲಿ ಸ್ಥಳವೊಂದನ್ನು ಬಾಡಿಗೆಗೆ ಪಡೆದಿರುವುದಾಗಿಯೂ ವರದಿಯಾಗಿದೆ.

ಸಿಂಗಲ್‌–ಬ್ರ್ಯಾಂಡ್‌ ರಿಟೇಲ್‌ಗೆ (ಎಸ್‌ಬಿಆರ್‌ಟಿ) ಸಂಬಂಧಿಸಿದ ನಿಯಮಾವಳಿಗಳನ್ನು ಸರಾಗಗೊಳಿಸುವ ಭಾರತದ ಸರ್ಕಾರದ ನಿರ್ಧಾರವನ್ನು ಕಳೆದ ವರ್ಷ ಆ್ಯಪಲ್‌ ಸ್ವಾಗತಿಸಿತ್ತು. 'ಪ್ರಧಾನಿ ನರೇಂದ್ರ ಮತ್ತು ಅವರ ತಂಡದ ಬೆಂಬಲ ಮತ್ತು ಕಠಿಣ ಶ್ರಮವನ್ನು ಪ್ರಶಂಸಿಸುತ್ತೇವೆ. ಮುಂದೊಂದು ದಿನ ಭಾರತದ ಮೊದಲ ಆ್ಯಪಲ್‌ ರಿಟೇಲ್‌ ಸ್ಟೋರ್‌ಗೆ ಗ್ರಾಹಕರನ್ನು ಆಹ್ವಾನಿಸಲು ಬಯಸುತ್ತೇವೆ' ಎಂದು ಕಂಪನಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.