ADVERTISEMENT

OnePlus10R: ಪ್ರೀಮಿಯಂನ ಮೆರುಗಿಲ್ಲ; ಕಾರ್ಯಾಚರಣೆಗೆ ಸಾಟಿ ಇಲ್ಲ

ವಿಶ್ವನಾಥ ಎಸ್.
Published 22 ಜೂನ್ 2022, 10:14 IST
Last Updated 22 ಜೂನ್ 2022, 10:14 IST
ಒನ್‌ಪ್ಲಸ್‌ 10ಆರ್‌ 5ಜಿ
ಒನ್‌ಪ್ಲಸ್‌ 10ಆರ್‌ 5ಜಿ   

ಒನ್‌ಪ್ಲಸ್‌ ಕಂಪನಿಯು ಭಾರತದಲ್ಲಿ ಜನಪ್ರಿಯತೆ ಸಾಧಿಸಿದ್ದೇ ತನ್ನ ಪ್ರೀಮಿಯಂ ವೈಶಿಷ್ಟ್ಯಗಳಿಂದ. ಆದರೆ, ಈಚೆಗೆ ಮಧ್ಯಮ ಮತ್ತು ಕಡಿಮೆ ಬೆಲೆಯ ವಿಭಾಗ ಪ್ರವೇಶಿಸುವ ಧಾವಂತದಲ್ಲಿಯೋ ಅಥವಾ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನೆಲೆಯೂರಿ ಆಗಿದೆ ಎನ್ನುವ ಲೆಕ್ಕಾಚಾರದಲ್ಲಿಯೋ ಕಂಪನಿ ಮೈಮರೆತಂತೆ ಕಾಣುತ್ತಿದೆ. ಈಚೆಗೆ ಬಿಡುಗಡೆ ಮಾಡಿರುವ ‘ಒನ್‌ಪ್ಲಸ್‌ 10ಆರ್‌ 5ಜಿ’ ಇದಕ್ಕೆ ಉತ್ತಮ ಉದಾಹರಣೆ.

ಈ ಸ್ಮಾರ್ಟ್‌ಫೋನ್‌ನಲ್ಲಿ ಒನ್‌ಪ್ಲಸ್‌ನ ಪ್ರೀಮಿಯಂವಿನ್ಯಾಸ, ವೈಶಿಷ್ಟ್ಯಗಳ ಕೊರತೆ ಎದ್ದು ಕಾಣಿಸುತ್ತದೆ. ಕಂಪನಿಯ ಹಿಂದಿನ ಫೋನ್‌ಗಳಿಗೆ ಹೋಲಿಸಿದರೆ ಇದು ಮೊದಲ ನೋಟಕ್ಕೆ ಆಕರ್ಷಿಸುವುದಿಲ್ಲ. ಕಂಪನಿಯು ಇದರ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಿಸಿದೆ. ತಕ್ಷಣಕ್ಕೆ ಇದು ಒನ್‌ಪ್ಲಸ್‌ ಬ್ರ್ಯಾಂಡ್‌ ಎದು ಅನ್ನಿಸುವುದೇ ಇಲ್ಲ. ಪ್ಪ್ರೊಫೈಲ್‌ (ರಿಂಗ್‌, ವೈಬ್ರೆಟ್‌, ಸೈಲೆಂಟ್‌) ನಿರ್ವಹಣೆ ಮಾಡುವ ಬಟನ್‌ ಇದರಲ್ಲಿ ಇಲ್ಲ. ಒನ್‌ಪ್ಲಸ್‌ ಫೋನ್‌ಗಳಲ್ಲಿ ಇದು ಅತ್ಯಂತ ಉಪಯುಕ್ತವಾದ ಆಯ್ಕೆ ಆಗಿತ್ತು. ಆದರೆ, ಇಲ್ಲಿ ಅದರ ಕೊರತೆ ಕಾಡುತ್ತದೆ.ಕಳೆದ ವರ್ಷ ಒಪ್ಪೊ–ಒನ್‌ಪ್ಲಸ್‌ ವಿಲೀನ ಆಗಿರುವುದು ಸಹ ಗುಣಮಟ್ಟದ ಮೇಲೆ ಪರಿಣಾಮ ಬೀರಿದಂತೆ ಕಾಣಿಸುತ್ತಿದೆ.

ಪರದೆ: ಕಂಪನಿಯು ಯಾವಾಗಲೂ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಉತ್ತಮ ಡಿಸ್‌ಪ್ಲೆ ನೀಡುತ್ತದೆ. ಈ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಈ ಸ್ಮಾರ್ಟ್‌ಫೋನ್‌ನಲ್ಲಿ 6.7 ಇಂಚು ಎಫ್‌ಎಚ್‌ಡಿ+ ಪ್ಲುಯಿಡ್‌ ಅಮೊಎಲ್‌ಇಡಿ ಡಿಸ್‌ಪ್ಲೆ ಇದೆ. 120 ಹರ್ಟ್‌ ರಿಫ್ರೆಶ್‌ ರೇಟ್‌ ಇದೆ. ವಾತಾವರಣಕ್ಕೆ ಸರಿಯಾಗಿ ಆಟೊ ಬ್ರೈಟ್‌ನೆಸ್‌ ಹೊಂದಿಕೊಳ್ಳುತ್ತಿಲ್ಲ.

ADVERTISEMENT

ಕಾರ್ಯಾಚರಣೆ:ಫೋನ್‌ ಕಾರ್ಯಾಚರಣಾ ವೇಗ ಉತ್ತಮವಾಗಿದೆ. ಮೀಡಿಯಾಟೆಕ್‌ ಡೈಮೆನ್ಸಿಟಿ 8100 ಮ್ಯಾಕ್ಸ್‌ ಚಿಪ್‌ಸೆಟ್‌ ನೀಡಲಾಗಿದೆ.1000 ಹರ್ಟ್ಸ್‌ವರೆಗೆ ಟಚ್ ರೆಸ್ಪಾನ್ಸ್‌ ಇದ್ದು, ಗೇಮ್‌ ಆಡುವಾಗ ಉತ್ತಮ ಅನುಭವ ಆಗುತ್ತದೆ. ಹೆಚ್ಚಿನ ರೆಸಲ್ಯೂಷನ್‌ ಇರುವ ಗೇಮ್‌ ಆಡುವಾಗ, ವಿಡಿಯೊ ನೋಡುವಾಗ ಇದರ ಅನುಭವ ಆಗುತ್ತದೆ. ಎಲ್ಲಿಯೂ ಹ್ಯಾಂಗ್‌ ಆಗುವುದಿಲ್ಲ.3ಡಿ ಪ್ಯಾಸಿವ್‌ ಕೂಲಿಂಗ್‌ ವ್ಯವಸ್ಥೆ ಇರುವುದರಿಂದ ಗೆಮ್‌ ಆಡುವುಗ ಫೋನ್‌ ಬಿಸಿ ಆಗುವುದಿಲ್ಲ.

ಕ್ಯಾಮೆರಾ: ಟ್ರಿಪಲ್‌ ಕ್ಯಾಮೆರಾ ಸೆಟಪ್‌ ಹೊಂದಿದ್ದು, ಪ್ರೈಮರಿ ಕ್ಯಾಮೆರಾ 50 ಎಂಪಿ ಸೋನಿ ಐಎಂಎಕ್ಸ್‌66 ಸೆನ್ಸರ್‌ ಹೊಂದಿದೆ. ಆದರೆ ಅಲ್ಟ್ರಾವೈಡ್‌ ಕ್ಯಾಮೆರಾವನ್ನು ಡೌನ್‌ಗ್ರೇಡ್‌ ಮಾಡಲಾಗಿದ್ದು 8 ಎಂಪಿ ನೀಡಲಾಗಿದೆ. ಈ ಹಿಂದಿನ ಫೋನ್‌ಗಳಲ್ಲಿ 16 ಎಂಪಿ ಇತ್ತು. ಇದುವರೆಗೆ ಬಳಸಿದ ಒನ್‌ಪ್ಲಸ್‌ನ ಎಲ್ಲಾ ಫೋನ್‌ಗಳಿಗೆ ಹೋಲಿಸಿದರೆ ಇದರ ಕ್ಯಾಮೆರಾ ಗುಣಮಟ್ಟ ಕಳಪೆ ಆಗಿದೆ.ಲ್ಯಾಂಡ್‌ಸ್ಕೇಪ್‌ ಚಿತ್ರಗಳ ಗುಣಮಟ್ಟ ಒಂದು ಹಂತದ ಮಟ್ಟಿಗೆ ಚೆನ್ನಾಗಿ ಬರುತ್ತದೆ. ಆದರೆ ಇಲ್ಲಿಯೂ ಜೂಮ್‌ ಮಾಡಿದರೆ ಫೊಟೊ ಬ್ಲರ್‌ ಆಗುತ್ತದೆ. ಮನೆಯೊಳಗಂತೂ ಚಿತ್ರದ ಗುಣಮಟ್ಟ ತೀರಾ ಕಡಿಮೆ ಇದೆ. ವ್ಯಕ್ತಿಗಳ ಚಿತ್ರ ತೆಗೆದು ಅದನ್ನು ಸ್ವಲ್ಪ ಜೂಮ್‌ ಮಾಡಿದರೂ ಬ್ಲರ್‌ ಆಗುತ್ತದೆ. ಪೊರ್ಟೇಟ್‌ ಆಯ್ಕೆಯಲ್ಲಿ, ಫೊಟೊ ಕ್ಲಿಕ್ಕಿಸುವ ಮೊದಲು ಕಾಣಿಸುವುದಕ್ಕೂ ಫೊಟೊ ತೆಗೆದ ನಂತರ ಕಾಣಿಸುವುದಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ಸೆಲ್ಫಿ ತೆಗೆಯುವಾಗ ಹಣೆಯ ಮೇಲೆ ಹೆಚ್ಚಿ ಬೆಳಕು ಇರುವಂತೆ ಕಾಣುತ್ತದೆ. ಸಹಜ ಬಣ್ಣ ಇದ್ದಂತೆ ಕಾಣುವುದಿಲ್ಲ. ಆದರೆ ಫೊಟೊ ತೆಗೆದ ಬಳಿಕ ಚೆನ್ನಾಗಿ ಕಾಣುತ್ತದೆ. ಇಷ್ಟಾದರೂ ಒಟ್ಟಾರೆಯಾಗಿ ಸೆಲ್ಫಿ ಗುಣಮಟ್ಟ ಅಷ್ಟೇನೂ ಚೆನ್ನಾಗಿ ಇಲ್ಲ. ನೈಟ್‌ಸ್ಕೇಪ್‌ ಚಿತ್ರಗಳ ಗುಣಮಟ್ಟ ತೀರಾ ಕಡಿಮೆ ಇದೆ.ವಿಡಿಯೊ ಮಾಡುವಾಗ ಹೊರಾಂಗಣ ಮತ್ತು ಪ್ರಯಾಣದ ವಿಡಿಯೊಗಳು ತಕ್ಕ ಮಟ್ಟಿಗೆ ಚೆನ್ನಾಗಿ ಬರುತ್ತವೆ.

ಬ್ಯಾಟರಿ:5000 ಎಂಎಎಚ್‌ ಬ್ಯಾಟರಿ ಇದ್ದು, 30 ನಿಮಿಷದಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ರ್‍ಯಾ‍ಪಿಡ್‌ ಚಾರ್ಜಿಂಗ್‌ ಆಯ್ಕೆ ಸಕ್ರಿಯಗೊಳಿಸಿದರೆ 20 ನಿಮಿಷದಲ್ಲಿ ಪೂರ್ತಿ ಚಾರ್ಜ್‌ ಆಗುತ್ತದೆ. ಹೀಗಿದ್ದರೂ ಬ್ಯಾಟರಿ ಬಾಳಿಕ ಬರುವುದು ಮಾತ್ರ 7 ರಿಂದ 8 ಗಂಟೆ! ವೇಗವಾಗಿ ಚಾರ್ಜ್‌ ಆಗುತ್ತದೆ ಎನ್ನುವ ಒಂದೇ ಕಾರಣಕ್ಕೆ ಚಾರ್ಜರ್‌ ಅನ್ನು ಯಾವಾಗಲೂ ಜೊತೆಯಲ್ಲೇ ಇಟ್ಟುಕೊಂಡು ಓಡಾಡಲು ಆಗುವುದಿಲ್ಲ. ಅಲ್ಲದೆ, ಒನ್‌ಪ್ಲಸ್‌ ಕಂಪನಿಯ ಈ ಹಿಂದಿನ ಅಡಾಪ್ಟರ್‌ಗಳಿಗಿಂತಲೂ ಇದು ಭಾರಿ ತೂಕ ಇದೆ. ಹೀಗಿಗಾಗಿ ಬ್ಯಾಗಿಗೂ ತೂಕವೇ. ಹಳೆಯ ಮನೆ ಆಗಿದ್ದರೆ ಅಥವಾ ಸ್ವಿಚ್‌ ಬೋರ್ಡ್‌ ಹಳೆಯದಾಗಿದ್ದರೆ, ಚಾರ್ಜರ್ ಅನ್ನು ಕನೆಕ್ಟ್‌ ಮಾಡುತ್ತಿದ್ದಂತೆಯೇ ಅಡಾಪ್ಟರ್‌ ಭಾರಕ್ಕೆ ಸ್ಚಿಚ್‌ ಬೋರ್ಡ್‌ ಕಿತ್ತು ಬರುವ ಸಾಧ್ಯತೆ ಇದೆ.

ಉತ್ತಮ ಪರದೆ, ವೇಗದ ಕಾರ್ಯಾಚರಣೆಯ ದೃಷ್ಟಿಯಿಂದ ಚೆನ್ನಾಗಿದೆ. ಆದರೆ, ಸ್ಮಾರ್ಟ್‌ಫೋನ್‌ನ ಜೀವಾಳ ಆಗಿರುವ ಕ್ಯಾಮೆರಾದ ಗುಣಮಟ್ಟ ಒಂದಿಷ್ಟೂ ಚೆನ್ನಾಗಿಲ್ಲ. ಬ್ಯಾಟರಿ ಬಾಳಿಕೆ ಅವಧಿಯೂ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಿಂತಲೂ ಕಡಿಮೆ ಇದೆ. ಒಟ್ಟಾರೆಯಾಗಿ ಒನ್‌ಪ್ಲಸ್‌ 10ಆರ್‌ನಲ್ಲಿ ಪ್ಲಸ್‌ಗಿಂತಲೂ ಮೈನೆಸ್‌ ಅಂಶಗಳೇ ಹೆಚ್ಚಿಗೆ ಇವೆ.


ವೈಶಿಷ್ಟ್ಯಗಳು

ತೂಕ; 186 ಗ್ರಾಂ

ಪರದೆ; 6.7 ಇಂಚು ಫ್ಲ್ಯುಯೆಡ್‌ ಒಎಲ್‌ಇಡಿ 120 ಹರ್ಟ್ಸ್‌ ಡಿಸ್‌ಪ್ಲೆ

ಒಎಸ್‌; ಆಕ್ಸಿಜನ್‌ ಒಎಸ್‌ ಆಧಾರಿತ ಆಂಡ್ರಾಯ್ಡ್‌ 12

ರ್‍ಯಾಮ್‌; 8ಜಿಬಿ/12ಜಿಬಿ ಎಲ್‌ಪಿಡಿಡಿಆರ್‌5

ಸಂಗ್ರಹಣಾ ಸಾಮರ್ಥ್ಯ; 128 ಜಿಬಿ/256ಜಿಬಿ

ಬ್ಯಾಟರಿ; 5000 ಎಂಎಎಚ್‌. 80ಡಬ್ಲ್ಯು ಸೂಪರ್‌ವಿಒಒಸಿ ಚಾರ್ಜರ್‌

ಕ್ಯಾಮೆರಾ; 50+8+2ಎಂಪಿ

ಸೆಲ್ಫಿ; 16 ಎಂಪಿ

ಬ್ಲುಟೂತ್‌; 5.3

ಬೆಲೆ: 8+128 ಜಿಬಿಗೆ ₹ 38,999. 12+256ಜಿಬಿಗೆ ₹ 42,999

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.