ADVERTISEMENT

Donald Trump Twitter: ವಿವಾದದೊಂದಿಗೆ ವಿದಾಯದ ಹಾದಿ ಹಿಡಿದ ಟ್ರಂಪ್

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 5:57 IST
Last Updated 9 ಜನವರಿ 2021, 5:57 IST
ಟ್ರಂಪ್ ಟ್ವಿಟರ್ ಖಾತೆಗೆ ಬೀಗ!
ಟ್ರಂಪ್ ಟ್ವಿಟರ್ ಖಾತೆಗೆ ಬೀಗ!   

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿ ಇನ್ನೇನು ಮುಗಿಯುತ್ತಿದೆ. ಅಧ್ಯಕ್ಷೀಯ ಅವಧಿಯಲ್ಲಿ ಟ್ರಂಪ್, ಟ್ವಿಟರ್ ಮೂಲಕ ಸಾಕಷ್ಟು ಸುದ್ದಿಯಾಗಿದ್ದಾರೆ. ಅಲ್ಲದೆ, ವಿವಿಧ ವಿವಾದಗಳನ್ನೂ ಹುಟ್ಟುಹಾಕಿದ್ದಾರೆ. ವಿರೋಧಿಗಳನ್ನು ಹೀಯಾಳಿಸುವುದು ಮತ್ತು ಅನಗತ್ಯ ಎನ್ನಿಸುವ ಟ್ವೀಟ್ ಮಾಡುವ ಮೂಲಕ ಪ್ರಚಾರ ಪಡೆಯುತ್ತಿದ್ದ ಟ್ರಂಪ್ ಅಧಿಕೃತ ಟ್ವಿಟರ್ ಖಾತೆ ಈಗ ಶಾಶ್ವತವಾಗಿ ರದ್ದಾಗಿದೆ.

ಟ್ರಂಪ್ ಟ್ವಿಟರ್ ಖಾತೆಗೆ ಬೀಗ!

@realDonaldTrump ಹೆಸರಿನ ಖಾತೆಯಲ್ಲಿ ಟ್ವಿಟರ್ ಬಳಸುತ್ತಿದ್ದ ಡೊನಾಲ್ಡ್ ಟ್ರಂಪ್, ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲಿನ ದಾಳಿ ಬಳಿಕ ವಿವಿಧ ಸಾಮಾಜಿಕ ತಾಣಗಳಲ್ಲಿನ ಖಾತೆಗಳನ್ನು ಕಳೆದುಕೊಂಡಿದ್ದಾರೆ. ಅಧ್ಯಕ್ಷೀಯ ಚುನಾವಣೆ ಮತ್ತು ಅಧಿಕಾರ ಹಸ್ತಾಂತರದ ವಿವಾದವೂ ಅವರಿಗೆ ಈ ಸಮಸ್ಯೆ ತಂದೊಡ್ಡಿದೆ. ಕ್ಯಾಪಿಟಲ್ ಕಟ್ಟಡದ ಮೇಲಿನ ದಾಳಿ ಬಳಿಕ ಟ್ರಂಪ್ ಟ್ವಿಟರ್ ಖಾತೆ ತಾತ್ಕಾಲಿಕವಾಗಿ ಬಂದ್ ಆಗಿತ್ತಾದರೂ, ಈಗ ಶಾಶ್ವತವಾಗಿ ರದ್ದಾಗಿದೆ.

ADVERTISEMENT

ಟ್ವೀಟ್ ಮೂಲಕ ವಿವಾದ

ಡೊನಾಲ್ಡ್ ಟ್ರಂಪ್, ವಿವಿಧ ಸಂದರ್ಭದಲ್ಲಿ ಟ್ವೀಟ್ ಮೂಲಕವೇ ವಿವಾದ ಸೃಷ್ಟಸುತ್ತಿದ್ದರು. 2017ರ ಜುಲೈನಲ್ಲಿ ಟ್ರಂಪ್ ಟ್ವಿಟರ್ ಮೂಲಕ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ರೆಸ್ಲಿಂಗ್ ಪಂದ್ಯದಲ್ಲಿ ಓರ್ವನನ್ನು ನೆಲಕ್ಕೆ ಅಪ್ಪಳಿಸುವ ದೃಶ್ಯ ಅದಾಗಿತ್ತು. ಅದರಲ್ಲಿ ನೆಲಕ್ಕೆ ಬೀಳುವ ವ್ಯಕ್ತಿಯ ಮುಖಕ್ಕೆ CNN ವಾಹಿನಿಯ ಲೋಗೋ ಅಂಟಿಸಲಾಗಿತ್ತು.

ಕಿಮ್ ಜಾಂಗ್ ಉನ್ ಜತೆ ಟ್ವೀಟ್ ಸಮರ

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜತೆ ಪರಮಾಣು ಬಾಂಬ್ ಬಟನ್ ಕುರಿತಂತೆ ಟ್ವೀಟ್ ಮೂಲಕ ಟ್ರಂಪ್ ವಿವಾದ ಸೃಷ್ಟಿಸಿದ್ದರು. ಕಿಮ್ ಓರ್ವ ಲಿಟಲ್ ರಾಕೆಟ್ ಮ್ಯಾನ್ ಎಂದು ಕರೆದು ಹೀಯಾಳಿಸಿದ್ದರು.

ಅಡ್ಡ ಹೆಸರು ನೀಡುತ್ತಿದ್ದ ಟ್ರಂಪ್

ತಮಗಾಗದವರು ಮತ್ತು ವಿರೋಧಿಗಳ ವಿರುದ್ಧ ಟ್ವೀಟ್ ಮಾಡುವ ಸಂದರ್ಭದಲ್ಲಿ ಟ್ರಂಪ್, ಜನರಿಗೆ ಅಡ್ಡ ಹೆಸರು ನೀಡುತ್ತಿದ್ದರು. ಅಲ್ಲದೆ, ವಿಚಿತ್ರವಾಗಿ ಕರೆದು ಅವರಿಗೆ ಇರಿಸುಮುರುಸು ಉಂಟುಮಾಡುತ್ತಿದ್ದರು. ಹೀಗಾಗಿ ಟ್ವಟರ್ ಹಲವು ಬಾರಿ ಎಚ್ಚರಿಕೆಯನ್ನು ನೀಡಿತ್ತು. ಜತೆಗೆ ತಾತ್ಕಾಲಿಕವಾಗಿ ಟ್ರಂಪ್ ಖಾತೆಯನ್ನು ಸ್ಥಗಿತಗೊಳಿಸಿತ್ತು. ಆದರೆ ಮತ್ತೆ ಹಳೆ ಚಾಳಿ ಮುಂದುವರಿಸಿದ ಟ್ರಂಪ್ ಟ್ವಿಟರ್ ಖಾತೆ ಈಗ ಶಾಶ್ವತವಾಗಿ ರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.