ಲಾವಾ ಬ್ಲೇಝ್ ಡ್ರ್ಯಾಗನ್
ಚೀನಾ ಮೂಲದ ಸ್ಮಾರ್ಟ್‌ಫೋನ್‌ಗಳ ಧಾವಂತದಲ್ಲಿಯೂ ತನ್ನತನವನ್ನು ಉಳಿಸಿಕೊಂಡಿರುವ ಭಾರತೀಯ ಬ್ರ್ಯಾಂಡ್ ಲಾವಾ. ಬಜೆಟ್ ಫೋನ್‌ಗಳಿಗೆ ಹೆಸರಾಗಿರುವ ಲಾವಾ, ಇತ್ತೀಚೆಗೆ ಲಾವಾ ಬ್ಲೇಝ್ ಡ್ರ್ಯಾಗನ್ (Lava Blaze Dragon) ಎಂಬ ದೊಡ್ಡ ಪರದೆಯ, ಶಕ್ತಿಶಾಲಿಯಾದ ಮತ್ತು ವಿನೂತನ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದೆ. ಎರಡು ವಾರಗಳ ಕಾಲ ಅದನ್ನು ಬಳಸಿ ನೋಡಿದಾಗ ಕಂಡುಬಂದ ಅನುಭವಗಳು ಇಲ್ಲಿವೆ.
ವಿನ್ಯಾಸ
₹10 ಸಾವಿರ ವ್ಯಾಪ್ತಿಯೊಳಗೆ ದೊಡ್ಡ ಗಾತ್ರದ ಈ ಫೋನ್ ಪ್ರೀಮಿಯಂ ನೋಟ ಹೊಂದಿದೆ. 6.74 ಇಂಚಿನ ಹೆಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇ ಸ್ಕ್ರೀನ್ ಸಹಿತ ಆಕರ್ಷಕ ವಿನ್ಯಾಸವಿದ್ದು, ನೋಡಿದ ತಕ್ಷಣ ಗಮನ ಸೆಳೆಯುವಂತಿದೆ. 120Hz ರಿಫ್ರೆಶ್ ರೇಟ್ ಇರುವುದರಿಂದ, ಜಾಲಾಡುವಿಕೆ ಸುಲಲಿತವಾಗಿದೆ. ಹಿಂಭಾಗದಲ್ಲಿ ಎರಡು ದೊಡ್ಡ ಕ್ಯಾಮೆರಾ ಲೆನ್ಸ್‌ಗಳಿರುವ ಈ ಫೋನ್ ದೊಡ್ಡದಿದ್ದರೂ 195 ಗ್ರಾಂ ಮಾತ್ರ ತೂಗುತ್ತದೆ. ಒಂದು ಭಾಗದಲ್ಲಿ ಪವರ್ ಬಟನ್ ಇದ್ದು, ಇದುವೇ ಸ್ಕ್ರೀನ್ ಅನ್‌ಲಾಕ್ ಮಾಡಲು ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಗಿ ಕೆಲಸ ನಿರ್ವಹಿಸುತ್ತದೆ. ಮತ್ತೊಂದು ಭಾಗದಲ್ಲಿ ಎರಡು ಸಿಮ್ ಅಳವಡಿಸಲು ಮತ್ತು ಮೈಕ್ರೋಎಸ್‌ಡಿ ಕಾರ್ಡ್ ಅಳವಡಿಸಲು ಟ್ರೇ ಇದೆ.
ಕ್ಯಾಮೆರಾ
50 ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರಧಾನ ಕ್ಯಾಮೆರಾದಲ್ಲಿ ಎಐ (ಕೃತಕ ಬುದ್ಧಿಮತ್ತೆ) ಮಿಳಿತವಾಗಿದೆ. ಇದರಲ್ಲಿ ಪ್ರೋ ಮೋಡ್, ನೈಟ್ ಮೋಡ್, ಪೋರ್ಟ್ರೇಟ್, ಸ್ಲೋ-ಮೋಶನ್ ಮುಂತಾದ ಮೋಡ್‌ಗಳಿವೆ. ವಾಟರ್‌ಮಾರ್ಕ್ ಅಳವಡಿಸಲು ಪ್ರತ್ಯೇಕ ಬಟನ್ ಇದೆ. ಹಲವು ವಾಟರ್‌ಮಾರ್ಕ್‍ಗಳ ಪೂರ್ವನಿಗದಿತ ವಿನ್ಯಾಸಗಳಿವೆ. ಅಂತೆಯೇ ಕೆಲವೊಂದು ಸ್ಟಿಕರ್‌ಗಳನ್ನೂ ಫೋಟೊ ತೆಗೆಯುವಾಗಲೇ ಅಳವಡಿಸಿಕೊಳ್ಳಬಹುದಾಗಿದೆ. ಕೃತಕ ಬುದ್ಧಿಮತ್ತೆಯ ಮೂಲಕ ಚಿತ್ರವನ್ನು ಆಕರ್ಷಕಗೊಳಿಸಲು ಅವಕಾಶ ಇದೆ. ಚಿತ್ರ, ವಿಡಿಯೊಗಳು ವಿಶೇಷವಾಗಿ ಹಗಲು ಬೆಳಕಿನಲ್ಲಿ ಅತ್ಯುತ್ತಮ ಗುಣಮಟ್ಟದಲ್ಲಿ ಸೆರೆಯಾಗುತ್ತವೆ. ಮೊಬೈಲ್ ಫೋಟೊಗ್ರಫಿಯಲ್ಲಿ ಆಸಕ್ತಿ ಇರುವವರು ಬಜೆಟ್ ಬೆಲೆಯ ಈ ಫೋನ್ ಮೂಲಕ ಸಾಕಷ್ಟು ಪ್ರಯೋಗಗಳನ್ನು ಮಾಡಬಹುದಾಗಿದೆ.
ಕಾರ್ಯಾಚರಣೆ
ಸ್ನ್ಯಾಪ್‌ಡ್ರ್ಯಾಗನ್ 4, 2ನೇ ಪೀಳಿಗೆಯ ಪ್ರೊಸೆಸರ್ ಇರುವುದು ಹಲವು ಕಾರ್ಯಗಳನ್ನು ಏಕಕಾಲಕ್ಕೆ ಕೈಗೊಳ್ಳಲು (ಮಲ್ಟಿಟಾಸ್ಕಿಂಗ್) ಅನುಕೂಲ ಕಲ್ಪಿಸಿದೆ. ಫೋನ್‌ನ ಕಾರ್ಯಕ್ಷಮತೆ, ವೇಗಕ್ಕೆ ಪೂರಕವಾಗಿ 4GB RAM ಹಾಗೂ ಅಗತ್ಯವಿದ್ದರೆ ಇನ್ನೂ 4GB (ವರ್ಚುವಲ್ RAM) ಹೆಚ್ಚಿಸಿಕೊಳ್ಳುವ ಅವಕಾಶ ನೀಡಲಾಗಿದೆ. 128GB ಫೈಲ್ ಸಂಗ್ರಹಣಾ ಸಾಮರ್ಥ್ಯ ಇದರಲ್ಲಿದ್ದು, ಗೇಮಿಂಗ್‌ಗೆ ಕೂಡ ಅನುಕೂಲಕರವಾಗಿದೆ. ಅಸ್ಫಾಲ್ಟ್, ಫ್ರೀಫೈರ್ ಮುಂತಾದ ಹೆಚ್ಚು ಗ್ರಾಫಿಕ್ಸ್ ಇರುವ ಗೇಮ್‌ಗಳನ್ನು ಆಡುವಾಗ ಯಾವುದೇ ವಿಳಂಬ (ಲ್ಯಾಗಿಂಗ್) ಕಾಣಿಸಿಕೊಂಡಿಲ್ಲ. 5ಜಿಗೆ ಸಂಬಂಧಿಸಿದಂತೆ ಭಾರತದ ಎಲ್ಲ ರೀತಿಯ ತರಂಗಾಂತರಗಳನ್ನೂ ಇದು ಬೆಂಬಲಿಸುತ್ತಿದೆ.
ವಿಶೇಷವಾಗಿ ಉಲ್ಲೇಖಿಸಬೇಕಾದುದೆಂದರೆ, ಇದರಲ್ಲಿರುವ ಆಂಡ್ರಾಯ್ಡ್ 15 ಕ್ಲೀನ್ ಕಾರ್ಯಾಚರಣಾ ವ್ಯವಸ್ಥೆ. ಯಾವುದೇ ಬ್ಲಾಟ್‌ವೇರ್‌ಗಳು ಎಂದರೆ, ಮೊದಲೇ ಅಳವಡಿಸಿರುವ ಮತ್ತು ಅನ್‌ಇನ್‌ಸ್ಟಾಲ್ ಮಾಡಲಾಗದ ಅನಗತ್ಯ ಆ್ಯಪ್‌ಗಳು ಇದರಲ್ಲಿಲ್ಲ. ಸ್ವಯಂಚಾಲಿತ ಕರೆ ರೆಕಾರ್ಡಿಂಗ್ ಆಯ್ಕೆ, ಫಿಂಗರ್‌ಪ್ರಿಂಟ್-ಫೇಸ್ ಅನ್‌ಲಾಕ್ ವೈಶಿಷ್ಟ್ಯಗಳು ಚೆನ್ನಾಗಿ ಕೆಲಸ ಮಾಡುತ್ತವೆ.
ಸ್ಟೀರಿಯೋ ಸ್ಪೀಕರ್‌ಗಳು ಉತ್ತಮ ಬಹುಮಾಧ್ಯಮದ ಅನುಭವ ನೀಡುತ್ತದೆ. 3.5ಮಿಮೀ ಜ್ಯಾಕ್ ಮೂಲಕ ಇಯರ್‌ಫೋನ್ ಅಳವಡಿಸಬಹುದು. ಯುಎಸ್‌ಬಿ ಟೈಪ್ ಸಿ ಪೋರ್ಟ್ ಮೂಲಕ ಬ್ಯಾಟರಿ ಚಾರ್ಜಿಂಗ್ ಹಾಗೂ ಫೈಲ್ ವರ್ಗಾವಣೆ ಮಾಡಬಹುದಾಗಿದೆ.
ಬ್ಯಾಟರಿ
5000mAh ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದ್ದು, 18W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಚಾರ್ಜರನ್ನು ಜೊತೆಗೇ ನೀಡಲಾಗಿರುವುದರಿಂದ ಪ್ರತ್ಯೇಕವಾಗಿ ಖರೀದಿಸುವ ಅಗತ್ಯವಿಲ್ಲ. ಸಾಮಾನ್ಯ ಬಳಕೆಯಲ್ಲಿ ಎರಡು ದಿನಗಳ ಮಟ್ಟಿಗೆ ಬ್ಯಾಟರಿ ಬಾಳಿಕೆ ಬರುತ್ತದೆ. ಆಂಡ್ರಾಯ್ಡ್ 15 ಹಾಗೂ ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್‌ಗಳು ಬ್ಯಾಟರಿ ಉಳಿತಾಯಕ್ಕೆ ನೆರವಾಗುವುದರಿಂದ ಇದು ಸಾಧ್ಯವಾಗಿದೆ.
₹9,999ಕ್ಕೆ ಲಭ್ಯವಾಗುವ ಲಾವಾ ಬ್ಲೇಝ್ ಡ್ರ್ಯಾಗನ್ ಬಜೆಟ್ ದರದಲ್ಲಿ ಉತ್ತಮ ಗೇಮಿಂಗ್ ಅನುಭವ, ಉತ್ತಮ ಬ್ಯಾಟರಿ, ಸ್ಟಾಕ್ (ಕ್ಲೀನ್) ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯುಳ್ಳ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಫೋನ್ ಮತ್ತು ಭಾರತೀಯ ಉತ್ಪನ್ನವೇ ಬೇಕು ಎನ್ನುವವರಿಗೆ ಉತ್ತಮ ಆಯ್ಕೆ ಇದು.
ಲಾವಾ ಬ್ಲೇಝ್ ಡ್ರ್ಯಾಗನ್ - ಪ್ರಮುಖ ವೈಶಿಷ್ಟ್ಯಗಳು
ಪ್ರೊಸೆಸರ್: ಸ್ನ್ಯಾಪ್‌ಡ್ರ್ಯಾಗನ್ 4 Gen 2
RAM/ಮೆಮೊರಿ: 4GB+4GB ವರ್ಚುವಲ್ RAM, 128GB ಸ್ಟೋರೇಜ್
ಡಿಸ್‌ಪ್ಲೇ: 6.74 ಇಂಚು HD+ LCD, 120Hz ರಿಫ್ರೆಶ್ ರೇಟ್
ಕ್ಯಾಮೆರಾ: 50MP AI ಕ್ಯಾಮೆರಾ + 8MP ಸೆಲ್ಫಿ ಕ್ಯಾಮೆರಾ
ಬ್ಯಾಟರಿ: 5000mAh, 18W ವೇಗದ ಚಾರ್ಜಿಂಗ್
ಕಾರ್ಯಾಚರಣಾ ವ್ಯವಸ್ಥೆ: ಆಂಡ್ರಾಯ್ಡ್ 15, ಕ್ಲೀನ್ UI
ಬೆಲೆ: ₹9,999
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.