ಒನ್‌ಪ್ಲಸ್ ಪ್ಯಾಡ್ ಗೋ 2
ಸ್ಮಾರ್ಟ್‌ಫೋನ್ ಹಾಗೂ ಇತರ ಗ್ಯಾಜೆಟ್‌ಗಳನ್ನು ತಯಾರಿಸುವ ಒನ್‌ಪ್ಲಸ್ ಕಂಪನಿಯು ಈ ವರ್ಷ ‘ಪ್ಯಾಡ್ ಗೊ 2’ ಬಿಡುಗಡೆ ಮಾಡಿದ್ದು, ಕೃತಕ ಬುದ್ದಿಮತ್ತೆ ಹಾಗೂ ಶಕ್ತಿಶಾಲಿ ಹಾರ್ಡ್‌ವೇರ್‌ಗಳನ್ನು ಅಳವಡಿಸಿಕೊಳ್ಳುವ ಮೂಲಕ ತ್ವರಿತ ಪ್ರತಿಕ್ರಿಯೆಯ ಹೊಸ ತಂತ್ರಜ್ಞಾನವುಳ್ಳ ಸಾಧನವನ್ನು ಪರಿಚಯಿಸಿದೆ.
ಒನ್‌ಪ್ಲಸ್ ಪ್ಯಾಡ್ ಗೊ 2 ಟ್ಯಾಬ್ಲೆಟ್ ಇತ್ತೀಚೆಗೆ ಬಿಡುಗಡೆಯಾಗಿದೆ. ಆ್ಯಂಡ್ರಾಯ್ಡ್ ಆಧಾರಿತ ಈ ಟ್ಯಾಬ್ಲೆಟ್‌ನಲ್ಲಿ ಈ ಹಿಂದಿನ ಆವೃತ್ತಿಗೆ ಹೋಲಿಸಿದಲ್ಲಿ ದೊಡ್ಡ ಪರದೆ, ಉತ್ತಮ ತಯಾರಿಕಾ ಗುಣಮಟ್ಟ, ಚುರುಕು ಪ್ರಾಸೆಸರ್ ಮತ್ತು ದೊಡ್ಡ ಬ್ಯಾಟರಿ ನೀಡಲಾಗಿದೆ.
ವಿನ್ಯಾಸದಲ್ಲಿ ಹೆಚ್ಚು ದಪ್ಪವಲ್ಲದ ಸಪೂರ ದೇಹ ಹಾಗೂ ಹೆಚ್ಚು ತೂಕವಿಲ್ಲದೆ ಆಪ್ತವೆನಿಸುತ್ತದೆ. 6.8 ಮಿ.ಮೀ. ದಪ್ಪ ಮತ್ತು 597 ಗ್ರಾಂ ತೂಕ ಇದರದ್ದು. ಹೀಗಾಗಿ ಹಿಡಿದುಕೊಳ್ಳಲು ಹೆಚ್ಚು ಸರಳ.
ಟ್ಯಾಬ್ಲೆಟ್‌ನ ಹೊರಕವಚದ ನಿರ್ಮಾಣ ಉತ್ತಮವಾಗಿದೆ. ಅದಕ್ಕೆ ನೀಡಿರುವ ಮೇಲುಹೊದಿಕೆಯೂ ಉತ್ತಮವಾಗಿದೆ. ಅದರಲ್ಲೂ ಲ್ಯಾವೆಂಡರ್ ಬಣ್ಣದ ಟ್ಯಾಬ್ಲೆಟ್ ಕಣ್ಣಿಗೆ ಹೆಚ್ಚು ಹಿತವೆನಿಸುತ್ತದೆ.
ಟ್ಯಾಬ್ಲೆಟ್‌ನ ಮುಂಭಾಗಕ್ಕೆ ಬಂದಲ್ಲಿ 12.2 ಇಂಚಿನ ಸಂಪೂರ್ಣ ಎಚ್‌ಡಿ+ (2800*1980 ಪಿಕ್ಸೆಲ್) ಎಲ್‌ಸಿಡಿ ಪ್ಯಾನಲ್ ಅಳವಡಿಸಲಾಗಿದೆ. ಇದರದ್ದು ಪ್ರತಿ ಇಂಚಿಗೆ 284 ದರದಲ್ಲಿ ಪಿಕ್ಸೆಲ್ ಸಾಂಧ್ರತೆ ಹೊಂದಿದೆ. ಇದರ ಗರಿಷ್ಠ ಬೆಳಕಿನ ಪ್ರಕರತೆಯು 900 ನಿಟ್ಸ್‌ನಷ್ಟಿದೆ. ಪ್ಯಾಡ್ ಗೊ 2ನಲ್ಲಿ ಬಣ್ಣಗಳು ಹೆಚ್ಚು ಸ್ಪಷ್ಟ, ರಿಫ್ರೆಶ್ ರೇಟ್ 120 ಹರ್ಟ್ಜ್ ಇದೆ. ಪರದೆಯ ಬೆಳಕಿನ ಪ್ರಕರತೆ 900 ನಿಟ್ಸ್‌ನಷ್ಟಿದೆ. ಹೀಗಾಗಿ ಸಿನಿಮಾ ನೋಡಲು, ಗೇಮ್ಸ್ ಆಡಲು, ಹಾಡು ಕೇಳಲು, ಕೆಲಸ ಮಾಡಲು ಹೇಳಿಮಾಡಿಸಿದ ಸಾಧನವಾಗಿದೆ.
ದೊಡ್ಡ ಪರದೆ ಹಾಗೂ ದೀರ್ಘ ಅವಧಿಯವರೆಗೆ ಬ್ಯಾಟರಿ ಸೌಲಭ್ಯ ಇರುವುದರಿಂದ ದೀರ್ಘ ಅವಧಿಯ ವೆಬ್ ಸರಣಿ, ಸಿನಿಮಾ ನೋಡಲು ಇದು ಸೂಕ್ತವಾದ ಸಾಧನವಾಗಿದೆ. ಇದಕ್ಕಾಗಿ ಟಿಯುವಿ ರೀನ್‌ಲ್ಯಾಂಡ್ ಸ್ಮಾರ್ಟ್ ಕೇರ್ 4.0 ಪ್ರಮಾಣಪತ್ರ ಹೊಂದಿದ ಪರದೆಯನ್ನು ಇದಕ್ಕೆ ಅಳವಡಿಸಲಾಗಿದೆ. ಇದು 7:5 ಅನುಪಾತದ ರೀಡ್‌ಫಿಟ್ ಆ್ಯಸ್ಪೆಕ್ಟ್ ರೇಷಿಯೊ ಹೊಂದಿದೆ. ಕಣ್ಣಿಗೆ ಹಾನಿ ಮಾಡಬಹುದಾದ ನೀಲಿ ಬೆಳಕು ಹೊರಸೂಸುವುದನ್ನು ಇದು ತಡೆಯುತ್ತದೆ. ಹೀಗಾಗಿ ಇ–ಪುಸ್ತಕವನ್ನು ಗಂಟೆಗಟ್ಟಲೆ ಓದಿದರೂ ಮತ್ತು ರಾತ್ರಿ ವೇಳೆಯ ಅಧ್ಯಯನಕ್ಕೂ ಕಣ್ಣಿಗೆ ಹೆಚ್ಚು ಹೊರೆಯಾಗದು.
ಒನ್‌ಪ್ಲಸ್ ಪ್ಯಾಡ್ ಗೋ 2ರಲ್ಲಿ ಸಿಮ್ ಕಾರ್ಡ್ ಹಾಕಲು ಐಚ್ಛಿಕ ಸ್ಥಳಾವಕಾಶ ಕಲ್ಪಿಸಲಾಗಿದೆ. ಇದು ಶಾಡೊ ಬ್ಲಾಕ್ ಮಾದರಿಯ 256 ಜಿಬಿ ಸ್ಟೋರೇಜ್‌ನಲ್ಲಿ ಮಾತ್ರ ಲಭ್ಯ. ಇದರೊಂದಿಗೆ ಟೈಪ್–ಸಿ ಪೋರ್ಟ್, ಕ್ವಾಡ್ ಸ್ಪೀಕರ್, ಬ್ಲೂಟೂತ್ 5.4, ಡುಯಲ್ ಬ್ಯಾಂಡ್ ವೈಫೈ 6 (802.11ಎಎಕ್ಸ್, 2.4ಗಿಗಾ ಹರ್ಟ್ಜ್ ಮತ್ತು 5 ಗಿಗಾ ಹರ್ಟ್ಜ್) ಸೌಲಭ್ಯಗಳು ಇವೆ. ಭದ್ರತೆಗೆ ಫೇಸ್ ಅನ್‌ಲಾಕ್ ಸೌಲಭ್ಯವನ್ನು ನೀಡಲಾಗಿದೆ.
ಒನ್‌ಪ್ಲಸ್ ಪ್ಯಾಡ್ ಗೋ 2
ಒನ್‌ಪ್ಲಸ್ ಪ್ಯಾಡ್ ಗೋ 2ರಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 7300 ಅಲ್ಟ್ರಾ ಪ್ರೊಸೆಸರ್, 8 ಜಿಬಿ ರ‍್ಯಾಮ್ (LPDDR5X) ಮತ್ತು 128 ಜಿಬಿ ಅಥವಾ 256 ಜಿಬಿ ಸ್ಟೋರೇಜ್ ನೀಡಲಾಗಿದೆ. ಒಟಿಟಿ ವೀಕ್ಷಣೆಗೆ, ಗೇಮ್ ಆಡಲು ಹೇಳಿಮಾಡಿಸಿದ ಸಾಧನ. ದೊಡ್ಡ ಪರದೆ ನೀಡಿರುವುದರಿಂದ ಚೆಸ್, ಲುಡೊ, ಕೇರಂನಂಥ ಬೋರ್ಡ್ ಗೇಮ್ ಆಡಲೂ ಹೇಳಿಮಾಡಿಸಿದ ಸಾಧನ.
ಆ್ಯಂಡ್ರಾಯ್ಡ್ 16 ಆಧಾರಿತ ಆಕ್ಸಿಜನ್ ಆಪರೇಟಿಂಗ್ ಸಿಸ್ಟಂ ಇದರಲ್ಲಿದೆ. ಇದರೊಂದಿಗೆ ಬಹಳಷ್ಟು ಥರ್ಡ್ ಪಾರ್ಟಿ ಆ್ಯಪ್‌ಗಳು ಇನ್‌ಸ್ಟಾಲ್ ಆಗಿವೆ. ಅಪ್ಲಿಕೇಷನ್‌ಗಳ ನಡುವಿನ ಓಡಾಟವೂ ಸುಲಭವಾಗಿದೆ.
ಗೋ 2ರ ಮತ್ತೊಂದು ವಿಶೇಷವೆಂದರೆ ಇದರೊಂದಿಗೆ ನೀಡುತ್ತಿರುವ ಪೆನ್ ಮಾದರಿಯ ಸ್ಟೈಲೊ. ಚಿತ್ರ ರಚಿಸಲು, ನೋಟ್ಸ್ ಕೈಬರಕ್ಕೆ ಸೂಕ್ತ ಸಾಧನ. ಇದರ ಉಪಯುಕ್ತ ಬಳಕೆಗೆ ಇನ್ನೂ ಹಲವು ಆ್ಯಪ್‌ಗಳು ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯ. ಅದರ ಲಾಭವನ್ನು ಪಡೆದುಕೊಳ್ಳಬಹುದು. ಆದರೆ ಈ ಬಾರಿ ಮ್ಯಾಗ್ನೆಟಿಕ್ ಚಾರ್ಜರ್ ನೀಡುವ ಬದಲು, ವೈರ್ ಚಾರ್ಜ್ ನೀಡಲಾಗಿದೆ. ಹಾಗೆಯೇ ಒನ್‌ಪ್ಲಸ್‌ನ ಹಿಂದಿನ ಟ್ಯಾಬ್‌ಗಳಂತೆ ಸ್ಟೈಲಸ್ ಪ್ಯಾಡ್‌ಗೆ ಅಂಟಿಕೊಳ್ಳುವಂತೆ ಮಾಡಿಲ್ಲ. ಬದಲಿಗೆ ಪ್ಯಾಡ್ ಗೋ 2ಗಾಗಿಯೇ ವಿನ್ಯಾಸ ಮಾಡಲಾಗಿರುವ ಕವಚದಲ್ಲಿ ಸ್ಟೈಲಸ್ ಇಡಲು ಸೂಕ್ತ ಸ್ಥಳಾವಕಾಶ ನೀಡಲಾಗಿದೆ.
ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ 20 ಗಂಟೆಗಳ ಬ್ಯಾಟರಿ ಲೈಫ್ ಇದರದ್ದು. 10 ನಿಮಿಷದಲ್ಲಿ ಚಾರ್ಜ್ ಮಾಡಿದರೆ 12 ಗಂಟೆಗಳ ಕಾಲ ಬಳಸಬಹುದಾಗಿದೆ.
ಪ್ಯಾಡ್ ಗೋ 2 ಟ್ಯಾಬ್‌ನಲ್ಲಿ ಕೃತಕ ಬುದ್ಧಿಮತ್ತೆ ಸೌಲಭ್ಯಕ್ಕಾಗಿ ಗೂಗಲ್‌ನ ‘ಸರ್ಕಲ್’ ಇನ್‌ಸ್ಟಾಲ್ ಮಾಡಲಾಗಿದೆ. 2030ರವರೆಗೂ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನ ಅಪ್‌ಡೇಟ್ ನೀಡುವ ಭರವಸೆಯನ್ನು ಕಂಪನಿ ನೀಡಿದೆ. ಜತೆಗೆ ಆರು ವರ್ಷಗಳವರೆಗೆ (2031) ಸೆಕ್ಯುರಿಟಿ ಪ್ಯಾಚ್ ನೀಡುವುದಾಗಿಯೂ ಒನ್‌ಪ್ಲಸ್ ಹೇಳಿದೆ.
ಹಿಂಬದಿಯಲ್ಲಿ 8 ಮೆಗಾ ಪಿಕ್ಸೆಲ್‌ನ ಕ್ಯಾಮೆರಾ ನೀಡಲಾಗಿದೆ. ಜತೆಗೆ ಎಲ್‌ಇಡಿ ಫ್ಲಾಷ್ ಕೂಡಾ ಇದೆ. ಚಿತ್ರಗಳ ಗುಣಮಟ್ಟ ಉತ್ತಮವಾಗಿದೆ. ಜತೆಗೆ ಪುಸ್ತಕ ಅಥವಾ ದಾಖಲೆಗಳನ್ನು ಉತ್ತಮ ರೀತಿಯಲ್ಲಿ ಸ್ಕ್ಯಾನ್ ಮಾಡುವ ಸಾಮರ್ಥ್ಯವೂ ಇದರದ್ದು. ಮುಂಭಾಗದಲ್ಲೂ 8 ಮೆಗಾ ಪಿಕ್ಸೆಲ್‌ನ ಕ್ಯಾಮೆರಾ ಜತೆಗೆ ಸೆನ್ಸರ್ ನೀಡಲಾಗಿದೆ. ಹೀಗಾಗಿ ವಿಡಿಯೊ ಕಾಲಿಂಗ್ ಇನ್ನಷ್ಟು ಸುಲಭ ಹಾಗೂ ಸ್ಪಷ್ಟ. ಎರಡೂ ಕ್ಯಾಮೆರಾಗಳು 1080 ಎಚ್‌ಡಿ ಗುಣಮಟ್ಟದ ಚಿತ್ರಗಳನ್ನು ಪ್ರತಿ ಸೆಕೆಂಡಿಗೆ 30 ಚಿತ್ರಗಳನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ.
ಒನ್‌ಪ್ಲಸ್ ಪ್ಯಾಡ್ ಗೋ 2 ಸ್ಟೈಲಸ್ ಬಳಕೆ
ಒನ್‌ಪ್ಲಸ್ ಈ ಬಾರಿ ಪ್ಯಾಡ್ ಗೊ 2ಗೆ 10,050 ಎಂಎಎಚ್‌ನ ದೊಡ್ಡ ಬ್ಯಾಟರಿ ನೀಡಿದೆ. ಹೀಗಾಗಿ ದೈನಂದಿನ ಸಹಜ ಬಳಕೆಗೆ ಬ್ಯಾಟರಿ ನೆರವಾಗಲಿದೆ. ಉದಾಹರಣೆಯಾಗಿ ಹೇಳಬಹುದಾದರೆ 50 ನಿಮಿಷಗಳ ಎಪಿಸೋಡ್‌ನ ವೆಬ್‌ಸರಣಿಯ 10 ಎಪಿಸೋಡ್‌ಗಳನ್ನು ಚಾರ್ಜ್‌ನ ಗೋಜಲಿಲ್ಲದೆ ವೀಕ್ಷಿಸಬಹುದು. ಬಳಸದೆ ಹಾಗೇ ಇಟ್ಟರೆ ಕೆಲವು ದಿನಗಳ ಕಾಲ ಚಾರ್ಜ್ ಅನ್ನು ಈ ಪ್ಯಾಡ್ ಬೇಡದು. ಬ್ಯಾಟರಿಯ ವೇಗದ ಚಾರ್ಜ್‌ಗಾಗಿ 33 ವಾಟ್‌ನ ಸೂಪರ್‌ವೂಕ್ ಫಾಸ್ಟ್ ಚಾರ್ಜಿಂಗ್ ಸೌಕರ್ಯ ನೀಡಲಾಗಿದೆ.
ಒಟ್ಟಾರೆಯಾಗಿ ಮನೆಯಲ್ಲಿ ದೈನಂದಿನ ಬಳಕೆಗೆ, ದೀರ್ಘ ಪ್ರಯಾಣಕ್ಕೆ ಒನ್‌ಪ್ಲಸ್ ಪ್ಯಾಡ್ ಗೋ 2 ಹೇಳಿ ಮಾಡಿಸಿದ ಟ್ಯಾಬ್ಲೆಟ್. ಸ್ಟೈಲಸ್ ಕೂಡಾ ಇರುವುದರಿಂದ ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗೆ, ಕಲಾವಿದರಿಗೆ, ಕಚೇರಿಯ ದೈನಂದಿನ ಬಳಕೆಗೂ ಇದು ಸೂಕ್ತ.
ಒನ್‌ಪ್ಲಸ್ ಪ್ಯಾಡ್ ಗೋ 2 ಒಟ್ಟು ಮೂರು ಮಾದರಿಯಲ್ಲಿ ಲಭ್ಯ. 8 ಜಿಬಿ ರ‍್ಯಾಮ್ + 128 ಜಿಬಿ (ವೈಫೈ ಮಾತ್ರ), 8 ಜಿಬಿ ರ‍್ಯಾಮ್ + 256 ಜಿಬಿ (ವೈಫೈ ಮಾತ್ರ) ಹಾಗೂ 8 ಜಿಬಿ ರ‍್ಯಾಮ್ + 256 ಜಿಬಿ (5ಜಿ) ಲಭ್ಯ. ಇವುಗಳು ಕ್ರಮವಾಗಿ ₹26,999, ₹26,999 ಮತ್ತು ₹32,999 ಬೆಲೆಯನ್ನು ಕಂಪನಿ ನಿಗದಿಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.