
DGCA ಮಣಿಸಲು ಕಡೆಗೂ IndiGo ಬ್ಲ್ಯಾಕ್‌ಮೇಲ್ ಕೆಲಸ ಮಾಡಿದೆ: ನೆಟ್ಟಿಗರ ಆಕ್ರೋಶ
ಪಿಟಿಐ ಚಿತ್ರ
ನವದೆಹಲಿ: ಎರಡು ದಿನಗಳಿಂದ ಸಾವಿರಾರು ಇಂಡಿಗೊ ವಿಮಾನಗಳ ಹಾರಾಟದಲ್ಲಿ ಭಾರಿ ಪ್ರಮಾಣದಲ್ಲಿ ಅಡಚಣೆ ಉಂಟಾದ ಬೆನ್ನಲ್ಲೇ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಪೈಲಟ್‌ಗಳ ರಜಾ ನಿಯಮಗಳನ್ನು ಸಡಿಲಿಸಿ ಆದೇಶ ಹೊರಡಿಸಿದೆ.
ಡಿಜಿಸಿಎಯ ಈ ನಿರ್ಧಾರ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ, ‘ಸಿಬ್ಬಂದಿ ಕೊರತೆ ಮತ್ತು ವಿಮಾನ ಹಾರಾಟದಲ್ಲಿ ವ್ಯತ್ಯಯವುಂಟುಮಾಡುವ ಮೂಲಕ ಇಂಡಿಗೊ, ಡಿಜಿಸಿಎ ವಿರುದ್ಧ ರೂಪಿಸಿದ್ದ ಬೆದರಿಕೆ ತಂತ್ರ (ಬ್ಲ್ಯಾಕ್‌ಮೇಲ್) ಯಶಸ್ವಿಯಾಗುವಂತೆ ಮಾಡಿದೆ’ ಎನ್ನುವ ಮಾತುಗಳು ಜೋರಾಗಿವೆ.
'ಜಾಗತಿಕ ಮಾನದಂಡಗಳನ್ನು ಪೂರೈಸಲು ಎರಡು ವರ್ಷಗಳನ್ನು ಹೊಂದಿದ್ದ ವಿಮಾನಯಾನ ಕಂಪನಿಯು ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡುವಲ್ಲಿ ಯಶಸ್ವಿಯಾಗಿದೆ ಮತ್ತು ‘ಟೋಲ್ ಬ್ಯಾಕ್’ ಮಾಡುವಂತೆ ಒತ್ತಾಯಿಸಿದೆ. ಸಮಸ್ಯೆಯೆಂದರೆ ನಾವು ಬೇರೆ ಆಯ್ಕೆಯಿಲ್ಲದ ಕಾರಣ ಇಂಡಿಗೋ ಹಾರಾಟವನ್ನು ಮುಂದುವರಿಸುತ್ತೇವೆ. ಆದರೆ ಪ್ರಯಾಣಿಕರ ಸುರಕ್ಷತೆ, ಪೈಲಟ್‌ಗಳ ಆರೋಗ್ಯದ ಗತಿಯೇನು? ಎಂದು ಸ್ನೇಹೇಶ್ ಅಲೆಕ್ಸ್ ಫಿಲಿಪ್ ಬರೆದುಕೊಂಡಿದ್ದಾರೆ.
ಸ್ವಾತಿ ಚತುರ್ವೇದಿಯವರು. ‘ಡಿಜಿಸಿಎ ಇಂಡಿಗೊ ಬ್ಲ್ಯಾಕ್‌ಮೇಲ್‌ಗೆ ಬಲಿಯಾಯಿತು. ಡಿಜಿಸಿಎ ಇಂಡಿಗೊ ನಂಟಿನ ಬಗ್ಗೆ ಖಚಿತಪಡಿಸಿಕೊಳ್ಳಲು ಪ್ರಯಾಣಿಕರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಎಕ್ಸ್ ಬಳಕೆದಾರರೊಬ್ಬರು, ‘ಇಂಡಿಗೊದ ಬೆದರಿಕೆ ತಂತ್ರ ಕೆಲಸ ಮಾಡಿದೆ. ಆದರೆ ಪ್ರಯಾಣಿಕರ ಅನುಭವಿಸಿದ ಸಂಕಷ್ಟವನ್ನು ಕೇಳುವವರಾರು’ ಎಂದು ಪ್ರಶ್ನಿಸಿದ್ದಾರೆ.
ಇಂಡಿಗೊ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸ್ಟಾಂಡ್ ಅಪ್ ಕಾಮಿಡಿಯನ್ ಅಭಿಜಿತ್ ಗಂಗೂಲಿ, ‘ಇಂಡಿಗೊ ಸರ್ಕಾರದಿಂದ ಬೇಕಾದ್ದನ್ನು ಪಡೆಯಲು ನಡೆಸಿದ ಯೋಜಿತ ಮುಷ್ಕರವಿದು. ಇಂಡಿಗೊ ಬೇಕಂತಲೇ ಮಾಡಿದ ಸಮಸ್ಯೆ ಎಂದು ಸಾಮಾನ್ಯರಿಗೂ ಅರ್ಥವಾಗುತ್ತದೆ. ಜನರಿಗೆ ಏನು ಸಮಸ್ಯೆಯಾಗುತ್ತದೆ ಎನ್ನುವುದು ಬೇಕಿಲ್ಲ’ ಎಂದಿದ್ದಾರೆ.
ವಿಮಾನ ಹಾರಾಟದಲ್ಲಿ ದೊಡ್ಡ ಮಟ್ಟದ ಸಮಸ್ಯೆಯಾದ ಬಳಿಕ ಕ್ಷಮೆ ಕೇಳಿರುವ ಇಂಡಿಗೊ, ‘ಇದು ರಾತ್ರೋರಾತ್ರಿ ಬಗೆಹರಿಯುವ ಸಮಸ್ಯೆಯಲ್ಲ. ಆದರೂ ಪ್ರಯಾಣಿಕರಿಗೆ ಸಹಾಯ ಮಾಡಲು, ನಮ್ಮ ಕಾರ್ಯಾಚರಣೆಗಳನ್ನು ಆದಷ್ಟು ಬೇಗ ಸಹಜ ಸ್ಥಿತಿಗೆ ತರಲು ನಮ್ಮ ಸಾಮರ್ಥ್ಯದಲ್ಲಿರುವ ಎಲ್ಲಾ ಪ್ರಯತ್ನವನ್ನು ಮಾಡುತ್ತೇವೆ’ ಎಂದಿದೆ.
ಜತೆಗೆ ‘ಡಿಜಿಸಿಎ ಜತೆ ಸೇರಿ ನಮ್ಮ ತಂಡ ವಿಮಾನ ಹಾರಾಟವನ್ನು ಸಹಜ ಸ್ಥಿತಿಗೆ ಮರಳಿಸಲು ಎಲ್ಲಾ ರೀತಿಯಲ್ಲಿ ಕೆಲಸ ಮಾಡುತ್ತಿದೆ. ನಾಳೆಯಿಂದ (ಶನಿವಾರ) ವಿಮಾನ ಹಾರಾಟ ಆರಂಭವಾಗಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನವೆಂಬರ್ 1ರಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಪೈಲಟ್ ಮತ್ತು ಸಿಬ್ಬಂದಿ ವಿಶ್ರಾಂತಿಯ ಸಮಯವನ್ನು ಈ ಹಿಂದೆ ಇದ್ದ 36 ಗಂಟೆಗಳ ಅವಧಿಯನ್ನು 48 ಗಂಟೆಗಳಿಗೆ ಹೆಚ್ಚಿಸಿತ್ತು. ಈ ನಿಯಮವನ್ನು ಇಂಡಿಗೊ ವಿಮಾನಯಾನ ಸಂಸ್ಥೆ ಜಾರಿಗೊಳಿಸಿತ್ತು. ಇದರಿಂದ ಪೈಲಟ್‌ಗಳ ಶಿಫ್ಟ್ ಅವಧಿಗಳಲ್ಲಿ ಬದಲಾವಣೆ ಆಗಿತ್ತು. ಪರಿಣಾಮ ಪೈಲಟ್‌ಗಳು ವಿಶ್ರಾಂತಿಗೆ ತೆರಳಿದ ಕಾರಣ ಸಿಬ್ಬಂದಿ ಕೊರತೆ ಕಾಣಿಸಿಕೊಂಡಿತ್ತು. ಹೀಗಾಗಿ ವಿಮಾನಗಳ ಹಾರಾಟದಲ್ಲಿ ಭಾರಿ ಅಡಚಣೆ ಉಂಟಾಗಿತ್ತು.
ಇತ್ತ ಡಿಜಿಸಿಎ, ‘ಯೋಜನೆಯನ್ನು ಜಾರಿಗೊಳಿಸಲು ಇಂಡಿಗೊ ಎಡವಿದೆ. ಸರಿಯಾಗಿ ಸಿದ್ದತೆ ಮಾಡಿಕೊಳ್ಳದೇ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿರುವುದರಿಂದ ಇಂಡಿಗೊ ಸಂಸ್ಥೆ ತೀವ್ರ ಸಮಸ್ಯೆ ಎದುರಿಸಿದೆ’ ಎಂದಿತ್ತು. ನಂತರ ಪೈಲಟ್‌ಗಳ ರಜಾ ನಿಯಮಗಳನ್ನು ಸಡಿಲಿಸಿದೆ.
ಈಗ, ಸಿಬ್ಬಂದಿ ಕರ್ತವ್ಯ ಅವಧಿ ಮಿತಿ (ಎಫ್‌ಡಿಟಿಎಲ್) ಮಾನದಂಡಗಳ ಪ್ರಕಾರ, ವಾರದ ವಿಶ್ರಾಂತಿ ಜೊತೆ ಯಾವುದೇ ರಜೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದಿಲ್ಲ. ಅಂದರೆ ವಾರದ ವಿಶ್ರಾಂತಿ ಅವಧಿ ಮತ್ತು ರಜೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.