
ಇನ್ಫೊಸಿಸ್ ವಿಜ್ಞಾನ ಪ್ರತಿಷ್ಠಾನ ಪ್ರಶಸ್ತಿ
ಬೆಂಗಳೂರು: ಇನ್ಫೊಸಿಸ್ ವಿಜ್ಞಾನ ಪ್ರತಿಷ್ಠಾನವು 2025ನೇ ಇನ್ಫೊಸಿಸ್ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಭಿನ್ನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಆರು ಮಂದಿಯನ್ನು ಆಯ್ಕೆ ಮಾಡಿದೆ.
ಇನ್ಫೊಸಿಸ್ ವಿಜ್ಞಾನ ಪ್ರತಿಷ್ಠಾನದ ಟ್ರಸ್ಟಿಗಳಾದ ನಾರಾಯಣಮೂರ್ತಿ, ಕ್ರಿಸ್ ಗೋಪಾಲಕೃಷ್ಣ, ಶ್ರೀನಾಥ್ ಬಾಟ್ನಿ, ಪ್ರತಿಮಾ ಮೂರ್ತಿ ಮತ್ತು ಪ್ರತಿಷ್ಠಾನದ ಅಧ್ಯಕ್ಷ ಕೆ.ದಿನೇಶ್ ಅವರು ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರಕಟಿಸಿದರು.
ಅರ್ಥಶಾಸ್ತ್ರ ವಿಭಾಗದಲ್ಲಿ ಮಸಾಚ್ಯಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕ ನಿಖಿಲ್ ಅಗರ್ವಾಲ್, ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಟೊರಾಂಟೊ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸುಶಾಂತ್ ಸಹದೇವ, ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದಲ್ಲಿ ಷಿಕಾಗೊ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾ ಭಾಷಾ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಆ್ಯಂಡ್ರಿವ್ ಒಲೆಟ್ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜೀವ ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ರಾಷ್ಟ್ರೀಯ ಜೀವವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಅಂಜನಾ ಭದರಿನಾರಾಯಣನ್, ಗಣಿತೀಯ ವಿಜ್ಞಾನ ವಿಭಾಗದಲ್ಲಿ ಮುಂಬೈನ ಟಾಟಾ ಇನ್‌ಸ್ಟಿಸ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ಸಹಾಯಕ ಪ್ರಾಧ್ಯಾಪಕ ಸವ್ಯಸಾಚಿ ಮುಖರ್ಜಿ, ಭೌತ ವಿಜ್ಞಾನ ವಿಭಾಗದಲ್ಲಿ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕೆಮಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಕಾರ್ತಿಶ್ ಮಂಥಿರಾಮ್ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ಫಲಕ, ಚಿನ್ನದ ಪದಕ ಮತ್ತು 1 ಲಕ್ಷ ಅಮೆರಿಕನ್ ಡಾಲರ್ (ಸುಮಾರು ₹ 88 ಲಕ್ಷ) ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.