ADVERTISEMENT

OnePlus Nord CE 2 Lite| ನಾರ್ಡ್‌ ಸಿಇ2 ಲೈಟ್‌: ಕಾಸಿಗೆ ತಕ್ಕಷ್ಟು ಕಜ್ಜಾಯ

ವಿಶ್ವನಾಥ ಎಸ್.
Published 4 ಜೂನ್ 2022, 14:08 IST
Last Updated 4 ಜೂನ್ 2022, 14:08 IST
ಒನ್‌ಪ್ಲಸ್‌ ನಾರ್ಡ್‌ ಸಿಇ2 ಲೈಟ್‌
ಒನ್‌ಪ್ಲಸ್‌ ನಾರ್ಡ್‌ ಸಿಇ2 ಲೈಟ್‌   

ಒನ್‌ಪ್ಲಸ್‌ ಕಂಪನಿಯು ನಿಧಾನವಾಗಿ ಬಜೆಟೆಡ್‌ ಸೆಂಗ್ಮೆಂಟ್‌ ಫೋನ್‌ಗಳತ್ತ ಹೊರಳುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಈ ನಿಟ್ಟಿನಲ್ಲಿ ಈಚೆಗಷ್ಟೇ ₹ 20 ಸಾವಿರದ ಒಳಗಿನ ‘ಒನ್‌ಪ್ಲಸ್‌ ನಾರ್ಡ್‌ ಸಿಇ2 ಲೈಟ್‌ 5ಜಿ’ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ.

ಕಡಿಮೆ ಬೆಲೆಯ ಫೋನ್‌ ಆದರೂ ಪ್ರೀಮಿಯಂ ಲುಕ್‌ ಕಾಯ್ದುಕೊಳ್ಳಲಾಗಿದೆ. 6.59 ಇಂಚು ಎಫ್‌ಎಚ್‌ಡಿ+ಐಪಿಎಸ್‌ ಎಲ್‌ಸಿಡಿ ಪರದೆಯ ಜೊತೆಗೆ 120 ಹರ್ಟ್ಸ್‌ ರಿಫ್ರೆಷ್‌ ರೇಟ್‌, 240 ಹರ್ಟ್ಸ್‌ ಟಚ್‌ ರೆಸ್ಪಾನ್ಸ್‌ ಹೊಂದಿದ್ದು, ಗೇಮ್‌ ಆಡಲು ಉತ್ತಮವಾಗಿದೆ. 16 ಎಂಪಿ ಪಂಚ್‌ ಹೋಲ್‌ ಸೆಲ್ಫಿ ಕ್ಯಾಮೆರಾ ಇದೆ. 5000 ಎಂಎಎಚ್‌ ಬ್ಯಾಟರಿ, 33ಡಬ್ಲ್ಯು ಫಾಸ್ಟ್‌ ಚಾರ್ಜಿಂಗ್‌ ವ್ಯವಸ್ಥೆ ಹೊಂದಿದೆ. ಒಂದು ದಿನ ಬಳಸಲು ಯಾವುದೇ ಸಮಸ್ಯೆ ಇಲ್ಲ. ಹೆಚ್ಚಿನ ಸಮಯದವರೆಗೆ ವಿಡಿಯೊ ನೋಡಿದರೆ, ಗೇಮ್‌ ಆಡಿದರೆ ಬ್ಯಾಟರಿ ಬಾಳಿಕ ಅವಧಿ ಕಡಿಮೆ ಆಗುತ್ತದೆ.

ಆಂಡ್ರಾಯ್ಡ್ 12 ಆಧಾರಿತ ಆಕ್ಸಿಜನ್‌ ಒಎಸ್‌ 12.1 ಯೂಸರ್‌ ಇಂಟರ್‌ಫೇಸ್‌ ಹೊಂದಿದೆ. ಸ್ನ್ಯಾಪ್‌ಡ್ರ್ಯಾಗನ್‌ 695 5ಜಿ ಆಕ್ಟಾ ಕೋರ್ ಪ್ರೊಸೆಸರ್‌ ಬಳಸಲಾಗಿದೆ. ಮೈಕ್ರೊ ಎಸ್‌ಡಿ ಕಾರ್ಡ್‌ ಹಾಕಿದರೆ ಒಂದೇ ಸಿಮ್‌ ಬಳಸಲು ಸಾಧ್ಯ. 1ಟಿಬಿ ವರೆಗೆ ವಿಸ್ತರಣೆ ಸಾಧ್ಯ.

ADVERTISEMENT
ಒನ್‌ಪ್ಲಸ್‌ ನಾರ್ಡ್‌ ಸಿಇ2 ಲೈಟ್‌

ಟ್ರಿಪಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. 64 ಎಂಪಿ ಎಐ ರಿಯರ್‌ ಕ್ಯಾಮೆರಾ, 2ಎಂಪಿ ಮ್ಯಾಕ್ರೊ ಮತ್ತು 2ಎಂಪಿ ಡೆಪ್ತ್‌ ಸೆನ್ಸರ್‌ ಒಳಗೊಂಡಿದೆ. 64ಎಂಪಿ ಕ್ಯಾಮೆರಾದಲ್ಲಿ ಉತ್ತಮ ಚಿತ್ರಗಳನ್ನು ತೆಗೆಯಬಹುದು. ವೈಡ್‌ ಆ್ಯಂಗಲ್‌ ಸೆನ್ಸರ್‌ ಇಲ್ಲದೇ ಇರುವುದು ಇದರ ಕೊರತೆ.6 ಎಕ್ಸ್‌ವರೆಗೆ ಜೂಮ್‌ ಮಾಡಲು ಸಾಧ್ಯವಿದ್ದು, ಚಿತ್ರದ ಗುಣಮಟ್ಟ ಚೆನ್ನಾಗಿದೆ. ನೈಟ್‌ ಮೋಡ್‌ ಆಯ್ಕೆಯಲ್ಲಿ ಚಿತ್ರದ ಬ್ರೈಟ್‌ನೆಸ್‌ ಇನ್ನಷ್ಟು ಉತ್ತಮಪಡಿಸಬಹುದು. ₹ 20 ಸಾವಿರದೊಳಗಿನ ಬೆಲೆಯ ಬೇರೆ ಫೋನ್‌ಗಳಿಗೆ ಹೋಲಿಸಿದರೆ ಕ್ಯಾಮೆರಾದ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಬಹುದಿತ್ತು. ಸ್ಟೀರಿಯೊ ಸ್ಪೀಕರ್‌ ಬದಲಾಗಿ ಮೊನೊ ಸ್ಪೀಕರ್‌ ನೀಡಲಾಗಿದೆ.

ಪವರ್‌ ಬಟನ್‌ ಜಾಗದಲ್ಲಿಯೇ ಫಿಂಗರ್‌ಪ್ರಿಂಟ್‌ ಸ್ಕ್ಯಾನ್‌ ಆಯ್ಕೆ ನೀಡಲಾಗಿದೆ. ಫೋನ್‌ ಅನ್ನು ಕೈಯಲ್ಲಿ ಹಿಡಿದುಕೊಳ್ಳುವಾಗೆಲ್ಲಾ ಅಗತ್ಯ ಇಲ್ಲದೇ ಇದ್ದರೂ ಫೋನ್‌ ಪದೇ ಪದೇ ಅನ್‌ಲಾಕ್‌ ಆಗುತ್ತದೆ. ಹೀಗಾಗಿ ಈ ಆಯ್ಕೆ ಅಷ್ಟು ಸೂಕ್ತ ಅನ್ನಿಸಲಿಲ್ಲ. ಆದರೆ, ಫೋನ್‌ ಅನ್‌ಲಾಕ್‌ ಆಗುವುದೇ ತಿಳಿಯದೇ ಇರುವಷ್ಟರ ಮಟ್ಟಿಗೆ ವೇಗವಾಗಿ ಕೆಲಸ ಮಾಡುತ್ತದೆ. 3.5 ಎಂಎಂ ಹೆಡ್‌ಫೋನ್‌ ಜಾಕ್‌ ನೀಡಲಾಗಿದೆ. ಇಯರ್‌ಫೋನ್‌ ಬಳಸುವವರಿಗೆ ಇದು ಉಪಯುಕ್ತವಾಗಿದೆ. ಗೇಮ್ ಆಡುವ ಅನುಭವ ಉತ್ತಮವಾಗಿದೆ. ಹೆಚ್ಚಿನ ರೆಸಲ್ಯೂಷನ್‌ ಇರುವ ಗೇಮ್‌ ಆಡುವಾಗ ಹ್ಯಾಂಗ್‌ ಆಗುವುದಿಲ್ಲ. ಆದರೆ ಫೋನ್‌ ಸ್ವಲ್ಪ ಬಿಸಿ ಆಗುತ್ತದೆ.

ಒಟ್ಟಾರೆಯಾಗಿ ಕಾಸಿಗೆ ತಕ್ಕಷ್ಟು ಕಜ್ಜಾಯ ಎನ್ನುವಂತೆ ₹ 20 ಸಾವಿರದ ಒಳಗಿನ ಬೆಲೆಯಲ್ಲಿ ಕಂಪನಿ ಇದನ್ನು ರೂಪಿಸಿದೆ. ಒನ್‌ಪ್ಲಸ್‌ ಬ್ರ್ಯಾಂಡ್‌ನ ಫೋನ್‌ ಅನ್ನೇ ಹೊಂದಬೇಕು ಎನ್ನುವವರು ಕಡಿಮೆ ಬೆಲೆಗೆ ಇದನ್ನು ಖರೀದಿಸಬಹುದು. ಆದರೆ, ಇದೇ ಬೆಲೆಗೆ ಬೇರೆ ಬ್ರ್ಯಾಂಡ್‌ಗಳನ್ನು ನೋಡುವುದಾದರೆ ಇದಕ್ಕಿಂತಲೂ ಉತ್ತಮ ವೈಶಿಷ್ಟ್ಯಗಳು ಇರುವ ಫೋನ್‌ ಮಾರುಕಟ್ಟೆಯಲ್ಲಿವೆ.


ವೈಶಿಷ್ಟ್ಯಗಳು

ಪರದೆ: 6.59 ಇಂಚು ಎಫ್‌ಎಚ್‌ಡಿ+ಐಪಿಎಸ್‌ ಎಲ್‌ಸಿಡಿ
ಹಿಂಬದಿ ಕ್ಯಾಮೆರಾ:64+2+2 ಎಂಪಿ
ಸೆಲ್ಫಿ ಕ್ಯಾಮೆರಾ:16ಎಂಪಿ
ಒಎಸ್‌: ಆಂಡ್ರಾಯ್ಡ್ 12 ಆಧಾರಿತ ಆಕ್ಸಿಜನ್‌ ಒಎಸ್‌ 12.1 ಯುಐ
ಪ್ರೊಸೆಸರ್‌: ಸ್ನ್ಯಾಪ್‌ಡ್ರ್ಯಾಗನ್‌ 695 5ಜಿ ಆಕ್ಟಾ ಕೋರ್‌
ಬ್ಯಾಟರಿ: 5000 ಎಂಎಎಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.