ADVERTISEMENT

ಪಟಾಕಿ ಪುರಾಣ: ಐಪಿಎಸ್‌ ಅಧಿಕಾರಿ ಡಿ.ರೂಪಾ ಟ್ವೀಟ್‌ಗಳಿಗೆ ನಟಿ ಕಂಗನಾ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ನವೆಂಬರ್ 2020, 7:47 IST
Last Updated 18 ನವೆಂಬರ್ 2020, 7:47 IST
ನಟಿ ಕಂಗನಾ ರನೌತ್‌ ಮತ್ತು ಐಪಿಎಸ್‌ ಅಧಿಕಾರಿ ಡಿ.ರೂಪಾ
ನಟಿ ಕಂಗನಾ ರನೌತ್‌ ಮತ್ತು ಐಪಿಎಸ್‌ ಅಧಿಕಾರಿ ಡಿ.ರೂಪಾ   

ಬೆಂಗಳೂರು: 'ಪಟಾಕಿ ಸಿಡಿಸುವುದು ಹಿಂದೂ ಸಂಸ್ಕೃತಿಯೊಂದಿಗೆ ಹಿಂದಿನಿಂದಲೂ ಬಂದಿಲ್ಲ. ಮಹಾಕಾವ್ಯಗಳು, ಪುರಾಣಗಳಲ್ಲಿಯೂ ಅದರ ಬಗ್ಗೆ ಪ್ರಸ್ತಾಪವಿಲ್ಲ. ಯುರೋಪಿಯನ್ನರೊಂದಿಗೆ ಈ ದೇಶಕ್ಕೆ ಪಟಾಕಿಗಳು ಬಂದವು' ಎಂದು ಪಟಾಕಿ ನಿಷೇಧದ ಬಗ್ಗೆ ವಿವರಿಸುತ್ತ ಐಪಿಎಸ್‌ ಅಧಿಕಾರಿ ಡಿ.ರೂಪಾ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದ್ದರು. ಈ ಬಗ್ಗೆ ಸಾಕಷ್ಟು ಪರ–ವಿರೋಧ ಚರ್ಚೆಗಳು ನಡೆದಿದ್ದು, ನಟಿ ಕಂಗನಾ ರನೌತ್ ಬುಧವಾರ ರೂಪಾ ಅವರ ಹೇಳಿಕೆಗಳನ್ನು ಟೀಕಿಸಿ ಸರಣಿ ಟ್ವೀಟ್‌ ಮಾಡಿದ್ದಾರೆ.

ನವೆಂಬರ್‌ 14ರಂದು ಡಿ.ರೂಪಾ ಅವರು ಪಟಾಕಿ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರಕಟಿಸಿದ್ದ ವಿವರಣೆಗೆ ವಿರೋಧ ವ್ಯಕ್ತಪಡಿಸಿದ ಹಲವು ಮಂದಿ, ಪುರಾಣಗಳಲ್ಲಿಯೂ ಪಟಾಕಿಯ ಪ್ರಸ್ತಾಪವಿದೆ ಎಂದು ಸಾಬೀತು ಮಾಡುವುದಾಗಿ ಸವಾಲೊಡ್ಡಿದ್ದರು. ಅದೇ ವಿಚಾರವಾಗಿ ಟ್ವಿಟರ್‌ನಲ್ಲಿ ಬಹಳಷ್ಟು ಚರ್ಚೆಗಳು ನಡೆದಿವೆ.

'ಅರ್ಧಂಬರ್ಧ ಜ್ಞಾನದೊಂದಿಗೆ ಜನರ ಹಾದಿ ತಪ್ಪಿಸುವಿರಿ, ಸರ್ಕಾರದ ಆದೇಶವನ್ನು ಪಾಲನೆ ಮಾಡುತ್ತಿಲ್ಲ ಹಾಗೂ ಅದರ ಬಗ್ಗೆ ಗೌರವವನ್ನೂ ತೋರುತ್ತಿಲ್ಲ, ನಿಮ್ಮಂಥ ಟ್ರೋಲರ್‌ಗಳೊಂದಿಗೆ ಚರ್ಚೆ ಮುಂದುವರಿಸುವುದು ಅನವಶ್ಯಕ' ಎಂದು ರೂಪಾ ಟ್ವೀಟಿಸಿದ್ದು, ಕೆಲವು ಟ್ವಿಟರ್‌ ಖಾತೆಗಳನ್ನು ನಿರ್ಬಂಧಿಸುತ್ತಿರುವುದಾಗಿ ಹೇಳಿದ್ದಾರೆ. ಅದರಲ್ಲಿ ಒಂದು ಖಾತೆಯನ್ನು ಟ್ವಿಟರ್‌ ಸಹ ನಿರ್ಬಂಧಿಸಿದೆ.

ADVERTISEMENT

'ಪುರಾಣಗಳಲ್ಲಿ ಪಟಾಕಿಯ ಪ್ರಸ್ತಾಪವಿರುವ ಬಗ್ಗೆ ದಾಖಲೆಗಳನ್ನು ಒದಗಿಸಿದ್ದರೂ, ಅವುಗಳನ್ನು ರೂಪಾ ಅವರು ಒಪ್ಪಲಿಲ್ಲ. ಈಗ ಸಾಕ್ಷ್ಯ ಒದಗಿಸಿದವರ ಖಾತೆಯೇ ಬ್ಲಾಕ್‌ ಆಗಿದೆ' ಎಂದು ಕೆಲವು ಟ್ವೀಟಿಗರು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ನಟಿ ಕಂಗನಾ ಸಹ ಬೆಂಬಲ ವ್ಯಕ್ತಪಡಿಸಿದ್ದು, ' ಸಾಮಾನ್ಯ ಜನರ ಮೂಲಭೂತ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ಡಿ.ರೂಪಾ ಅವರಂತಹ ಜನರನ್ನು ನೇಮಿಸುತ್ತದೆ. ಆದರೆ, ಅವರನ್ನು ನೋಡಿ, ಸತ್ಯ ಆಧಾರಗಳಿಂದ ವಾದದಲ್ಲಿ ಗೆಲ್ಲಲು ಅಸಹಾಯಕಾರಿ @TIinExile ಖಾತೆಯನ್ನೇ ನಿರ್ಬಂಧಿಸಿದ್ದಾರೆ. ನಿಮಗೆ ನಾಚಿಗೆಯಾಗಬೇಕು' ಎಂದಿದ್ದಾರೆ.

'ಮೀಸಲಾತಿಯ ಅಡ್ಡಪರಿಣಾಮಗಳಿವು, ಯೋಗ್ಯರಲ್ಲದವರಿಗೆ ಅಧಿಕಾರ ದೊರೆತರೆ ಅವರು ಶಮನಗೊಳಿಸುವ ಕಾರ್ಯಕ್ಕಿಂತ ಘಾಸಿ ಮಾಡುತ್ತಾರೆ. ಅವರ ವೈಯಕ್ತಿಕ ಜೀವನದ ಬಗ್ಗೆ ನನಗೆ ಏನೊಂದೂ ತಿಳಿದಿಲ್ಲ, ಆದರೆ ಅವರ ಅಸಾಮರ್ಥ್ಯದಿಂದಾಗಿ ಹತಾಶೆ ಹೊರಬರುತ್ತಿರುವುದು ಖಂಡಿತ' ಎಂದು ಕಂಗನಾ ಐಪಿಎಸ್‌ ಅಧಿಕಾರಿ ರೂಪಾ ಅವರ ನಡೆಯನ್ನು ಟೀಕಿಸಿದ್ದಾರೆ.

(ಚರ್ಚೆಗೆ ಕಾರಣವಾದ ಡಿ.ರೂಪಾ ಅವರ ಫೇಸ್‌ಬುಕ್‌ ಪೋಸ್ಟ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.