
ಶಿಮೊನ್ ಸಕಾಗುಚಿ
ಶಿಮೊನ್ ಸಕಾಗುಚಿ, ಜಪಾನಿನ ಒಸಾಕಾ ವಿಶ್ವವಿದ್ಯಾನಿಲಯದಲ್ಲಿ ಅನ್ವಯಿಕ ರೋಗನಿರೋಧಿ ವಿಜ್ಞಾನ ವಿಭಾಗದಲ್ಲಿ ಪ್ರೊಫೆಸರ್. ನಲವತ್ತು ವರ್ಷಗಳ ಹಿಂದೆ ಎಲ್ಲರೂ ಕೈ ಬಿಟ್ಟು ನಡೆದಿದ್ದ ವಿಷಯವೊಂದನ್ನು ಬೆಂಬತ್ತಿದವರು. ಅದಕ್ಕಾಗಿ ಈ ವರ್ಷದ ಶರೀರಕ್ರಿಯೆ ಹಾಗೂ ವೈದ್ಯ ವಿಭಾಗದ ನೊಬೆಲ್ ಪಾರಿತೋಷಕವನ್ನು ಇನ್ನಿಬ್ಬರ ಜೊತೆಗೆ ಹಂಚಿಕೊಂಡರು. ನಮ್ಮ ದೇಹವು ಹೇಗೆ ತನ್ನ ಹಾಗೂ ಪರಕೀಯ ಅಂಶಗಳನ್ನು ಗುರುತಿಸಿ, ಕೇವಲ ಪರಕೀಯ ಅಂಶಗಳನ್ನಷ್ಟೆ ಹತ್ತಿಕ್ಕುತ್ತದೆ ಎಂಬುದಕ್ಕೆ ವಿವರಣೆಯನ್ನು ಒದಗಿಸಿದ್ದಕ್ಕಾಗಿ ಅವರಿಗೆ ಈ ಪ್ರಶಸ್ತಿ ಸಂದಿತು.
ನಲವತ್ತು ವರ್ಷಗಳ ಹಿಂದೆಯೂ ದೇಹದಲ್ಲಿ ಸೋಂಕು ರೋಗಗಳಿಂದ ಕಾಪಾಡುವ ವ್ಯವಸ್ಥೆ ಇದೆ ಎಂಬುದು ಸ್ಪಷ್ಟವಾಗಿತ್ತು. ಅದು ಇರುವುದರಿಂದಲೇ ಸೋಂಕುವ ರೋಗಾಣುಗಳ ಪರಿಚಯವನ್ನು ದೇಹಕ್ಕೆ ನೀಡಿದರೆ ಸಾಕು. ದೇಹ ಅನಂತರ ಅಂತಹ ರೋಗಾಣು ಒಳನುಸುಳಿದ ಕೂಡಲೇ, ಅದನ್ನು ಹತ್ತಿಕ್ಕಬಹುದು ಎನ್ನುವ ಧೈರ್ಯ ಬಂದಿತ್ತು. ಅದಕ್ಕಾಗಿ ಲಸಿಕೆಗಳನ್ನು ಸೃಷ್ಟಿ ಮಾಡಿದ್ದೂ ಆಗಿತ್ತು. ಕೋವಿಡ್‌ನಂತಹ ಮಾರಿಯನ್ನು ಕೇವಲ ಲಸಿಕೆಗಳಿಂದಲೇ ಹತ್ತಿಕ್ಕಲಾಗಿತ್ತು. ಇಷ್ಟೆಲ್ಲ ಸಾಧನೆಗಳು ಆಗಿದ್ದರೂ, ಒಂದು ಸಮಸ್ಯೆ ಇದ್ದೇ ಇತ್ತು. ದೇಹದ ರೋಗನಿರೋಧಕ ವ್ಯವಸ್ಥೆ ತನ್ನದಲ್ಲದ್ದನ್ನಷ್ಟ ಹೇಗೆ ಹುಡುಕುತ್ತದೆ? ತನ್ನದೇ ಅಂಶಕ್ಕೆ ಏಕೆ ಅಪಾಯ ಮಾಡುವುದಿಲ್ಲ? ಇದು ಪ್ರಶ್ನೆ. ಏಕೆಂದರೆ, ದೇಹ ರೋಗನಿರೋಧಕ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಬಿಳಿರಕ್ತಕೋಶಗಳ ಕೋಟ್ಯಂತರ ರೂಪಗಳನ್ನು ತಯಾರಿಸಿರುತ್ತದೆ. ಇವುಗಳಲ್ಲಿ ನಮ್ಮದೇ ವ್ಯವಸ್ಥೆಯನ್ನು ತಾಕುವ ಕೋಶಗಳೂ ಇರಬಲ್ಲವು. ಹಾಗಿದ್ದೂ, ದೇಹ ಯಾವಾಗಲೂ ಪರಕೀಯ ವಸ್ತುಗಳನ್ನೇ ಹುಡುಕಿ ನಾಶ ಪಡಿಸುತ್ತದಲ್ಲ? ಅದು ಹೇಗೆ?
ಈ ಪ್ರಶ್ನೆಯನ್ನು ಕೇಳಲು ಕಾರಣವೂ ಇತ್ತೆನ್ನಿ. ಯಾವುದೇ ಸುವ್ಯವಸ್ಥೆ ಆಗಾಗ ಹದಗೆಡುವಂತೆಯೇ ದೇಹದ ರೋಗನಿರೋಧಕ ಗುಣವೂ ಆಗಾಗ್ಗೆ ಹಾದಿ ತಪ್ಪುತ್ತದೆ. ಅಂತಹ ಸಂದರ್ಭದಲ್ಲಿ ದೇಹ ತನ್ನದೇ ಅಂಗಗಳ ಮೇಲೆ, ಅರ್ಥಾತ್ ಬಾಂಧವರ ಮೇಲೆಯೇ ಎರಗುವುದುಂಟು. ಆಟೊ ಇಮ್ಯೂನ್ ಕಾಯಿಲೆಗಳು ಹೀಗೆ ಉಂಟಾಗುತ್ತವೆ. ಡಯಾಬಿಟೀಸ್, ಹೆಂಗಸರಲ್ಲಿ ಗರ್ಭಪಾತವಾಗುವುದು, ಕೆಲವು ಅಂಗಗಳ ಬೆಳವಣಿಗೆ ಕ್ಷೀಣಿಸುವುದು, ಮಯಾಸ್ತೀನಿಯಾ ಗ್ರಾವಿಸ್ ನಂತಹ ನರರೋಗಗಳು ಕಾಣಿಸಿಕೊಳ್ಳುತ್ತವೆ. ಇವುಗಳಿಗೆಲ್ಲ ಈಗ ಚಿಕಿತ್ಸೆ ಬಂದಿದೆ. ರೋಗಕ್ಕೆ ಕಾರಣವಾಗುವ ಆಂಟಿಬಾಡಿಗಳ ಉತ್ಪಾದನೆಯನ್ನು ಹತ್ತಿಕ್ಕುವ ಔಷಧಗಳು ಇವೆ.
ಆದರೂ ಒಂದು ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಸೋಂಕುಂಟು ಮಾಡುವ ಪರಕೀಯ ಜೀವಿಗಳನ್ನು ಹತ್ತಿಕ್ಕಬೇಕಾದ ರಕ್ಷಕಕೋಶಗಳು ದೇಹದ್ದೇ ಭಾಗಗಳಿಗೆ ತೊಂದರೆ ಕೊಡುವುದು ಏಕೆ? ಇದಕ್ಕೆ ಎರಡು ಕಾರಣಗಳನ್ನು ವಿಜ್ಞಾನಿಗಳು ತರ್ಕಿಸಿದ್ದರು. ಮೊದಲನೆಯದು, ಬಿಳಿರಕ್ತಕೋಶಗಳು ಹುಟ್ಟುವಾಗಲೇ ಅದು ಹೇಗೋ ದೇಹ ಅವುಗಳಲ್ಲಿ ತನ್ನ ಅಂಶಗಳನ್ನು ಗುರುತಿಸುವ ಕೋಶಗಳು ಹುಟ್ಟದಂತೆ ಮಾಡುತ್ತಿರಬೇಕು. ಅಥವಾ ಅಂತಹ ವಿನಾಶಕಾರಿ ಕೋಶಗಳು ಹುಟ್ಟಿದರೂ, ಅವು ಕಾರ್ಯಪ್ರವೃತ್ತವಾಗದಂತೆ ತಡೆಯುತ್ತಿರಬೇಕು.
ಆಗ ಸಕಾಗುಚಿ ಕ್ಯೋಟೋ ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕನಾಗಿ ಸೇರಿದ್ದ ದಿನಗಳು. ಅಲ್ಲಿ ಆ ಹಿಂದೆ ಇದ್ದ ಮತ್ತೊಬ್ಬ ಸಂಶೋಧಕರು ಒಂದು ವಿಶಿಷ್ಟ ಪ್ರಯೋಗವನ್ನು ಮಾಡಿದ್ದರು. ಆಗ ತಾನೇ ಹುಟ್ಟಿದ ಇಲಿಗಳ ಥೈಮಸ್ ಗ್ರಂಥಿಗಳನ್ನು ಕಿತ್ತೊಗೆದು ಏನಾಗುತ್ತದೆ ಎಂದು ಪರೀಕ್ಷಿಸಿದ್ದರು. ಥೈಮಸ್ ಗ್ರಂಥಿ ಬಿಳಿ ರಕ್ತಕೋಶಗಳು ಬೆಳೆಯುವ ಸ್ಥಳ; ತರಬೇತಿ ಕೇಂದ್ರ ಎನ್ನಿ! ಹೀಗೆ ಹುಟ್ಟಿದ ಇಲಿಮರಿಗಳು ಎಲ್ಲ ಸೋಂಕಿಗೂ ಬಲಿಯಾಗುತ್ತಿದ್ದುವು. ಅವುಗಳಲ್ಲಿ ರೋಗ ನಿರೋಧಕಶಕ್ತಿ ಇರಲೇ ಇಲ್ಲ; ಬಿಳಿರಕ್ತಕಣಗಳೂ ಕಾಣಿಸಲಿಲ್ಲ.
ಮತ್ತೊಂದು ಪ್ರಯೋಗದಲ್ಲಿ ಮರಿಗಳು ಹುಟ್ಟಿದ ಮೂರು ದಿನದ ನಂತರ ಥೈಮಸ್ ಗ್ರಂಥಿಯನ್ನು ಕಿತ್ತೊಗೆದರು. ಇಂಥವುಗಳಲ್ಲಿಯೂ ರೋಗ ನಿರೋಧಕಶಕ್ತಿ ಕುಗ್ಗಬೇಕಿತ್ತು. ಬದಲಿಗೆ, ಅವುಗಳಲ್ಲಿ ಆಟೊ ಇಮ್ಯೂನ್ ಕಾಯಿಲೆಗಳು ಕಂಡವು. ಕೆಲವು ಇಲಿಗಳ ಥೈರಾಯಿಡ್ ಗ್ರಂಥಿ ಬೆಳೆಯಲೇ ಇಲ್ಲ. ಇನ್ನು ಹೆಣ್ಣುಮರಿಗಳಲ್ಲಿ ಗರ್ಭಾಶಯ ಕ್ಷೀಣವಾಗುತ್ತಹೋಯಿತು. ಅರ್ಥಾತ್, ರೋಗ ನಿರೋಧಕತೆ ಇತ್ತು. ಆದರೆ ಸ್ವಂತದ್ದನ್ನೂ ಗುರುತಿಸುತ್ತಿತ್ತು. ಅಂದರೆ ಸ್ವಂತದ್ದನ್ನು ಗುರುತಿಸುವ ಶಕ್ತಿ ಸಹಜವಾಗಿಯೇ ಇರುತ್ತದೆ. ಆದರೆ ಕುಗ್ಗಿರುತ್ತದೆ. ಆ ನಿಯಂತ್ರಣ ತಪ್ಪಿದಾಗ ಆಟೋ ಇಮ್ಯೂನ್ ಕಾಯಿಲೆಗಳು ಉಂಟಾಗುತ್ತವೆ. ಈ ಪ್ರಯೋಗಗಳನ್ನು ಇನ್ನೂ ಹಲವರು ಮಾಡಿದರು. ಆದರೆ ಖಚಿತವಾಗಿ ಹೀಗೇ ಅಗುತ್ತಿದೆ ಎಂದು ನಿರೂಪಿಸಲು ಯಾರಿಂದಲೂ ಆಗಿರಲಿಲ್ಲ. ಹೀಗಾಗಿ ಎಲ್ಲರೂ ಥೈಮಸ್ ಗ್ರಂಥಿಯಲ್ಲಿ ಸ್ವಂತ ಪತ್ತೆ ಮಾಡುವ ಕೋಶಗಳು ಹುಟ್ಟುತ್ತಲೇ ಇಲ್ಲ ಎಂದು ತೀರ್ಮಾನಿಸಿ, ಪ್ರಯೋಗಗಳನ್ನು ಕೈಚೆಲ್ಲಿಬಿಟ್ಟಿದ್ದರು.
ಸಕಾಗುಚಿಯ ಪ್ರಯೋಗಗಳು ಆರಂಭವಾಗಿದ್ದು ಈ ಸಂದರ್ಭದಲ್ಲಿ. ಇದೇ ಥೈಮಸ್ ಕಿತ್ತ ಇಲಿಗಳ ಪ್ರಯೋಗವನ್ನು ಮತ್ತೊಮ್ಮೆ ಮುಂದುವರೆಸಿದ ಸಕಾಗುಚಿ, ಒಂದು ಸಣ್ಣ ಬದಲಾವಣೆ ಮಾಡಿದರು. ಹುಟ್ಟಿದ ತಕ್ಷಣವೇ ಥೈಮಸ್ ಗ್ರಂಥಿಯನ್ನು ತೆಗೆದ ಹಾಗೂ ಮೂರು ದಿನಗಳ ನಂತರ ಥೈಮಸ್ ಗ್ರಂಥಿಯನ್ನು ಕಿತ್ತ ಇಲಿ ಮರಿಗಳಿಗೆ, ಬೇರೆ ಇಲಿಗಳಿಂದ ಹೆಕ್ಕಿದ ಬಿಳಿರಕ್ತಕೋಶಗಳನ್ನು ಚುಚ್ಚಿದ. ಥೈಮಸ್ ಗ್ರಂಥಿಯನ್ನು ಆರಂಭದಲ್ಲಿಯೇ ಕಿತ್ತೊಗೆದ ಇಲಿಗಳಲ್ಲಿ ಏನೂ ಬದಲಾವಣೆ ಕಾಣಲಿಲ್ಲ. ಆದರೆ ಮೂರು ದಿನಗಳ ನಂತರ ಕಿತ್ತೊಗೆದವುಗಳಲ್ಲಿ ಯಾವುದೇ ಆಟೊ ಇಮ್ಯೂನ್ ಕಾಯಿಲೆಗಳು ತೋರಲಿಲ್ಲ. ಜೊತೆಗೆ ಅವುಗಳ ರಕ್ತದಲ್ಲಿ ಬಿಳಿ ರಕ್ತಕೋಶಗಳ ಸಂಖ್ಯೆ ಹಾಗೂ ವೈವಿಧ್ಯವೂ ಎಂದಿನಂತೆ ಇತ್ತು. ಥೈಮಸ್ ಗ್ರಂಥಿಯಲ್ಲಿ ಸ್ವಂತ ನಾಶಕಕೋಶಗಳು ಹುಟ್ಟುತ್ತವೆ. ಆದರೆ ಅವು ಕೆಲಸ ಮಾಡದಂತೆ ಏನೋ ತಡೆಯುತ್ತದೆ ಎಂಬುದು ಸ್ಪಷ್ಟವಾಯಿತು. ತದನಂತರ ಈ ಕೋಶಗಳ ಸ್ವರೂಪವೂ ಬಯಲಾಯಿತು.
ಹೀಗೆ ಥೈಮಸ್ ಕೋಶಗಳು ಅಥವಾ ಟಿ-ಕೋಶಗಳು ಎನ್ನುವ ಜೀವಕೋಶಗಳ ಪತ್ತೆಯಾಯಿತು. ಅವುಗಳಲ್ಲಿ ಇರುವ ವೈವಿಧ್ಯವೂ ಪತ್ತೆಯಾಯಿತು. ಅವುಗಳಲ್ಲಿ ಒಂದು ಬಗೆ (ಸಪ್ರೆಸರ್ ಟಿ-ಕೋಶಗಳು) ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಹದ್ದುಬಸ್ತಿನಲ್ಲಿ ಇಡುತ್ತವೆ ಎಂಬುದೂ ಸ್ಪಷ್ಟವಾಯಿತು. ಈ ಎಲ್ಲ ಅಂಶಗಳೂ ಸ್ಪಷ್ಟವಾಗುವುದಕ್ಕೆ ಎಲ್ಲರೂ ಕೈಬಿಟ್ಟ ಪ್ರಯೋಗಗಳನ್ನು, ತತ್ವಗಳನ್ನು ಮರುಪರಿಶೀಲಿಸುವ ಸಾಹಸ ಮಾಡಿದ ಸಕಾಗುಚಿಯ ಸಂಶೋಧನೆಗಳು ಕಾರಣವಾದವು.