
ರೋಬೋ
ರಾಜ್‌ಕುಮಾರ್ ಅವರ ಹಳೆಯ ಬಾಂಡ್ ಸಿನೆಮಾಗಳನ್ನೋ, 70–80ರ ದಶಕದ ಪತ್ತೇದಾರಿ ಸಿನೆಮಾಗಳನ್ನೋ ನೋಡುವಾಗ ಎಳೆಯರಾಗಿದ್ದ ನಾವೆಲ್ಲ ಅದೆಷ್ಟು ವಿಸ್ಮಿತರಾಗುತ್ತಿದ್ದೆವಲ್ಲ? ಒಂದು ಬಟನ್ ಒತ್ತಿದರೆ, ಅಲ್ಲೆಲ್ಲೋ ಮಿಣಮಿಣ ಬೆಳಕು ಮೂಡಿ, ತಿರುಗುವ ಕುರ್ಚಿ ಬಂದು, ಮತ್ತೆಲ್ಲೋ ಅಡಗಿದ್ದ ಬಾಗಿಲು ತೆರೆದುಕೊಂಡು, ಇನ್ನೆಲ್ಲೋ ಅಡಗಿದ್ದ ಗನ್ ಹೊರಬಂದು - ಹೀಗೆ ಅಸಾಧ್ಯವೆನ್ನುವುದನ್ನು ಸಾಧ್ಯವೆನಿ ಸುವಂತೆ ತೋರಿಸಲಾಗುತ್ತಿತ್ತು; ತಂತ್ರಜ್ಞಾನ ಕ್ಷೇತ್ರವು ಮುಂದುವರಿದು, ಅಂದಿನ ಅಚ್ಚರಿ ಇಂದಿನ ನಿತ್ಯ
ಸತ್ಯವಾಗಿದೆ.
ಇಂದು ಬೆರಳತುದಿಯಲ್ಲಿ ಜಗದಗಲದ ಸುದ್ದಿಯಿದೆ; ಕೃತಕ ಬುದ್ದಿಮತ್ತೆಯ ಮುಲಾಜಿದೆ; ಅಂಗೈಯಲ್ಲಿ ಅಡಗಿದ ಫೋನಿನಲ್ಲಿ ಇರುವ ಸಾವಿರಾರು ಬಗೆಯ ‘ಆ್ಯಪ್’ಗಳು ಅಲ್ಲೆಲ್ಲೋ ಇರುವ ಉಪಗ್ರಹದ ಚಲನೆಯನ್ನು ನಿಖರವಾಗಿ ತಿಳಿಸುತ್ತವೆ; ಹಳ್ಳಿಯ ಬ್ಯಾಂಕಿನಿಂದ ಹೊರದೇಶದ ಬ್ಯಾಂಕಿಗೆ ಹಣ ಕಳಿಸುತ್ತದೆ; ಎಲ್ಲಿಗೋ ದೂರದ ದೇಶಕ್ಕೆ ವಿಮಾನವನ್ನು ಬುಕ್ ಮಾಡಬಹುದು; ಎಲ್ಲಿಂದಲೋ ತಿಂಡಿ ನಮ್ಮ ಮನೆ ಬಾಗಿಲಿಗೆ ಬರಬಹುದು - ಒಂದೇ ‘ಕ್ಲಿಕ್’ನಿಂದ! ಈಗಾಗಲೇ ಮನೆಮನೆಗೂ ನೆಲವನ್ನು ಒರೆಸಲು ರೋಬೋ ಬಂದಾಗಿದೆ. ಇನ್ನು ರೋಬೋಗಳೆಂದರೆ ಅದೇನೋ ಹೊಸ ವಿಷಯವೆನ್ನುವಂತೆ ಹಿರಿಯರ ಹುಬ್ಬು ಹಾರಿಸುತ್ತಿಲ್ಲ; ಕಿರಿಯರಿಗಂತೂ, ಅವು ತಮ್ಮ ಫ್ರೆಂಡ್ ಸರ್ಕಲ್ಲಿನ ಒಂದು ಭಾಗವೆಂಬಂತಾಗಿದೆ; ಅಂತಹ ರೋಬೋಗಳ ಕ್ಷೇತ್ರದಲ್ಲಿ ಹೊಸದೊಂದು ಬೆಳವಣಿಗೆಯಾಗಿದೆ; ನಮ್ಮ ಒಳಹೊರಗೂ ಇರುವ ಪುಟಾಣಿ ಸೂಕ್ಷ್ಮಾಣುಜೀವಿಗಳಿವೆಯಲ್ಲ? ಅಷ್ಟೇ ಪುಟ್ಟದಾದ ರೋಬೋಟ್ ಈಗ ತಯಾರಾಗಿದೆ ಗೊತ್ತಾ?! ’ಅದರಲ್ಲೇನು ದೊಡ್ಡ ವಿಷಯ? ದೊಡ್ಡ ಪುತ್ಥಳಿ ನಿರ್ಮಾಣ ಮಾಡಿದಂತೆಯೇ ಪುಟ್ಟ ಪುತ್ಥಳಿಯನ್ನು ಮಾಡಿದರಾಯ್ತು; ದೊಡ್ಡ ಪ್ರಮಾಣದಲ್ಲಿ ಅಡುಗೆ ಮಾಡಿದಂತೆಯೇ ಅಲ್ಪಪ್ರಮಾಣದಲ್ಲೂ ಮಾಡಬಹುದಲ್ಲಾ?’ ಎಂದುಕೊಳ್ಳಬೇಡಿ ಮತ್ತೆ! ಇದು ಸೂಕ್ಷ್ಮ ರೋಬೋಗಳ ಸೂಕ್ಷ್ಮವಿಷಯ! ಅಮೆರಿಕದ ಪೆನ್ಸಿಲ್ವೇನಿಯಾ ಮತ್ತು ಮಿಶಿಗನ್ ವಿಶ್ವವಿದ್ಯಾಲಯದ ಸಂಶೋಧಕರು ತಯಾರಿಸಿರುವ ಈ ಪುಟಾಣಿ ರೋಬೋಗಳ ಗಾತ್ರ, ಒಂದು ದೂಳಿನ ಕಣಕ್ಕೆ ಸಮ! ‘ಹೇ, ರೋಬೋ ಚಿಕ್ಕದಿರ ಬಹುದು, ತೀರ ಅಷ್ಟು ಚಿಕ್ಕದು ಸಾಧ್ಯವೇ?’ ಎಂದು ಸಂದೇಹ ಪಡಬೇಡಿ ಮತ್ತೆ! ಇದು ಖಂಡಿತ ಅತಿಶಯೋಕ್ತಿಯಲ್ಲ. ಈ ಸೂಕ್ಷ್ಮ ರೋಬೋಗಳ ನಿಜವಾದ ಗಾತ್ರ 200 x 300 x 50 ಮೈಕ್ರೋಮೀಟರ್. ಒಂದು ಮಿಲೀಮೀಟರ್‌ನ ಸಾವಿರದ ಒಂದು ಭಾಗವೇ ಒಂದು ಮೈಕ್ರೋಮೀಟರ್; ಹಾಗಿದ್ದ ಮೇಲೆ ಈ ರೋಬೋಗಳು ಬರಿಕಣ್ಣಿಗೇ ಕಾಣುವುದು ಸಾಧ್ಯವೇ? ಅದನ್ನು ಒಂದು ಸ್ವತಂತ್ರವಾಗಿ ಚಲಿಸಬಲ್ಲ, ಅನೇಕ ನಿಖರವಾದ ಕೆಲಸಗಳನ್ನು ನಿರ್ವಹಿ ಸಬಲ್ಲ ರೋಬೋಟನ್ನಾಗಿ ಮಾಡುವುದು ಅದೆಂತಹ ಸವಾಲು ಎಂಬುದನ್ನು ಊಹಿಸಿ.
ಅಷ್ಟು ಪುಟ್ಟ ವಸ್ತುವಿನಲ್ಲಿ ಅದೆಷ್ಟು ಮಾಹಿತಿಯನ್ನು ಅಡಗಿಸಬೇಕು, ಸೆನ್ಸರ್‌ಗಳನ್ನು ಲಗತ್ತಿಸಬೇಕು, ವಿದ್ಯುನ್ಮಾನ ವಿವರಗಳನ್ನು ಅಳವಡಿಸಬೇಕು; ಜೊತೆಗೆ ತನ್ನ ಪಾಡಿಗೆ ತಾನು ಚಲಿಸಲು, ಚಾರ್ಜ್ ಆಗಲು, ಮಾಹಿತಿ ಕಲೆಹಾಕಲು ಸಾಧ್ಯವಾಗುವಂತೆ ಆ ಪುಟಾಣಿ ರೋಬೋ ಸಮರ್ಥವಾಗಿರಬೇಕು - ಇವೆಲ್ಲವನ್ನೂ ಯೋಚಿಸಿದಾಗ, ತಂತ್ರಜ್ಞಾನ ಕ್ಷೇತ್ರದಲ್ಲಿ ಇದೆಂತಹ ಮೈಲಿಗಲ್ಲು ಎಂಬುದು ಅರ್ಥವಾಗಬಹುದು. ಈ ಸೂಕ್ಷ್ಮ ರೋಬೋಗಳು ಬೆಳಕನ್ನು ಉಪಯೋಗಿಸಿಕೊಂಡು ಸ್ವತಂತ್ರವಾಗಿ ಚಾರ್ಜ್ ಆಗುತ್ತವೆ; ಎಲ್.ಇ. ಡಿ. ಬಲ್ಬ್ ನ ಬೆಳಕೇ ಇವಕ್ಕೆ ಆಹಾರ. ಆದರೆ ಇಷ್ಟು ಪುಟ್ಟ ‘ಸೋಲಾರ್ ಪ್ಯಾನೆಲ್’ಗಳು ಕೇವಲ 75 ನ್ಯಾನೋ ವ್ಯಾಟ್‌ಗಳಷ್ಟು ಮಾತ್ರ ವಿದ್ಯುತ್ ಉತ್ಪಾದಿಸಬಹುದು; ಹಾಗಾಗಿ ಇಲ್ಲಿ ಮಿಶಿಗನ್ ವಿಶ್ವವಿದ್ಯಾಲಯದ ಸಂಶೋಧಕರು ವಿಶೇಷವಾಗಿ ತಯಾರಿಸಿದ ಸರ್ಕ್ಯೂಟ್’ಗಳನ್ನು ಬಳಸಿದ್ದಾರೆ; ಅದು ಅತ್ಯಂತ ಕಡಿಮೆ ವೋಲ್ಟೇಜಿನಲ್ಲಿ ಕಾರ್ಯವಹಿಸುವಂತೆ ಮಾಡಿ, ಒಂದು ಸಾವಿರ ಪಟ್ಟು ಕಡಿಮೆ ವಿದ್ಯುತ್ ಬಳಸುವಂತೆ ಮಾಡಲಾಗಿದೆ. ಹಾಗಾಗಿ, ವಿದ್ಯುತ್ ಉತ್ಪಾದನೆ ಕದಿಮೆಯಿದ್ದರೂ, ಬೇಡಿಕೆಯೂ ಕಡಿಮೆಯಾಗಿ, ರೋಬೋ ಸೂಕ್ತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ.
ಇನ್ನು, ಈ ಪುಟಾಣಿ ರೋಬೋಗಳು ನೀರಿನಂತಹ ದ್ರವಗಳಲ್ಲಿ ಈಜುತ್ತಾ ಚಲಿಸಬೇಕಾದಾಗ, ಇವಕ್ಕೆ ಈಜಲು ಕೈಕಾಲುಗಳನ್ನೋ, ಮೀನಿನಂತೆ ರೆಕ್ಕೆಯನ್ನೋ ನೀಡಲು ಸಾಧ್ಯವೇ? ಅಷ್ಟು ಪುಟ್ಟ ಚಲಿಸುವ ಅಂಗಗಳು ಗಟ್ಟಿಯಾಗಿ, ಮುರಿಯದಂತೆ ಇರಲು ಯಾಂತ್ರಿಕವಾಗಿ ಕಷ್ಟಸಾಧ್ಯ. ಹಾಗಾಗಿ, ನೀರನ್ನು ಹಿಂದಕ್ಕೆ ತಳ್ಳುತ್ತಾ, ಈಜುತ್ತಾ ಮುಂದಕ್ಕೆ ಚಲಿಸುವುದು ದೂರದ ಮಾತು ಎಂದರಿತ ಸಂಶೋಧಕರು, ಇಲ್ಲಿ ಹೊಸ ಬಗೆಯ ಈಜನ್ನು ಈ ಸೂಕ್ಷ್ಮ ರೋಬೋಗಳಿಗೆ ಕಲಿಸಿದರು! ಭೌತಿಕ ಬಲವಿಲ್ಲದಿದ್ದರೇನು? ತನ್ನ ವಿದ್ಯುತ್ ಕ್ಷೇತ್ರವನ್ನು ಬಳಸಿ, ನೀರಿನಲ್ಲಿರುವ ಇತರ ‘ಅಯಾನು’ಗಳನ್ನು ದೂರತಳ್ಳುತ್ತದೆ ಈ ಸೂಕ್ಷ್ಮ ರೋಬೋ! ಆ ಅಯಾನುಗಳು ತನ್ನ ಜೊತೆಗೆ ನೀರಿನ ಅಣುವನ್ನೂ ದೂರಕ್ಕೆ ಎಳೆದುಕೊಳ್ಳುತ್ತದೆ, ಆಗ ಈ ರೋಬೋ ಮುಂದಕ್ಕೆ ಚಲಿಸುತ್ತದೆ! ಹೀಗೆ ತನ್ನದೇ ವಿದ್ಯುತ್ ಕ್ಷೇತ್ರದಿಂದ, ನೀರಿನ ಹರಿವನ್ನು ನಿರ್ದೇಶಿಸುತ್ತವೆ, ಈ ಪುಟಾಣಿ ರೋಬೋಗಳು. ಲಕ್ಷ್ಮಣ ರಾಯರ ಪದ್ಯದ ‘ಸಣ್ತಮ್ಮಣ್ಣ’ನಂತೆ ಈ ರೋಬೋ ಸಣ್ತಮ್ಮಣ್ಣ, ಠೀವಿಯಿಂದ ನೀರಿನ ಅಣುಗಳನ್ನು ಹಿಂದಕ್ಕಿಡುತ್ತಾ, ಮುಂದೆ ಚಲಿಸುತ್ತದೆ ಮತ್ತು ತನಗೆ ನೀಡಲಾದ ಕಾರ್ಯವನ್ನು ನಿರ್ವಹಿಸುತ್ತದೆ.
ಈ ಸೂಕ್ಷ್ಮ ರೋಬೋಗಳಲ್ಲಿ ಅಡಗಿದ ‘ತಾಪಮಾನ ಮಾಪಕ’ಗಳು ತಮ್ಮ ಸುತ್ತಲಿನ ತಾಪಮಾನವನ್ನು ಅತ್ಯಂತ ನಿಖರವಾಗಿ ಗುರುತಿಸಿದ ನಂತರ, ಅದರ ಬಗ್ಗೆ ಮಾಹಿತಿಯನ್ನು ಹೇಗೆ ತಿಳಿಸುತ್ತವೆ ಗೊತ್ತೇ? ನೃತ್ಯದ ಮೂಲಕ! ಹೌದು, ಈಜನ್ನು ಕಲಿಸಿದ ವಿಜ್ಞಾನಿಗಳೇ ಈ ರೋಬೋಗಳಿಗೆ ನೃತ್ಯವನ್ನೂ ಕಲಿಸಿದ್ದಾರೆ! ಜೇನುಹುಳಗಳನ್ನೂ ಒಳಗೊಂಡಂತೆ ಅನೇಕ ಕೀಟಗಳು ತಮ್ಮ ನಿರ್ದಿಷ್ಟವಾದ ಶೈಲಿಯ ನೃತ್ಯದ ಮೂಲಕ, ತಮ್ಮತಮ್ಮಲೇ ಅನೇಕ ಮಾಹಿತಿಯನ್ನು ರವಾನಿಸಿಕೊಳ್ಳುವುದು ನಿಮಗೆ ಗೊತ್ತಿರಬಹುದು; ಅದೇ ರೀತಿ, ತಾಪಮಾನ ಎಷ್ಟಿದೆ ಎಂಬ ಮಾಹಿತಿಯನ್ನು ಈ ಪುಟ್ಟ ರೋಬೋಗಳು ನಿರ್ದಿಷ್ಟ ಬಗೆಯಲ್ಲಿ ಅಲುಗಾಡಿ, ಮಿಸುಕಾಡಿ ಸಂಖ್ಯೆಯನ್ನು ಸೂಚಿಸುತ್ತವೆ. ಅದಕ್ಕಾಗಿಯೇ ಅತ್ಯಂತ ಸಮರ್ಥವಾದ, ಆದರೆ ಚಿಕ್ಕದಾದ ಪ್ರೋಗ್ರಾಂ ಗಳನ್ನೂ ಬರೆದು ಈ ರೋಬೋಗಳಲ್ಲಿ ಸೇರಿಸಬೇಕಾಗಿದ್ದುದು ಸಂಶೋಧಕರಿಗಿದ್ದ ಮತ್ತೊಂದು ಸವಾಲು; ಅದನ್ನೂ ಗೆದ್ದು ತಯಾರಾದ ಈ ನೃತ್ಯಪಟು, ಈಜುಪಟು ಸೂಕ್ಷ್ಮಾಣು ರೋಬೋ, ತನ್ನ ಇಂತಹ ವೈಶಿಷ್ಟ್ಯ ಗಳಿಂದಲೇ ವೈದ್ಯಕೀಯ ಕ್ಷೇತ್ರದಲ್ಲಿ, ರಕ್ಷಣಾಕ್ಷೇತ್ರದಲ್ಲಿ ಅನೇಕ ಅದ್ವಿತೀಯ ಆನ್ವಯಿಕೆಗಳಿಗೆ ಕಾರಣವಾಗುತ್ತದೆ ಎಂಬುದು ಸಂಶೋಧಕರ ನಂಬಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.