ADVERTISEMENT

ಚಂದ್ರಯಾನ-4, ಗಗನಯಾನ..ಇಸ್ರೊ ಮಹತ್ವದ ಯೋಜನೆಗಳ ಕುರಿತು ಮಾಹಿತಿ ನೀಡಿದ ನಾರಾಯಣನ್

ಪಿಟಿಐ
Published 8 ಜನವರಿ 2025, 10:01 IST
Last Updated 8 ಜನವರಿ 2025, 10:01 IST
<div class="paragraphs"><p>ವಿ. ನಾರಾಯಣನ್</p></div>

ವಿ. ನಾರಾಯಣನ್

   

ಚಿತ್ರ ಕೃಪೆ: lpsc.gov.in 

ತಿರುವನಂತಪುರ: ‘ಗಗನಯಾನ ಸೇರಿದಂತೆ ಹಲವಾರು ಬಾಹ್ಯಾಕಾಶ ಕಾರ್ಯಕ್ರಮಗಳು ಪ್ರಗತಿಯಲ್ಲಿರುವ ಈ ವೇಳೆ ಸಂಸ್ಥೆಯ ಚುಕ್ಕಾಣಿ ಹಿಡಿಯಲಿದ್ದೇನೆ. ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಭರವಸೆ ಹೊಂದಿದ್ದೇನೆ’ ಎಂದು ಇಸ್ರೊ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ವಿ. ನಾರಾಯಣನ್‌ ಬುಧವಾರ ಹೇಳಿದರು.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಸ್ರೊದ ಇಡೀ ತಂಡದ ಬೆಂಬಲದೊಂದಿಗೆ ಸಂಸ್ಥೆಯ ಖ್ಯಾತಿ ಹೆಚ್ಚಿಸಬಲ್ಲೆ ಎಂಬ ವಿಶ್ವಾಸ ಹೊಂದಿದ್ದೇನೆ’ ಎಂದರು.

‘ಈ ಮೊದಲು, ಹಲವು ಶ್ರೇಷ್ಠ ವಿಜ್ಞಾನಿಗಳು ಕಾರ್ಯ ನಿರ್ವಹಿಸಿರುವ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸುವೆ’ ಎಂದು ಹೇಳಿದರು.

ನಾರಾಯಣನ್‌ ಅವರು ರಾಕೆಟ್‌ ಪ್ರೊಪಲ್ಷನ್‌ ಹಾಗೂ ಕ್ರಯೊಜನಿಕ್ಸ್‌ ತಜ್ಞ. ಇಸ್ರೊದಲ್ಲಿ ಕಳೆದ ನಾಲ್ಕು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಅವರು, ಚಂದ್ರಯಾನ–3 ಸೇರಿದಂತೆ ಹಲವು ಪ್ರಮುಖ ಅಂತರಿಕ್ಷ ಕಾರ್ಯಕ್ರಮಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.

ಚಂದ್ರಯಾನ ಕಾರ್ಯಕ್ರಮದ ಗಗನನೌಕೆಯನ್ನು ಹೊತ್ತು ನಭಕ್ಕೆ ಜಿಗಿದಿದ್ದ ‘ಎಲ್‌ವಿಎಂ3’ ರಾಕೆಟ್‌ನ ‘ಎಲ್‌110’ ಪ್ರೊಪಲ್ಷನ್‌ ಸಿಸ್ಟಮ್‌ನಲ್ಲಿ ಬಳಸಲಾದ ‘ಎಲ್‌110’ ಲಿಕ್ವಿಡ್‌ ಸ್ಟೇಜ್ ಮತ್ತು ‘ಸಿ25’ ಕ್ರಯೊಜನಿಕ್ ವ್ಯವಸ್ಥೆಗಳನ್ನು ನಾರಾಯಣನ್‌ ನೇತೃತ್ವದ ತಂಡ ಅಭಿವೃದ್ಧಿಪಡಿಸಿತ್ತು.

‘ಚಂದ್ರಯಾನ–2’ರ ಗಗನನೌಕೆಯ ‘ಸಾಫ್ಟ್‌ ಲ್ಯಾಂಡಿಂಗ್’ ವಿಫಲಗೊಂಡಿದ್ದಕ್ಕೆ ಕಾರಣಗಳನ್ನು ಪತ್ತೆ ಮಾಡುವುದು ಹಾಗೂ ‘ಚಂದ್ರಯಾನ–3’ ಕಾರ್ಯಕ್ರಮದ ವೇಳೆ, ಇಂತಹ ದೋಷಗಳು ಕಂಡುಬರದಂತೆ ಪರಿಹಾರ ಕ್ರಮಗಳನ್ನು ಶಿಫಾರಸು ಮಾಡಲು ನೇಮಿಸಿದ್ದ ರಾಷ್ಟ್ರ ಮಟ್ಟದ ತಜ್ಞರ ಸಮಿತಿಯ ನೇತೃತ್ವವನ್ನು ಕೂಡ ನಾರಾಯಣನ್‌ ವಹಿಸಿದ್ದರು.

ತಮಿಳುನಾಡಿನ ಕನ್ಯಾಕುಮಾರಿ ಮೂಲದ ನಾರಾಯಣನ್, ಮೆಕಾನಿಕಲ್‌ ಎಂಜಿನಿಯರಿಂಗ್‌ ಡಿಪ್ಲೊಮಾದಲ್ಲಿ ಪ್ರಥಮ ರ‍್ಯಾಂಕ್‌ನೊಂದಿಗೆ ತೇರ್ಗಡೆಯಾದರು.

ಆರಂಭದಲ್ಲಿ ಮದ್ರಾಸ್‌ ರಬ್ಬರ್‌ ಫ್ಯಾಕ್ಟರಿ ನಂತರ ಬಿಎಚ್‌ಇಎಲ್‌ನಲ್ಲಿ ಸೇವೆ ಸಲ್ಲಿಸಿದ ನಾರಾಯಣನ್‌, 1984ರಲ್ಲಿ ಇಸ್ರೊಗೆ ಸೇರಿದರು.

ನಂತರ, ಎಎಂಐಇಯಿಂದ ಕ್ರಯೊಜನಿಕ್‌ ಎಂಜಿನಿಯರಿಂಗ್‌ನಲ್ಲಿ ಮೊದಲ ರ‍್ಯಾಂಕ್‌ ಪಡೆದ ಅವರು, ಏರೋಸ್ಪೇಸ್‌ ಎಂಜಿನಿಯರಿಂಗ್‌ನಲ್ಲಿ ಪಿ.ಎಚ್‌ಡಿ ಪದವಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.