ADVERTISEMENT

ಸ್ಟಾರ್‌ಬಾಯ್ 6 ಹೆಡ್‌ಫೋನ್: ವಿಶಿಷ್ಟ ವಿನ್ಯಾಸದ ಮೈಕ್ ಪೀಸ್, ಉತ್ತಮ ಧ್ವನಿ

ಅವಿನಾಶ್ ಬಿ.
Published 3 ಮಾರ್ಚ್ 2025, 7:16 IST
Last Updated 3 ಮಾರ್ಚ್ 2025, 7:16 IST
<div class="paragraphs"><p>"ನು ರಿಪಬ್ಲಿಕ್" ಸ್ಟಾರ್‌ಬಾಯ್ 6 ಇಯರ್‌ಫೋನ್</p></div>

"ನು ರಿಪಬ್ಲಿಕ್" ಸ್ಟಾರ್‌ಬಾಯ್ 6 ಇಯರ್‌ಫೋನ್

   

ಸ್ಟೈಲಿಶ್ ಹೆಡ್‌ಫೋನ್ ಹಾಗೂ ಇಯರ್‌ಫೋನ್‌ಗಳ ಮೂಲಕ ಗಮನ ಸೆಳೆದಿರುವ ನು-ರಿಪಬ್ಲಿಕ್, ಇತ್ತೀಚೆಗೆ ಸ್ಟಾರ್‌ಬಾಯ್ 6 ವೈರ್‌ಲೆಸ್ ಹೆಡ್‌ಫೋನ್ ಬಿಡುಗಡೆ ಮಾಡಿದೆ. ಉತ್ತಮ ಧ್ವನಿ ಹೊರಹೊಮ್ಮಿಸುವ ಮೂಲಕ ಗೇಮಿಂಗ್ ಪ್ರಿಯರಿಗೂ, ಸಂಗೀತ ಪ್ರಿಯರಿಗೂ ಅನುಕೂಲಕರವಾಗಿರುವ ಈ ಫೋನ್ ಹೇಗಿದೆ? ಇಲ್ಲಿದೆ ಮಾಹಿತಿ.

ವಿನ್ಯಾಸ

ಸ್ಟಾರ್‌ಬಾಯ್ 6 ವೈರ್‌ಲೆಸ್ ಹೆಡ್‌ಫೋನ್ ವಿನ್ಯಾಸ ಆಕರ್ಷಕವಾಗಿದ್ದು, ಇದರಲ್ಲಿ ಬೇಕಾದಾಗ ಹೊರಗೆಳೆದು, ಮಾತು ಮುಗಿದ ಬಳಿಕ ಒಳಗೆ ಮಡಚಬಲ್ಲ ಮೈಕ್ ಪೀಸ್ ಮತ್ತು ಎಲ್ಇಡಿ ದೀಪದ ವಿನ್ಯಾಸ ಇರುವುದು ತಕ್ಷಣ ಗಮನ ಸೆಳೆದ ಸಂಗತಿ. ಕಿವಿಯಲ್ಲಿ ಸರಿಯಾಗಿ ಕೂರುವಂತಹಾ ಇಯರ್ ಕಪ್‌ಗಳಿದ್ದು, ಉತ್ತಮ ಫಿನಿಶ್ ಹೊಂದಿದೆ. ಎರಡೂ ಇಯರ್-ಕಪ್‌ಗಳಲ್ಲಿ ಧ್ವನಿ ಹೊರಹೊಮ್ಮುವಾಗ ನಸುನೀಲಿ ಬಣ್ಣದ ಎಲ್‌ಇಡಿ ಬೆಳಕು ಕಾಣಿಸುತ್ತದೆ. ಇದು ರಾತ್ರಿ ವೇಳೆ ಆಕರ್ಷಕವಾಗಿ ಕಾಣಿಸುತ್ತದೆ.

ADVERTISEMENT

ಹೆಡ್‌ಫೋನ್ ಹಗುರವಾಗಿದ್ದು, ಮೂಲಭೂತ ಕೆಲಸಗಳ ನಿಯಂತ್ರಣಕ್ಕಾಗಿ ಎಡಭಾಗದಲ್ಲಿ ಬಟನ್‌ಗಳಿವೆ. ಆನ್/ಆಫ್, ವಾಲ್ಯೂಮ್ ಹೆಚ್ಚು ಮತ್ತು ಕಡಿಮೆ ಮಾಡುವ ಬಟನ್‌ಗಳು ಹಲವು ಕೆಲಸಗಳನ್ನು ಮಾಡಬಲ್ಲವು. ಫೋನ್ ಕರೆಯಲ್ಲಿ ಅಥವಾ ಯಾವುದೇ ವಿಡಿಯೊ ಮೀಟಿಂಗ್ ಸಂದರ್ಭಗಳಲ್ಲಿ, ಅತ್ತಕಡೆಯವರಿಗೆ ಸ್ಪಷ್ಟವಾಗಿ ಮಾತು ಕೇಳಿಸಲೆಂದು, ಎಡ ಇಯರ್‌ಕಪ್‌ನಲ್ಲಿರುವ ಮೈಕ್ರೋಫೋನ್ (ಫ್ಲಿಪ್ ಮೈಕ್) ಅನ್ನು ಹೊರಗೆಳೆದು, ಬಾಯಿಯ ಸಮೀಪದಲ್ಲಿ ಇರಿಸುವಂತೆ ಮಾಡಬಹುದು. ಈ ವಿಶಿಷ್ಟ ವಿನ್ಯಾಸವು ನು-ರಿಪಬ್ಲಿಕ್ ವಿಶೇಷ ಆಕರ್ಷಣೆ.

ಧ್ವನಿ ಗುಣಮಟ್ಟ

ಎಕ್ಸ್-ಬೇಸ್ ತಂತ್ರಜ್ಞಾನದ ಮೂಲಕವಾಗಿ ಯಾವುದೇ ಹಾಡಿನ ಅಥವಾ ಸಿನಿಮಾದಲ್ಲಿನ 3ಡಿ ಎಫೆಕ್ಟ್ ಇರುವ ನಾದವನ್ನು ಹೆಚ್ಚು ಬೇಸ್ ಧ್ವನಿಯ ಮೂಲಕ ಆನಂದಿಸಬಹುದು. ಮ್ಯೂಸಿಕ್ ಮತ್ತು ಗೇಮಿಂಗ್‌ಗಾಗಿ ಪ್ರತ್ಯೇಕವಾದ ಮೋಡ್‌ಗಳಿವೆ. ಸುತ್ತಮುತ್ತಲಿನ ಧ್ವನಿಯು ಕಿವಿಗೆ ಕೇಳಿಸದಂತೆ ಇಯರ್‌ಕಪ್‌ಗಳನ್ನು ವಿನ್ಯಾಸಗೊಳಿಸಲಾಗಿದ್ದು, ಹಾಡುಗಳನ್ನು ಬಹುತೇಕ ನಿಶ್ಶಬ್ದದೊಂದಿಗೆ ಆಲಿಸಬಹುದು.

ಬ್ಯಾಟರಿ ಮತ್ತು ಸಂಪರ್ಕ

ಒಮ್ಮೆ ಚಾರ್ಜ್ ಮಾಡಿದರೆ (ಶೂನ್ಯದಿಂದ ಪೂರ್ತಿ ಚಾರ್ಜ್ ಆಗಲು ಸುಮಾರು ಒಂದುವರೆ ಗಂಟೆ ಬೇಕಾಗುತ್ತದೆ) ನಿರಂತರವಾಗಿ ಸುಮಾರು 30 ಗಂಟೆಗಳ ಕಾಲ ಹಾಡು ಆನಂದಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಇದರಲ್ಲಿದ್ದು, ಚಾರ್ಜಿಂಗ್ ಕೇಬಲ್ ನೀಡಲಾಗಿದೆ. ಜೊತೆಗೆ 3.5 ಮಿಮೀ ಜ್ಯಾಕ್ ಕೂಡ ಇದ್ದು, ನೇರವಾಗಿ ಕೇಬಲ್ ಮೂಲಕ ಕಂಪ್ಯೂಟರ್ ಅಥವಾ ಬೇರೆ ಸಾಧನವನ್ನು ಸಂಪರ್ಕಿಸಿದರೆ, ಬ್ಯಾಟರಿ ಬಳಸದೆಯೇ ಕೆಲಸ ಮಾಡಬಹುದು.

ಬ್ಲೂಟೂತ್ ಮೂಲಕ ಎರಡು ಸಾಧನಗಳನ್ನು ಏಕಕಾಲಕ್ಕೆ ಪೇರಿಂಗ್ ಮಾಡುವ ಮೂಲಕ ಈ ಹೆಡ್‌ಫೋನ್‌ಗೆ ಸಂಪರ್ಕಿಸಬಹುದಾಗಿದೆ. ಇದರ ಈಗಿನ ಬೆಲೆ ₹2499. ಪ್ರಮುಖ ಆನ್‌ಲೈನ್ ವಾಣಿಜ್ಯ ತಾಣಗಳಲ್ಲಿ ಲಭ್ಯವಿದೆ.

ಗಮನಿಸಬಹುದಾದ ವೈಶಿಷ್ಟ್ಯಗಳು

  • ಮಾತನಾಡುವ ಅನುಕೂಲಕ್ಕಾಗಿ ಫ್ಲಿಪ್ ಮೈಕ್.

  • ಹಾಡಿಗೆ ತಕ್ಕಂತೆ ಎಲ್‌ಇಡಿ ಲೈಟುಗಳು, ಒಂದು ರೀತಿಯಲ್ಲಿ ಉಸಿರಾಡುವಂತೆ (ಶ್ವಾಸಕೋಶ ಹಿಗ್ಗುವ ಮತ್ತು ಕುಗ್ಗುವಂತೆ) ಭಾಸವಾಗುತ್ತದೆ. ಈ ವೈಶಿಷ್ಟ್ಯವನ್ನು ಆಫ್ ಅಥವಾ ಪುನಃ ಆನ್ ಮಾಡಬೇಕಿದ್ದರೆ ಪವರ್ ಬಟನ್ ಅನ್ನು ಮೂರು ಬಾರಿ ಒತ್ತಿದರಾಯಿತು.

  • ಪವರ್ ಬಟನ್: ಬ್ಲೂಟೂತ್ ಸಂಪರ್ಕವಾಗಿದ್ದಾಗ ಒಮ್ಮೆ ಒತ್ತಿದರೆ ಕರೆ ಸ್ವೀಕಾರ, ಎರಡು ಬಾರಿ ಒತ್ತಿದರೆ ಇತ್ತೀಚೆಗೆ ಮಾತನಾಡಿದ ಸಂಖ್ಯೆಗೆ ರಿಡಯಲ್ ಆಗುತ್ತದೆ. ಕೆಲ ಕ್ಷಣ ಒತ್ತಿಹಿಡಿದರೆ ಕರೆ ಕಟ್ ಆಗುತ್ತದೆ.

  • ಹಾಡು ಪ್ಲೇ ಆಗುತ್ತಿರುವಾಗ ಪವರ್ ಬಟನನ್ನು ಒಮ್ಮೆ ಒತ್ತಿದರೆ ಪ್ಲೇ ಅಥವಾ ಪಾಸ್ ಮಾಡಬಹುದು. ಮುಂದಿನ ಹಾಡು ಪ್ಲೇ ಮಾಡಲು ವಾಲ್ಯೂಮ್ ಪ್ಲಸ್ ಬಟನನ್ನು ಕೆಲ ಕ್ಷಣ ಒತ್ತಿಹಿಡಿದರಾಯಿತು. ಹಿಂದಿನ ಹಾಡು ಪ್ಲೇ ಮಾಡಲು ವಾಲ್ಯೂಮ್ ಮೈನಸ್ ಬಟನನ್ನು ಕೆಲ ಕ್ಷಣ ಒತ್ತಿಹಿಡಿದರಾಯಿತು.

  • ಆಂಡ್ರಾಯ್ಡ್ ಮತ್ತು ಆ್ಯಪಲ್ ಫೋನ್‌ಗಳಿಗೂ ಇದನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.