ADVERTISEMENT

ಫೇಸ್‌ಬುಕ್‌ ಮೊಬೈಲ್‌ ಆ್ಯಪ್‌ನಲ್ಲಿ ಲಸಿಕೆ ಲಭ್ಯತೆ ಸ್ಥಳ ಮಾಹಿತಿ

ಪಿಟಿಐ
Published 30 ಏಪ್ರಿಲ್ 2021, 11:50 IST
Last Updated 30 ಏಪ್ರಿಲ್ 2021, 11:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ (ಪಿಟಿಐ): ‘ಫೇಸ್‌ಬುಕ್‌ನ ಮೊಬೈಲ್‌ ಆ್ಯಪ್‌ನಲ್ಲಿಯೇ ಲಸಿಕೆ ಲಭ್ಯವಾಗುವ ಹತ್ತಿರದ ಸ್ಥಳದ ಮಾಹಿತಿಯು ಬಳಕೆದಾರರಿಗೆ ಸಿಗುವಂತೆ ಭಾರತ ಸರ್ಕಾರದ ಜೊತೆಗೆ ಪಾಲುದಾರಿಕೆ ಹೊಂದಲಾಗುತ್ತಿದೆ. ಇದು, ಜನರು ತ್ವರಿತವಾಗಿ ಲಸಿಕೆ ಪಡೆಯಲು ಸಹಕಾರಿಯಾಗಲಿದೆ’ ಎಂದು ಫೇಸ್‌ಬುಕ್‌ ತಿಳಿಸಿದೆ.

ಲಸಿಕೆ ಲಭ್ಯತೆ ಸ್ಥಳ ಗುರುತಿಸುವ ಆಯ್ಕೆಯನ್ನು ಮೊಬೈಲ್ ಆ್ಯಪ್‌ನಲ್ಲಿ ನೀಡಲಾಗುತ್ತದೆ. ಮಾಹಿತಿಯು 17 ಭಾಷೆಗಳಲ್ಲಿ ಲಭ್ಯವಿರಲಿದೆ ಎಂದು ಫೇಸ್‌ಬುಕ್‌ ತನ್ನ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ.

ಲಸಿಕೆ ಲಭ್ಯವಾಗುವ ತಾಣ, ಅದು ಕಾರ್ಯನಿರ್ವಹಿಸುವ ಅವಧಿಯು ಸಿಗಲಿದೆ. ಈ ಮಾಹಿತಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಒದಗಿಸಲಿದೆ. ಅಲ್ಲದೆ, 45 ವರ್ಷ ಮೀರಿದವರಿಗೆ, ಲಸಿಕೆ ಕೇಂದ್ರಕ್ಕೆ ನಡೆದು ಹೋಗಬಹುದಾದ ಹತ್ತಿರದ ಮಾರ್ಗ, ಹೆಸರು ನೋಂದಣಿಗೆ ಕೋ–ವಿನ್‌ ವೆಬ್‌ಸೈಟ್‌ಗೆ ಸಂಪರ್ಕ ಕಲ್ಪಿಸುವ ಲಿಂಕ್‌ ಮತ್ತು ಲಸಿಕೆ ಪಡೆಯಲು ನಿಗದಿಪಡಿಸಿದ ಅವಧಿ ಕುರಿತ ಮಾಹಿತಿಗಳನ್ನೂ ಒದಗಿಸಲಿದೆ ಎಂದು ತಿಳಿಸಿದೆ.

ADVERTISEMENT

ತುರ್ತು ವೈದ್ಯಕೀಯ ಅಗತ್ಯಗಳಾದ ವೈದ್ಯಕೀಯ ಆಮ್ಲಜನಕ, ಕಾನ್ಸಂಟ್ರೇಟರ್ಸ್‌, ವೆಂಪಿಲೇಟರ್, ಬಿ–ಪ್ಯಾಪ್ ಮಷೀನ್‌ಗಳನ್ನು ಒದಗಿಸಲು ಘೋಷಿಸಲಾದ ನೆರವು ನಿಧಿ ಬಳಕೆಗೆ ಅನುಕೂಲವಾಗುವಂತೆ ವಿವಿಧ ಸಂಸ್ಥೆಗಳಾದ ಯುನೈಟೆಡ್‌ ವೇ, ಸ್ವಸ್ತಿ, ಹೆಮ್‌ಕುಂಟ್ ಫೌಂಡೇಷನ್‌, ಐ ಆ್ಯಮ್ ಗುರಗಾಂವ್, ಪ್ರಾಜೆಕ್ಟ್ ಮುಂಬೈ, ಭಾರತ ಅಮೆರಿಕ ಕಾರ್ಯನಿರತ ಪಾಲುದಾರಿಕೆ ವೇದಿಕೆ ಜೊತೆಗೂ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

ದೇಶದಾದ್ಯಂತ ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿರುವ ಸೋಂಕು ಪ್ರಮಾಣದಿಂದಾಗಿ ವಿವಿಧ ರಾಜ್ಯಗಳ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕ ಮತ್ತು ಹಾಸಿಕೆಗಳ ಕೊರತೆ ಕಾಣಿಸಿಕೊಂಡಿದೆ. ತುರ್ತು ಸಂದರ್ಭದಲ್ಲಿ ಜನರ ನಡುವೆ ಸಂಪರ್ಕ ಸೇತುವಾಗಿ ಜಾಲತಾಣಗಳಾದ ಫೇಸ್‌ಬುಕ್‌ ಮತ್ತು ಟ್ವಿಟ್ಟರ್ ಕಾರ್ಯನಿರ್ವಹಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.