‘ತೇರಾ ಏರಿ ಅಂಬರದಾಗೆ ನೇಸರ ನಗುತಾನೆ’ ಕವಿ ದೊಡ್ಡರಂಗೇಗೌಡರ ಕಣ್ಣಿಗೆ ಸೂರ್ಯ ಕಂಡಿದ್ದು ಹೀಗೆ. ಈಚೆಗೆ ಕೊಡಗಿನ ಬೆಟ್ಟದ ತುದಿಯಲ್ಲಿ ಟೆಲಿಸ್ಕೋಪ್‌ನಿಂದ ಸೂರ್ಯನತ್ತ ಕಣ್ಣಿಟ್ಟಿದ್ದ ಹತ್ತಿಪ್ಪತ್ತು ಮಂದಿಯ ತಂಡ ಕಂಡಾಗ ಈ ಹಾಡು ನೆನಪಾಯಿತು. ಈ ಟೆಲಿಸ್ಕೋಪ್‌ನಿಂದ ನೋಡಿದರೆ ನಗುವ ನೇಸರನ ಬದಲಿಗೆ ನಿಗಿನಿಗಿ ಉರಿಯುವ ಸೂರ್ಯನ ದರ್ಶನವಾಯಿತು.
ಕವಿಯ ಕಣ್ಣು ಸೌಂದರ್ಯವನ್ನು ಕಂಡರೆ, ವಿಜ್ಞಾನಿಗಳ ಕಣ್ಣು ಕೌತುಕ ಮತ್ತು ವಾಸ್ತವವನ್ನು ಕಾಣುತ್ತದೆ. ರವಿಯ ಸೌಂದರ್ಯವನ್ನು ಅನೇಕ ಕವಿಗಳು ವರ್ಣಿಸಿದ್ದಾರೆ. ಆದರೆ, ರವಿಯ ನಿಜ ಸ್ವರೂಪವನ್ನು ಅಧ್ಯಯನ ಮಾಡಿದವರು ವಿರಳ. ಸೂರ್ಯಗ್ರಹಣದ ಸಮಯದಲ್ಲಿ ಒಂದಷ್ಟು ಜನ ಸೂರ್ಯನನ್ನು ದಿಟ್ಟಿಸಿದರೆ ನಂತರ ಯಾರೊಬ್ಬರೂ ಅತ್ತ ಕಣ್ಣಾಯಿಸುವುದಿಲ್ಲ ಎಂದು ಬೇಸರದಿಂದ ನುಡಿದವರು ಸೂರ್ಯನನ್ನು ನೋಡುವುದರಲ್ಲಿ ಮಗ್ನರಾಗಿದ್ದ ಹವ್ಯಾಸಿ ಖಗೋಳ ವೀಕ್ಷಕ ವಿಶ್ವನಾಥ್.
ಹೌದು. ಅವರು ಹೇಳಿದಂತೆ ಸೂರ್ಯನನ್ನು ಅಧ್ಯಯನ ಮಾಡಲು ಇಚ್ಛಿಸುವವರ ಸಂಖ್ಯೆ ಕಡಿಮೆ ಇದೆ. ಖಗೋಳ ಭೌತಶಾಸ್ತ್ರವನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚೇನೂ ಇಲ್ಲ. ಅದರಲ್ಲೂ ಸೂರ್ಯನನ್ನು ಅಧ್ಯಯನ ಮಾಡಲು ಹೊರಟವರು ಬೆರಳೆಣಿಕೆಯಷ್ಟು ಮಂದಿ ಮಾತ್ರ.
ಈಗ ಸೂರ್ಯನ ಅಧ್ಯಯನಕ್ಕೆ ಅಥವಾ ವೀಕ್ಷಣೆಗೆ ಸಕಾಲ. ಪ್ರತಿ ಹನ್ನೊಂದು ವರ್ಷಗಳಿಗೊಮ್ಮೆ ಸೂರ್ಯನ ಮೇಲ್ಮೈನಲ್ಲಿ ಕೆಲವೊಂದು ಬಗೆಯ ಚಟುವಟಿಕೆಗಳು ಹೆಚ್ಚಾಗುತ್ತವೆ. ಈ ವರ್ಷ ಅಂತಹದ್ದೊಂದು ಚಟುವಟಿಕೆ ನಡೆದಿದೆ. ಈಗ ಬಿಟ್ಟರೆ ಇಂತಹ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಹನ್ನೊಂದು ವರ್ಷ ಕಾಯಲೇಬೇಕಾಗುತ್ತದೆ.
ಹಾಗೆಂದು, ಬರಿಗಣ್ಣಿನಿಂದ ಸೂರ್ಯನನ್ನು ವೀಕ್ಷಿಸಲು ಆಗದು. ಅದಕ್ಕೆಂದೇ ವಿಶೇಷವಾಗಿ ರೂಪಿಸಲಾದ ಸೋಲಾರ್ ಟೆಲಿಸ್ಕೋಪ್ ಮೂಲಕವೇ ವೀಕ್ಷಿಸಬೇಕು. ಇದರಿಂದ ಹೆಚ್ಚು ನಿಖರವಾಗಿ ಸೂರ್ಯನನ್ನು ಕಾಣಬಹುದಾಗಿದೆ.
ಬೆಂಗಳೂರು ಅಸ್ಟ್ರಾನಮಿಕಲ್ ಸೊಸೈಟಿ ಎಂಬ ಹವ್ಯಾಸಿ ಖಗೋಳ ವೀಕ್ಷಕರ ಬಳಗವು ತುಸು ದುಬಾರಿ ಎನಿಸುವ ಸೋಲಾರ್ ಟೆಲಿಸ್ಕೋಪ್ ಖರೀದಿಸಿ ಇದರ ಮೂಲಕ ಸೂರ್ಯನನ್ನು ನೋಡುತ್ತಿದೆ. ಈಗಾಗಲೇ ಬೆಂಗಳೂರು ಮತ್ತು ಕೊಡಗಿನಲ್ಲಿ ಸಾಕಷ್ಟು ಬಾರಿ ಸೂರ್ಯನನ್ನು ಟೆಲಿಸ್ಕೋಪ್ ಮೂಲಕ ದಿಟ್ಟಿಸಿ, ಸಾಕಷ್ಟು ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಇಂತಹ ಟೆಲಿಸ್ಕೋಪ್‌ಗಳ ಬೆಲೆ ಅಂದಾಜು ₹1.50 ಲಕ್ಷದಿಂದ ಆರಂಭವಾಗಿ ₹10 ರಿಂದ ₹12 ಲಕ್ಷದವರೆಗೂ ಇದೆ. ದುಬಾರಿ ಬೆಲೆ ನೀಡಿದರೆ ಇನ್ನಷ್ಟು ನಿಖರವಾಗಿ ಸೂರ್ಯನನ್ನು ವೀಕ್ಷಿಸುವ ಟೆಲಿಸ್ಕೋಪ್‌ಗಳು ಸಿಗುತ್ತವೆ. ಸದ್ಯ, ನಮ್ಮ ಬಳಿ ಆರಂಭಿಕ ಬೆಲೆಯ ಟೆಲಿಸ್ಕೋಪ್ ಇದೆ ಎಂದರು ವಿಶ್ವನಾಥ್.
ಈ ಟೆಲಿಸ್ಕೋಪ್ ಕೇವಲ ಸೂರ್ಯನಿಗಾಗಿಯೇ ಇರುವಂತದ್ದು. ರಾತ್ರಿ ವೇಳೆಯಲ್ಲಿ ನಕ್ಷತ್ರ ವೀಕ್ಷಣೆ ಈ ಟೆಲಿಸ್ಕೋಪ್‌ನಿಂದ ಸಾಧ್ಯವಾಗದು. ಸೂರ್ಯನನ್ನು ಕಾಣುವ ಇಚ್ಛೆ ಉಳ್ಳವರಷ್ಟೇ ಈ ಟೆಲಿಸ್ಕೋಪ್ ಖರೀದಿಸಬಹುದು.
‘ಬಿಎಎಸ್’ ಕ್ಲಬ್‌ನಲ್ಲಿ ಸದ್ಯ 40 ರಿಂದ 60 ಸದಸ್ಯರು ಸಕ್ರಿಯವಾಗಿದ್ದಾರೆ. ಆನ್‌ಲೈನ್‌ನಲ್ಲಿ ಎರಡು ಸಾವಿರಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡಿದ್ದಾರೆ. ಜನರಲ್ಲಿ ಖಗೋಳ ವೀಕ್ಷಣೆಯ ಕುರಿತು ಆಸಕ್ತಿ ಬೆಳೆಸುವುದು ಇದರ ಉದ್ದೇಶ. ಪ್ರತಿ ವರ್ಷ ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ಕೊಡಗಿನ ಬೆಟ್ಟಗುಡ್ಡಗಳಿಗೆ ಬಂದು ಆಕಾಶಕಾಯಗಳನ್ನು ವೀಕ್ಷಿಸುವುದು ಇವರ ಹವ್ಯಾಸ.
ಸೂರ್ಯನಲ್ಲಿ ಹೆಚ್ಚು ಚಟುವಟಿಕೆ: ಸೂರ್ಯನಲ್ಲಿ ನಡೆಯುವ ಕೆಲವು ಬಗೆಯ ಚಟುವಟಿಕೆಗಳು ಪ್ರತಿ ಹನ್ನೊಂದು ವರ್ಷಕ್ಕೊಮ್ಮೆ ಹೆಚ್ಚಾಗುತ್ತವೆ. ಅದು ಈ ಬಾರಿ ನಡೆಯುತ್ತಿದ್ದು, ಈ ವರ್ಷದ ಮಧ್ಯಭಾಗದ ಸುಮಾರಿಗೆ ಗರಿಷ್ಠ ಮಟ್ಟ ತಲುಪುವ ನಿರೀಕ್ಷೆ ಇದೆ ಎಂದು ವಿಜ್ಞಾನಿಗಳು ಈ ಹಿಂದೆ ಅಂದಾಜು ಮಾಡಿದ್ದರು.
ಮುಖ್ಯವಾಗಿ ಸೂರ್ಯನಲ್ಲಿ ಕಣಗಳ ಪ್ರವಾಹ, ವಿಕಿರಣ ಪ್ರವಾಹಗಳಂತಹ ಘಟನೆಗಳು ಈ ವರ್ಷ ಹೆಚ್ಚು ನಡೆಯುತ್ತಿವೆ. ಇಂತಹ ವಿದ್ಯಮಾನಗಳು ಭೂಮಿಯ ಕಾಂತಕ್ಷೇತ್ರದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಇದರಿಂದಾಗಿ ಭೂಮಿಯ ಕಾಂತಕ್ಷೇತ್ರದಲ್ಲಿ ಭೂ ಕಾಂತೀಯ ಬಿರುಗಾಳಿ ಉಂಟಾಗುವ ಸಾಧ್ಯತೆಯೂ ಹೆಚ್ಚು ಇದೆ ಎಂದು ಬೆಂಗಳೂರಿನ ಜವಾಹರ್‌ಲಾಲ್ ನೆಹರು ತಾರಾಲಯದ ನಿರ್ದೇಶಕ ಹಾಗೂ ಇಸ್ರೊ ನಿವೃತ್ತ ವಿಜ್ಞಾನಿ ಬಿ.ಆರ್.ಗುರುಪ್ರಸಾದ್ ಹೇಳುತ್ತಾರೆ.
ಇಂತಹ ವಿದ್ಯಮಾನಗಳು ಭೂಮಿಯನ್ನು ಸುತ್ತುತ್ತಿರುವ ಉಪಗ್ರಹಗಳಿಗೆ ಹಾನಿ ಮಾಡಬಲ್ಲವು, ಕೆಲವೊಂದು ರೇಡಿಯೊ ಸಂಪರ್ಕವನ್ನು ಕಡಿದು ಹಾಕಬಹುದು, ವಿದ್ಯುತ್ ಗ್ರಿಡ್‌ಗಳಿಗೂ ತೊಂದರೆ ಉಂಟು ಮಾಡಿ, ಗಗನಯಾತ್ರಿಗಳಿಗೂ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ ಎಂದು ಅವರು ತಿಳಿಸುತ್ತಾರೆ.
ಈ ಬಾರಿಯ ವಿಶೇಷ ಎಂದರೆ ಸೂರ್ಯನ ಮೇಲೆ ಪ್ರತಿ ಹನ್ನೊಂದು ವರ್ಷದ ಸುಮಾರಿಗೆ ಒಮ್ಮೆ ನಡೆಯುವಂತಹ ಇಂತಹ ವಿದ್ಯಮಾನಗಳನ್ನೆಲ್ಲ ನಿರಂತರವಾಗಿ ಉಪಗ್ರಹಗಳು ಮತ್ತು ರೋಬೋಟ್ ಅಂತರಿಕ್ಷ ನೌಕೆ ಮೂಲಕ ಕ್ರಮಬದ್ಧವಾಗಿ ಗಮನಿಸಲಾಗುತ್ತಿದೆ. ನಮ್ಮದೇ ಆದಿತ್ಯ ಎಲ್ 1 ನೌಕೆ ಸಹ ಸೂರ್ಯನ ಮೇಲೆ ತನ್ನ ಗಮನವನ್ನು ಸದಾ ಕೇಂದ್ರೀಕರಿಸಿದೆ. ಭೂಮಿಯಿಂದ 15 ಕೋಟಿ ಕಿಲೋಮೀಟರ್ ದೂರದಲ್ಲಿರುವ ಸೂರ್ಯನನ್ನು ಕೇವಲ 60 ಲಕ್ಷ ಕಿಲೋಮೀಟರ್ ಅಂತರದಲ್ಲಿ ಅಮೆರಿಕದ ಪಾರ್ಕರ್ ಸೌರ ಸಂಶೋಧಕ ನೌಕೆ ಹಾದು ಹೋಗಿದೆ. ಇವುಗಳಿಂದ ಇಂತಹ ವಿದ್ಯಮಾನಗಳಿಂದಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಮುನ್ನಚ್ಚರಿಕೆ ವಹಿಸಲು ಹೆಚ್ಚಿನ ಮಾಹಿತಿ ದೊರಕುತ್ತದೆ ಎಂದು ಅವರು ಮಾಹಿತಿ ನೀಡಿದರು.
ಸೂರ್ಯನನ್ನು ಬರಿಗಣ್ಣಿನಿಂದ ನೋಡದಿರಿ: ಸೂರ್ಯನನ್ನು ಯಾವುದೇ ಕಾರಣಕ್ಕೂ ಬರಿಗಣ್ಣಿನಿಂದ ನೋಡಲೇಬಾರದು. ಒಂದು ವೇಳೆ ಸೂರ್ಯನನ್ನು ದಿಟ್ಟಿಸಿದರೆ ಕುರುಡುತನ ಉಂಟಾಗುವ ಸಾಧ್ಯತೆ ಇದೆ. ಸೂರ್ಯಗ್ರಹಣವನ್ನೂ ಬರಿಗಣ್ಣಿನಿಂದ ನೋಡಲೇಬಾರದು. ಟೆಲಿಸ್ಕೋಪ್‌ಗೆ ತಜ್ಞರ ಸಲಹೆಯ ಮೇರೆಗೆ ಸೂಕ್ತವಾದ ಫಿಲ್ಟರ್‌ಗಳನ್ನು ಹಾಕಿದರೆ ನೋಡಬಹುದು. ಇಲ್ಲವೇ, ಸೂರ್ಯನ ವೀಕ್ಷಣೆಗೆಂದೇ ಮಾಡಿದ ಸೋಲಾರ್ ಟೆಲಿಸ್ಕೋಪ್ ಮೂಲಕವೂ ನೋಡಬಹುದು. ಇವುಗಳು ಲಭ್ಯವಿಲ್ಲದೇ ಇದ್ದರೆ, ರಾಜಸ್ಥಾನದ ಉದಯಪುರ ಮತ್ತು ತಮಿಳುನಾಡಿನ ಕೊಡೈಕೆನಾಲ್‌ನಲ್ಲಿರುವ ವೀಕ್ಷಣಾಲಯದಲ್ಲೂ ಸೂರ್ಯನನ್ನು ನೋಡುವ ಅವಕಾಶ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.