ADVERTISEMENT

ಎರಡನೇ ಬಾರಿ ಫೇಸ್‌ಬುಕ್ ಸೇವೆಯಲ್ಲಿ ವ್ಯತ್ಯಯ: ಮತ್ತೊಮ್ಮೆ ಕ್ಷಮೆಯಾಚಿಸಿದ ಕಂಪನಿ

ರಾಯಿಟರ್ಸ್
Published 9 ಅಕ್ಟೋಬರ್ 2021, 4:15 IST
Last Updated 9 ಅಕ್ಟೋಬರ್ 2021, 4:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಸೇವೆಗಳಿಗೆ 2 ಗಂಟೆ ಕಾಲ ಅಡ್ಡಿಯುಂಟಾಗಿದ್ದಕ್ಕಾಗಿ ಫೇಸ್‌ಬುಕ್ ಶನಿವಾರ ತನ್ನ ಬಳಕೆದಾರರಲ್ಲಿ ಕ್ಷಮೆಯಾಚಿಸಿದೆ. ಈ ವಾರ ಎರಡನೇ ಬಾರಿ ಉಂಟಾದ ಸೇವೆಯಲ್ಲಿನ ವ್ಯತ್ಯಯಕ್ಕೆ ಮತ್ತೊಂದು ದೋಷಯುಕ್ತ ಸಂರಚನಾ ಬದಲಾವಣೆ ಕಾರಣ ಎಂದಿದೆ.

ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಇನ್‌ಸ್ಟಾಗ್ರಾಂ, ಮೆಸೆಂಜರ್ ಮತ್ತು ವರ್ಕ್‌ಪ್ಲೇಸ್‌ ಸೇವೆಯಲ್ಲಿ ಇತ್ತೀಚಿಗೆ ಸ್ಥಗಿತಕ್ಕೆ ಒಳಗಾಗಿದ್ದವು ಎಂದು ಕಂಪನಿ ಹೇಳಿದೆ.

'ಕಳೆದೆರಡು ಗಂಟೆಗಳಲ್ಲಿ ನಮ್ಮ ಸೇವೆಗಳ ಬಳಕೆಗೆ ಪ್ರವೇಶ ಪಡೆಯಲು ಸಾಧ್ಯವಾಗದ ಪ್ರತಿಯೊಬ್ಬರಿಗೂ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ'. ಸದ್ಯ ಈ ಸಮಸ್ಯೆಯನ್ನು ಪರಿಹರಿಸಿದ್ದೇವೆ ಮತ್ತು ಎಲ್ಲವನ್ನು ಸಹಜ ಸ್ಥಿತಿಗೆ ತರಲು ನಾವು ಪ್ರಯತ್ನಿಸುತ್ತಿದ್ದೇವೆ' ಎಂದು ಕಂಪನಿ ಹೇಳಿದೆ.

ADVERTISEMENT

ಇತ್ತೀಚಿನ ಸ್ಥಗಿತದ ಸಮಯದಲ್ಲಿ ಕೆಲವು ಬಳಕೆದಾರರು ತಮ್ಮ ಇನ್‌ಸ್ಟಾಗ್ರಾಂ ಫೀಡ್‌ಗಳನ್ನು ಲೋಡ್ ಮಾಡಲು ಸಾಧ್ಯವಾಗಿರಲಿಲ್ಲ, ಇದೇ ವೇಳೆ ಇತರರು ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಸಂದೇಶಗಳನ್ನು ಕಳುಹಿಸಲು ಅಡಚಣೆ ಎದುರಿಸಿದ್ದರು.

ಈ ವಾರ ಎರಡನೇ ಬಾರಿಗೆ ಫೇಸ್‌ಬುಕ್ ಸೇವೆಯಲ್ಲಿ ಅಡಚಣೆ ಉಂಟಾದ ಬಗ್ಗೆ ಜನರು ಟ್ವಿಟ್ಟರ್‌ನಲ್ಲಿ ಮೀಮ್ಸ್ ಮತ್ತು ಜೋಕ್‌ಗಳನ್ನು ಹಂಚಿಕೊಂಡರು. 'ಫೇಸ್‌ಬುಕ್ ವಾರದಲ್ಲಿ 3 ದಿನ ಮಾತ್ರ ಕೆಲಸ ಮಾಡುವಂತೆ ತೋರುತ್ತಿದೆ. ಸೋಮವಾರ ಮತ್ತು ಶುಕ್ರವಾರ ಸ್ಥಗಿತಗೊಳಿಸಲಾಗುತ್ತದೆಯೇ?' ಟ್ವಿಟರ್ ಬಳಕೆದಾರಬ್ಬರು ಪ್ರಶ್ನಿಸಿದ್ದರು.

'ಈಗ ಎಲ್ಲವೂ ಸರಿಯಾಗಿದೆ ಮತ್ತು ಸಮಸ್ಯೆಯನ್ನು ಸಹಿಸಿಕೊಂಡಿದ್ದಕ್ಕಾಗಿ ಧನ್ಯವಾದಗಳು (ಈ ವಾರದ ಎಲ್ಲ ಮೀಮ್ಸ್‌ಗಳಿಗೂ) ಎಂದು ಇನ್‌ಸ್ಟಾಗ್ರಾಂ ಹೇಳಿದೆ.

ಪ್ರಪಂಚದ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ವಾಟ್ಸಾಪ್‌ ಮತ್ತು ಫೇಸ್‌ಬುಕ್‌ ಮೆಸೆಂಜರ್‌ಗಳು ಸೋಮವಾರ (ಅ.4) ಸಂಜೆಯಿಂದ ಸ್ಥಗಿತಗೊಂಡಿದ್ದವು. ಆ್ಯಪ್‌ಗಳ ಸೇವೆ ಪುನರಾರಂಭವಾಗುತ್ತಿದ್ದಂತೆ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್ಬರ್ಗ್ ಕ್ಷಮೆಯಾಚಿಸಿದ್ದರು.

350 ಕೋಟಿಗೂ ಹೆಚ್ಚು ಜನರು ಫೇಸ್‌ಬುಕ್‌ ಮತ್ತು ಅದರ ಆ್ಯಪ್‌ಗಳನ್ನು ಬಳಸಿ ಸಂವಹನ ಹಾಗೂ ವ್ಯಾಪಾರಗಳನ್ನು ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.