ಸ್ಪೇಡೆಕ್ಸ್ ಉಪಗ್ರಹ
(ಚಿತ್ರ ಕೃಪೆ: X/@isro)
ಚೆನ್ನೈ: ಬಾಹ್ಯಾಕಾಶದಲ್ಲಿ ಜೋಡಿಸುವಂಥ (ಡಾಕಿಂಗ್) ಸ್ಪೇಡೆಕ್ಸ್ ಯೋಜನೆಯಡಿ ಉಡ್ಡಯನ ಮಾಡಿರುವ ಎರಡು ಉಪಗ್ರಹಗಳು ಶನಿವಾರ ರಾತ್ರಿ ಕೇವಲ 230 ಮೀ. ಅಂತರದಲ್ಲಿದ್ದವು ಎಂದು ಇಸ್ರೊ ಪ್ರಕಟಣೆ ತಿಳಿಸಿದೆ.
ಇದರೊಂದಿಗೆ ಡಾಕಿಂಗ್ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು (ಶನಿವಾರ) ಬೆಳಿಗ್ಗೆ ಉಪಗ್ರಹಗಳ ನಡುವಣ ಅಂತರ 500 ಮೀ. ಆಗಿತ್ತು.
ಶುಕ್ರವಾರ ರಾತ್ರಿ ಎರಡು ಉಪಗ್ರಹ ನಡುವಣ ಅಂತರ 1.5 ಕಿ.ಮೀ. ಆಗಿತ್ತು.
ಎರಡು ಉಪಗ್ರಹಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಎಲ್ಲ ಸೆನ್ಸರ್ ಮಾಪನ ಮಾಡಲಾಗಿದೆ ಎಂದು ಇಸ್ರೊ ತಿಳಿಸಿದೆ.
ಹಾಗಿದ್ದರೂ ಡಾಕಿಂಗ್ ಪ್ರಯೋಗ ಯಾವಾಗ ನಡೆಯಲಿದೆ ಎಂಬುದಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆ ಲಭಿಸಿಲ್ಲ. ಈ ಮೊದಲು ಜನವರಿ 7 ಮತ್ತು 9ರಂದು ದಿನಾಂಕ ನಿಗದಿಪಡಿಸಿದರೂ ಡಾಕಿಂಗ್ ಸಾಧ್ಯವಾಗಿರಲಿಲ್ಲ.
ಸ್ಪೇಡೆಕ್ಸ್ ಯೋಜನೆಗಾಗಿ ಎರಡು ಉಪಗ್ರಹಗಳನ್ನು (SDX01 ಚೇಸರ್ ಮತ್ತು SDX02 ಟಾರ್ಗೆಟ್) ಹೊತ್ತ ಪಿಎಸ್‌ಎಲ್‌ವಿ ಸಿ60 ರಾಕೆಟ್ ಅನ್ನು ಡಿಸೆಂಬರ್ 30ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿತ್ತು. ಇದರ ಜತೆ ಪಿಎಸ್‌ಎಲ್‌ವಿ, 24 ಪೆಲೋಡ್‌ಗಳನ್ನು ಹೊತ್ತೊಯ್ದಿತ್ತು.
ಈ ಯೋಜನೆಯ ಯಶಸ್ಸಿನೊಂದಿಗೆ ಅಮೆರಿಕ, ರಷ್ಯಾ ಮತ್ತು ಚೀನಾ ಬಳಿಕ ಭಾರತ ಬಾಹ್ಯಾಕಾಶ ನೌಕೆಗಳ ಡಾಕಿಂಗ್ ತಂತ್ರಜ್ಞಾನ ಹೊಂದಿದ ದೇಶವೆನಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.