ADVERTISEMENT

ಗೋ ಸರೌಂಡ್ 950 ಸೌಂಡ್‌ಬಾರ್: ಮನೆಯನ್ನೇ ಥಿಯೇಟರ್ ಆಗಿಸುವ ಸ್ಪೀಕರ್ ಸಿಸ್ಟಂ

ಅವಿನಾಶ್ ಬಿ.
Published 22 ಜೂನ್ 2023, 10:40 IST
Last Updated 22 ಜೂನ್ 2023, 10:40 IST
GOVO ಗೋ ಸರೌಂಡ್ 950 ಸೌಂಡ್‌ಬಾರ್
GOVO ಗೋ ಸರೌಂಡ್ 950 ಸೌಂಡ್‌ಬಾರ್   

ಡಿಜಿಟಲ್ ಕಾಲಮಾನದ ಪ್ರಮುಖ ಅಗತ್ಯಗಳಲ್ಲಿ ಸ್ಮಾರ್ಟ್‌ಫೋನ್, ಸ್ಮಾರ್ಟ್‌ವಾಚ್, ಟ್ಯಾಬ್ಲೆಟ್, ಸ್ಮಾರ್ಟ್ ಟಿವಿ ಬಳಿಕ, ಅತ್ಯುತ್ತಮ ಧ್ವನಿಯೊಂದಿಗೆ ಮನೆಯನ್ನೇ ಥಿಯೇಟರ್‌ನಂತೆ ಪರಿವರ್ತಿಸಬಲ್ಲ ಧ್ವನಿವರ್ಧಕ (ಸ್ಮಾರ್ಟ್ ಸ್ಪೀಕರ್) ಈಗಿನ ಆಕರ್ಷಣೆ. ಸಮಯವಿದ್ದಾಗಲೆಲ್ಲ ಮನೆಯಲ್ಲಿ ಟಿವಿ ಹಚ್ಚಿ, ಅದಕ್ಕೆ ಸೌಂಡ್ ಬಾರ್ ಅಥವಾ ಹೋಂ ಥಿಯೇಟರ್ ಸ್ಪೀಕರ್ ಸಿಸ್ಟಂ ಅಳವಡಿಸಿ, ದೃಶ್ಯದೊಂದಿಗೆ ಧ್ವನಿಯನ್ನೂ ಆನಂದಿಸಲು ಸಾಕಷ್ಟು ಸೌಂಡ್ ಬಾರ್‌ಗಳು ಮಾರುಕಟ್ಟೆಯಲ್ಲಿವೆ. ಈಗಿನ ಸ್ಮಾರ್ಟ್ ಟಿವಿಯಲ್ಲೇ ಸ್ಟೀರಿಯೊ ಸೌಂಡ್ ಎಫೆಕ್ಟ್, ಥಿಯೇಟರ್ ಎಫೆಕ್ಟ್ ಇದ್ದರೂ ಹೆಚ್ಚಿನ ಧ್ವನಿಗಾಗಿ ಈ ವಿಶಿಷ್ಟ ಸ್ಪೀಕರ್‌ಗಳ ಬಳಕೆ ಹೆಚ್ಚುತ್ತಿದೆ. ಧ್ವನಿ ತಂತ್ರಜ್ಞಾನದಿಂದಲೇ ಪ್ರಸಿದ್ಧವಾಗಿರುವ ಫಿಲಿಪ್ಸ್, ಎಲ್‌ಜಿ, ಸೋನಿ ಮುಂತಾದ ಕಂಪನಿಗಳಿಗೆ ಸೆಡ್ಡು ಹೊಡೆಯಲು ಬೆಂಗಳೂರು ಮೂಲದ ಗೋವೋ (GOVO) ಎಂಬ ನವೋದ್ಯಮವು "ಗೋವೊ ಗೋ-ಸರೌಂಡ್ 950" ಹೆಸರಿನ, 260 ವ್ಯಾಟ್ ಗರಿಷ್ಠ ಧ್ವನಿಯ ಸ್ಪೀಕರ್ ವ್ಯವಸ್ಥೆಯನ್ನು ಈ ತಿಂಗಳಾರಂಭದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಎರಡು ವಾರಗಳ ಕಾಲ ಬಳಕೆಯ ಸಂದರ್ಭದಲ್ಲಿ ಈ ಸೌಂಡ್‌ಬಾರ್ ಹೇಗಿದೆ? ಮಾಹಿತಿ ಇಲ್ಲಿದೆ.

ವಿನ್ಯಾಸ

ಕಪ್ಪು ಬಣ್ಣದ, ಸ್ಲೀಕ್ ಆಗಿರುವ ಆಕರ್ಷಕ ನೋಟದ ಸೌಂಡ್‌ಬಾರ್, ಒಂದು 5.1 ಚಾನೆಲ್ ಶಕ್ತಿಶಾಲಿ ಸಬ್ ವೂಫರ್ ಹಾಗೂ ಎರಡು ಸೆಟಲೈಟ್ ಸ್ಪೀಕರ್ ಜೊತೆಗಿದೆ. ಇವೆಲ್ಲವೂ L ಆಕಾರದ ಪ್ಯಾಕೇಜಿಂಗ್‌ನಲ್ಲಿ ಬರುತ್ತವೆ. ಸೌಂಡ್ ಬಾರ್ ಮತ್ತು ಸೆಟಲೈಟ್ ಸ್ಪೀಕರ್‌ಗಳನ್ನು ಮೊಳೆಯ ಮೂಲಕ ಗೋಡೆಗೆ ಸುಲಭವಾಗಿ ತಗುಲಿಹಾಕಬಹುದು. ಬಾಕ್ಸ್‌ನಲ್ಲಿ ವಾಲ್ ಮೌಂಟ್ ಕಿಟ್ ಒದಗಿಸಲಾಗಿದೆ. ಸೌಂಡ್‌ಬಾರ್‌ನ ಆಕರ್ಷಣೆಯೆಂದರೆ, ಪ್ರೀಮಿಯಂ ವಿನ್ಯಾಸ ಮತ್ತು ಗಾಜಿನಂತೆ ಹೊಳೆಯುವ ಮೇಲ್ಮೈ. ಜೊತೆಗೆ, ಆನ್ ಮಾಡುವಾಗ ಅದರ ಎರಡೂ ಬದಿಗಳಲ್ಲಿ ಹಸಿರುಬಣ್ಣದ ಎಲ್ಇಡಿ ದೀಪ. ಗೋಡೆಯ ಮೇಲಂತೂ, ವಿಶೇಷವಾಗಿ ರಾತ್ರಿ ವೇಳೆ ಇದು ಆಕರ್ಷಕವಾಗಿ ಕಾಣಿಸುತ್ತದೆ. ನಿದ್ರಿಸುವ ಸಮಯವಾದರೆ, ಮೆಲು ದನಿಯಲ್ಲಿ ಸಂಗೀತ ಕೇಳುತ್ತಾ, ಎಲ್ಇಡಿ ಹಸಿರು ಬೆಳಕನ್ನು ಆಫ್ ಕೂಡ ಮಾಡುವ ಆಯ್ಕೆಯಿದೆ.

ADVERTISEMENT

ಕಾರ್ಯಾಚರಣೆ

5.1 ಚಾನೆಲ್ ಮೂಲಕ ಥಿಯೇಟರ್ ಒಳಗಿನ ಅನುಭೂತಿಯಲ್ಲಿ ಟಿವಿ ನೋಡುತ್ತಾ ಮ್ಯೂಸಿಕ್ ಆಲಿಸಬಹುದು. ಇಷ್ಟೇ ಅಲ್ಲದೆ, ಎಯುಎಕ್ಸ್, ಹೆಚ್‌ಡಿಎಂಐ, ಯುಎಸ್‌ಬಿ ಹಾಗೂ ಆಪ್ಟಿಕಲ್ ಪೋರ್ಟ್‌ಗಳಿದ್ದು, ಬ್ಲೂಟೂತ್ ಮೂಲಕವೂ ಸಂಪರ್ಕಿಸಿ ನಮ್ಮ ಫೋನ್‌ನಲ್ಲಿರುವ ಹಾಡುಗಳನ್ನು ಆಲಿಸಬಹುದು. ಅತ್ಯುತ್ತಮ ಬೇಸ್ (Bass), ಟ್ರೆಬಲ್ (Treble) ಮತ್ತು ಸ್ಪಷ್ಟ ಧ್ವನಿಯ ಮೂಲಕ ಈ ಸೌಂಡ್ ಬಾರ್ ಮೂಲಕ 3D (ಮೂರು ಆಯಾಮದಲ್ಲಿ) ಸಂಗೀತ ಕೇಳಿಬರುತ್ತದೆ. ಸ್ಟೀರಿಯೊ ಎಫೆಕ್ಟ್ ಚೆನ್ನಾಗಿದೆ.

ಟಿವಿಗೆ ಈ ಸೌಂಡ್ ಬಾರ್ ಅನ್ನು ಸಂಪರ್ಕಿಸುವುದು ತೀರಾ ಸುಲಭ. ಸೌಂಡ್ ಬಾರ್‌ನಲ್ಲೇ ಎಲ್ಲ ನಿಯಂತ್ರಣಗಳೂ ಇವೆ. ಪಕ್ಕದಲ್ಲಿರುವ ಎಲ್ಇಡಿ ಬೆಳಕಿನ ಸುತ್ತ ಒಂದು ನಿಯಂತ್ರಣ ಪ್ಯಾನೆಲ್ ಇದೆ. ಇದರಲ್ಲಿ ಪವರ್ ಬಟನ್, ಎಲ್ಇಡಿ ದೀಪ ಆನ್-ಆಫ್ ಬಟನ್, ವಾಲ್ಯೂಮ್ ಹೆಚ್ಚು ಮತ್ತು ಕಡಿಮೆ ಮಾಡುವ ಹಾಗೂ ಪ್ಲೇ-ಪಾಸ್ ಮತ್ತು ಬ್ಲೂಟೂತ್ ಸಂಪರ್ಕಿಸುವ ಬಟನ್‌ಗಳಿವೆ. ಸೆಟಲೈಟ್ ಸ್ಪೀಕರ್‌ಗಳಿಗೆ 20 ಅಡಿ ಉದ್ದದ ಕೇಬಲ್ ನೀಡಲಾಗಿದ್ದು, ಸೂಕ್ತವಾದ ದೂರದಲ್ಲಿರಿಸಿ ಆಡಿಯೊ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಬಹುದಾಗಿದೆ. ಇದರಲ್ಲಿರುವ ಎಲ್ಇಡಿ ಪ್ಯಾನೆಲ್‌ನಲ್ಲಿ ವಾಲ್ಯೂಮ್ ಎಷ್ಟು ಮಟ್ಟದಲ್ಲಿದೆ ಎಂಬುದು ಡಿಜಿಟಲ್ ರೂಪದಲ್ಲಿ ಕಾಣುತ್ತದೆ.

ಆಕರ್ಷಕ ರಿಮೋಟ್ ಒದಗಿಸಲಾಗಿದ್ದು, ಅದರಲ್ಲಿ ಮೂವೀ, ನ್ಯೂಸ್, ಮ್ಯೂಸಿಕ್, 3ಡಿ ಹಾಗೂ ನಮಗೆ ಬೇಕಾದಂತೆ ಬೇಸ್-ಟ್ರೆಬಲ್ ಬದಲಾಯಿಸಲು ಅನುಕೂಲ ಮಾಡುವ ಕಸ್ಟಮ್ - ಹೀಗೆ 5 ಈಕ್ವಲೈಝರ್ ಮೋಡ್‌ಗಳಿವೆ. ಹೀಗಾಗಿ ನಮ್ಮಿಷ್ಟದ ಮೋಡ್‌ನಲ್ಲಿ ಸಂಗೀತವನ್ನು ಆಲಿಸಬಹುದು. ಟಿವಿಗೆ ಹಾಗೂ ಮೊಬೈಲ್ ಫೋನ್‌ಗೆ ಈ ಸೌಂಡ್ ಬಾರ್ ಸಂಯೋಜಿಸುವುದು ತೀರಾ ಸುಲಭ. ಯಾವುದೇ ತಾಂತ್ರಿಕ ಜ್ಞಾನದ ಅಗತ್ಯವಿರುವುದಿಲ್ಲ. ಜೊತೆಯಲ್ಲಿ ನೀಡಿರುವ ಮಾರ್ಗದರ್ಶಿ ಪುಸ್ತಿಕೆಯನ್ನು ಓದಿ ನಾವೇ ಈ ಧ್ವನಿವರ್ಧಕವನ್ನು ಯಾವುದೇ ಸಂಗೀತದ ಔಟ್‌ಪುಟ್ ಸಾಧನಕ್ಕೆ ಜೋಡಿಸಬಹುದಾಗಿದೆ.

ಒಟ್ಟಿನಲ್ಲಿ, ಯಾವುದೇ ರೀತಿಯ ಸಂಗೀತವಿರಲಿ, ಸ್ಪಷ್ಟವಾದ ಮತ್ತು ಆಳವಾದ ಬೇಸ್ ಧ್ವನಿ ಇದರ ಪ್ಲಸ್ ಪಾಯಿಂಟ್. ನೋಡಲು ಸ್ಲೀಕ್ ಆಗಿದೆ, ಕಪ್ಪು ಬಣ್ಣದಿಂದ ಹೊಳೆಯುವ ಮತ್ತು ಎಲ್ಇಡಿ ಡಿಸ್‌ಪ್ಲೇ ಆಕರ್ಷಕವಾಗಿದೆ. ಬಿಲ್ಡ್ ಗುಣಮಟ್ಟ ಉತ್ತಮವಾಗಿದ್ದು, ಸೆಟ್ ಅಪ್ ಮಾಡುವುದು ಕೂಡ ಸುಲಭ.

ಸಾರಾಂಶ

ಗೋವೊ ಗೋ-ಸರೌಂಡ್ 950 ಸೌಂಡ್‌ಬಾರ್ ಪ್ರಮುಖ ವೈಶಿಷ್ಟ್ಯಗಳು

  • ಸಾಮರ್ಥ್ಯ: 260 W ಗರಿಷ್ಠ ಔಟ್‌ಪುಟ್

  • ಡಿಸ್‌ಪ್ಲೇ: ಹೊಳೆಯುವ ಗಾಜಿನಂತಿರುವ ಪ್ರೀಮಿಯಂ ಫಿನಿಶ್ ಜೊತೆ LED

  • ಚಾನೆಲ್: 5.1, 6.5″ ಸಬ್‌ವೂಫರ್

  • ಬ್ಲೂಟೂತ್: V5.3, 30 ಅಡಿ ವ್ಯಾಪ್ತಿ

  • ಸಂಪರ್ಕ: HDMI, AUX, USB ಮತ್ತು ಆಪ್ಟಿಕಲ್

  • ರಿಮೋಟ್: ಪುಟ್ಟ, ಆಕರ್ಷಕ ರಿಮೋಟ್, 5 ಈಕ್ವಲೈಜರ್ ಮೋಡ್‌ಗಳು

  • ಕಂಟ್ರೋಲ್‌ಗಳು: ಸೌಂಡ್‌ಬಾರ್‌ನ ಪಾರ್ಶ್ವದಲ್ಲಿ ಬಟನ್‌ಗಳು

  • 1 ವರ್ಷ ವಾರಂಟಿ

ಗೋವೊ ಗೋ-ಸರೌಂಡ್ 950 ಸೌಂಡ್‌ಬಾರ್ ಬೆಲೆ ₹24,999 ಆದರೂ, ಆರಂಭಿಕ ಕೊಡುಗೆಯಾಗಿ ಇದನ್ನು ಸೀಮಿತ ಅವಧಿಗೆ ₹9,999 ಗೆ ಪಡೆಯಬಹುದಾಗಿದ್ದು, ಒಂದು ವರ್ಷದ ವಾರಂಟಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.