ADVERTISEMENT

ಶುಭಾಂಶು ಸಾಧನೆಗೆ ತಂದೆಯ ಸಂಭ್ರಮ, ರಾಕೆಟ್‌ನಲ್ಲಿದ್ದ ಮಗನ ಕಂಡು ತಾಯಿ ಭಾವುಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜೂನ್ 2025, 9:54 IST
Last Updated 25 ಜೂನ್ 2025, 9:54 IST
<div class="paragraphs"><p>ಶುಭಾಂಶ ಶುಕ್ಲಾ,&nbsp;ಶಂಭು ದಯಾಳ್ ಶುಕ್ಲಾ, ಆಶಾ ಶುಕ್ಲಾ</p></div>

ಶುಭಾಂಶ ಶುಕ್ಲಾ, ಶಂಭು ದಯಾಳ್ ಶುಕ್ಲಾ, ಆಶಾ ಶುಕ್ಲಾ

   

ನವದೆಹಲಿ: ಆಕ್ಸಿಯಂ–4 ಯೋಜನೆಯ ನೌಕೆಯಲ್ಲಿ ಹೆಮ್ಮೆಯಿಂದ ಕುಳಿತಿದ್ದ ಗ್ರೂಪ್‌ ಕ್ಯಾಪ್ಟನ್ ಶುಭಾಂಶು ಶುಕ್ಲಾ (39) ಅವರನ್ನು ಹೊತ್ತ ಆಕ್ಸಿಯಂ–4 ನೌಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಚಿಮ್ಮುತ್ತಿದ್ದಂತೆ ಮಗನ ಸಾಧನೆಯನ್ನು ಕುತೂಹಲದಿಂದ ನೋಡುತ್ತಿದ್ದ ತಂದೆ ಒಂದೆಡೆಯಾದರೆ, ಉಕ್ಕಿಬರುತ್ತಿದ್ದ ಕಣ್ಣೀರನ್ನು ಹಿಡಿದಿಟ್ಟುಕೊಳ್ಳಲು ತಾಯಿ ಯತ್ನಿಸುತ್ತಿದ್ದರು.

ಆಕ್ಸಿಯಂ–4 ನೌಕೆಯನ್ನು ಸ್ಪೇಸ್‌ಎಕ್ಸ್‌ ಕ್ರ್ಯೂಡ್ರಾಗನ್‌ ಸ್ಪೇಸ್‌ಕ್ರಾಫ್ಟ್‌ ಫಾಲ್ಕನ್‌ 9 ರಾಕೆಟ್ ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದ ಕಾಂಪ್ಲೆಕ್ಸ್‌ 39ಎ ಉಡ್ಡಯನ ಕೇಂದ್ರದಿಂದ ಬುಧವಾರ ನಭಕ್ಕೆ ಚಿಮ್ಮಿತು. ಈ ದೃಶ್ಯವನ್ನು ಬೃಹತ್ ಪರದೆಯಲ್ಲಿ ನೋಡುತ್ತಿದ್ದ ಶುಭಾಂಶು ಅವರ ತಂದೆ ಶಂಭು ದಯಾಳ್ ಶುಕ್ಲಾ ಹೆಮ್ಮೆಯಿಂದ ನಗೆ ಚೆಲ್ಲಿ ಬೆರಗಿನಿಂದ ಪರದೆ ನೋಡುತ್ತಿದ್ದರು. ಆದರೆ ಅವರ ಪಕ್ಕದಲ್ಲೇ ಕೂತಿದ್ದ ತಾಯಿ ಆಶಾ ಶುಕ್ಲಾ ಕಣ್ಣುಗಳು ಮಾತ್ರ ಮಮತೆಯಿಂದ ಕಣ್ಣೀರು ಸುರಿಸುತ್ತಿತ್ತು.

ADVERTISEMENT

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಆಶಾ, ‘ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗುತ್ತಿರುವ ಎರಡನೇ ಭಾರತೀಯನಾದ ಮಗನ ಸಾಧನೆ ಹೆಮ್ಮೆ ತಂದಿದೆ. ಶುಭಾಂಶುಗೆ ಶುಭವಾಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.

‘ಯೋಜನೆಯನ್ನು ಪೂರ್ಣಗೊಳಿಸು. ನಂತರ ನಾವೆಲ್ಲರೂ ಭೇಟಿಯಾಗೋಣ’ ಎಂದು ಬುಧವಾರ ಬೆಳಿಗ್ಗೆ ವಿಡಿಯೊ ಕರೆಯಲ್ಲಿ ಹೇಳಿ ಶುಭ ಹಾರೈಸಿದೆ ಎಂದು ಆಶಾ ಶುಕ್ಲಾ ಹೇಳಿದ್ದಾರೆ.

1984ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರು ಸೋವಿಯತ್ ಯೋಜನೆಯಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಇದಾಗಿ ಬರೋಬ್ಬರಿ ನಾಲ್ಕು ದಶಕಗಳ ನಂತರ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಆರಂಭಿಸಿದ್ದಾರೆ. ಇದಕ್ಕೂ ಪೂರ್ವದಲ್ಲಿ ಅವರ ಆರೋಗ್ಯ ಸ್ಥಿರವಾಗಿರುವಂತೆ ತಿಂಗಳ ಕಾಲ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. 

ಪೈಲೆಟ್‌ ಶುಭಾಂಶು ಅವರೊಂದಿಗೆ ತಜ್ಞರಾದ ಪೊಲೆಂಡ್‌ನ ಸ್ಲಾವೋಜ್‌ ಉಜ್ನಾನ್ಸ್‌ಕಿ ವಿಸ್ನಿವಿಸ್ಕಿ ಮತ್ತು ಹಂಗೇರಿಯ ಟೈಬರ್‌ ಕಾಪು ಮತ್ತು ಅಮೆರಿಕದ ಕಮಾಂಡರ್‌ ಪೆಗ್ಗಿ ವಿಟ್ಸನ್‌ ಈ ಪಯಣದಲ್ಲಿ ಜತೆಯಾಗಿದ್ದಾರೆ.

ಹದಿನೈದು ದಿನಗಳ ಈ ಪಯಣದಲ್ಲಿ ಈ ನಾಲ್ವರು ತಜ್ಞರು ಒಟ್ಟು 60 ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದ್ದಾರೆ. ಇದರಲ್ಲಿ ಏಳು ಪ್ರಯೋಗಗಳನ್ನು ಭಾರತೀಯ ಸಂಶೋಧಕರು ಪ್ರಸ್ತಾಪಿಸಿದ್ದಾರೆ. ಗ್ರೂಪ್ ಕ್ಯಾಪ್ಟನ್ ಶುಕ್ಲಾ ಅವರು ಕೆಲ ಗಣ್ಯ ವ್ಯಕ್ತಿಗಳೊಂದಿಗೆ ಬಾಹ್ಯಾಕಾಶ ನಿಲ್ದಾಣದಿಂದ ಮಾತನಾಡಲಿದ್ದಾರೆ.

ತಮ್ಮ ಪ್ರಯಾಣ ಆರಂಭಕ್ಕೂ ಮೊದಲು ಕುಟುಂಬದೊಂದಿಗೆ ಮಾತನಾಡಿದ ಶುಕ್ಲಾ, ‘ನನ್ನ ಬರುವಿಕೆಯ ಹಾದಿಯ ನಿರೀಕ್ಷೆಯಲ್ಲಿರಿ. ನಾನು ಬರುತ್ತೇನೆ’ ಎಂದು ಹೇಳಿದರು. ಅವರ ತಾಯಿ ಆಶಾ ಅವರು ಭಾರತೀಯ ಸಂಪ್ರದಾಯದಂತೆ ಮಗನಿಗೆ ಶುಭಾಶಯ ಕೋರಿದರು. ವಿಡಿಯೊ ಕರೆಯಲ್ಲೇ ಮೊಸರು ಹಾಗೂ ಸಕ್ಕರೆಯನ್ನು ನೀಡಿ ಶುಭ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.